ದೆಹಲಿ ಮುಖ್ಯಮಂತ್ರಿಯಾಗಿ ಅತಿಶಿ ನೇಮಕ; ಸದ್ಯವೇ ಪ್ರಮಾಣ ವಚನ, ಆಪ್ ಶಾಸಕರ ಸಭೆಯಲ್ಲಿ ಅಂತಿಮಗೊಂಡ ಹೆಸರು
ದೆಹಲಿಯ ಮುಖ್ಯಮಂತ್ರಿ ಸ್ಥಾನದಿಂದ ಅರವಿಂದ ಕೇಜ್ರಿವಾಲ್ ಕೆಳಕ್ಕೆ ಇಳಿಯುವುದು ನಿಕ್ಕಿಯಾಗಿದ್ದು, ಹೊಸ ಮುಖ್ಯಮಂತ್ರಿ ಹುದ್ದೆಗೆ ಸಚಿವೆ ಅತಿಶಿ ಅವರನ್ನು ಆಯ್ಕೆ ಮಾಡಲಾಗಿದೆ.
ದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ನಡುವೆ ಹೊಸ ಮುಖ್ಯಮಂತ್ರಿ ನೇಮಕ ಘೋಷಣೆಯಾಗಿದೆ. ದೆಹಲಿ ಆಪ್ ಸರ್ಕಾರದಲ್ಲಿ ಸಚಿವೆಯಾಗಿದ್ದ ಅತಿಶಿ ಮರ್ಲೇನಾ ಸಿಂಗ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪಕ್ಷದ ಶಾಸಕರ ಸಭೆಯಲ್ಲಿ ಹಲವು ಹೆಸರುಗಳು ಸಿಎಂ ಹುದ್ದೆಗೆ ಪ್ರಸ್ತಾಪವಾದರೂ ಅತಿಶಿ ಅವರನ್ನು ಸಿಎಂ ಆಗಿ ನೇಮಕ ಮಾಡುವ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದರು. ಹಾಲಿ ಮುಖ್ಯಮಂತ್ರಿ ಹಾಗೂ ಆಪ್ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರೇ ಅತಿಶಿ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಿದ್ದು, ಸದ್ಯವೇ ಅವರು ಪ್ರಮಾಣ ವಚನ ಸ್ವೀಕರಿಸುವರು.
ದೆಹಲಿಯಲ್ಲಿ ಸತತ ಎರಡನೇ ಬಾರಿಗೆ ಆಪ್ ಸರ್ಕಾರ ಆಡಳಿತಕ್ಕೆ ಬಂದಿದ್ದು ಒಂಬತ್ತು ವರ್ಷದಿಂದ ಅರವಿಂದ ಕೇಜ್ರಿವಾಲ್ ಸಿಎಂ ಆಗಿದ್ದಾರೆ. ಆದರೆ ದೆಹಲಿ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿತ್ತು. ಆನಂತರ ಆರು ತಿಂಗಳ ಕಾಲ ಜೈಲಿನಲ್ಲಿಯೇ ಇದ್ದ ಕೇಜ್ರಿವಾಲ್ ಮೂರು ದಿನದ ಹಿಂದೆಯಷ್ಟೇ ಬಿಡುಗಡೆಯಾಗಿದ್ದಾರೆ.
ನೈತಿಕ ಕಾರಣಕ್ಕೆ ಕೇಜ್ರಿವಾಲ್ ರಾಜೀನಾಮೆ ನೀಡಬೇಕು ಎನ್ನುವ ಒತ್ತಾಯ ಕೇಳಿ ಬಂದಿತ್ತು. ಈ ಕಾರಣದಿಂದ ಅವರು ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದರು. ಮಂಗಳವಾರ ಸಂಜೆ ರಾಜೀನಾಮೆ ನೀಡಲು ಸಿದ್ದತೆ ಮಾಡಿಕೊಂಡಿದ್ದಾರೆ. ಇದರ ನಡುವೆ ದೆಹಲಿಗೆ ಹೊಸ ಸಿಎಂ ಆಯ್ಕೆ ನಡೆದಿದೆ.
