Arvind Kejriwal Profile: ಭ್ರಷ್ಟಾಚಾರದ ವಿರುದ್ಧ ಕನಸು ಬಿತ್ತಿದವನಿಗೆ ಆವರಿಸಿಕೊಂಡಿದ್ದು ಅದೇ ಭ್ರಷ್ಟಾಚಾರದ ಆರೋಪ, ಈಗಿನ ಸೋಲಿಗೂ ಅದೇ ನೆಪ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Arvind Kejriwal Profile: ಭ್ರಷ್ಟಾಚಾರದ ವಿರುದ್ಧ ಕನಸು ಬಿತ್ತಿದವನಿಗೆ ಆವರಿಸಿಕೊಂಡಿದ್ದು ಅದೇ ಭ್ರಷ್ಟಾಚಾರದ ಆರೋಪ, ಈಗಿನ ಸೋಲಿಗೂ ಅದೇ ನೆಪ

Arvind Kejriwal Profile: ಭ್ರಷ್ಟಾಚಾರದ ವಿರುದ್ಧ ಕನಸು ಬಿತ್ತಿದವನಿಗೆ ಆವರಿಸಿಕೊಂಡಿದ್ದು ಅದೇ ಭ್ರಷ್ಟಾಚಾರದ ಆರೋಪ, ಈಗಿನ ಸೋಲಿಗೂ ಅದೇ ನೆಪ

Arvind Kejriwal: ದೆಹಲಿ ವಿಧಾನ ಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಅರವಿಂದ ಕೇಜ್ರಿವಾಲ್ ಸೋಲು ಕಂಡಿದ್ದಾರೆ. ಜನಸಾಮಾನ್ಯನ ಕನಸನ್ನು ನನಸು ಮಾಡಲು ಹೊರಟಿದ್ದ ಅರವಿಂದ್ ಕೇಜ್ರಿವಾಲ್ ರಾಜಕೀಯ ಬದುಕಿನ ಏಳುಬೀಳುಗಳಿವು.

 ಜನ ಸಾಮಾನ್ಯನಂತೆ ಬಿಂಬಿಸಿಕೊಂಡಿದ್ದ ಅರವಿಂದ್ ಕೇಜ್ರಿವಾಲ್ ರಾಜಕೀಯ ಬದುಕಿನ ಏಳುಬೀಳು (ಕಡತ ಚಿತ್ರ)
ಜನ ಸಾಮಾನ್ಯನಂತೆ ಬಿಂಬಿಸಿಕೊಂಡಿದ್ದ ಅರವಿಂದ್ ಕೇಜ್ರಿವಾಲ್ ರಾಜಕೀಯ ಬದುಕಿನ ಏಳುಬೀಳು (ಕಡತ ಚಿತ್ರ) (AAP - X)

ಅರವಿಂದ್ ಕೇಜ್ರಿವಾಲ್ ವ್ಯಕ್ತಿ-ವ್ಯಕ್ತಿತ್ವ: ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಆಮ್ ಆದ್ಮಿ ಪಾರ್ಟಿ (ಆಪ್_ ನಾಯಕ ಅರವಿಂದ್ ಕೇಜ್ರಿವಾಲ್ ಪರ ಜನ ನಿಂತಿಲ್ಲ. ಅವರು ಸೋಲು ಅನುಭವಿಸಿದ್ದಾರೆ. ಸೋಲಿನ ಅಂತರ 4000ಕ್ಕೂ ಹೆಚ್ಚು ಮತಗಳು. ಆದರೂ ಸೋಲು ಸೋಲೇ. ಅವರ ರಾಜಕೀಯ ಪ್ರವೇಶ ಯಾವ ಭ್ರಷ್ಟಾಚಾರದ ವಿರುದ್ಧ ಹೋರಾಟವಾಗಿತ್ತೋ ಅದರದ್ದೇ ಸುಳಿಗೆ ಅವರ ರಾಜಕೀಯ ಬದುಕು ಸಿಲುಕಿತು. ಎರಡು ಮೂರು ವರ್ಷಗಳ ಅವಧಿಯಲ್ಲಿ ಸಾಕಷ್ಟು ಏಳುಬೀಳು ಕಂಡರು.

