ಕನ್ನಡ ಸುದ್ದಿ  /  Nation And-world  /  Delhi News Adr Finds 521criminal 580 Crorepati Candidates In Telangana Assembly Elections 2023 Held On November 30 Kub

Telangana Assembly Elections: ತೆಲಂಗಾಣ ಚುನಾವಣೆಯಲ್ಲಿ ಕ್ರಿಮಿನಲ್‌ ಹಿನ್ನೆಲೆಯುಳ್ಳ 521 ಅಭ್ಯರ್ಥಿಗಳು, 580 ಕೋಟ್ಯಧಿಪತಿಗಳು

Telangana Candidates ತೆಲಂಗಾಣ ವಿಧಾನಸಭೆ ಚುನಾವಣೆಗೆ(Telangana Assembly elections) ಸ್ಪರ್ಧಿಸಿರುವ ಹಲವು ಅಭ್ಯರ್ಥಿಗಳ ಹಿನ್ನೆಲೆ ಪ್ರಕಟವಾಗಿದೆ. ಎಡಿಆರ್‌ ಪ್ರಕಟಿಸಿರುವ ಮಾಹಿತಿ ಪ್ರಕಾರ ಅಪರಾಧಿಗಳು ಹಾಗೂ ಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಹೆಚ್ಚಾಗಿದೆ.

ತೆಲಂಗಾಣ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಹಲವರ ವಿರುದ್ದ ಅಪರಾಧ ಪ್ರಕರಣಗಳಿದ್ದರೆ, ಕೋಟ್ಯಧಿಪತಿಗಳ ಸಂಖ್ಯೆಯೂ ಹೆಚ್ಚಾಗಿದೆ.
ತೆಲಂಗಾಣ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಹಲವರ ವಿರುದ್ದ ಅಪರಾಧ ಪ್ರಕರಣಗಳಿದ್ದರೆ, ಕೋಟ್ಯಧಿಪತಿಗಳ ಸಂಖ್ಯೆಯೂ ಹೆಚ್ಚಾಗಿದೆ.

ದೆಹಲಿ: ಇನ್ನೆರಡು ದಿನದಲ್ಲಿ ಚುನಾವಣೆಗೆ ಅಣಿಯಾಗಿರುವ ತೆಲಂಗಾಣದಲ್ಲಿ ಈ ಬಾರಿ ಕ್ರಿಮಿನಲ್‌ ಹಿನ್ನೆಲೆ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಒಟ್ಟು 521 ಅಭ್ಯರ್ಥಿಗಳು ಕ್ರಿಮಿನಲ್‌ ಹೊಂದಿರುವವರು ಅಖಾಡದಲ್ಲಿದ್ದು, ಮತ ಯಾಚಿಸುತ್ತಿದ್ದಾರೆ. ಅಂದರೆ ಸ್ಪರ್ಧೆ ಬಯಸಿ ಕಣದಲ್ಲಿರುವವರಲ್ಲಿ ಶೇ. 23ರಷ್ಟು ಮಂದಿಗೆ ಕ್ರಿಮಿನಲ್‌ ಹಿನ್ನೆಲೆಯನ್ನು ಅಫಿಡವಿಟ್‌ ನಲ್ಲಿ ಬಹಿರಂಗಪಡಿಸಿದ್ದಾರೆ ಎಂದು ಎಡಿಆರ್‌ ( Association for Democratic Reforms) ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖಿಸಿದೆ.

ನವೆಂಬರ್‌ 30ರಂದು ಚುನಾವಣೆ ನಿಗದಿಯಾಗಿದ್ದು, ನವೆಂಬರ್‌ ಮೊದಲ ವಾರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದಿದೆ. ಇಡೀ ಚುನಾವಣೆಗೆ 2,290 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ ಒಟ್ಟು 521 ಮಂದಿ ತಮ್ಮ ಅಪರಾಧ ಹಿನ್ನೆಲೆ ಘೋಷಿಸಿಕೊಂಡಿದ್ದಾರೆ. ದರಲ್ಲಿ ಶೇ. 15 ಅಂದರೆ 353 ಅಭ್ಯರ್ಥಿಗಳು ಗಂಭೀರ ಸ್ವರೂಪದ ಅಪರಾಧ ಹಿನ್ನೆಲೆ ಉಳ್ಳವರು. ಇದರಲ್ಲಿ ಹಲವು ಪ್ರಕರಣಗಳು ಜಾಮೀನು ರಹಿತವಾದವು. ಮಹಿಳೆಯರು, ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು, ಅತ್ಯಾಚಾರ, ಕಿಡ್ನಾಪ್‌, ಕೊಲೆ ಪ್ರಕರಣಗಳು ಸೇರಿವೆ.

