Lok Sabha Elections2024: ಲೋಕಸಭಾ ಚುನಾವಣೆಗೂ ಮುನ್ನಾ ಬಿಜೆಪಿಗೆ ಪಕ್ಷಾಂತರ, ಈಗ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ರಾಜೀನಾಮೆ
ಅಸ್ಸಾಂನಲ್ಲೂ ಈಗ ಪಕ್ಷಾಂತರ ಪರ್ವ. ಕಾಂಗ್ರೆಸ್ ಕಾರ್ಯಾಧ್ಯಕ್ಷ ರಾನಾ ಗೋಸ್ವಾಮೀ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿ ಸೇರಲು ಸಿದ್ದತೆ ಮಾಡಿಕೊಂಡಿದ್ದಾರೆ.
ಗುವಾಹಟಿ: ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಬಸವರಾಜ ಪಾಟೀಲ್ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ ಮರುದಿನವೇ ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ರಾನಾ ಗೋಸ್ವಾಮಿ ಕೂಡ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ದೆಹಲಿಗೆ ಆಗಮಿಸಿದ್ದು, ಬಿಜೆಪಿ ಸೇರುವ ಸಾಧ್ಯತೆಯಿದೆ. ಈ ಕುರಿತು ಪಕ್ಷದ ನಾಯಕರೊಂದಿಗೆ ಅಸ್ಸಾಂನ ಬಿಜೆಪಿ ಸಿಎಂ ಹಾಗೂ ನಾಯಕರು ಚರ್ಚೆ ನಡೆಸಿದ್ಧಾರೆ.
ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಆಗುವ ಸನ್ನಿವೇಶವಿದ್ದು. ಏಪ್ರಿಲ್ ಮೇನಲ್ಲಿ ಚುನಾವಣೆ ನಡೆಯಬಹುದು. ಇದರ ನಡುವೆಯೇ ಪಕ್ಷಾಂತರ ಚಟುವಟಿಕೆ ಎಲ್ಲೆಡೆ ನಡೆದಿದೆ. ಅದರಲ್ಲೂ ಬಿಜೆಪಿಯತ್ತಲೇ ಮುಖ ಮಾಡಿದ್ದಾರೆ.
ಅಸ್ಸಾಂನಲ್ಲಿ ಹಲವಾರು ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದ, ಹಾಲಿ ಕಾರ್ಯಾಧ್ಯಕ್ಷರಾಗಿದ್ದ ರಾನಾ ಗೋಸ್ವಾಮಿ ಅವರು ರಾಜೀನಾಮೆಯನ್ನು ನೀಡಿದರು. ವೈಯಕ್ತಿಕ ಕಾರಣದಿಂದ ರಾಜೀನಾಮೆ ಪತ್ರವನ್ನು ನೀಡುತ್ತಿದ್ದೇನೆ. ಪಕ್ಷದ ನಾಯಕರು ರಾಜೀನಾಮೆ ಅಂಗೀಕರಿಸಬೇಕು ಎಂದು ಗೋಸ್ವಾಮಿ ಅವರು ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್‌ನಿಂದ ಲೋಕಸಭಾ ಸದಸ್ಯರಾಗಿಯೂ ಗೋಸ್ವಾಮಿ ಕೆಲಸ ಮಾಡಿದ್ದಾರೆ.
ಈಗಾಗಲೇ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಸರ್ಮ, ಬಿಜೆಪಿ ರಾಜ್ಯಾಧ್ಯಕ್ಷ ಬಬಲೇಶ್ ಕಲಿತಾ ಕೂಡ ದೆಹಲಿಗೆ ಆಗಮಿಸಿದ್ದು, ಗೋಸ್ವಾಮಿ ಸೇರ್ಪಡೆ ಕುರಿತು ಚರ್ಚೆ ನಡೆಸಿದ್ದಾರೆ. ಗೋಸ್ವಾಮಿ ಜತೆಗೆ ಇನ್ನೂ ಹಲವು ನಾಯಕರು ಬಿಜೆಪಿ ಸೇರುವ ಸಾಧ್ಯತೆಯಿದೆ.
ನಮ್ಮ ಪಕ್ಷದ ಹಲವಾರು ನಾಯಕರನ್ನು ನಾನಾ ಆಮಿಷಗಳನ್ನು ತೋರಿ ಇಲ್ಲವೇ ಇಡಿ, ಸಿಬಿಐ ಭಯ ಹುಟ್ಟಿಸಿ ಬಿಜೆಪಿ ಸೇರಿಸಿಕೊಳ್ಳುತ್ತಿದೆ. ಈ ಹಿಂದೆ ಹಲವರು ಪಕ್ಷ ತೊರೆದು ಹೋಗಿದ್ದರು. ಈಗ ರಾನಾ ಗೋಸ್ವಾಮೀ ಕೂಡ ರಾಜೀನಾಮೆ ನೀಡಿದ್ದಾರೆ. ಇದರಿಂದ ಪಕ್ಷಕ್ಕೆ ಏನೂ ಹಾನಿಯಾಗುವುದಿಲ್ಲ ಎನ್ನುವುದು ಅಸ್ಸಾಂ ಪ್ರತಿಪಕ್ಷ ನಾಯಕ ದೇಬಬೃತ ಸಾಕಿಯಾ ತಿಳಿಸಿದ್ದಾರೆ.