ಜನಸಾಮಾನ್ಯನಿಗೆ ಅಧಿಕಾರ ಸಿಗಬೇಕು, ಜನ ಲೋಕಪಾಲ ಕಾನೂನು ಜಾರಿಯಾಗಬೇಕು ಎಂದು ಆಗ್ರಹಿಸುತ್ತ ಅಣ್ಣಾ ಹಜಾರೆ ಅವರ ಪ್ರತಿಭಟನೆಯೊಂದಿಗೆ ಮುಂಚೂಣಿಗೆ ಬಂದು ರಾಜಕೀಯ ಪ್ರವೇಶ ಮಾಡಿದವರು ಅರವಿಂದ್ ಕೇಜ್ರಿವಾಲ್. ತನ್ನನ್ನು ತಾನು ಜನಸಾಮಾನ್ಯ ಎಂದು ಬಿಂಬಿಸಿಕೊಂಡು ರಾಜಕೀಯ ಮಹತ್ವಾಕಾಂಕ್ಷೆಯೊಂದಿಗೆ ಮುನ್ನಡೆದ ಅರವಿಂದ್ ಕೇಜ್ರಿವಾಲ್‌ 2012ರಲ್ಲಿ ಜನ ಸಾಮಾನ್ಯನ ಹೆಸರಲ್ಲೇ ಪಕ್ಷ ಸ್ಥಾಪಿಸಿದರು. ಹೌದು, ಆಮ್ ಆದ್ಮಿ ಪಾರ್ಟಿ (ಎಎಪಿ). ಅದಕ್ಕೆ ತಾವೇ ರಾಷ್ಟ್ರೀಯ ಸಂಚಾಲಕರಾದರು. 2013ರ ಡಿಸೆಂಬರ್‌ನಲ್ಲಿ ದೆಹಲಿ ವಿಧಾನಸಭೆ ಚುನಾವಣೆ ಎದುರಿಸಿದರು.

ಜನಸಾಮಾನ್ಯರ ಪಾರ್ಟಿಯಾಗಿ ಆಮ್‌ ಆದ್ಮಿ ಪಾರ್ಟಿ ಸಂಚಲನ ಮೂಡಿಸಿತು. ಜನಸಾಮಾನ್ಯರ ನಾಯಕನಾಗಿ ಅರವಿಂದ್ ಕೇಜ್ರಿವಾಲ್ ದೆಹಲಿಗರಲ್ಲಿ ಆಶಾಭಾವ ಮೂಡಿಸಿದರು. ಮೂರು ಅವಧಿಗೆ ದೆಹಲಿಯನ್ನು ಆಳಿದ ಕಾಂಗ್ರೆಸ್ ಪಕ್ಷದ ಶೀಲಾ ದೀಕ್ಷಿತ್ ಸರ್ಕಾರದ ಬಗ್ಗೆ ಜನ ಅಸಮಾಧಾನಗೊಂಡಿದ್ದರು. 2012ರ ಡಿಸೆಂಬರ್‌ನಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಆ ಅಸಮಾಧಾನವನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡಿತ್ತು. ಆಮ್ ಆದ್ಮಿ ಪಾರ್ಟಿ ರಾಜಕೀಯವಾಗಿ ಬೆಳೆಯಲು ಇದು ಕೂಡ ನೆರವಾಯಿತು. ಇನ್ನೊಂದೆಡೆ, ಕಾಂಗ್ರೆಸ್ ಪಕ್ಷಕ್ಕೆ ತಾನೇ ಪರ್ಯಾಯ ಎಂದು ಬಿಜೆಪಿ ಅಂದುಕೊಂಡಿತ್ತು. ಆದರೆ, ಚುನಾವಣಾ ಫಲಿತಾಂಶ ಬಂದಾಗ, ಬಿಜೆಪಿಗೆ 70 ಸ್ಥಾನಗಳ ಪೈಕಿ 31 ಸ್ಥಾನಗಳು ಬಂದರೂ ಸರ್ಕಾರ ರಚನೆ ಸಾಧ್ಯವಾಗಲಿಲ್ಲ. ಆಮ್ ಆದ್ಮಿ ಪಾರ್ಟಿ 28 ಸ್ಥಾನಗಳನ್ನು ಗೆದ್ದುಕೊಂಡು ಎರಡನೇ ಅತಿದೊಡ್ಡ ಪಕ್ಷವಾಯಿತು. ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲದೊಂದಿಗೆ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾದರು.

