Parliament staff uniform: ಸಂಸತ್‌ ಸಿಬ್ಬಂದಿಗೆ ಹೊಸ ಯೂನಿಫಾರಂ: ಕಮಲ ಚಿಹ್ನೆ ಬಳಕೆಗೆ ಪ್ರತಿಪಕ್ಷಗಳ ಆಕ್ಷೇಪ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Parliament Staff Uniform: ಸಂಸತ್‌ ಸಿಬ್ಬಂದಿಗೆ ಹೊಸ ಯೂನಿಫಾರಂ: ಕಮಲ ಚಿಹ್ನೆ ಬಳಕೆಗೆ ಪ್ರತಿಪಕ್ಷಗಳ ಆಕ್ಷೇಪ

Parliament staff uniform: ಸಂಸತ್‌ ಸಿಬ್ಬಂದಿಗೆ ಹೊಸ ಯೂನಿಫಾರಂ: ಕಮಲ ಚಿಹ್ನೆ ಬಳಕೆಗೆ ಪ್ರತಿಪಕ್ಷಗಳ ಆಕ್ಷೇಪ

parliament staff new dress code ಸಂಸತ್ತಿನ ಸಿಬ್ಬಂದಿಗೆ ಹೊಸ ಸಂಸತ್‌ ಭವನಕ್ಕೆ ಪ್ರವೇಶಿಸುವ ಮುನ್ನವೇ ಹೊಸ ಯೂನಿಫಾರಂ ನೀಡಲಾಗುತ್ತಿದೆ. ವಿವಿಧ ಹಂತದ ಅಧಿಕಾರಿಗಳು, ಸಿಬ್ಬಂದಿ ಭಿನ್ನ ಯೂನಿಫಾರಂ ತೊಡಲಿದ್ದಾರೆ. ಇದರಲ್ಲಿ ಕಮಲದ ಚಿಹ್ನೆ ಇರುವುದನ್ನು ಪ್ರತಿಪಕ್ಷಗಳು ಪ್ರಶ್ನಿಸಿವೆ.

ಸಂಸತ್‌ ಸಿಬ್ಬಂದಿಗೆ ಹೊಸ ಯೂನಿಫಾರಂ ಸಿದ್ದಗೊಳಿಸಲಾಗಿದ್ದು, ಕಮಲದ ಚಿತ್ರ ಇರುವುದು ವಿವಾದಕ್ಕೆ ಕಾರಣವಾಗಿದೆ.
ಸಂಸತ್‌ ಸಿಬ್ಬಂದಿಗೆ ಹೊಸ ಯೂನಿಫಾರಂ ಸಿದ್ದಗೊಳಿಸಲಾಗಿದ್ದು, ಕಮಲದ ಚಿತ್ರ ಇರುವುದು ವಿವಾದಕ್ಕೆ ಕಾರಣವಾಗಿದೆ.

ದೆಹೆಲಿ: ಸಂಸತ್ತಿನ ಸಿಬ್ಬಂದಿಗೆ ಹೊಸ ವಿನ್ಯಾಸದ ಯೂನಿಫಾರಂ ನೀಡಿದ್ದು. ಅದರಲ್ಲಿ ಕಮಲದ ಚಿಹ್ನೆ ಅಳವಡಿಸಿರುವುದು ತೀವ್ರ ವಿವಾದಕ್ಕೆ ಗುರಿಯಾಗಿದೆ.

ಸೆ.18ರಿಂದ ಐದು ದಿನಗಳ ಕಾಲ ನಡೆಯಲಿರುವ ವಿಶೇಷ ಸಂಸತ್ತಿನ ಅಧಿವೇಶನದ ವೇಳೆ ಧರಿಸಲೆಂದು ವಿವಿಧ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಯೂನಿಫಾರಂ ನೀಡಲಾಗಿದೆ.

ಈಗಾಗಲೇ ಹೊಸದಾಗಿ ನಿರ್ಮಿಸಿರುವ ಸಂಸತ್‌ ಭವನ ಸೇವೆಗೆ ಅಣಿಯಾಗಿದ್ದು, ಸೆ.19ರಂದು ಎಲ್ಲಾ ಸಿಬ್ಬಂದಿ ಹೊಸ ಸಂಸತ್‌ ಭವನದಲ್ಲಿ ಕೆಲಸ ಆರಂಭಿಸಲಿದ್ದಾರೆ. ಅಂದು ಗಣೇಶ ಹಬ್ಬದ ವಿಶೇಷ ಪೂಜೆಯೂ ಇರಲಿದೆ. ಇದಕ್ಕೂ ಮುನ್ನ ಅಧಿವೇಶನ ಆರಂಭವಾಗಲಿದ್ದು, ಅಂದಿನಿಂದಲೇ ಸಿಬ್ಬಂದಿ ಹೊಸ ಯೂನಿಫಾರಂ ಬಳಸಲಿದ್ದಾರೆ.

