Delhi Exit Poll: ದೆಹಲಿ ಚುನಾವಣೆ ಎಕ್ಸಿಟ್ ಪೋಲ್‌ಗೆ ಕ್ಷಣಗಣನೆ, 2020 ಮತ್ತು 2015ರ ಮತದಾನೋತ್ತರ ಸಮೀಕ್ಷೆಗಳು ಎಷ್ಟು ನಿಜವಾಗಿದ್ದವು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Delhi Exit Poll: ದೆಹಲಿ ಚುನಾವಣೆ ಎಕ್ಸಿಟ್ ಪೋಲ್‌ಗೆ ಕ್ಷಣಗಣನೆ, 2020 ಮತ್ತು 2015ರ ಮತದಾನೋತ್ತರ ಸಮೀಕ್ಷೆಗಳು ಎಷ್ಟು ನಿಜವಾಗಿದ್ದವು

Delhi Exit Poll: ದೆಹಲಿ ಚುನಾವಣೆ ಎಕ್ಸಿಟ್ ಪೋಲ್‌ಗೆ ಕ್ಷಣಗಣನೆ, 2020 ಮತ್ತು 2015ರ ಮತದಾನೋತ್ತರ ಸಮೀಕ್ಷೆಗಳು ಎಷ್ಟು ನಿಜವಾಗಿದ್ದವು

Delhi Exit Poll: ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಗತಿಯಲ್ಲಿದ್ದು, ಅಂತಿಮ ಘಟ್ಟದಲ್ಲಿದೆ. ದೆಹಲಿ ಚುನಾವಣೆ ಎಕ್ಸಿಟ್ ಪೋಲ್‌ಗೆ ಕ್ಷಣಗಣನೆ ಶುರುವಾಗಿದೆ. 2020 ಮತ್ತು 2015ರ ಮತದಾನೋತ್ತರ ಸಮೀಕ್ಷೆಗಳು ಎಷ್ಟು ನಿಜವಾಗಿದ್ದವು ಎಂಬುದರ ಕಡೆಗೆ ನೋಟ ಬೀರಲು ಈ ಹೊತ್ತು ಒಂದು ನಿಮಿತ್ತ.

ದೆಹಲಿ ಚುನಾವಣೆ 2025: ಆಮ್ ಆದ್ಮಿ ಪಾರ್ಟಿ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಅವರ ತಾಯಿ ಗೀತಾ ದೇವಿ, ತಂದೆ ಗೋಬಿಂದ್ ರಾಮ್ ಕೇಜ್ರಿವಾಲ್, ಪತ್ನಿ ಸುನಿತಾ ಕೇಜ್ರಿವಾಲ್ ಮತ್ತು ಮಗ ಪುಲ್ಕಿತ್ ಕೇಜ್ರಿವಾಲ್ ಮತ ಚಲಾವಣೆಗಾಗಿ ಮತಗಟ್ಟೆಗೆ ಆಗಮಿಸಿದ ಸಂದರ್ಭ.
ದೆಹಲಿ ಚುನಾವಣೆ 2025: ಆಮ್ ಆದ್ಮಿ ಪಾರ್ಟಿ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಅವರ ತಾಯಿ ಗೀತಾ ದೇವಿ, ತಂದೆ ಗೋಬಿಂದ್ ರಾಮ್ ಕೇಜ್ರಿವಾಲ್, ಪತ್ನಿ ಸುನಿತಾ ಕೇಜ್ರಿವಾಲ್ ಮತ್ತು ಮಗ ಪುಲ್ಕಿತ್ ಕೇಜ್ರಿವಾಲ್ ಮತ ಚಲಾವಣೆಗಾಗಿ ಮತಗಟ್ಟೆಗೆ ಆಗಮಿಸಿದ ಸಂದರ್ಭ. (AAP-X)

Delhi Exit Poll: ದೆಹಲಿ ಚುನಾವಣೆಯ ಮತದಾನ ಇಂದು (ಫೆ 5) ನಡೆಯುತ್ತಿದ್ದು, ಸಂಜೆ 6 ಗಂಟೆ ಬಳಿಕ ಅನೇಕ ಸುದ್ದಿ ವಾಹಿನಿಗಳು, ಚುನಾವಣಾ ಸಮೀಕ್ಷಾ ಸಂಸ್ಥೆಗಳ ಎಕ್ಸಿಟ್ ಪೋಲ್ ವರದದಿಗಳು ಪ್ರಸಾರವಾಗಲಿವೆ. ದೆಹಲಿ ವಿಧಾನಸಭೆಯ 70 ಸ್ಥಾನಗಳ ಚುನಾವಣಾ ಫಲಿತಾಂಶ ಫೆ 8 ರಂದು ಮತ ಎಣಿಕೆ ಬಳಿಕ ಪ್ರಕಟವಾಗಲಿದೆ. ಹಿಂದಿನ ಎರಡು ಅವಧಿಗಳಲ್ಲಿ ನಡೆದ ಚುನಾವಣೆಗಳಲ್ಲಿ ಅಂದರೆ 2015 ಮತ್ತು 2020ರ ದೆಹಲಿ ಚುನಾವಣೆಗಳಲ್ಲಿ ಆಡಳಿತಾರೂಢ ಆಮ್‌ ಆದ್ಮಿ ಪಾರ್ಟಿ (ಎಎಪಿ) ಸ್ಪಷ್ಟ ಬಹುಮತದೊಂದಿಗೆ ಗೆಲುವು ದಾಖಲಿಸಿತ್ತು. ಹಾಗಾದರೆ, ಆ ಎರಡೂ ಚುನಾವಣೆ ಸಂದರ್ಭದಲ್ಲಿ ಪ್ರಕಟವಾದ ಎಕ್ಸಿಟ್‌ ಪೋಲ್ ವರದಿಗಳು ಎಷ್ಟು ನಿಖರವಾಗಿದ್ದವು ಗಮನಿಸೋಣ.