ಜನಲೋಕಪಾಲ ಮಸೂದೆ: ದೇಶಾದ್ಯಂತ ಸುದ್ದಿಯಾದ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾದ ಕೂಡಲೇ ಮತದಾರರಿಗೆ ನೀಡಿದ ಭರವಸೆಯಂತೆ ಜನ ಲೋಕಪಾಲ ಮಸೂದೆ ಜಾರಿಗೊಳಿಸಲು ಮುಂದಾದರು. ವಿಪಕ್ಷಗಳ ಬೆಂಬಲ ಕೋರಿದರು. ಆದರೆ, ಅದು ಸಿಗದ ಕಾರಣ ರಾಜೀನಾಮೆ ನೀಡಿ ಚುನಾವಣೆ ಎದುರಿಸಲು ಸಜ್ಜಾದರು. ದೆಹಲಿಯು ಅಲ್ಪ ಅವಧಿಗೆ ರಾಷ್ಟ್ರಪತಿ ಆಡಳಿತಕ್ಕೆ ಒಳಪಟ್ಟಿತು. ಬಿಜೆಪಿಗೆ ಈ ಬಾರಿ ಆಡಳಿತ ಹಿಡಿಯುವ ಆಸೆ ಹೆಚ್ಚಾಯಿತು. 2015ರ ಚುನಾವಣೆ ಎದುರಿಸಲು ಬಿಜೆಪಿ ಸಜ್ಜಾಯಿತು. ಆದರೆ ಜನರ ಒಲವು ಎಎಪಿ ಕಡೆಗೆ ತಿರುಗಿತು. ಜನಸಾಮಾನ್ಯರ ಪಾರ್ಟಿ, ಜನ ಸಾಮಾನ್ಯರ ನಾಯಕ ಎಂಬ ಇಮೇಜ್ ಅರವಿಂದ್ ಕೇಜ್ರಿವಾಲ್ ರಾಜಕೀಯ ಮಹತ್ವಾಕಾಂಕ್ಷೆಗೆ ಶಕ್ತಿ ತುಂಬಿತು. ದೆಹಲಿಗರು ಆಮ್ ಆದ್ಮಿ ಪಾರ್ಟಿಯನ್ನು ತಮ್ಮದೇ ಪಕ್ಷವನ್ನಾಗಿಸಿಕೊಂಡರು. 70 ಸ್ಥಾನಗಳ ಪೈಕಿ 67 ಸ್ಥಾನಗಳನ್ನು ಎಎಪಿ ಕೈಗಿತ್ತು ಇತಿಹಾಸ ಸೃಷ್ಟಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಶೂನ್ಯ, ಬಿಜೆಪಿಗೆ ಮೂರು ಸ್ಥಾನಗಳಷ್ಟೇ ಸಿಕ್ಕಿತು.

