Sitaram Yechury: ಹಿರಿಯ ಕಮ್ಯುನಿಸ್ಟ್‌ ನಾಯಕ, ರಾಜ್ಯಸಭೆಯ ಮಾಜಿ ಸದಸ್ಯ ಸೀತಾರಾಂ ಯೆಚೂರಿ ನಿಧನ-delhi news senior communist leader former rajyasabha mp sitaram yechury passes away in delhi aiims kub ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sitaram Yechury: ಹಿರಿಯ ಕಮ್ಯುನಿಸ್ಟ್‌ ನಾಯಕ, ರಾಜ್ಯಸಭೆಯ ಮಾಜಿ ಸದಸ್ಯ ಸೀತಾರಾಂ ಯೆಚೂರಿ ನಿಧನ

Sitaram Yechury: ಹಿರಿಯ ಕಮ್ಯುನಿಸ್ಟ್‌ ನಾಯಕ, ರಾಜ್ಯಸಭೆಯ ಮಾಜಿ ಸದಸ್ಯ ಸೀತಾರಾಂ ಯೆಚೂರಿ ನಿಧನ

ಹೋರಾಟಗಳ ಮೂಲಕವೇ ಬದುಕಿ ರೂಪಿಸಿಕೊಂಡು ದಶಕಗಳ ಕಾಲ ಭಾರತದಲ್ಲಿ ಕಮ್ಯುನಿಸ್ಟ್‌ ಪಕ್ಷವನ್ನು ಮುನ್ನಡೆಸಿದ ಸೀತಾರಾಂ ಯೆಚೂರಿ ನಿಧನರಾಗಿದ್ದಾರೆ.

ಹಿರಿಯ ನಾಯಕ ಸೀತಾರಾಂ ಯೆಚೂರಿ ಗುರುವಾರ ನಿಧನರಾದರು.
ಹಿರಿಯ ನಾಯಕ ಸೀತಾರಾಂ ಯೆಚೂರಿ ಗುರುವಾರ ನಿಧನರಾದರು.

ದೆಹಲಿ: ಐದು ದಶಕಗಳಿಗೂ ಮಿಗಿಲಾಗಿ ಹೋರಾಟಗಳಲ್ಲಿ ಭಾಗಿಯಾಗಿದ್ದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ,ಭಾರತದ ಹಿರಿಯ ಕಮ್ಯುನಿಸ್ಟ್‌ ನಾಯಕ, ರಾಜ್ಯಸಭೆಯ ಮಾಜಿ ಸದಸ್ಯ ಸೀತಾರಾಂ ಯೆಚೂರಿ(72) ಗುರುವಾರ ನಿಧನರಾದರು. ಕೆಲವು ದಿನಗಳಿಂದ ಶ್ವಾಸಕೋಶ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಯೆಚೂರಿ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು. ಇದರ ನಡುವೆಯೇ ಗುರುವಾರ ಮಧ್ಯಾಹ್ನ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ವೈದ್ಯರು ತಿಳಿಸಿದ್ದಾರೆ. ಈ ಮೂಲಕ ಸುಧೀರ್ಘ ಹೋರಾಟದ ಹಾಗೂ ವಿಭಿನ್ನ ವ್ಯಕ್ತಿತ್ವದ ನಾಯಕರೊಬ್ಬರ ಯುಗ ಅಂತ್ಯ ಆದಂತಾಗಿದೆ.

1952 ರ ಆಗಸ್ಟ್‌ 12ರಂದು ಚೆನ್ನೈನಲ್ಲಿ ಜನಿಸಿದ್ದ ಸೀತಾರಾಂ ಯೆಚೂರಿ ಅವರು ದೆಹಲಿಯ ಜವಹರಲಾಲ್‌ ನೆಹರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ವಿದ್ಯಾರ್ಥಿ ದೆಸೆಯಿಂದಲೂ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 1974 ರಲ್ಲಿಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಸದಸ್ಯರಾದ ಒಂದು ವರ್ಷದ ನಂತರ 1975 ರಲ್ಲಿ ಸೀತಾರಾಮ್ ಯೆಚೂರಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಗೆ ಸೇರಿದರು.

