ಅತಿ ಹೆಚ್ಚು ಮಲಿನವಾಗಿರುವ ನಗರಗಳು ಭಾರತದಲ್ಲೇ ಹೆಚ್ಚು; ದೆಹಲಿಗೆ ಅತ್ಯಂತ ಕಲುಷಿತ ರಾಜಧಾನಿ ಎಂಬ ಹಣೆಪಟ್ಟಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅತಿ ಹೆಚ್ಚು ಮಲಿನವಾಗಿರುವ ನಗರಗಳು ಭಾರತದಲ್ಲೇ ಹೆಚ್ಚು; ದೆಹಲಿಗೆ ಅತ್ಯಂತ ಕಲುಷಿತ ರಾಜಧಾನಿ ಎಂಬ ಹಣೆಪಟ್ಟಿ

ಅತಿ ಹೆಚ್ಚು ಮಲಿನವಾಗಿರುವ ನಗರಗಳು ಭಾರತದಲ್ಲೇ ಹೆಚ್ಚು; ದೆಹಲಿಗೆ ಅತ್ಯಂತ ಕಲುಷಿತ ರಾಜಧಾನಿ ಎಂಬ ಹಣೆಪಟ್ಟಿ

ದೆಹಲಿಯು ವಿಶ್ವದಲ್ಲೇ ಅತ್ಯಂತ ಕಲುಷಿತ ರಾಜಧಾನಿ ಎಂಬ ಹಣೆಪಟ್ಟಿ ಹೊತ್ತಿದೆ. ಆರೋಗ್ಯಕ್ಕೆ ಅಪಾಯಕಾರಿಯಾಗಿರುವ ವಾಯುಗುಣಮಟ್ಟ ಹೊಂದಿರುವ, ಅತಿ ಹೆಚ್ಚು ಮಲಿನವಾಗಿರುವ ನಗರಗಳು ಭಾರತದಲ್ಲೇ ಹೆಚ್ಚು ಎಂದು ವರದಿಯೊಂದು ಹೇಳಿದೆ.

ಅತಿ ಹೆಚ್ಚು ಮಲಿನವಾಗಿರುವ ನಗರಗಳು ಭಾರತದಲ್ಲೇ ಹೆಚ್ಚು; ದೆಹಲಿ ಅತ್ಯಂತ ಕಲುಷಿತ ರಾಜಧಾನಿ
ಅತಿ ಹೆಚ್ಚು ಮಲಿನವಾಗಿರುವ ನಗರಗಳು ಭಾರತದಲ್ಲೇ ಹೆಚ್ಚು; ದೆಹಲಿ ಅತ್ಯಂತ ಕಲುಷಿತ ರಾಜಧಾನಿ (PTI)

ವಿಶ್ವದಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ದೇಶ ಭಾರತ. ಅತಿ ಹೆಚ್ಚು ಮಲಿನವಾಗಿರುವ ನಗರಗಳ ಸಂಖ್ಯೆ ಕೂಡಾ ಭಾರತದಲ್ಲಿ ಹೆಚ್ಚಿದೆ. ವಿಶ್ವದ ಅತ್ಯಂತ ಕಲುಷಿತ 20 ನಗರಗಳ ಪೈಕಿ 13 ನಗರಗಳು ಭಾರತದಲ್ಲಿಯೇ ಇವೆ ಎಂಬುದು ಆತಂಕಕಾರಿ ಅಂಶ. ಇತ್ತೀಚೆಗೆ ಪ್ರಕಟವಾದ ಹೊಸ ವರದಿಯ ಪ್ರಕಾರ, ಅಸ್ಸಾಂನ ಬೈರ್ನಿಹತ್ ನಗರವು ವಿಶ್ವದ ಅತ್ಯಂತ ಮಲಿನವಾದ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದೇ ವೇಳೆ ಭಾರತದ ರಾಜಧಾನಿ ಹಾಗೂ ಅತಿ ಹೆಚ್ಚು ಜನಸಂಖ್ಯೆ ಇರುವ ನಗರವಾದ ದೆಹಲಿ ವಿಶ್ವದ ಅತಿ ಹೆಚ್ಚು ಕಲುಷಿತವಾಗಿರುವ ರಾಜಧಾನಿಯಾಗಿದೆ.