ಅರವಿಂದ್ ಕೇಜ್ರಿವಾಲ್ ಇಡೀ ದೇಶಕ್ಕೊಂದು ಮಾದರಿಯಾದರು. ಆಮ್ ಆದ್ಮಿ ಪಾರ್ಟಿ ದೆಹಲಿಯಷ್ಟೇ ಅಲ್ಲ ದೇಶಕ್ಕೆ ಬೇಕು ಎನ್ನುವ ಚಿಂತನೆ ಭಾರತದ ಉದ್ದಗಲಕ್ಕೂ ವ್ಯಾಪಿಸಿತು. ಪರ್ಯಾಯ ರಾಜಕೀಯ ಬಯಸುವವರೆಲ್ಲ ಅರವಿಂದ್ ಕೇಜ್ರಿವಾಲ್ ಜತೆಗೆ ಸೇರಿಕೊಂಡರು. ಪಂಜಾಬ್ ಮತ್ತು ಗೋವಾ ಚುನಾವಣೆಯಲ್ಲಿ ಎಎಪಿ ಸದ್ದು ಮಾಡಿತು. ಪಂಜಾಬ್‌ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಗೆದ್ದು ಆಡಳಿತ ಚುಕ್ಕಾಣಿ ಹಿಡಿಯಿತು. ಇದು, ಅರವಿಂದ್ ಕೇಜ್ರಿವಾಲ್ ಹವಾ ಹೆಚ್ಚುವಂತೆ ಮಾಡಿತು.

2020: ಉಚಿತ ಕೊಡುಗೆ, ಕೇಂದ್ರದೊಂದಿಗೆ ಸಂಘರ್ಷ

2020ರ ಚುನಾವಣೆ ವೇಳೆಗೆ ದೆಹಲಿಗರಿಗೆ ಉಚಿತ ನೀರು, ಉಚಿತ ವಿದ್ಯುತ್ ಕೊಡುಗೆಗಳನ್ನು ಪ್ರಸ್ತಾಪಿಸಿದರು. ಜನಪರ ಆಡಳಿತ ನೀಡುವ ಭರವಸೆ ನೀಡಿದ ಅರವಿಂದ್ ಕೇಜ್ರಿವಾಲ್, ಕೇಂದ್ರ ಸರ್ಕಾರದ ಜತೆಗೆ ನಿರಂತರ ಸಂಘರ್ಷ ಮುಂದುವರಿಸಿದರು. ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರುವುದಕ್ಕೆ ಪ್ರಯತ್ನಿಸಿದರು. ಈ ನಡುವೆ, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ತನ್ನ ಅಧಿಕೃತ ನಿವಾಸದ ನವೀಕರಣಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ತೀವ್ರ ಟೀಕೆಗೆ ಗುರಿಯಾದರು. ಅಬಕಾರಿ ನೀತಿ ಬದಲಾವಣೆಗೆ ಪ್ರಯತ್ನಿಸಿ, ಖಾಸಗಿಯವರಿಗೆ ಅನುಕೂಲ ಮಾಡಿಕೊಟ್ಟ ಆರೋಪ ಹೊತ್ತರು.

2021ರಲ್ಲಿ ದೆಹಲಿ ಅಬಕಾರಿ ನೀತಿ ಜಾರಿಗೆ ಬಂತು. ಅದಾಗಿ ಕೆಲವೇ ತಿಂಗಳಲ್ಲಿ ಅದರಲ್ಲಿ ಭ್ರಷ್ಟಾಚಾರ ನಡೆದಿರುವ ಶಂಕೆಯಿಂದ ಕೇಂದ್ರ ತನಿಖಾ ಸಂಸ್ಥೆಗಳು ತನಿಖೆ ಶುರುಮಾಡಿದವು. ದೆಹಲಿ ಸಚಿವ ಸಂಪುಟದ ಸಚಿವರು ಬಂಧನಕ್ಕೆ ಒಳಗಾದರು. ಕೊನೆಗೆ ಅರವಿಂದ್ ಕೇಜ್ರಿವಾಲ್ ಕೂಡ ಮುಖ್ಯಮಂತ್ರಿಯಾಗಿದ್ದುಕೊಂಡೇ ಜೈಲು ಸೇರಿದರು. ಅಲ್ಲಿಂದಲೇ ಆಡಳಿತ ನಡೆಸಿದರು. ಲೋಕಸಭೆ ಚುನಾವಣೆಯಲ್ಲಿ ಎಎಪಿ ಪರ ಪ್ರಚಾರಕ್ಕೆ ಕೋರ್ಟ್ ಅನುಮತಿ ಪಡೆದು ಹೊರಬಂದರು. ಕೊನೆಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದುಹೊರಬಂದ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪಕ್ಷ ಸಂಘಟನೆ ಕಡೆಗೆ ಗಮನಹರಿಸುವುದಾಗಿ ಹೇಳಿ ತಮ್ಮ ಆಪ್ತರಾದ ಅತಿಶಿ ಮರ್ಲೆನಾ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು.

