ಕನ್ನಡ ಸುದ್ದಿ  /  Nation And-world  /  Delhi Police At The Residence Of Rahul Gandhi Regarding His Remark On Sexual Assault Survivors

Delhi Police: ಅತ್ಯಾಚಾರ ಸಂತ್ರಸ್ತೆಯರ ಕುರಿತು ರಾಹುಲ್‌ ಹೇಳಿಕೆ: ಮಾಹಿತಿ ಪಡೆಯಲು ಮನೆಗೆ ಬಂದ ಪೊಲೀಸರು!

'ಭಾರತ್ ಜೋಡೋ ಯಾತ್ರೆ' ಸಂದರ್ಭದಲ್ಲಿ ರಾಹುಲ್ ಗಾಂಧಿಯವರ "ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ.." ಎಂಬ ಹೇಳಿಕೆಗೆ ಸಂಬಂಧಿಸಿದಂತೆ, ದೆಹಲಿ ಪೊಲೀಸ್‌ನ ಉನ್ನತ ಅಧಿಕಾರಿಗಳು ಮಾಹಿತಿ ಪಡೆಯಲು ಕಾಂಗ್ರೆಸ್‌ ನಾಯಕನ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..

ರಾಹುಲ್‌ ನಿವಾಸದೆದುರು ಪೊಲೀಸರು
ರಾಹುಲ್‌ ನಿವಾಸದೆದುರು ಪೊಲೀಸರು (ANI)

ನವದೆಹಲಿ: 'ಭಾರತ್ ಜೋಡೋ ಯಾತ್ರೆ' ಸಂದರ್ಭದಲ್ಲಿ ರಾಹುಲ್ ಗಾಂಧಿಯವರ "ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ.." ಎಂಬ ಹೇಳಿಕೆಗೆ ಸಂಬಂಧಿಸಿದಂತೆ, ದೆಹಲಿ ಪೊಲೀಸ್‌ನ ಉನ್ನತ ಅಧಿಕಾರಿಗಳು ಮಾಹಿತಿ ಪಡೆಯಲು ಕಾಂಗ್ರೆಸ್‌ ನಾಯಕನ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯರು ನನ್ನೊಂದಿಗೆ ತಮ್ಮ ನೋವನ್ನು ತೋಡಿಕೊಂಡಿದ್ದರು ಎಂದು ರಾಹುಲ್‌ ಗಾಂಧಿ ಹೇಳಿಕೆ ನೀಡಿದ್ದರು. ದೌರ್ಜನ್ಯಕ್ಕೊಳಗಾದ ಈ ಮಹಿಳೆಯರ ಕುರಿತು ವಿವರಗಳನ್ನು ಪಡೆಯಲು, ದೆಹಲಿ ಪೊಲೀಸರು ಮಾರ್ಚ್ 16ರಂದು ಕಾಂಗ್ರೆಸ್ ನಾಯಕನಿಗೆ ನೋಟಿಸ್ ನೀಡಿದ್ದರು.

ಆದರೆ ರಾಹುಲ್‌ ಗಾಂಧಿ ಈ ನೋಟಿಸ್‌ಗೆ ಉತ್ತರ ನೀಡಿಲ್ಲವಾದ್ದರಿಂದ, ಖುದ್ದಾಗಿ ಅವರಿಂದ ಹೇಳಿಕೆ ಪಡೆಯಲು ಕಾನೂನು ಮತ್ತು ಸುವ್ಯವಸ್ಥೆಯ ವಿಶೇಷ ಪೊಲೀಸ್‌ ಕಮಿಷನರ್‌ ಸಾಗರ್ ಪ್ರೀತ್ ಹೂಡಾ ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ನಿವಾಸಕ್ಕೆ ಆಗಮಿಸಿದ್ದಾರೆ.

