Election SBI Bond: ಚುನಾವಣಾ ಬಾಂಡ್ ಮಾಹಿತಿ, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಎಸ್‌ಬಿಐಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ
Supreme court ಸುಪ್ರೀಂಕೋರ್ಟ್ ಎಸ್‌ಬಿಐ ಮೇಲೆ ಚಾಟಿ ಬೀಸಿದೆ. ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತಹ ಮಾಹಿತಿಯನ್ನು ಮಂಗಳವಾರದ ಒಳಗೆ ನೀಡದೇ ಇದ್ದರೆ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಸಿದೆ.
ದೆಹಲಿ : ಚುನಾವಣಾ ಬಾಂಡ್ ಗಳ ಬಗ್ಗೆ ಮಾಹಿತಿ ನೀಡಲು ಮೂರು ತಿಂಗಳ ಕಾಲ ಸಮಯಾವಕಾಶ ನೀಡುವಂತೆ ಕೋರಿ ಎಸ್ ಬಿಐ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂಕೋರ್ಟ್ ವಜಾಗೊಳಿಸಿದೆ. ರಾಜಕೀಯ ಪಕ್ಷಗಳಿಗೆ ಧನಸಹಾಯ ನೀಡಲು ವಿವಾದಾತ್ಮಕ ಚುನಾವಣಾ ಬಾಂಡ್ ಗಳನ್ನು ಖರೀದಿಸಿದ ವ್ಯಕ್ತಿಗಳು ಮತ್ತು ಕಂಪನಿಗಳ ವಿವರಗಳನ್ನು ಒದಗಿಸಲು ಹೆಚ್ಚಿನ ಸಮಯ ಕೋರಿ ಬ್ಯಾಂಕ್ ಸಲ್ಲಿಸಿದ್ದ ಮನವಿಯನ್ನು ಸೋಮವಾರ ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ನ್ಯಾಯಾಂಗ ನಿಂದನೆ ಕ್ರಮದ ಎಚ್ಚರಿಕೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳಿದ್ದ ಸಂವಿಧಾನ ಪೀಠವು, ನ್ಯಾಯಾಲಯವು ಕೋರಿರುವ ಮಾಹಿತಿಯು ಬ್ಯಾಂಕಿನಲ್ಲಿ ಸುಲಭವಾಗಿ ಲಭ್ಯವಿದೆ ಮತ್ತು ಅದನ್ನು ಮಂಗಳವಾರ ವ್ಯವಹಾರದ ಮುಕ್ತಾಯದ ವೇಳೆಗೆ ಭಾರತದ ಚುನಾವಣಾ ಆಯೋಗದೊಂದಿಗೆ (ಇಸಿಐ) ಹಂಚಿಕೊಳ್ಳಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದೆ.
ಚುನಾವಣಾ ಬಾಂಡ್‌ಗಳ ವಿಚಾರದಲ್ಲಿ ಹೊರಡಿಸಿದ ನಿರ್ದೇಶನಗಳ ಬಗ್ಗೆ ಎಸ್‌ಬಿಐ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರ ಅಫಿಡವಿಟ್ ಸಲ್ಲಿಸಬೇಕು ಎಂದು ನ್ಯಾಯಪೀಠ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಿದೆ.
ಈ ಸಮಯದಲ್ಲಿ ನ್ಯಾಯಾಂಗ ನಿಂದನೆ ನ್ಯಾಯವ್ಯಾಪ್ತಿಯನ್ನು ಚಲಾಯಿಸಲು ನಾವು ಒಲವು ಹೊಂದಿಲ್ಲವಾದರೂ, ಈ ಆದೇಶದಲ್ಲಿ ಸೂಚಿಸಲಾದ ಸಮಯವನ್ನು ಎಸ್‌ಬಿಐ ಅನುಸರಿಸದಿದ್ದರೆ ಉದ್ದೇಶಪೂರ್ವಕ ಅಸಹಕಾರಕ್ಕಾಗಿ ನ್ಯಾಯಾಲಯವು ಅದರ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ನೋಟಿಸ್ ಮೂಲಕ ತಿಳಿಸಿರುವುದಾಗಿ ನ್ಯಾಯಪೀಠವು ಹೇಳಿದೆ.
ಏನಿದು ಪ್ರಕರಣ
ವ್ಯಕ್ತಿಗಳು ಮತ್ತು ಕಂಪನಿಗಳು ರಾಜಕೀಯ ಪಕ್ಷಗಳಿಗೆ ಅನಿಯಮಿತ ಮತ್ತು ಅನಾಮಧೇಯ ದೇಣಿಗೆಗಳನ್ನು ನೀಡಲು ಅವಕಾಶ ನೀಡುವ ಚುನಾವಣಾ ಬಾಂಡ್ ಯೋಜನೆಯನ್ನು ನ್ಯಾಯಾಲಯವು ಫೆಬ್ರವರಿ 15 ರಂದು ರದ್ದುಗೊಳಿಸಿತ್ತು. ಚುನಾವಣಾ ಬಾಂಡ್ಗಳ ಮೂಲಕ ರಾಜಕೀಯ ಪಕ್ಷಗಳಿಗೆ ನೀಡಿದ ದೇಣಿಗೆಗಳ ವಿವರಗಳನ್ನು ಮಾರ್ಚ್ 6 ರೊಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ನ್ಯಾಯಾಲಯವು ಬ್ಯಾಂಕ್ಗೆ ನಿರ್ದೇಶನ ನೀಡಿತ್ತು.