ಆಗಿನಿಂದಲೇ ನಿರಂತರ ಹೋರಾಟಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡರು. ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾಗಿಯೂ ಗುರುತಿಸಿಕೊಂಡು ಅಂದಿನ ಪ್ರಧಾನಿ ಇಂದಿರಾಗಾಂಧಿ ವಿರುದ್ದವೇ ಹೋರಾಟ ನಡೆಸಿದ್ದರು. ಈ ವೇಳೆ ಅವರನ್ನು ಬಂಧಿಸಲಾಗಿತ್ತು. ಆನಂತರ ಕಮ್ಯುನಿಸ್ಟ್‌ ಪಕ್ಷದೊಂದಿಗೆ ಗುರುತಿಸಿಕೊಂಡು 2004ರಿಂದ ಸತತ ಎರಡು ಬಾರಿ ರಾಜ್ಯಸಭಾ ಸದಸ್ಯರೂ ಆಗಿದ್ದರು. ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿಯೂ ಹಲವು ವರ್ಷ ಇದ್ದರು.

ಮಾರ್ಕ್ಸ್ ವಾದಿ ಚಿಂತಕರಾಗಿದ್ದ ಸೀತಾರಾಂ ಯೆಚೂರಿ ಅವರು ಅಪ್ಪಟ ಪ್ರಜಾಪ್ರಭುತ್ವವಾದಿ ಆಗಿದ್ದರು. ಕೋಮುವಾದಿ ರಾಜಕೀಯದ ವಿರುದ್ಧ ಜಾತ್ಯತೀತ ಶಕ್ತಿಗಳ ಒಗ್ಗೂಡಿಸುವಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಾ ಬಂದಿರುವ ಯೆಚೂರಿರವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ರೂವಾರಿಗಳಲ್ಲೊಬ್ಬರಾಗಿದ್ದರು. ಆ ಸರ್ಕಾರದ 'ಸಾಮಾನ್ಯ ಕನಿಷ್ಠ ಕಾರ್ಯಕ್ರಮ' ರಚನೆಯಲ್ಲಿಯೂ ಅವರದ್ದೇ ಪ್ರಧಾನ ಪಾತ್ರ ಇತ್ತು. ಕಳೆದ ಲೋಕಸಭಾ ಚುನಾವಣೆಯ ವೇಳೆ 'ಇಂಡಿಯಾ' ಒಕ್ಕೂಟ ಸ್ಥಾಪನೆಯಲ್ಲಿಯೂ ಅವರ ಕೊಡುಗೆ ಇದೆ

ಯೆಚೂರಿ ಅವರಿಗೆ ಪತ್ನಿಸೀಮಾ ಕ್ರಿಸ್ಟಿ ಯೆಚೂರಿ. ಪತ್ರಕರ್ತರಾಗಿರುವ ಪುತ್ರ ಆಶಿಶ್‌ ಯೆಚೂರಿ, ಪುತ್ರಿ ಅಖಿಲಾ ಯೆಚೂರಿ ಇದ್ದಾರೆ.

ಸಿಎಂ ಸಂತಾಪ

ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಎಡ ಸಿದ್ದಾಂತದ ಪ್ರಖರ ಚಿಂತಕರಾಗಿದ್ದ ಯಚೂರಿ ಅವರು ಅಪ್ಪಟ ಪ್ರಜಾಪ್ರಭುತ್ವವಾದಿಯೂ ಆಗಿದ್ದರು.

ಕೋಮುವಾದಿ ರಾಜಕೀಯದ ವಿರುದ್ಧ ಜಾತ್ಯತೀತ ಶಕ್ತಿಗಳ ಒಗ್ಗೂಡಿಸುವಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಾ ಬಂದಿರುವ ಯಚೂರಿಯವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ರೂವಾರಿಗಳಲ್ಲೊಬ್ಬರಾಗಿದ್ದರು. ಆ ಸರ್ಕಾರದ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ ರಚನೆಯಲ್ಲಿಯೂ ಅವರದ್ದೇ ಪ್ರಧಾನ ಪಾತ್ರ ಇತ್ತು. ಕಳೆದ ವರ್ಷ ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭಕ್ಕೆ ಆಗಮಿಸಿ, ಶುಭ ಹಾರೈಸಿದ್ದರು ಎಂದು ಸಿಎಂ ಸಿದ್ದರಾಮಯ್ಯ ಸ್ಮರಿಸಿದರು.

ಈಗಿನ ‘ಇಂಡಿಯಾ’ ಒಕ್ಕೂಟ ಸ್ಥಾಪನೆಯಲ್ಲಿಯೂ ಅವರ ಕೊಡುಗೆ ಇದೆ. ಸೀತಾರಾಮ್ ಯಚೂರಿ ಅವರ ನಿಧನದಿಂದ ಕೋಮುವಾದ ಮತ್ತು ಬಂಡವಾಳವಾದದ ವಿರುದ್ಧದ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ. ಯಚೂರಿ ಅವರ ಕುಟುಂಬ ಮತ್ತು ಸಂಗಾತಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಹಲವರ ಸಂತಾಪ

