ಮೃಗಾಲಯದಲ್ಲಿ ಹೃದಯಾಘಾತದಿಂದ ಯುವಕ ಸಾವು, ಮಹಡಿಯಿಂದ ಬಿದ್ದು ಪ್ರಾಣ ಕಳೆದುಕೊಂಡ ಪತ್ನಿ, ನವದಂಪತಿ ದುರಂತ ಅಂತ್ಯ
ದೆಹಲಿ ಸಮೀಪದ ಗಾಜಿಯಾಬಾದ್‌ನ ಈ ಜೋಡಿ ಕನಸು ಕಟ್ಟಿಕೊಂಡು ಮದುವೆಯಾಗಿತ್ತು.ಖುಷಿ ಕ್ಷಣದಲ್ಲಿದ್ದಾಗಲೇ ಪತಿ ಹೃದಯಾಘಾತದಿಂದ ಮೃತಪಟ್ಟರೆ, ಪತಿ ಅಗಲಿಕೆ ತಾಳಲಾರದೇ ಪತ್ನಿ ಅಪಾರ್ಟ್‌ಮೆಂಟ್ ನಿಂದ ಜಿಗಿದು ಜೀವ ಬಿಟ್ಟಳು.
ದೆಹಲಿ: ಅವರು ಈಗಿನ್ನೂ ಮದುವೆಯಾಗಿ ಮೂರ ತಿಂಗಳೂ ಕಳೆದಿರಲಿಲ್ಲ. ಬದುಕಿನ ಹೊಸ ಅಧ್ಯಾಯವನ್ನು ಆರಂಭಿಸಿದ ಖುಷಿಯಲ್ಲಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಮದುವೆಯಾದ ಮೂರೇ ತಿಂಗಳಲ್ಲಿ ಇಬ್ಬರು ಮೃತಪಟ್ಟು ಮದುವೆ ಸಡಗರದಲ್ಲಿದ್ದ ಎರಡೂ ಕುಟುಂಬಗಳಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಇದು ನಡೆದಿರುವುದು ದೆಹಲಿ ಸಮೀಪದ ಗಾಜೀಯಾಬಾದ್‌ನಲ್ಲಿ.
ಗಾಜಿಯಾಬಾದ್‌ನ ಅಭಿಷೇಕ್ ಅಹ್ಲುವಾಲಿಯಾ(25) ಹಾಗೂ ಅಂಜಲಿ(22) ಅವರು ನವೆಂಬರ್ 30ರಲ್ಲಿ ಮದುವೆಯಾಗಿದ್ದರು. ಮದುವೆ ಖುಷಿಯಲ್ಲಿ ಸಮಯ ಸಿಕ್ಕಾಗ ಹೊರಗೆ ಹೋಗುತ್ತಿದ್ದರು. ಖುಷಿಯಿಂದಲೇ ಕಳೆಯುತ್ತಿದ್ದರು.
ಸೋಮವಾರವೂ ಈ ಜೋಡಿ ದೆಹಲಿ ಮೃಗಾಲಯದಲ್ಲಿ ದಿನ ಕಳೆಯುವ ತೀರ್ಮಾನ ಮಾಡಿತ್ತು. ಅದರಂತೆ ಇಬ್ಬರೂ ದೆಹಲಿ ಮೃಗಾಲಯಕ್ಕೆ ತೆರಳಿದ್ದರು.ಕೆಲ ಹೊತ್ತು ಮೃಗಾಲಯದಲ್ಲಿ ನಡೆದುಕೊಂಡೇ ಕಳೆದಿದ್ದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಅಭಿಷೇಕ್‌ಗೆ ಎದೆನೋವು ಕಾಣಿಸಿಕೊಂಡಿದೆ. ಜತೆಯಲ್ಲಿಯೇ ಇದ್ದ ಅಂಜಲಿ ಕೂಡಲೇ ನೀರು ಕುಡಿಸಿ ಆರೈಕೆ ಮಾಡಿದ್ದಾರೆ. ಆದರೆ ತೀವ್ರವಾಗಿ ಸುಸ್ತಾಗಿದ್ದ ಅಭಿಷೇಕ್ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ತಮ್ಮ ಸಂಬಂಧಿಕರು, ಪರಿಚಯಸ್ಥರಿಗೆ ಅಂಜಲಿ ಕರೆ ಮಾಡಿ ತಿಳಿಸಿದ್ದು ಅವರೂ ಅಲ್ಲಿಗೆ ಧಾವಿಸಿದ್ಧಾರೆ. ಮೊದಲು ದೆಹಲಿಯ ಗುರು ತೇಜ್ ಬಹಾದ್ದೂರು ಆಸ್ಪತ್ರಗೆ ದಾಖಲಿಸಲಾಗಿದ್ದು, ಆನಂತರ ಅಲ್ಲಿಂದ ಸಫ್ದಾರ್ ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಚಿಕಿತ್ಸೆ ನೀಡಿದರೂ ಫಲ ನೀಡದೇ ಅಭಿಷೇಕ್ ರಾತ್ರಿ ಕೊನೆಯುಸಿರೆಳೆದಿದ್ದರು. ತೀವ್ರ ಹೃದಯಾಘಾತದಿಂದ ಸಾವು ಸಂಭವಿಸಿದೆ ಎನ್ನುವುದನ್ನು ವೈದ್ಯರು ಖಚಿತಪಡಿಸಿದ್ದರು.
