ಕನ್ನಡ ಸುದ್ದಿ  /  Nation And-world  /  Delhi News Senior Advocate Fought For Karnataka Irrigation Projects In Supreme Court Fali Nariman Passes Away Kub

Fali Nariman Dies: ಕರ್ನಾಟಕದ ನೀರಾವರಿ ಯೋಜನೆಗಳಿಗೆ ಕಾನೂನು ಬಲ ತುಂಬಿದ ಹಿರಿಯ ನ್ಯಾಯವಾದಿ ಫಾಲಿ ನಾರೀಮನ್‌ ನಿಧನ

ಹಿರಿಯ ನ್ಯಾಯವಾದಿ, ಕರ್ನಾಟಕದ ನೀರಾವರಿ ಯೋಜನೆಗಳಿಗೆ ಕಾನೂನು ಬಲ ತುಂಬಿದ್ದ ಫಾಲಿ ಎಸ್‌.ನಾರಿಮನ್‌ ನಿಧನರಾಗಿದ್ದಾರೆ.

ಹಿರಿಯ ನ್ಯಾಯವಾದಿ ಫಾಲಿ ಎಸ್.ನಾರಿಮನ್‌ ನಿಧನ.
ಹಿರಿಯ ನ್ಯಾಯವಾದಿ ಫಾಲಿ ಎಸ್.ನಾರಿಮನ್‌ ನಿಧನ.

ಹಲಿ: ಮೂರು ದಶಕಕ್ಕೂ ಹೆಚ್ಚು ಕಾಲ ಕೃಷ್ಣಾ, ಕಾವೇರಿ ಸಹಿತ ಹಲವಾರು ಜಲವಿವಾದಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಹಿರಿಯ ನ್ಯಾಯವಾದಿ, ಪದ್ಮವಿಭೂಷಣ ಫಾಲಿ.ಎಸ್.ನಾರಿಮನ್‌ ಬುಧವಾರ ಬೆಳಿಗ್ಗೆ ನಿಧನರಾದರು.

ಅವರಿಗೆ 95 ವರ್ಷವಾಗಿತ್ತು. ಸುಪ್ರೀಂಕೋರ್ಟ್‌ ಮಾತ್ರವಲ್ಲದೇ ಹಲವಾರು ರಾಜ್ಯ ಉಚ್ಛ ನ್ಯಾಯಾಲಯಗಳಲ್ಲೂ ಪ್ರಮುಖ ಪ್ರಕರಣಗಳಲ್ಲಿ ಸಮರ್ಥ ವಾದ ಮಂಡಿಸುತ್ತಿದ್ದ ಭಾರತದ ಅತ್ಯಂತ ಹಿರಿಯ ನ್ಯಾಯವಾಗಿದ್ದರು. ವಯೋಸಹಜ ಕಾರಣಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಬುಧವಾರ ಬೆಳಗಿನಜಾವ ದೆಹಲಿಯಲ್ಲಿ ಕೊನೆಯುಸಿರೆಳೆದರು.

ಮುಂಬೈ ಮೂಲದವರಾದ ಫಾಲಿ ಅವರು ಅಲ್ಲಿಯೇ ಶಿಕ್ಷಣ ಪೂರೈಸಿದ್ದರು. ಆನಂತರ ಬಾಂಬೆ ಹೈಕೋರ್ಟ್‌ನಲ್ಲಿ ವಕೀಲಿಕೆ ವೃತ್ತಿಯನ್ನು ಆರಂಭಿಸಿದ್ದರು,. ಸತತ ಏಳು ದಶಕದಿಂದಲೂ ಅವರು ನ್ಯಾಯವಾದಿಯಾಗಿ ಕೆಲಸ ಮಾಡುತ್ತಿದ್ದರು.

1972ರಲ್ಲಿ ದೇಶದ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಆಗಿ ಅವರನ್ನು ನೇಮಿಸಲಾಗಿತ್ತು. ಆದರೆ ಮೂರೇ ವರ್ಷದಲ್ಲಿ ತುರ್ತು ಪರಿಸ್ಥಿತಿ ಕಾಲದಲ್ಲಿ ಇಂದಿರಾಗಾಂಧಿ ಅವರ ನೀತಿ ವಿರುದ್ದ ಸಿಡಿದೆದ್ದು ಸಾಲಿಸಿಟರ್‌ ಜನರಲ್‌ ಹುದ್ದೆಯನ್ನು ತೊರೆದಿದ್ದರು.