ಜನಸಾಮಾನ್ಯರಂತೆ ಬದುಕುವುದಾಗಿ ಘೋಷಿಸಿ, ಜನಸಾಮಾನ್ಯರ ದನಿಯಾಗುವ ಭರವಸೆ ಹುಟ್ಟಿಸಿ, ಭ್ರಷ್ಟಾಚಾರ ವಿರುದ್ಧ ಮಾತನಾಡುತ್ತ ರಾಜಕೀಯದಲ್ಲಿ ಬದಲಾವಣೆ ತರುವುದಕ್ಕಾಗಿ ರಾಜಕಾರಣಕ್ಕೆ ಇಳಿದ ಅರವಿಂದ್ ಕೇಜ್ರಿವಾಲ್ ಅದೇ ಭ್ರಷ್ಟಾಚಾರದ ಆರೋಪಕ್ಕೆ ಒಳಗಾಗಿ ಬಂಧನಕ್ಕೆ ಒಳಗಾಗಿದ್ದು ವಿಪರ್ಯಾಸ. ಮೂರು ಬಾರಿ ಮುಖ್ಯಮಂತ್ರಿಯಾದರೂ ಅರವಿಂದ್ ಕೇಜ್ರಿವಾಲ್ ಅವರಿಗೆ ತಾವೇ ಬಯಸಿದ್ದ ಜನ್ ಲೋಕಪಾಲ್ ಕಾಯ್ದೆಯನ್ನು ಜಾರಿಗೊಳಿಸುವುದು ಸಾಧ್ಯವಾಗಲಿಲ್ಲ ಎಂಬುದು ರಾಜಕೀಯ ವ್ಯವಸ್ಥೆಯ ವ್ಯಂಗ್ಯ.

ಯಾವುದೇ ನಾಯಕನ ರಾಜಕೀಯ ಏರಿಳಿತಗಳಿಂದ ಅಧಿಕಾರ ಕಳೆದುಕೊಳ್ಳುವುದು ಬೇರೆ, ಜನರೇ ಅವರನ್ನು ತಿರಸ್ಕರಿಸುವುದು ಬೇರೆ. ಸದ್ಯಕ್ಕೆ ದೆಹಲಿ ಜನರು ಕೇಜ್ರಿವಾಲ್‌ ಅವರನ್ನು ತಿರಸ್ಕರಿಸಿದ್ದಾರೆ. ಈ ಸೋಲನ್ನು ಜೀರ್ಣಿಸಿಕೊಳ್ಳುವುದು ವ್ಯಕ್ತಿಯಾಗಿ ಕೇಜ್ರಿವಾಲ್ ಅವರಿಗೆ ಮತ್ತು ಪಕ್ಷವಾಗಿ ಆಪ್‌ ಆದ್ಮಿ ಪಾರ್ಟಿಗೆ ಸುಲಭವಲ್ಲ. ಇಲ್ಲಿಂದಾಚೆಗೆ ಅವರು ಹೇಗಿರುತ್ತಾರೆ? ಹೇಗೆ ವರ್ತಿಸುತ್ತಾರೆ ಮತ್ತು ಜನರ ಕಷ್ಟಸುಖಗಳಿಗೆ ಹೇಗೆ ಸ್ಪಂದಿಸುತ್ತಾರೆ ಎನ್ನುವುದು ಅವರ ಭವಿಷ್ಯವನ್ನು ನಿರ್ಧರಿಸುತ್ತದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.