ಮಂಗಳವಾರ ಬೆಳಿಗ್ಗೆ ನಡೆದ ದೆಹಲಿ ಶಾಸಕರ ಸಭೆಯಲ್ಲಿ ಅರವಿಂದ ಕೇಜ್ರಿವಾಲ್ ರಾಜೀನಾಮೆ ವಿಚಾರ ಘೋಷಿಸಿದರು. ಅಲ್ಲದೇ ಹೊಸ ನಾಯಕರನ್ನು ಆಯ್ಕೆ ಮಾಡುವ ಪ್ರಕ್ರಿಯೆಗೂ ಚಾಲನೆ ನೀಡಿದ್ದರು. ಹಲವಾರು ಹೆಸರುಗಳು ಸಿಎಂ ಸ್ಥಾನಕ್ಕೆ ಕೇಳಿ ಬಂದಿದ್ದವು. ಖುದ್ದು ಕೇಜ್ರಿವಾಲ್ ಪತ್ನಿ ಸುನೀತಾ ಹೆಸರೂ ಇತ್ತು. ಆದರೆ ಶಾಸಕರು ಹಾಲಿ ಸಚಿವೆ ಅತಿಶಿ ಅವರ ಹೆಸರಿಗೆ ಒಪ್ಪಿಗೆ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಅರವಿಂದ ಕೇಜ್ರಿವಾಲ್ ಅವರು ಮಂಗಳವಾರ ಸಂಜೆ ದೆಹಲಿ ಲೆಫ್ಟಿನಂಟ್ ಗವರ್ನರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವರು. ಅಲ್ಲದೇ ಹೊಸ ಸರ್ಕಾರ ರಚನೆಗೆ ಅತಿಶಿ ನೇತೃತ್ವದಲ್ಲಿ ಹಕ್ಕು ಮಂಡಿಸುವರು. ಲೆಫ್ಟಿನೆಂಟ್ ಗವರ್ನರ್ ಅವರ ಅನುಮತಿ ನಂತರ ಅತಿಶಿ ಹೊಸ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವರು.
ದೆಹಲಿಯಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯಬೇಕಿದೆ. ಆದರೆ ಇದಕ್ಕೂ ಮೊದಲೇ ಚುನಾವಣೆ ನಡೆಸಬೇಕು ಎನ್ನುವ ಒತ್ತಾಯವನ್ನು ಆಪ್ ಮಾಡಿದೆ. ಮಹಾರಾಷ್ಟ್ರ ಹಾಗೂ ಜಾರ್ಖಂಡ್ ರಾಜ್ಯಗಳ ಜತೆಯಲ್ಲಿಯೆ ಚುನಾವಣೆ ನಡೆಸುವಂತೆ ಆಗ್ರಹಿಸಲಾಗಿದೆ.
ಸಭೆಯ ಬಳಿಕ ಮಾತನಾಡಿದ ಸಚಿವ ಕೈಲಾಶ್ ಗೆಹ್ಲೋಟ್, ದೆಹಲಿಯ ಸಿಎಂ ಸ್ಥಾನಕ್ಕೆ ಅರವಿಂದ ಕೇಜ್ರಿವಾಲ್ ರಾಜೀನಾಮೆ ನೀಡುವುದಾಗಿ ಘೋಷಿಸಿದರು. ಆನಂತರ ಅತಿಶಿ ಅವರ ಹೆಸರನ್ನು ಅವಿರೋಧವಾಗಿಯೇ ಆಯ್ಕೆ ಮಾಡಲಾಯಿತು. ಇದರಲ್ಲಿ ವಿರೋಧದ ಮಾತೇ ಇಲ್ಲ ಎಂದು ಹೇಳಿದರು.
ಈ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ, ಹಗರಣದಲ್ಲಿ ಸಿಲುಕಿರುವ ಅರವಿಂದ ಕೇಜ್ರಿವಾಲ್ ಡಮ್ಮಿ ಸಿಎಂ ಅನ್ನು ಅತಿಶಿ ನೇಮಕದ ಮೂಲಕ ತೋರ್ಪಡಿಸಿದ್ದಾರೆ. ಈ ಹಿಂದೆಯೂ ಅತಿಶಿ ಅವರೇ ಸಿಎಂ ಕಾರ್ಯಭಾರವನ್ನು ಕೇಜ್ರಿವಾಲ್ ಜೈಲು ವಾಸದಲ್ಲಿದ್ಧಾಗಲೂ ನೋಡಿಕೊಂಡಿದ್ದರು ಎಂದು ಟೀಕಿಸಿದೆ.
ದೆಹಲಿ ಅಬಕಾರಿ ನೀತಿ ಹಗರಣದಲ್ಲ ಸಿಎಂಗೂ ಮೊದಲು ಡಿಸಿಎಂ ಮನೀಷ್ ಸಿಸೋಡಿಯಾ ಹಾಗೂ ಸಚಿವರು ಸಿಲುಕಿ ಅಧಿಕಾರ ಕಳೆದುಕೊಂಡಿದ್ದರು. ಈಗ ಕೇಜ್ರಿವಾಲ್ ರಾಜೀನಾಮೆಯಾಗಿದೆ. ಹತ್ತಕ್ಕೂ ಹೆಚ್ಚು ಖಾತೆಗಳ ಸಚಿವೆಯಾಗಿದ್ದ ಅತಿಶಿ ಈ ಬಾರಿ ಬಜೆಟ್ ಕೂಡ ಮಂಡಿಸಿದ್ದರು.