2015ರ ದೆಹಲಿ ಚುನಾವಣೆಯ ಎಕ್ಸಿಟ್‌ ಪೋಲ್‌ ಫಲಿತಾಂಶ

ದೆಹಲಿ ವಿಧಾನಸಭಾ ಚುನಾವಣೆ 2015ರಲ್ಲಿ ನಡೆದಾಗ, ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ 70 ಸ್ಥಾನಗಳ ಪೈಕಿ 67 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. ಇನ್ನು ಮೂರು ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಕಾಂಗ್ರೆಸ್ ಪಕ್ಷ ಶೂನ್ಯ ಸಂಪಾದನೆ ಮಾಡಿತ್ತು.

ಆ ಸಂದರ್ಭದಲ್ಲಿ ಪ್ರಕಟವಾಗಿದ್ದ ಬಹುತೇಕ ಎಕ್ಸಿಟ್ ಪೋಲ್‌ ವರದದಿಗಳು ಆಮ್ ಆದ್ಮಿ ಪಾರ್ಟಿ (ಎಎಪಿ)ಗೆ ಗೆಲುವನ್ನು ಅಂದಾಜಿಸಿದ್ದವು. ಆದಾಗ್ಯೂ, ಅದು 60ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದೆಂದು ಯಾವ ಸಮೀಕ್ಷೆಯೂ ಅಂದಾಜಿಸಿರಲಿಲ್ಲ.

ಇಂಡಿಯಾ ಟಿವಿ - ಸಿವೋಟರ್ ಸಮೀಕ್ಷೆ - 35-43 (ಎಎಪಿ), 25-33 (ಬಿಜೆಪಿ)

ಇಂಡಿಯಾ ಟುಡೇ- ಸಿಸೆರೋ ಸಮೀಕ್ಷೆ - 38-46 (ಎಎಪಿ), 19-27 (ಬಿಜೆಪಿ)

ಎಬಿಪಿ-ನೀಲ್ಸನ್‌ ಸಮೀಕ್ಷೆ - 43 (ಎಎಪಿ), 26 (ಬಿಜೆಪಿ)

ಟುಡೇಸ್ ಚಾಣಕ್ಯ ಸಮೀಕ್ಷೆ - 48 (ಎಎಪಿ) 22 (ಬಿಜೆಪಿ)

ಏಕ್ಸಿಸ್ ಸಮೀಕ್ಷೆ - 53 (ಎಎಪಿ), 17 (ಬಿಜೆಪಿ)

ನ್ಯೂಸ್ ನೇಷನ್‌ - 41-45 (ಎಎಪಿ), 23-27 (ಬಿಜೆಪಿ)

ನೈಜ ಚುನಾವಣಾ ಫಲಿತಾಂಶ - 67 (ಎಎಪಿ), 03 (ಬಿಜೆಪಿ)

ಚುನಾವಣಾ ಫಲಿತಾಂಶ ಗಮನಿಸಿ ವಿಶ್ಲೇಷಿಸಿದಾಗ ಏಕ್ಸಿಸ್ ಸಮೀಕ್ಷೆ ಒಂದೇ ಎಎಪಿಗೆ 53 ಸ್ಥಾನಗಳನ್ನು ಅಂದಾಜಿಸಿದ್ದು. ಆದರೂ ಅದು ಕೂಡ ನೈಜ ಫಲಿತಾಂಶವನ್ನು ಅಂದಾಜಿಸುವಲ್ಲಿ ವಿಫಲವಾಗಿರುವುದು ಕಂಡುಬಂದಿತ್ತು.

