Delhi New CM: ದೆಹಲಿಯ ನೂತನ ಸಿಎಂ ರೇಖಾ ಗುಪ್ತಾ, ಡಿಸಿಎಂ ಪರ್ವೇಶ್ ವರ್ಮಾ; ಇಂದು ಮಧ್ಯಾಹ್ನ ರಾಮಲೀಲಾ ಮೈದಾನದಲ್ಲಿ ಪ್ರಮಾಣವಚನ
Delhi New CM: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 48 ಸ್ಥಾನ ಗೆದ್ದುಕೊಂಡ ಬಿಜೆಪಿ ತನ್ನ ಶಾಸಕಾಂಗ ಪಕ್ಷದ ನಾಯಕರನ್ನಾಗಿ ರೇಖಾ ಗುಪ್ತಾ ಅವರನ್ನು ಆಯ್ಕೆ ಮಾಡಿದ್ದು, ಅವರೇ ದೆಹಲಿಯ ನೂತನ ಮುಖ್ಯಮಂತ್ರಿ ಆಗಲಿದ್ದಾರೆ. ಪರ್ವೇಶ್ ವರ್ಮಾ ಅವರು ಡಿಸಿಎಂ ಆಗಲಿದ್ದಾರೆ. ಇಂದು ಪ್ರಮಾಣ ವಚನ ಸ್ವೀಕರಿಸುವರು,

Delhi New CM: ದೆಹಲಿಗೆ ಮಹಿಳಾ ಮುಖ್ಯಮಂತ್ರಿ ಲಭಿಸಿದ್ದು, ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಆಯ್ಕೆಯಾಗಿದ್ದಾರೆ. ಉಪ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್ ಅವರನ್ನು ಸೋಲಿಸಿದ್ದ ಪರ್ವೇಶ್ ವರ್ಮಾ ಆಯ್ಕೆಯಾಗಿದ್ದಾರೆ. ದೆಹಲಿಯ ಬಿಜೆಪಿ ಕಚೇರಿಯಲ್ಲಿ ಬುಧವಾರ ರಾತ್ರಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಹಾಗೂ ಉಪನಾಯಕ ಆಯ್ಕೆಯಾಗಿದೆ. ಇಂದು (ಫೆ 20) ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬಿಜೆಪಿ ಶಾಸಕಾಂಗ ಪಕ್ಷ ನಾಯಕ (ದೆಹಲಿ ಮುಖ್ಯಮಂತ್ರಿ) ಆಯ್ಕೆ ಪ್ರಕ್ರಿಯೆ ಗಮನಿಸುವುದಕ್ಕಾಗಿ ಪಕ್ಷವು ಕೇಂದ್ರ ವೀಕ್ಷಕರಾಗಿ ಮಾಜಿ ಸಚಿವ ರವಿಶಂಕರ ಪ್ರಸಾದ್, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಓಂ ಪ್ರಕಾಶ್ ಧನ್‌ಕಡ್ ಅವರನ್ನು ನೇಮಕ ಮಾಡಿತ್ತು. ಅವರ ಸಮ್ಮುಖದಲ್ಲಿ ದೆಹಲಿ ಮುಖ್ಯಮಂತ್ರಿ (ಶಾಸಕಾಂಗ ಪಕ್ಷದ ನಾಯಕ) ಆಯ್ಕೆ ನಡೆಯಿತು.
ದೆಹಲಿ ಸಿಎಂ ರೇಸ್ ಹೀಗಿತ್ತು
ದೆಹಲಿ ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ಪರ್ವೇಶ್ ವರ್ಮಾ (ಅರವಿಂದ ಕೇಜ್ರೀವಾಲ್ ಅವರನ್ನು ಸೋಲಿಸಿದವರು), ಬಿಜೆಪಿಯ ಮಾಜಿ ಅಧ್ಯಕ್ಷ ವಿಜೇಂದ್ರ ಗುಪ್ತಾ, ಸತೀಶ್ ಉಪಾಧ್ಯಾಯ, ಪವನ್ ಶರ್ಮಾ, ಆಶಿಶ್ ಸೂದ್, ರೇಖಾ ಗುಪ್ತಾ ಮತ್ತು ಶಿಖಾ ರೈ ಹೆಸರು ಕಾಣಿಸಿಕೊಂಡಿದ್ದವು.ಇವರ ಹೆಸರುಗಳಲ್ಲದೇ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್ ಸಹಿತ ಕೆಲವು ನಾಯಕಿಯರ ಹೆಸರು ಕೂಡ ರೇಸ್‌ನ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದವು. ಕೊನೆಯ ಹಂತದಲ್ಲಿ ರೇಖಾ ಗುಪ್ತಾ ಹೆಸರು ಮುಂಚೂಣಿಗೆ ಬಂದಿತ್ತು.