ಮಾರ್ಚ್ 4 ರಂದು, ಎಸ್ ಬಿಐ ಗಡುವನ್ನು ಜೂನ್ 30 ರವರೆಗೆ ವಿಸ್ತರಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಇದಕ್ಕೆ ಪೂರಕವಾಗಿ ಎಸ್‌ಬಿಐ ಪರ ವಕೀಲರು ವಾದ ಮಂಡಿಸಿ ಕಾರಣಗಳನ್ನೂ ನೀಡಿದ್ದರು.
ಎಸ್‌ಬಿಐ ಉದ್ದೇಶಪೂರ್ವಕವಾಗಿ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ನ್ಯಾಯಾಂಗ ನಿಂದನೆ ಕ್ರಮವನ್ನು ಪ್ರಾರಂಭಿಸುವಂತೆ ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ತೀರ್ಪು ಹೊರ ಬಿದ್ದಿದೆ.
ವಕೀಲರು ಹೇಳಿದ್ದೇನು
ಎನ್ ಜಿಒಗಳ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಅಂಡ್ ಕಾಮನ್ ಕಾಸ್ ಪರವಾಗಿ ಹಾಜರಾದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಚುನಾವಣಾ ಬಾಂಡ್‌ಗಳ ದಾನಿಗಳು ಮತ್ತು ಈ ಚುನಾವಣಾ ಬಾಂಡ್ಗಳನ್ನು ರಿಡೀಮ್ ಮಾಡಿದ ಪಕ್ಷಗಳ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ಸಮಯವನ್ನು ವಿಸ್ತರಿಸುವ ಎಸ್ಬಿಐ ಅರ್ಜಿಯ ಬಗ್ಗೆ ಸುಪ್ರೀಂ ಕೋರ್ಟ್ ಕಠಿಣ ನಿಲುವನ್ನು ತೆಗೆದುಕೊಂಡಿದೆ ಎಂದು ಹೇಳಿದರು.
ನ್ಯಾಯಾಲಯವು ಎಸ್‌ಬಿಐನ ಅರ್ಜಿಯನ್ನು ವಜಾಗೊಳಿಸಿದೆ. ನ್ಯಾಯಾಲಯವು ನೀಡುವಂತೆ ಕೇಳಿದ ಡೇಟಾವು ಅವರ ಅಫಿಡವಿಟ್ ಪ್ರಕಾರ ಈಗಾಗಲೇ ಎಸ್ಬಿಐನಲ್ಲಿ ಲಭ್ಯವಿದೆ. ಅವರು ದಾನಿಗಳ ವಿವರಗಳನ್ನು ಮತ್ತು ಈ ಚುನಾವಣಾ ಬಾಂಡ್ಗಳನ್ನು ರಿಡೀಮ್ ಮಾಡಿದ ಪಕ್ಷಗಳ ವಿವರಗಳನ್ನು ಸಲ್ಲಿಸಬೇಕಾಗಿದೆ. ಎಂದು ನ್ಯಾಯಾಲಯ ಹೇಳಿದೆ ಎಂದು ಭೂಷಣ್ ತಿಳಿಸಿದರು.
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಅಶೋಕ್ ಗೆಹ್ಲೋಟ್ ಈ ಕುರಿತು ಪ್ರತಿಕ್ರಿಯಿಸಿ, ನಾಳೆಯೊಳಗೆ ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸುವಂತೆ ಎಸ್ ಬಿಐಗೆ ಸೂಚಿಸುವ ಮೂಲಕ ನ್ಯಾಯಾಲಯವು ಸರಿಯಾದ ಕೆಲಸವನ್ನು ಮಾಡಿದೆ. ಸುಪ್ರೀಂ ಕೋರ್ಟ್ ಈ ವಿಷಯದ ಗಂಭೀರತೆಯನ್ನು ಅರ್ಥಮಾಡಿಕೊಂಡಿದೆ.ನ್ಯಾಯಾಲಯವನ್ನು ಮೋಸಗೊಳಿಸಲು ಪ್ರಯತ್ನಿಸಿದವರಿಗೆ ಪಾಠ ಕಲಿಸುವ ತೀರ್ಪನ್ನು ನೀಡುತ್ತದೆ ಎನ್ನುವ ಖಾತ್ರಿಯಿದೆ ಎಂದು ಹೇಳಿದರು.