DA Hiked: ಕೇಂದ್ರ ಸರ್ಕಾರಿ ನೌಕರರಿಗೆ ಶೇ 4 ತುಟ್ಟಿಭತ್ಯೆ ಹೆಚ್ಚಳ
ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿ ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ.
ದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಶಿವರಾತ್ರಿ ಹಬ್ಬದ ಮುನ್ನಾ ದಿನವೇ ಸಿಹಿ ಸುದ್ದಿ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಗುರುವಾರ ರಾತ್ರಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಮಾಡುವ ಬೇಡಿಕೆಗೆ ಅಸ್ತು ಎಂದಿದೆ. ಇದರಿಂದ ಶೇ 4 ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿದೆ. 2024ರ ಜನವರಿ 1ರಿಂದ ಅನ್ವಯವಾಗುವಂತೆ ಈ ಹೆಚ್ಚಳ ಮಾಡಲಾಗಿದ್ದು. ಎರಡು ತಿಂಗಳ ಹಿಂಬಾಕಿಯೊಂದಿಗೆ ತುಟ್ಟಿಭತ್ಯೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಸದ್ಯ ಮೂಲ ವೇತನ, ಪಿಂಚಣಿಯ ಶೇ. 46ರಷ್ಟನ್ನು ತುಟ್ಟಿಭತ್ಯೆ ರೂಪದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುತ್ತಿದ್ದು, ಹೊಸದಾಗಿ ಹೆಚ್ಚಳದಿಂದ ಇದು ಶೇ. 50ಕ್ಕೆ ತಲುಪಲಿದೆ. ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ಈ ಹೆಚ್ಚಳ ಮಾಡಲಾಗಿದೆ ಎಂದು ಕೇಂದ್ರ ಸಚಿವ ಸಂಪುಟದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತುಟ್ಟಿ ಭತ್ಯೆ ಹೆಚ್ಚಳದಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 12,868.72 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಇದರ ಲಾಭ 49.18 ಲಕ್ಷ ಕೇಂದ್ರ ನೌಕರರಿಗೆ ಹಾಗೂ 67.95 ಲಕ್ಷ ಪಿಂಚಣಿದಾರರಿಗೆ ಸಿಗಲಿದೆ.
ಕಳೆದ ಬಾರಿ ಶೇ. 4ರಷ್ಟು ತುಟ್ಟಿ ಭತ್ಯೆಯನ್ನು 2023ರ ಅಕ್ಟೋಬರ್ ನಲ್ಲಿ ಏರಿಕೆ ಮಾಡಲಾಗಿತ್ತು. ಆಗ ಶೇ. 42ರಿಂದ ಶೇ 46ಕ್ಕೆ ತುಟ್ಟಿಭತ್ಯೆ ಪ್ರಮಾಣ ಏರಿಕೆಯಾಗಿತ್ತು. ಇನ್ನೇನು ಲೋಕಸಭೆ ಚುನಾವಣೆ ಘೋಷಣೆಯಾಗುವ ಹಂತದಲ್ಲಿರುವಾಗ ತುಟ್ಟಿಭತ್ಯೆ ಏರಿಸಲಾಗಿದೆ. ಅದೂ ಮಾದರಿ ನೀತಿ ಸಂಹಿತೆ ಜಾರಿಯಾದರೆ ತುಟ್ಟಿಭತ್ಯೆ ಹೆಚ್ಚಳ ಮಾಡಲು ಆಗದು ಎನ್ನುವ ಕಾರಣಕ್ಕೆ ಈ ಸಂಪುಟದಲ್ಲಿಯೇ ತೀರ್ಮಾನ ಕೈಗೊಂಡು ಜಾರಿಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ನೌಕರರ ಮೂಲ ವೇತನ ಆಧರಿಸಿ ತುಟ್ಟಿಭತ್ಯೆ( Dearness allowance) ಅನ್ನು ನೀಡಲಾಗುತ್ತದೆ. ಅದರಲ್ಲೂ ದರ ಏರಿಕೆ, ಖರ್ಚು ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ನೌಕರರಿಗೆ ತುಟ್ಟಿಭತ್ಯೆ ಏರಿಸಲಾಗುತ್ತದೆ.