ಪಕ್ಷದ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಸೀತಾರಾಂ ಯಚೂರಿ ಇನ್ನಿಲ್ಲ. ಭಾರತದ ರಾಜಕಾರಣವನ್ನು ಹಸಿವಿಗೆ ತುತ್ತಾದವರ, ಬಡವರ, ದುಡಿಯುವ ಜನಗಳ ಪರವಾಗಿ ವಾಲಿಸಲು, ಕೋಮುವಾದಿ ಫ್ಯಾಸಿಸಂ ಅನ್ನು ಹಿಮ್ಮೆಟ್ಟಿಸಲು ಇನ್ನಿಲ್ಲದಂತೆ ಶ್ರಮಿಸುತ್ತಿದ್ದ ಕಾಮ್ರೇಡ್ ಯೆಚೂರಿ ಯವರ ಅಗಲಿಕೆ ಈ ದುರಿತ ಕಾಲದಲ್ಲಿ ಬಹುದೊಡ್ಡ ನಷ್ಟ ಎಂದು ಹಲವರು ಕಾಮ್ರೆಡ್‌ಗಳು ಸಂತಾಪ ಸೂಚಿಸಿದ್ದಾರೆ.

ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಪ್ರಧಾನ ಕಾರ್ಯದರ್ಶಿ, ಹಿರಿಯ ರಾಜಕಾರಣಿ ಸೀತಾರಾಂ ಯೆಚೂರಿ ಅವರ ನಿಧನ ಸುದ್ದಿ ತಿಳಿದು ಆಘಾತವಾಯಿತು. ರಾಷ್ಟ್ರಕ್ಕೆ ಅವರು ಸಲ್ಲಿಸಿದ ಸುದೀರ್ಘ ಸೇವೆ ಹಾಗೂ ಜನಪರ ಹೋರಾಟಗಳು ಸದಾ ನೆನಪಿನಲ್ಲಿ ಇರಲಿವೆ. ಮೃತರ ಆತ್ಮಕ್ಕೆ ಚಿರಶಾಂತಿ ಹಾಗೂ ಕುಟುಂಬಸ್ಥರಿಗೆ-ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಪರಮಾತ್ಮ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕರ್ನಾಟಕದ ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಸಂತಾಪ ಸೂಚಿಸಿದ್ದಾರೆ.

ಹಿರಿಯ ಸಿಪಿಐ-ಎಂ ನಾಯಕ ಶ್ರೀ ಸೀತಾರಾಮ್ ಯೆಚೂರಿಯವರ ನಿಧನದ ಸುದ್ದಿ ಅತ್ಯಂತ ದುಃಖಕರವಾಗಿದೆ. ಶ್ರೀ ಸೀತಾರಾಂ ಯೆಚೂರಿಯವರು ಅತ್ಯಂತ ಕಠಿಣ ಪರಿಶ್ರಮಿ ಮತ್ತು ತಮ್ಮ ಸಿದ್ಧಾಂತದ ಬಗ್ಗೆ ನಿಷ್ಠರಾಗಿದ್ದರು. ಶ್ರೀ ಯೆಚೂರಿ ಅವರು ಭಾರತ ಮತ್ತು ವಿದೇಶಗಳ ರಾಜಕೀಯ ವಿಷಯಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿದ್ದರು. ಅವರ ಅಗಲಿಕೆ ಭಾರತದ ರಾಜಕೀಯಕ್ಕೆ ದೊಡ್ಡ ನಷ್ಟ.

ಶ್ರೀ ಸೀತಾರಾಂ ಯೆಚೂರಿ ಅವರಿಗೆ ನನ್ನ ಶ್ರದ್ಧಾಂಜಲಿಯನ್ನು ಅರ್ಪಿಸುತ್ತ ಅವರ ಕುಟುಂಬದ ಹಾಗೂ ಕಾರ್ಯಕರ್ತರ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ನನ್ನ ಸಂತಾಪಗಳನ್ನು ಸೂಚಿಸುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ನೆನಪಿಸಿಕೊಂಡಿದ್ದಾರೆ.

ದೆಹಲಿಯಲ್ಲಿ ಸೀತಾರಾಂ ಯೆಚೂರಿ ನಿಧನದ ಅಧಿಕೃತ ಪ್ರಕಟಣೆ ಹೊರಡಿಸಿದ ಏಮ್ಸ್‌
ದೆಹಲಿಯಲ್ಲಿ ಸೀತಾರಾಂ ಯೆಚೂರಿ ನಿಧನದ ಅಧಿಕೃತ ಪ್ರಕಟಣೆ ಹೊರಡಿಸಿದ ಏಮ್ಸ್‌
mysore-dasara_Entry_Point

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.