2020ರ ದೆಹಲಿ ಚುನಾವಣೆಯ ಎಕ್ಸಿಟ್‌ ಪೋಲ್‌ ಫಲಿತಾಂಶ

ಆಮ್ ಆದ್ಮಿ ಪಾರ್ಟಿ (ಎಎಪಿ) 2020ರ ದೆಹಲಿ ಚುನಾವಣೆಯಲ್ಲಿ ಭರ್ಜರಿ ಸಾಧನೆ ಮಾಡಿದ್ದು, 62 ಸ್ಥಾನಗಳಲ್ಲಿ ಗೆಲುವು ದಾಖಲಿಸಿತು. 2015ರ ಫಲಿತಾಂಶಕ್ಕೆ ಹೋಲಿಸಿದರೆ 5 ಸ್ಥಾನಗಳನ್ನು ಕಳೆದುಕೊಂಡಿದೆ. ಇನ್ನೊಂದೆಡೆ ಬಿಜೆಪಿ ತನ್ನ ಪರಿಸ್ಥಿತಿ ಸುಧಾರಿಸಿಕೊಂಡು 8 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿತ್ತು. 2015ರ ಚುನಾವಣೆಯಲ್ಲಿ ಬಿಜೆಪಿ ಕೇವಲ 3 ಸ್ಥಾನಗಳನ್ನು ಗೆದ್ದುಕೊಂಡಿತ್ತು. 2020ರ ದೆಹಲಿ ಚುನಾವಣಾ ಸಂದರ್ಭದಲ್ಲಿ ಪ್ರಕಟವಾದ ಎಕ್ಸಿಟ್ ಪೋಲ್ ವರದಿಗಳು ಎಷ್ಟು ನಿಜವಾಗಿದ್ದವು? - ಗಮನಿಸೋಣ.

ಬಹುತೇಕ ಎಲ್ಲ ಎಕ್ಸಿಟ್‌ಪೋಲ್‌ ವರದಿಗಳು ಎಎಪಿ ಭರ್ಜರಿ ಗೆಲುವು ದಾಖಲಿಸುವುದನ್ನು ಅಂದಾಜಿಸಿದ್ದವು.

ಜನ್‌ ಕೀ ಬಾತ್‌ ಸಮೀಕ್ಷೆ - 55 (ಎಎಪಿ), 15 (ಬಿಜೆಪಿ)

ಇಂಡಿಯಾ ಟುಡೇ - ಏಕ್ಸಿಸ್ ಮೈ ಇಂಡಿಯಾ - 59-68 (ಎಎಪಿ), 2-11 (ಬಿಜೆಪಿ)

ಟೈಮ್ಸ್ ನೌ - 47 (ಎಎಪಿ), 23 (ಬಿಜೆಪಿ)

ನ್ಯೂಸ್ ಎಕ್ಸ್ - ನೇತಾ - 55 (ಎಎಪಿ), 14 (ಬಿಜೆಪಿ)

ಇಂಡಿಯಾ ನ್ಯೂಸ್ - ನೇಷನ್‌ - 55 (ಎಎಪಿ), 14 (ಬಿಜೆಪಿ)

ಎಬಿಪಿ ನ್ಯೂಸ್ - ಸಿ ವೋಟರ್ - 51-65 (ಎಎಪಿ), 3-17( ಬಿಜೆಪಿ)

ನೈಜ ಫಲಿತಾಂಶ - 62 (ಎಎಪಿ), 8 (ಬಿಜೆಪಿ)

ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ವಿಶ್ಲೇಷಿಸಿದಾಗ ಎಬಿಪಿ ನ್ಯೂಸ್ - ಸಿ ವೋಟರ್ - 51-65 (ಎಎಪಿ), 3-17( ಬಿಜೆಪಿ), ಇಂಡಿಯಾ ಟುಡೇ - ಏಕ್ಸಿಸ್ ಮೈ ಇಂಡಿಯಾ - 59-68 (ಎಎಪಿ), 2-11 (ಬಿಜೆಪಿ) ಸಮೀಕ್ಷೆಗಳು ಬಹಳ ಸಮೀಪ ಇರುವುದು ಕಂಡುಬಂತು.

ದೆಹಲಿ ಚುನಾವಣೆ 2025; ಎಕ್ಸಿಟ್ ಪೋಲ್ ಪ್ರಕಟವಾಗುವುದು ಎಷ್ಟು ಗಂಟೆಗೆ

ಚುನಾವಣಾ ಆಯೋಗದ ನಿರ್ದೇಶನಾನುಸಾರ ದೆಹಲಿ ಚುನಾವಣೆಯ ಎಕ್ಸಿಟ್ ಪೋಲ್ ಇಂದು ಸಂಜೆ 6.30ರ ನಂತರ ಪ್ರಕಟವಾಗಲಿದೆ. ದೆಹಲಿ ವಿಧಾನಸಭಾ ಚುನಾವಣೆಯ ಮತದಾನವು ಇಂದು (ಫೆ 5) ಬೆಳಿಗ್ಗೆ 7 ಗಂಟೆಗೆ ಶುರುವಾಗಿದ್ದು ಸಂಜೆ 6 ಗಂಟೆ ತನಕ ನಡೆಯಲಿದೆ. ಮತದಾನ ಪ್ರಕ್ರಿಯೆ ಮುಗಿದ ಅರ್ಧ ಗಂಟೆ ಬಳಿಕ ಎಕ್ಸಿಟ್ ಪೋಲ್ ಅಥವಾ ಚುನಾವಣೋತ್ತರ ಸಮೀಕ್ಷೆ ಪ್ರಕಟ ಮಾಡಬಹುದು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.