Breaking News: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರಾಜೀನಾಮೆ, ವಿಧಾನಸಭೆ ವಿಸರ್ಜನೆ ಸಾಧ್ಯತೆ
Delhi News ದೆಹಲಿಯ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ದೆಹಲಿ: ಆರು ತಿಂಗಳ ಕಾಲ ಜೈಲಿನಲ್ಲಿದ್ದು ಜಾಮೀನಿನ ಆಧಾರದ ಮೇಲೆ ಬಿಡುಗಡೆಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಮ್ಮ ಸ್ಥಾನಕ್ಕೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.ಎರಡು ದಿನಗಳ ಹಿಂದೆಯಷ್ಟೇ ಸುಪ್ರೀಂಕೋರ್ಟ್ ಮಂಜೂರು ಮಾಡಿದ್ದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಅರವಿಂದ ಕೇಜ್ರಿವಾಲ್ ಅವರ ರಾಜೀನಾಮೆಗೆ ಪ್ರತಿಪಕ್ಷ ಬಿಜೆಪಿ ಒತ್ತಾಯಿಸಿತ್ತು. ಜೈಲು ವಾಸ ಅನುಭವಿಸಿದ ಕೇಜ್ರಿವಾಲ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎನ್ನುವ ಒತ್ತಾಯ ಮಾಡಿದ್ದವು. ಅದರಲ್ಲೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಗಟ್ಟಿ ದನಿಯಲ್ಲೇ ರಾಜೀನಾಮೆಗೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ಸುದೀರ್ಘ ಸುದ್ದಿಗೋಷ್ಠಿ ನಡೆಸಿದ ಅರವಿಂದ ಕೇಜ್ರಿವಾಲ್ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದರು.
ಆರೋಪಗಳನ್ನು ಹೊತ್ತು ಮುಂದುವರೆಯಲು ಇಷ್ಟಪಡಲ್ಲ. ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಾನು ಪ್ರಾಮಾಣಿಕವಾಗಿದ್ದರೆ ನನ್ನನ್ನು ಮತ್ತೊಮ್ಮೆ ಆಯ್ಕೆ ಮಾಡಬೇಕು ಎಂದು ದೆಹಲಿಯ ಆಪ್ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಈ ಮೂಲಕ ವಿಧಾನಸಭೆ ವಿಸರ್ಜನೆಯ ಮುನ್ಸೂಚನೆಯನ್ನೂ ಅವರು ನೀಡಿದರು.
ಇನ್ನೆರಡು ದಿನಗಳಲ್ಲಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಖಚಿತ, ನವೆಂಬರ್ ನಲ್ಲಿ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಸುವ ಬಗ್ಗೆ ಒತ್ತಾಯ ಕೇಳಿಬರುತ್ತಿದೆ. ಜನಾಶೀರ್ವಾದದಿಂದ ಮತ್ತೊಮ್ಮೆ ಆಯ್ಕೆಯಾಗುವ ಭರವಸೆ ನನ್ನಲ್ಲಿದೆ. ಕೇಜ್ರಿವಾಲ್ ಪ್ರಾಮಾಣಿಕನಾಗಿದ್ದರೆ ಮತ್ತೊಮ್ಮೆ ನನಗೆ ಆಶೀರ್ವಾದ ಮಾಡಿ ಗೆಲ್ಲಿಸಿ ಎಂದು ದೆಹಲಿಯ ಜನತೆಯಲ್ಲಿ ಮನವಿ ಮಾಡಿದರು.
ಜನರು ತೀರ್ಪು ಪ್ರಕಟಿಸುವವರೆಗೂ ನಾನು ಆ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎನ್ನುವ ತೀರ್ಮಾನ ಮಾಡಿದ್ದೇನೆ. ನನಗೆ ನ್ಯಾಯಾಲಯದಿಂದ ನ್ಯಾಯ ಸಿಕ್ಕಿದೆ. ಈಗ ನನಗೆ ಜನತಾ ನ್ಯಾಯಾಲಯದಲ್ಲಿ ಸಿಗಬೇಕಿದೆ. ಇದಕ್ಕಾಗಿ ಜನರ ಮುಂದೆ ಹೋಗಬೇಕಿದೆ. ದೆಹಲಿ ವಿಧಾನಸಭೆಗೆ ಚುನಾವಣೆಗೆ ತಿಂಗಳುಗಳು ಬಾಕಿಯಿದ್ದು, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯೊಂದಿಗೆ ದೆಹಲಿ ಚುನಾವಣೆಯೂ ನಡೆಯಬೇಕು ಎಂದು ಆಗ್ರಹಿಸಿದರು.
ನಾನು ದೆಹಲಿ ಜನರನ್ನು ಕೇಳಲು ಬಯಸುತ್ತೇನೆ. ನಿಮ್ಮ ಮುಖ್ಯಮಂತ್ರಿ ಕೇಜ್ರಿವಾಲ್ ನಿರಪರಾಧಿಯೋ ಅಥವಾ ಅಪರಾಧಿಯೇ ಎಂದು ಜನ ಹೇಳಬೇಕು. ನಾನು ಕೆಲಸ ಮಾಡಿದ್ದರೆ ನನಗೆ ಮತ ನೀಡಿ, ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿ ಮತ್ತೆ ನನಗೆ ಅಧಿಕಾರ ನೀಡಿದ ನೈತಿಕ ಬಲ ತುಂಬಬೇಕು. ಎರಡು ದಿನದಲ್ಲಿ ದೆಹಲಿಯ ಆಪ್ ಶಾಸಕರ ಸಭೆ ಕರೆದು ಅಲ್ಲಿಯೂ ಅಭಿಪ್ರಾಯ ಆಲಿಸಿ ಮುಂದಿನ ರಾಜಕೀಯ ನಡೆ ಕುರಿತು ತೀರ್ಮಾನಿಸುವೆ ಎಂದು ತಿಳಿಸಿದರು.