ಹಲವಾರು ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು.1991–2010ರಿಂದ ಸತತ ಇಪ್ಪತ್ತು ವರ್ಷಗಳ ಕಾಲ ಇಂಡಿಯನ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷರೂ ಆಗಿದ್ದರು. 1989ರಿಂದ 2005ರವರೆಗೆ ಪ್ಯಾರಿಸ್‌ನಲ್ಲಿ ಅಂತರರಾಷ್ಟ್ರೀಯ ವಾಣಿಜ್ಯ ಮಂಡಳಿಯ ನ್ಯಾಯಾಲಯದ ಉಪಾಧ್ಯಕ್ಷರೂ ಆಗಿದ್ದರು ನಾರಿಮನ್‌.

ಕಾನೂನು ವಲಯದಲ್ಲಿ ಅವರ ಸೇವೆಯನ್ನು ಪರಿಗಣಿಸಿ 1991ರಲ್ಲಿ ಪದ್ಮಭೂಷಣ ಹಾಗೂ 2007ರಲ್ಲಿ ಪದ್ಮವಿಭೂಷಣ ನೀಡಿ ಗೌರವಿಸಲಾಗಿತ್ತು.

ಕರ್ನಾಟಕದ ಕಾವೇರಿ ಹಾಗೂ ಕೃಷ್ಣಾ ನದಿ ನೀರು ಹಂಚಿಕೆ ವಿಚಾರದಲ್ಲಿ ಅವರೇ ನಿರಂತರವಾಗಿ ವಾದ ಮಂಡಿಸುತ್ತಾ ಬಂದಿದ್ದರು. ಕಾವೇರಿ ವಿಚಾರದಲ್ಲಂತೂ ಸುಧೀರ್ಘವಾಗಿ ವಾದ ಮಂಡಿಸಿದವರು. ಕೆಲವು ಬಾರಿ ಅವರನ್ನು ಬದಲಿಸಬೇಕು ಎನ್ನುವ ಬೇಡಿಕೆ ಬಂದಾಗಲೂ ಕೆಲವರು ಇವರ ಪರವಾಗಿಯೇ ನಿಲ್ಲುತ್ತಿದ್ದರು. ಏಕೆಂದರೆ ಇವರಲ್ಲಿದ್ದ ಕಾನೂನಿನ ಜ್ಞಾನ, ಪ್ರಕರಣ ನಿಭಾಯಿಸಬಲ್ಲ ಜಾಣ್ಮೆ.

ತಮಿಳುನಾಡಿಗೆ ಕರ್ನಾಟಕ ಪ್ರತಿವರ್ಷ ಬಿಡುಗಡೆ ಮಾಡಬೇಕಿದ್ದ ಕಾವೇರಿ ನದಿ ನೀರಿನ ಪ್ರಮಾಣವನ್ನು ವಾರ್ಷಿಕ 380 ಟಿ.ಎಂ.ಸಿ. ಯಿಂದ 192 ಟಿ.ಎಂ.ಸಿ. ಗೆ ಇಳಿಸಿಕೊಟ್ಟ ದ್ದು ನಾರೀಮನ್‌ ಅವರ ಶ್ರಮವೇ. ವಿಜಯಪುರ- ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524 ಮೀಟರುಗಳಿಗೆ ಹೆಚ್ಚಿಸುವ ಸಂಬಂಧದ ವ್ಯಾಜ್ಯವನ್ನು ಕರ್ನಾಟಕಕ್ಕೆ ಗೆದ್ದು ಕೊಟ್ಟವರು ನಾರಿಮನ್ ಮತ್ತವರ ತಂಡ. ಹಲವಾರು ಪ್ರಕರಣಗಳಲ್ಲಿ ನಾರೀಮನ್‌ ಅವರ ಛಾಪು ಇದ್ದೇ ಇದೆ.

ಫಾಲಿ ನಾರಿಮನ್‌ ಅವರ ನಿಧನಕ್ಕೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸಹಿತ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

IPL_Entry_Point

ವಿಭಾಗ