ಹೇಗಿರಲಿದೆ ಹೊಸ ಯೂನಿಫಾರಂ

ಪುರುಷರಿಗೆ ಖಾಕಿ ಬಣ್ಣದ ಪ್ಯಾಂಟ್‌ಗಳು, ಕ್ರೀಮ್‌ ಬಣ್ಣದ ಜಾಕೆಟ್‌ ಹಾಗೂ ಕಮಲದ ಚಿಹ್ನೆ ಇರುವ ಶರ್ಟ್‌ಗಳು ಇರಲಿವೆ. ಮಹಿಳೆಯರಿಗೆ ವಿಶೇಷ ಪ್ರಿಂಟ್‌ನ ಸೀರೆಗಳನ್ನು ನೀಡಲಾಗಿದೆ. ಜತೆಗೆ ಕ್ರೀಮ್‌ ಬಣ್ಣದ ನೆಹರು ಜಾಕೆಟ್‌ ಕೂಡ ಇದೆ. ಸಂಸತ್‌ನಲ್ಲಿ ಹಲವು ವಿಭಾಗಗಳಿದ್ದು, ಇವರಲ್ಲಿ ಚೇಂಬರ್‌ ಅಟೆಂಡರ್ ಗಳು, ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ಚಾಲಕರು ಹಾಗೂ ಮಾರ್ಷಲ್‌ಗಳಿದ್ದಾರೆ. ಬೇರೆ ಬೇರೆ ವಿಭಾಗದವರಿಗೆ ಭಿನ್ನವಾಗಿಯೇ ಯೂನಿಫಾರಂ ಅಣಿಗೊಳಿಸಲಾಗಿದೆ.

ಒಟ್ಟು ಮಹಿಳೆಯರು ಹಾಗೂ ಪುರುಷರು ಸೇರಿ ಹತ್ತಕ್ಕೂ ಹೆಚ್ಚು ಶೈಲಿಯ ಯೂನಿಫಾರಂ ಅಣಿಸಲಾಗಿದೆ. ಭದ್ರತಾ ಸಿಬ್ಬಂದಿಯಲ್ಲಿ ಒಳಭಾಗದವರು ಹಾಗೂ ಹೊರ ಭಾಗದವರಿಗೆ ಬೇರೆ ಬೇರೆ ಡ್ರೆಸ್‌ ಕೋಡ್‌ ಇರಲಿದೆ. ಚಾಲಕರಿಗೂ ಕೂಡ ವಿಭಿನ್ನ ಡ್ರೆಸ್‌ ಇದೆ. ಮಹಿಳೆಯರಲ್ಲೂ ಅಧಿಕಾರಿಗಳು, ಭದ್ರತಾ ಸಿಬ್ಬಂದಿಗಳಿಗೆ ಭಿನ್ನ ಯೂನಿಫಾರಂ ರೂಪಿಸಲಾಗಿದೆ. ಈ ಎಲ್ಲರಿಗೂ ಹೊಸ ಸಂಸತ್‌ ಭವನ ಪ್ರವೇಶದೊಂದಿಗೆ ಹೊಸ ಯೂನಿಫಾರಂ ಬಳಸಲಾಗುತ್ತದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಹಿಂದೆಲ್ಲಾ ಭದ್ರತಾ ಸಿಬ್ಬಂದಿ ನೀಲಿ ಬಣ್ಣದ ಸಫಾರಿ ಡ್ರೆಸ್‌ ಬಳಸುತ್ತಿದ್ದರು. ಅದರ ಬದಲು ಮಿಲಟರಿ ಶೈಲಿಯ ಯೂನಿಫಾರಂ ನೀಡಲಾಗುತ್ತಿದೆ. ಇದರಲ್ಲಿ ಬಣ್ಣವನ್ನೂ ಬದಲಾಯಿಸಲಾಗಿದೆ.

ನಿಫ್ಟ್‌ನಿಂದ ಸಿದ್ದ

ಈ ಅಧಿವೇಶನದಿಂದಲೇ ಹೊಸ ಯೂನಿಫಾರಂ ಆರಂಭವಾಗಲಿದ್ದು, ಇದನ್ನು ಬಳಸುವಂತೆ ಸೂಚಿಸಲಾಗಿದೆ. ಅಧಿವೇಶನದ ನಂತರವೂ ಇದೇ ಯೂನಿಫಾರಂ ಮುಂದುವರಿಯಬಹುದು ಎನ್ನಲಾಗುತ್ತಿದೆ.