ಸ್ವಿಸ್ ವಾಯು ಗುಣಮಟ್ಟದ ತಂತ್ರಜ್ಞಾನ ಕಂಪನಿ ಐಕ್ಯೂಏರ್‌ನ (IQAir) ವಿಶ್ವ ವಾಯು ಗುಣಮಟ್ಟ ವರದಿ 2024ರ ಪ್ರಕಾರ, ದೆಹಲಿಯು ವಿಶ್ವದಲ್ಲೇ ಅತ್ಯಂತ ಕಲುಷಿತ ರಾಜಧಾನಿಯಾಗಿ ಮುಂದುವರೆದಿದೆ. ಹಲವು ವರ್ಷಗಳಿಂದ ದೆಹಲಿಯು ಈ ಹಣೆಪಟ್ಟಿ ಹೊತ್ತಿದೆ. ಇದೇ ವೇಳೆ 2023ರಲ್ಲಿ ವಿಶ್ವದ ಮೂರನೇ‌ ಅತ್ಯಂತ ಮಲಿನವಾದ ದೇಶ ಎನಿಸಿಕೊಂಡಿದ್ದ ಭಾರತವು, 2024ರ ವೇಳೆಗೆ ತುಸು ಸುಧಾರಿಸಿಕೊಂಡಿದೆ. ವಿಶ್ವದ ಐದನೇ ಅತ್ಯಂತ ಕಲುಷಿತ ದೇಶವಾಗಿದೆ ಎಂದು ವರದಿ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯ ವಾಯುಗುಣಮಟ್ಟದ ಮಾನದಂಡಕ್ಕೆ ಅನುಗುಣವಾಗಿ ಈ ವರದಿ ರೂಪಿಸಲಾಗಿದೆ. ಅದರಂತೆ ವಿಶ್ವದ 10 ಅತ್ಯಂತ ಕಲುಷಿತ ಅಥವಾ ಮಲಿನವಾಗಿರುವ ನಗರಗಳ ಪೈಕಿ ಆರು ನಗರಗಳು ಭಾರತದಲ್ಲಿವೆ ಎಂದು ವರದಿ ಹೇಳಿದೆ. ಇದೇ ವೇಳೆ ವಿಶ್ವದ ಅಗ್ರ 20 ಅತ್ಯಂತ ಕಲುಷಿತ ನಗರಗಳಲ್ಲಿರುವ 13 ನಗರಗಳು ಭಾರತದ್ದೇ ಆಗಿವೆ.

ಭಾರತದ ಕಲುಷಿತ (ಮಲಿನಯುತ) ನಗರಗಳು

ಬೈರ್ನಿಹತ್, ದೆಹಲಿ, ಮುಲ್ಲನ್‌ಪುರ, ಫರಿದಾಬಾದ್, ಲೋನಿ, ನವದೆಹಲಿ, ಗುರುಗ್ರಾಮ್, ಗಂಗಾನಗರ, ಗ್ರೇಟರ್ ನೋಯ್ಡಾ, ಭಿವಾಡಿ, ಮುಜಫರ್‌ನಗರ, ಹನುಮಾನ್‌ಗಢ ಮತ್ತು ನೋಯ್ಡಾ.

ಭಾರತೀಯ ನಗರಗಳಲ್ಲಿನ ವಾಯುಗುಣಮಟ್ಟವು ಅಪಾಯಕಾರಿ ಎಂಬುದು ವರದಿಯ ಮೂಲಕ ತಿಳಿದುಬಂದಿದೆ. ವಾಯು ಮಾಲಿನ್ಯವು ಭಾರತದಲ್ಲಿ ಗಂಭೀರ ಆರೋಗ್ಯ ಅಪಾಯವಾಗಿ ಮುಂದುವರೆದಿದ್ದು, ಮನುಷ್ಯರ ಜೀವಿತಾವಧಿಯನ್ನು ಸರಿಸುಮಾರು 5.2 ವರ್ಷಗಳಷ್ಟು ಕಡಿಮೆ ಮಾಡುತ್ತದೆ. ಕಾರಣವೆಂದರೆ, ವಾಯುಗುಣಮಟ್ಟವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಕಾಲಿಕ ಮರಣ, ಹೃದಯಾಘಾತ ಮತ್ತು ಉಸಿರಾಟದ ತೊಂದರೆಗಳಿಗೆ ಈ ಸಮಸ್ಯೆಗಳು ಕಾರಣವಾಗುತ್ತವೆ.

ಮಾಲಿನ್ಯದಿಂದ ಅಪಾರ ಸಾವು - ನೋವು

ಕಳೆದ ವರ್ಷ ಪ್ರಕಟವಾದ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಅಧ್ಯಯನದ ಪ್ರಕಾರ, 2009ರಿಂದ 2019ರವರೆಗೆ 10 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಪ್ರತಿ ವರ್ಷ ಸುಮಾರು 15 ಲಕ್ಷ ಸಾವುಗಳು ಮಾಲಿನ್ಯಕ್ಕೆ ದೀರ್ಘಕಾಲೀನ ಒಡ್ಡಿಕೊಳ್ಳುವಿಕೆಗೆ ಸಂಬಂಧಿಸಿವೆ. ಸರ್ಕಾರದ ಕಡೆಯಿಂದ ಹಾಗೂ ಜನರಿಂದ ಮಾಲಿನ್ಯ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳ ಅಗತ್ಯವಿದೆ.

ಭಾರತವನ್ನು ಹೊರತುಪಡಿಸಿದರೆ ಪಾಕಿಸ್ತಾನದ ಲಾಹೋರ್‌, ಮುಲ್ತಾನ್‌, ಪೇಶಾವರ ನಗರಗಳು ಹೆಚ್ಚು ಮಲಿನವಾಗಿವೆ ಎಂದು ವರದಿ ಹೇಳಿದೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.