ಐದು ವರ್ಷದ ಹಿಂದೆ ನಡೆದಿದ್ದ ಚುನಾವಣೆ ವೇಳೆ ಒಟ್ಟು 1,777 ಅಭ್ಯರ್ಥಿಗಳಲ್ಲಿ 368 ಅಭ್ಯರ್ಥಿಗಳಿಗೆ ಅಪರಾಧ ಹಿನ್ನೆಲೆಯಿತ್ತು. ಇಈ ಬಾರಿ ಇದು ಶೇ. 2ರಷ್ಟು ಏರಿಕೆ ಕಂಡಿದೆ ಎಂದು ಎಡಿಆರ್‌ ವಿಶ್ಲೇಷಿಸಿದೆ.

ಕಾಂಗ್ರೆಸ್‌ ಮುಂಚೂಣಿ

ಇಂತಹ ಹಿನ್ನೆಲೆ ಉಳ್ಳವರಲ್ಲಿ ಅತಿ ಹೆಚ್ಚು ಟಿಕೆಟ್‌ ಕಾಂಗ್ರೆಸ್‌ ಹಾಗೂ ಬಿಜೆಪಿ ಮುಂಚೂಣಿಯಲ್ಲಿವೆ. ಒಟ್ಟು 118 ಕ್ಷೇತ್ರದಲ್ಲಿ 60 ಮಂದಿ ಕಾಂಗ್ರೆಸ್‌ ಅಭ್ಯರ್ಥಿಗಳು ಕ್ರಿಮಿನಲ್‌ ಹಿನ್ನೆಲೆ ಇದ್ದವರು. ಬಿಜೆಪಿ ಕಣಕ್ಕಳಿದಿರುವ 111 ಕ್ಷೇತ್ರಗಳಲ್ಲಿ 54 ಮಂದಿಗೆ ಇಂತಹ ಹಿನ್ನೆಲೆಯಿದೆ. ಇನ್ನು ಆಡಳಿತಾರೂಢ ಬಿಆರ್‌ಎಸ್‌ ಪಕ್ಷ ಎಲ್ಲಾ119 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದರಲ್ಲಿ 34 ಮಂದಿ ಕ್ರಿಮಿನಲ್‌ ಪ್ರಕರಣ ಇರುವುದನ್ನು ಉಲ್ಲೇಖಿಸಿದ್ದಾರೆ. ಬಿಎಸ್ಪಿಯ 28 , ಸಿಪಿಐಎಂನ 6, ಆಲ್‌ ಇಂಡಿಯಾ ಫಾರ್ವರ್ಡ್‌ ಬ್ಲಾಕ್‌ನ 7, ಎಐಎಂಐಎಂನ 3 ಅಭ್ಯರ್ಥಿಗಳು ಈ ಹಿನ್ನೆಲೆ ಹೊಂದಿರುವುದಾಗಿ ಎಡಿಆರ್‌ ತಿಳಿಸಿದೆ.

ಆದಾಯದಲ್ಲೂ ಹೆಚ್ಚಳ

ಇನ್ನು ತೆಲಂಗಾಣ ವಿಧಾನಸಭೆ ಮರು ಆಯ್ಕೆ ಬಯಸಿ 103 ಶಾಸಕರು ಕಣದಲ್ಲಿದ್ದಾರೆ. ಅವರು ಘೋಷಿಸಿರುವ ಆಸ್ತಿ ಪ್ರಕಾರ 90 ಆಸ್ತಿ ಪ್ರಮಾಣ ಏರಿಕೆ ಯಾಗಿದೆ. ಅದು ಶೇ. 3ರಿಂದ ಶೇ.1331ರವರೆಗೂ ಹೆಚ್ಚಳ ಕಂಡು ಬಂದಿದೆ. ಇವರಲ್ಲಿ ಆಡಳಿತಾರೂಢ ಬಿಆರ್‌ಎಸ್‌ ಶಾಸಕರ ಪ್ರಮಾಣವೇ ಅಧಿಕ. ಉಳಿದ 13ಶಾಸಕರ ಆಸ್ತಿಯಲ್ಲಿ ಕುಸಿತ ಕಂಡು ಬಂದಿದೆ.

ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಶೇ.25 ರಷ್ಟು ಅಂದರೆ 580 ಮಂದಿ ಕೋಟ್ಯಧಿಪತಿಗಳು. ಇವರಲ್ಲಿ ಹಾಲಿ ಶಾಸಕ ಪೈಲ್ಲಾ ಶೇಖರ್‌ ರೆಡ್ಡಿ ಆಸ್ತಿ ಐದು ವರ್ಷದಲ್ಲಿ 136.47 ಕೋಟಿ ರೂ. ಹೆಚ್ಚಳವಾಗಿರುವುದನ್ನು ವರದಿಯಲ್ಲಿ ತಿಳಿಸಲಾಗಿದೆ.