Termination of pregnancy: 'ತಾಯಿಯ ನಿರ್ಧಾರವೇ ಅಂತಿಮ' : 8 ತಿಂಗಳ ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿ
ಭ್ರೂಣವು ಸೆರೆಬ್ರಲ್ ಡಿಫಾರ್ಮಿಟಿ, ಅಂದರೆ ಮೆದುಳಿನ ಒಂದು ತರಹದ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ 33 ವಾರಗಳ ( 8 ತಿಂಗಳು) ಗರ್ಭಪಾತಕ್ಕೆ ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ.

ನವದೆಹಲಿ: ಭ್ರೂಣವು ಸೆರೆಬ್ರಲ್ ಡಿಫಾರ್ಮಿಟಿ, ಅಂದರೆ ಮೆದುಳಿನ ಒಂದು ತರಹದ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ 33 ವಾರಗಳ ( 8 ತಿಂಗಳು) ಗರ್ಭಪಾತಕ್ಕೆ ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ.
ಮಗು ಅಸಹಜತೆಯಿಂದ ಬಳಲುತ್ತಿರುವಾಗ ತಾಯಿಯ ಜೀವನದ ಗುಣಮಟ್ಟ ಮತ್ತು ಮಗುವಿಗೆ ಜನ್ಮ ನೀಡಬೇಕೆ ಬೇಡವೇ ಎಂಬ ಆಕೆಯ ನಿರ್ಧಾರ ಮುಖ್ಯವಾಗುತ್ತದೆ. ಮಗುವಿನ ಅಂಗವೈಕಲ್ಯದ ಮಟ್ಟವನ್ನು ತಿಳಿಸಲು ಸಾಧ್ಯವಾಗದ ವೈದ್ಯಕೀಯ ಮಂಡಳಿಯ ಅಭಿಪ್ರಾಯವನ್ನು ಪರಿಗಣಿಸಿ ಗರ್ಭಪಾತಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರು ಅಂಗೀಕರಿಸಿದರು.
ಲೋಕನಾಯಕ್ ಜೈ ಪ್ರಕಾಶ್ ನಾರಾಯಣ್ (ಎಲ್‌ಎನ್‌ಜೆಪಿ) ಅಥವಾ ಗುರು ತೇಗ್ ಬಹದ್ದೂರ್ (ಜಿಟಿಬಿ) ಆಸ್ಪತ್ರೆಯಲ್ಲಿ ಅಥವಾ ಅವರ ಆಯ್ಕೆಯ ಯಾವುದೇ ಮಾನ್ಯತೆ ಪಡೆದ ಆಸ್ಪತ್ರೆಯಲ್ಲಿ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಮಹಿಳೆಗೆ ನ್ಯಾಯಾಲಯ ಅನುಮತಿ ನೀಡಿದೆ.
ತಾಯಿಯ ಆಯ್ಕೆ ಮತ್ತು ಘನತೆ ಮತ್ತು ಸುಸ್ಥಿರ ಜೀವನದ ಅವಕಾಶಗಳ ದೃಷ್ಟಿಯಿಂದ, ಅರ್ಜಿಯನ್ನು ಅನುಮತಿಸಲಾಗಿದೆ ಎಂದು ಹೈಕೋರ್ಟ್ ಹೇಳಿದೆ. ಮಹಿಳೆಯ ಹಕ್ಕು ಮತ್ತು ಭವಿಷ್ಯದ ತೊಡಕುಗಳ ದೃಷ್ಟಿಯಿಂದ ಇದೊಂದು ಪ್ರಗತಿಪರ ತೀರ್ಪು ಎಂದು ಅರ್ಜಿದಾರರ ಪರ ವಕೀಲ ಅನ್ವೇಶ್ ಮಧುಕರ್ ಹೇಳಿದ್ದಾರೆ.