ಸುಮಾರು 27 ವರ್ಷಗಳ ನಂತರ ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳುತ್ತಿರುವ ಕಾರಣ, 48 ಶಾಸಕರನ್ನು ಗಮನಿಸಿದರೆ ಈ ಪೈಕಿ ಹಳಬರು ಹೊಸಬರು ಸೇರಿಕೊಂಡಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೂ ಪ್ರಬಲ ಸ್ಪರ್ಧೆ ಏರ್ಪಟ್ಟಿದ್ದು, ಅವರಲ್ಲಿ ಪಕ್ಷದ ವರಿಷ್ಠರು ಯಾರನ್ನು ಆಯ್ಕೆ ಮಾಡುವಂತೆ ಶಾಸಕರಿಗೆ ಸೂಚಿಸುತ್ತಾರೆ ಎಂಬ ಕುತೂಹಲ ಇತ್ತು. ಈಗ ಅದಕ್ಕೆ ತೆರೆಬಿದ್ದಿದೆ. ಇನ್ನು ಹೊಸ ನಿಯೋಜಿತ ಮುಖ್ಯಮಂತ್ರಿ, ಶಾಸಕಾಂಗ ಪಕ್ಷದ ನಾಯಕ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರನ್ನು ಭೇಟಿ ಮಾಡಿ ಹೊಸ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ಧಾರೆ.
ರಾಮಲೀಲಾ ಮೈದಾನದಲ್ಲಿ ನಾಳೆಯೇ ಪ್ರಮಾಣ ವಚನ
ದೆಹಲಿಯ ನೂತನ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟ ನಾಳೆ (ಫೆ 20) ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದೆ. ಈಗಾಗಲೇ ರಾಮಲೀಲಾ ಮೈದಾನದಲ್ಲಿ ತಯಾರಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಡಳಿತ ಇರುವಂತಹ ರಾಜ್ಯಗಳ ಮುಖ್ಯಮಂತ್ರಿಗಳು, ಎನ್‌ಡಿಎ ನಾಯಕರು, ಕೇಂದ್ರ ಸಚಿವರು ಹಾಗೂ ಇತರೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ರಾಮಲೀಲಾ ಮೈದಾನದಲ್ಲಿ 50,000 ಗಣ್ಯರಿಗೆ ಆಸನ ವ್ಯವಸ್ಥೆ ಮಾಡಲಾಗುತ್ತಿದ್ದು, ಭರ್ಜರಿ ವೇದಿಕೆಯನ್ನೂ ಸಿದ್ಧಪಡಿಸಲಾಗುತ್ತಿದೆ. ಸುಮಾರು 50 ಸೆಲೆಬ್ರಿಟಿಗಳು ಮತ್ತು ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸಲಾಗಿದೆ. ಆದರೆ, ಸೆಲೆಬ್ರಿಟಿಗಳ ಹೆಸರನ್ನು ಬಿಡುಗಡೆ ಮಾಡಲಾಗಿಲ್ಲ. ಪ್ರೋಟೋಕಾಲ್ ಪ್ರಕಾರ, ಮಾಜಿ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್ ಮತ್ತು ಅತಿಶಿ ಅವರಿಗೂ ಆಮಂತ್ರಣ ಕಳುಹಿಸಲಾಗುತ್ತದೆ. ದೆಹಲಿ ವಿಧಾನಸಭೆಯ 70 ಸ್ಥಾನಗಳ ಪೈಕಿ ಬಿಜೆಪಿ 48 ಗೆದ್ದುಕೊಂಡಿದ್ದು, ಸರ್ಕಾರ ರಚಿಸುತ್ತಿದೆ.
ಈ ಕಾರ್ಯಕ್ರಮದ ಕಾರಣ ದೆಹಲಿ ಪೊಲೀಸರು ಸಂಚಾರ ಸಲಹೆಯನ್ನು ನೀಡಿದ್ದಾರೆ. ಬಹದ್ದೂರ್ ಷಾ ಜಾಫರ್ ಮಾರ್ಗ (ಐಟಿಒ ದಿಂದ ದೆಹಲಿ ಗೇಟ್), ಜವಾಹರಲಾಲ್ ನೆಹರು ಮಾರ್ಗ (ದೆಹಲಿ ಗೇಟ್‌ನಿಂದ ಗುರುನಾಕ್ ಚೌಕ್), ಮತ್ತು ಇತರರು ಸೇರಿದಂತೆ ಹಲವಾರು ರಸ್ತೆಗಳಲ್ಲಿ ಫೆಬ್ರವರಿ 20 ರಂದು ಬೆಳಿಗ್ಗೆ 7.00 ರಿಂದ ಸಂಜೆ 4.00 ರವರೆಗೆ ಸಂಚಾರ ವ್ಯತ್ಯಯವಾಗಲಿವೆ. ಪ್ರಯಾಣಿಕರಿಗೆ ಸಾರ್ವಜನಿಕ ಸಾರಿಗೆಯನ್ನು ಬಳಸಲು, ಗೊತ್ತುಪಡಿಸಿದ ಪ್ರದೇಶಗಳಲ್ಲಿ ಮಾತ್ರ ನಿಲುಗಡೆ ಮಾಡಲು ಮತ್ತು ಸುಗಮ ಸಂಚಾರ ಹರಿವನ್ನು ಖಚಿತಪಡಿಸಿಕೊಳ್ಳಲು ರಸ್ತೆಬದಿಯ ನಿಲುಗಡೆ ಮಾಡದಂತೆ ದೆಹಲಿ ಪೊಲೀಸರು ಸೂಚಿಸಿದ್ಧಾರೆ.