ನವದಂಪತಿಗಳು ಮಾಡಿಕೊಂಡಿದ್ದ ಹೊಸ ಮನೆ ಗಾಜಿಯಾಬಾದ್‌ನ ಅಹ್ಲೋನ್ ಅಪಾರ್ಟ್‌ಮೆಂಟ್‌ನಲ್ಲಿತ್ತು. ಅಲ್ಲಿಗೆ ಅಭಿಷೇಕ್ ದೇಹವನ್ನು ತರಲಾಗಿತ್ತು.
ಕುಟುಂಬದವರೊಂದಿಗೆ ಇದ್ದು ಪತಿ ಕಳೆದುಕೊಂಡು ಕಣ್ಣೀರಾಗಿದ್ದ ಅಂಜಲಿಗೆ ಪತಿ ಅಗಲಿಕೆ ಸಹಿಸಲಾಗಲಿಲ್ಲ. ಸೋಮವಾರ ರಾತ್ರಿಯೇ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಗೆ ಏರಿದ ಅಂಜಲಿ ಅಲ್ಲಿಂದ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದಳು. ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು ಬದುಕುಳಿಯಲಿಲ್ಲ. ಮಂಗಳವಾರ ಬೆಳಗಿನ ಜಾವ ಆಕೆಯೂ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಅಭಿಷೇಕ್ ಪಾರ್ಥಿವ ಶರೀರವನ್ನು ಮನೆಗೆ ತಂದಾಗ ಪಕ್ಕದಲ್ಲೇ ಕುಳಿತು ಅಳುತ್ತಿದ್ದ ಅಂಜಲಿ ಅಲ್ಲಿಂದ ಎದ್ದು ಓಡ ತೊಡಗಿದಳು. ಆಕೆ ಕಟ್ಟಡದಿಂದ ಹಾರಬಹುದು ಎನ್ನುವ ಅನುಮಾನ ಬಂದು ಆಕೆಯನ್ನು ಹಿಂಬಾಲಿಸಿದೆ. ಅಷ್ಟರೊಳಗೆ ಆಕೆ ಮೇಲಿನಿಂದ ಹಾರಿ ಬಿಟ್ಟಳು. ಅಂಜಲಿಯನ್ನು ತಡೆಯಲು ಆಗಲೇ ಇಲ್ಲ ಎಂದು ಸಂಬಂಧಿ ಬಬಿತಾ ಕಣ್ಣೀರಾದರು.
ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಜೋಡಿಯ ಅಂತ್ಯಕ್ರಿಯನ್ನು ಜತೆಯಾಗಿ ಮಾಡಲಾಯಿತು. ಬದುಕಿ ಬಾಳಬೇಕಾಗಿದ್ದವರು ಹೀಗೆ ಅಂತ್ಯಗೊಂಡಿದ್ದು ಎರಡೂ ಕುಟುಂಬದವರನ್ನು ದುಃಖದಲ್ಲಿ ಮುಳುಗಿಸಿದೆ.
ವಿಭಾಗ