ಮಗು ಬದುಕುಳಿಯುವ ಸಾಧ್ಯತೆಯಿದೆ, ಆದರೆ ಜೀವನದ ಗುಣಮಟ್ಟ ಹೇಗಿರುತ್ತದೆ? ಮಗು ಸರಿಯಿಲ್ಲದಿದ್ದರೆ ಉಳಿದ ಜೀವನ ತಾಯಿ ಎದುರಿಸುತ್ತಿರುವ ವೇದನೆ ಮತ್ತು ನೋವನ್ನು ನ್ಯಾಯಾಲಯವು ಪರಿಗಣಿಸಬೇಕು ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು.
ನ್ಯಾಯಾಲಯವು ದೆಹಲಿ ಸರ್ಕಾರದ ವಕೀಲರನ್ನು ವೈದ್ಯರು ಹಾಗೂ ನರವಿಜ್ಞಾನಿಗಳ ಜೊತೆಗೆ ವಿಚಾರಣೆಗೆ ಹಾಜರಾಗುವಂತೆ ಕೇಳಿತು. ಆಗ ವಿಡಿಯೋ ಕಾನ್ಫರೆನ್ಸ್ ಮೂಲಕ ಡಾ ಚಂದ್ರಶೇಖರ್ ಸೇರಿಕೊಂಡರು. ಅವರು ಮಗು ಬದುಕುಳಿಯುತ್ತದೆ ಆದರೆ ಜೀವನದ ಗುಣಮಟ್ಟವನ್ನು ಊಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಅರ್ಜಿದಾರರು ನೋಯ್ಡಾದ 26 ವರ್ಷ ವಯಸ್ಸಿನ ವಿವಾಹಿತ ಮಹಿಳೆಯಾಗಿದ್ದು, ಅವರು ವಕೀಲರಾದ ಪ್ರಾಚಿ ನಿರ್ವಾನ್, ಪ್ರಾಂಜಲ್ ಶೇಖರ್ ಮತ್ತು ಯಾಸೀನ್ ಸಿದ್ದಿಕಿ ಮೂಲಕ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದಾರೆ.
ನವೆಂಬರ್ 11 ರಂದು ಮೊದಲ ಬಾರಿಗೆ ಭ್ರೂಣದ ಮೆದುಳಿನಲ್ಲಿ ಅಸಹಜತೆ ಕಂಡುಬಂದಿದೆ. ನವೆಂಬರ್ 14 ರಂದು ಮಾಡಿದ ಮತ್ತೊಂದು ಅಲ್ಟ್ರಾಸೌಂಡ್ ಮೂಲಕ ಇದು ದೃಢೀಕರಿಸಲ್ಪಟ್ಟಿದೆ.
1971ರ ವೈದ್ಯಕೀಯ ಗರ್ಭಪಾತ ಕಾಯ್ದೆ ತಿದ್ದುಪಡಿ ಅನ್ವಯ 20 ವಾರಗಳ (5 ತಿಂಗಳ) ನಂತರ ಮಗುವನ್ನು ತೆಗೆಸಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ಈ ಹಿಂದೆ ಅವಿವಾಹಿತ ಮಹಿಳೆಯ ಗರ್ಭಪಾತಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. 24 ವಾರಗಳ ಗರ್ಭವತಿಯಾಗಿದ್ದ ಅವಿವಾಹಿತ ಮಹಿಳೆಯ ಗರ್ಭಪಾತಕ್ಕೆ, ಕಳೆದ ಜುಲೈ 15ರಂದು ದೆಹಲಿ ಹೈಕೋರ್ಟ್ ಅನುಮತಿ ನಿರಾಕರಿಸಿತ್ತು. ಹೀಗಾಗಿ ಸುಪ್ರೀಂ ಮೆಟ್ಟಿಲೇರಿದ್ದ ಮಹಿಳೆಗೆ, ಗರ್ಭಪಾತಕ್ಕೆ ಅನುಮತಿ ಸಿಕ್ಕಿತ್ತು.