ಹೊಸ ಯೂನಿಫಾರಂಗಳನ್ನು ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿ( NIFT) ಸಿದ್ದಪಡಿಸಿದೆ. ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಪ್ರತ್ಯೇಕ ಬಣ್ಣ, ಡಿಸೈನ್‌ನ ಯೂನಿಫಾರಂಗಳನ್ನು ಸಂಸ್ಥೆ ತಯಾರಿಸಿ ಕೊಟ್ಟಿದೆ.

ಆದರೆ ಹೊಸ ಯೂನಿಫಾರಂನಲ್ಲಿ ಬಳಸಿರುವ ಕಮಲದ ಚಿಹ್ನೆ ತೀವ್ರ ವಿವಾದಕ್ಕೆ ಎಡೆ ಮಾಡಿದೆ. ಎಲ್ಲಾ ಡ್ರೆಸ್‌ಕೋಡ್‌ ನಲ್ಲಿ ಕಮಲದ ಹೂವಿನ ಚಿಹ್ನೆಯನ್ನು ಅಳವಡಿಸಿರುವುದು ಪ್ರತಿಪಕ್ಷಗಳನ್ನು ಕೆರಳಿಸಿದೆ.

ಕಾಂಗ್ರೆಸ್‌ ಕಟು ಟೀಕೆ

ಸಂಸತ್‌ನ ಸಿಬ್ಬಂದಿಗೆ ಹೊಸದಾಗಿ ಯೂನಿಫಾರಂ ರೂಪಿಸಿ ಚುನಾವಣೆ ಚಿಹ್ನೆಯಾದ ಕಮಲವನ್ನು ಬಳಸಿರುವುದು ಸರಿಯಲ್ಲ ಎಂದು ಪ್ರತಿಪಕ್ಷಗಳು ಕಟು ದನಿಯಲ್ಲಿಯೇ ಟೀಕಿಸಿವೆ.

ಸರ್ಕಾರವು ಸಂಸತ್ತಿನ ಸಿಬ್ಬಂದಿಯ ಡ್ರೆಸ್‌ಗಳ ಮೇಲೆ ಹುಲಿಗಳ ಚಿತ್ರವನ್ನು ಏಕೆ ಹಾಕುತ್ತಿಲ್ಲ. ಹುಲಿ ರಾಷ್ಟ್ರೀಯ ಪ್ರಾಣಿ. ಅದೇ ರೀತಿ ನವಿಲಿನ ಚಿತ್ರವನ್ನೂ ಯಾಕೆ ಹಾಕಿಲ್ಲ. ನವಿಲು ನಮ್ಮ ರಾಷ್ಟ್ರೀಯ ಪಕ್ಷಿ. ಇದನ್ನು ಬಿಟ್ಟು ಕಮಲದ ಚಿತ್ರವನ್ನು ಹಾಕುವ ಮೂಲಕ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಇದರಲ್ಲಿ ಬಿಜೆಪಿ ಹಿತಾಸಕ್ತಿ ಅಡಗಿದೆ ಎಂದು ಕಾಂಗ್ರೆಸ್‌ ನಾಯಕ ಮಾಣಿಕ್ಯಂ ಟ್ಯಾಗೋರ್‌ ಆರೋಪಿಸಿದ್ದಾರೆ.

ಅವರು ಎಷ್ಟು ಕೆಳಹಂತಕ್ಕೆ ಇಳಿದಿದ್ದಾರೆ ಎನ್ನುವುದನ್ನು ಇದು ತೋರಿಸಲಿದೆ. ಜಿ 20 ಸಮಾವೇಶದಲ್ಲೂ ಇದನ್ನೇ ಮಾಡಿದರು. ಈಗ ಕಮಲವನ್ನು ಯೂನಿಫಾರಂನಲ್ಲಿ ಬಳಸುವ ಮೂಲಕ ಅದನ್ನು ರಾಷ್ಟ್ರೀಯ ಹೂವು ಎನ್ನುವ ರೀತಿ ಬಿಂಬಿಸಲು ಹೊರಟಿದ್ದಾರೆ. ಇಂತಹ ಸಣ್ಣತನಗಳು ಒಳ್ಳೆಯದಲ್ಲ. ಬಿಜೆಪಿಯು ಪಕ್ಷ ಬೆಳವಣಿಗೆಗೆ ಸಂಸತ್ತನ್ನು ಬಳಸುವ ಮೂಲಕ ಒಂದು ಭಾಗ ಪಕ್ಷದ್ದು ಎನ್ನುವ ರೀತಿ ನಡೆದುಕೊಳ್ಳದಿರಲಿ ಎಂದು ಎಕ್ಸ್‌ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.