ರಾಹುಲ್‌ ನಿವಾಸದೆದುರು ಪತ್ರಕರ್ತರೊಂದಿಗೆ ಮಾತನಾಡಿದ ಪೊಲೀಸ್‌ ಕಮಿಷನರ್‌ ಎಸ್‌ಪಿ ಹೂಡಾ, ದೌರ್ಜನ್ಯಕ್ಕೀಡಾದ ಮಹಿಳೆಯರ ವಿವರಗಳನ್ನು ರಾಹುಲ್ ಗಾಂಧಿಯಿಂದ ತಿಳಿದುಕೊಳ್ಳಲು ಬಂದಿರುವುದಾಗಿ ಸ್ಪಷ್ಟಪಡಿಸಿದರು. ರಾಹುಲ್‌ ಈ ಮಹಿಳೆಯರ ವಿವರ ನೀಡಿದರೆ, ನಾವು ಅವರಿಗೆ ನ್ಯಾಯ ಒದಗಿಸಬಹುದು ಎಂದೂ ಹೂಡಾ ತಿಳಿಸಿದ್ದಾರೆ.

ಆದರೆ ರಾಹುಲ್‌ ನಿವಾಸಕ್ಕೆ ಪೊಲೀಸರ ಭೇಟಿಯನ್ನು ಟೀಕಿಸಿರುವ ಕಾಂಗ್ರೆಸ್‌, ಸ್ವಯಂಪ್ರೇರಿತವಾಗಿ ಅಥವಾ ದೂರಿನ ಆಧಾರದ ಮೇಲೆ ರಾಹುಲ್ ಗಾಂಧಿ ವಿರುದ್ಧ ನೋಟಿಸ್ ನೀಡುವುದಕ್ಕೆ ಯಾವುದೇ ಕಾನೂನು ಪೂರ್ವನಿದರ್ಶನವಿಲ್ಲ ಎಂದು ಹೇಳಿದೆ. ರಾಹುಲ್‌ ಗಾಂಧಿ ಅವರಿಗೆ ಕಿರಿಕುಳ ನೀಡಲು, ದೆಹಲಿ ಪೊಲೀಸರಿಂದ ನಿಯೋಜಿಸಲಾದ ಮತ್ತೊಂದು ನಾಟಕ ಎಂದು ಕಾಂಗ್ರೆಸ್‌ ಹರಿಹಾಯ್ದಿದೆ.

ಬಲಿಪಶುಗಳ ಹೆಸರನ್ನು ಬಹಿರಂಗಪಡಿಸುವಂತೆ ರಾಹುಲ್‌ ಗಾಂಧಿ ಅವರನ್ನು ಒತ್ತಾಯಿಸಲು ಸಾಧ್ಯವಿಲ್ಲ. ಈ ಕ್ರಮವು ದುರುದ್ದೇಶಪೂರಿತವಾಗಿದೆ ಎಂದು ಕಾಂಗ್ರೆಸ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಆದರೆ ತಾವು ಕೇವಲ ರಾಹುಲ್‌ ಗಾಂಧಿ ಅವರಿಂದ ಹೇಳಿಕೆ ಪಡೆಯಲು ಮಾತ್ರ ಬಂದಿರುವುದಾಗಿ ಸ್ಪಷ್ಟಪಡಿಸಿರುವ ದೆಹಲಿ ಪೊಲೀಸರು, ಒಂದು ವೇಳೆ ವಿವರಗಳನ್ನು ನೀಡಲು ವಿಫಲವಾದರೆ, ರಾಹುಲ್‌ ಗಾಂಧಿ ಅವರಿಗೆ ಮತ್ತೊಂದು ನೋಟಿಸ್ ನೀಡಲಾಗುವುದು ಎಂದು ಹೇಳಿದ್ದಾರೆ.

"ಇದು ಬಲಿಪಶುಗಳ ಜೀವನ ಮತ್ತು ಭದ್ರತೆಯನ್ನು ಒಳಗೊಂಡಿರುವ ಸೂಕ್ಷ್ಮ ಪ್ರಕರಣವಾಗಿರುವುದರಿಂದ, ಸಾಕ್ಷ್ಯ ಮತ್ತು ಸಾಕ್ಷಿಗಳನ್ನು ಹಾಳು ಮಾಡದಂತೆ ಖಚಿತಪಡಿಸಿಕೊಳ್ಳಲು ತಂಡವು ಸಂಬಂಧಿತ ಮಾಹಿತಿಯನ್ನು ಸಂಗ್ರಹಿಸಲು ಕೆಲಸ ಮಾಡುತ್ತಿದೆ.." ಎಂದು ಕಾನೂನು ಮತ್ತು ಸುವ್ಯವಸ್ಥೆಯ ವಿಶೇಷ ಪೊಲೀಸ್‌ ಕಮಿಷನರ್‌ ಸಾಗರ್ ಪ್ರೀತ್ ಹೂಡಾ ಮಾಹಿತಿ ನೀಡಿದ್ದಾರೆ.

ಇಂದಿನ ಪ್ರಮುಖ ಸುದ್ದಿಗಳು

Amritpal Singh: ಮತ್ತೋರ್ವ ಬ್ರಿಂದನ್‌ವಾಲೆಗೆ ಜನ್ಮ ನೀಡುತ್ತಿದೆ ಪಾಪಿಸ್ತಾನ: ಅಮೃತಪಾಲ್‌ ಸಿಂಗ್‌ಗೆ 'ನೆರೆ' ರಾಷ್ಟ್ರದ ನೆರವು!

ಖಲಿಸ್ತಾನ ಬೆಂಬಲಿಗ ಹಾಗೂ ತೀವ್ರಗಾಮಿ ಸಿಖ್ ಬೋಧಕ ಅಮೃತ್‌ಪಾಲ್‌ ಸಿಂಗ್‌ಗೆ ಪಾಕಿಸ್ತಾನದ ಬಾಹ್ಯ ಗುಪ್ತಚರ ಇಲಾಖೆ ಐಎಸ್‌ಐ ನೆರವು ನೀಡುತ್ತಿದೆ ಎಂಬ ಆಘಾತಕಾರಿ ಸಂಗತಿಯನ್ನು ಭಾರತೀಯ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದಲೇ, ಐಎಸ್‌ಐ ಅಮೃತ್‌ಪಾಲ್‌ ಸಿಂಗ್‌ಗೆ ನೆರವು ನೀಡುತ್ತಿದೆ ಎಂದು ವರದಿ ಹೇಳಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

Punjab Police: 'ಬ್ರಿಂದನ್‌ವಾಲೆ 2.0' ಎಂಬ 'ಡೇಂಜರಸ್‌ ಮ್ಯಾನ್‌' ಬಂಧನಕ್ಕೆ ಪಂಜಾಬ್‌ ಪೊಲೀಸರು ಹೆಣೆದ 'ಆ್ಯಕ್ಷನ್‌ ಪ್ಲ್ಯಾನ್‌' ಏನು?

ಖಲಿಸ್ತಾನ ಬೆಂಬಲಿಗರಿಂದ 'ಬ್ರಿಂದನ್‌ವಾಲೆ 2.0' ಎಂದು ಕರೆಯಲ್ಪಡುವ 'ವಾರಿಸ್ ಪಂಜಾಬ್ ದೇ' ಸಂಘಟನೆಯ ಮುಖ್ಯಸ್ಥ ಅಮೃತ್‌ಪಾಲ್‌ ಸಿಂಗ್‌, ಭಾರತದ ಭದ್ರತೆಗೆ ಅಪಾಯಕಾರಿಯಾಗಿ ಪರಿಣಮಿಸುವ ಎಲ್ಲ ಸಾಧ್ಯತೆಗಳೂ ಕಂಡುಬರುತ್ತಿವೆ. ಈ ಮಧ್ಯೆ ಪರಾರಿಯಾಗಿರುವ ಅಮೃತ್‌ಪಾಲ್‌ ಸಿಂಗ್‌ ಬಂಧನಕ್ಕೆ ಪಂಜಾಬ್‌ ಪೊಲೀಸರು ಹೆಣೆದಿರುವ ಯೋಜನೆ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

ವಿಭಾಗ