Dell layoff: ಡೆಲ್‌ನಿಂದ 6,500 ಉದ್ಯೋಗ ಕಡಿತ, ಜಾಗತಿಕವಾಗಿ ಶೇ. 5 ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಸಿದ್ಧತೆ
ಡೆಲ್ ಟೆಕ್ನಾಲಜೀಸ್ ಐಎನ್‌ಸಿಯು ಸುಮಾರು 6500 ಸಿಬ್ಬಂದಿಗಳನ್ನು ಅಥವಾ ತನ್ನ ಜಾಗತಿಕ ಉದ್ಯೋಗ ಪಡೆಯಲ್ಲಿ ಶೇಕಡ 5ರಷ್ಟು ಉದ್ಯೋಗಿಗಳ ಉದ್ಯೋಗ ಕಡಿತ ಮಾಡಲು ಯೋಜಿಸಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.
ನವದೆಹಲಿ: ಡೆಲ್ ಟೆಕ್ನಾಲಜೀಸ್ ಐಎನ್‌ಸಿಯು ಸುಮಾರು 6500 ಸಿಬ್ಬಂದಿಗಳನ್ನು ಅಥವಾ ತನ್ನ ಜಾಗತಿಕ ಉದ್ಯೋಗ ಪಡೆಯಲ್ಲಿ ಶೇಕಡ 5ರಷ್ಟು ಉದ್ಯೋಗಿಗಳ ಉದ್ಯೋಗ ಕಡಿತ ಮಾಡಲು ಯೋಜಿಸಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಟ್ರೆಂಡಿಂಗ್ ಸುದ್ದಿ
ಈ ಮೂಲಕ ಜಾಗತಿಕವಾಗಿ ಉದ್ಯೋಗ ಕಡಿತ ಮಾಡುತ್ತಿರುವ ಪ್ರಮುಖ ಕಂಪನಿಗಳ ಸಾಲಿಗೆ ಡೆಲ್ ಸೇರಿದೆ. "ಕಂಪನಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ತೊಂದರೆಗಳಾಗುತ್ತಿದ್ದು, ಅನಿಶ್ಚಿತ ಭವಿಷ್ಯವಿದೆ" ಎಂದು ಡೆಲ್‌ನ ಮುಖ್ಯ ಸಹ ಕಾರ್ಯನಿರ್ವಾಹಕ ಅಧಿಕಾರಿ ಜೆಫ್ ಕ್ಲರ್ಕ್ ಹೇಳಿದ್ದಾರೆ.
"ನಾವು ಆರ್ಥಿಕ ಕುಸಿತವನ್ನು ಮೊದಲು ಎದುರಿಸಿದ್ದೇವೆ. ಬಲಶಾಲಿಯಾಗಿ ಹೊರಹೊಮ್ಮಿದ್ದೇವೆ. ಸವಾಲುಗಳು ಎದುರಾಗುತ್ತಿವೆ. ಮಾರುಕಟ್ಟೆ ಚೇತರಿಸಿಕೊಂಡಾಗ ನಾವು ಸಿದ್ಧರಾಗುತ್ತೇವೆ" ಎಂದು ಕ್ಲಾರ್ಕ್ ಅವರು ಉದ್ಯೋಗಿಗಳಿಗೆ ಬರೆದ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ. 2020 ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯೂ ಡೆಲ್ ಇದೇ ರೀತಿ ಉದ್ಯೋಗಿಗಳನ್ನು ವಜಾ ಮಾಡಿತ್ತು.
2022 ರ ನಾಲ್ಕನೇ ತ್ರೈಮಾಸಿಕದಲ್ಲಿ ಡೆಲ್‌ನ ವೈಯಕ್ತಿಕ ಕಂಪ್ಯೂಟರ್ ಮಾರಾಟ ತೀವ್ರವಾಗಿ ಕುಸಿದಿವೆ ಎಂದು ಪ್ರಾಥಮಿಕ ಮಾಹಿತಿಯು ತೋರಿಸುತ್ತದೆ ಎಂದು ಉದ್ಯಮ ವಿಶ್ಲೇಷಕ ಐಡಿಸಿ ತಿಳಿಸಿದೆ. ಇತರೆ ಕಂಪನಿಗಳಿಗೆ ಹೋಲಿಸಿದರೆ ಡೆಲ್‌ನ ಮಾರಾಟವು ಶೇಕಡ 37ರಷ್ಟು ಕುಸಿದಿದೆ. ಡೆಲ್‌ಗೆ ತನ್ನ ಒಟ್ಟು ಆದಾಯದಲ್ಲಿ ಶೇಕಡ 55 ಆದಾಯವು ಪರ್ಸನಲ್ ಕಂಪ್ಯೂಟರ್ ಮಾರಾಟದಿಂದ ದೊರಕುತ್ತದೆ.
ಕಳೆದ ನವೆಂಬರ್ ತಿಂಗಳಲ್ಲಿ ಎಚ್‌ಪಿ ಕಂಪನಿಯು ಮುಂದಿನ ಮೂರು ವರ್ಷಗಳಲ್ಲಿ ಆರು ಸಾವಿರ ಉದ್ಯೋಗ ಕಡಿತ ಮಾಡುವುದಾಗಿ ತಿಳಿಸಿತ್ತು. ಪರ್ಸನಲ್ ಕಂಪ್ಯೂಟರ್ ಬೇಡಿಕೆ ತಗ್ಗಿರುವುದರಿಂದ ಕಂಪನಿಯು ಉದ್ಯೋಗ ಕಡಿತಕ್ಕೆ ಮುಂದಾಗಿತ್ತು. ಸಿಸ್ಕೊ ಸಿಸ್ಟಮ್ಸ್ ಕಂಪನಿಯೂ ನಾಲ್ಕು ಸಾವಿರ ಉದ್ಯೋಗ ಕಡಿತ ಮಾಡುವುದಾಗಿ ತಿಳಿಸಿತ್ತು. 2022ರಲ್ಲಿ ಈ ಕಂಪನಿಯು 97,171 ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು.
ತಂತ್ರಜ್ಞಾನದ ನವೀಕರಣ, ಆರ್ಥಿಕ ಹಿಂಜರಿತ, ಅಂತಾರಾಷ್ಟ್ರೀಯ ವಿದ್ಯಮಾನಗಳು, ಕಡಿಮೆಯಾಗುತ್ತಿರುವ ಆದಾಯ, ಹೆಚ್ಚುತ್ತಿರುವ ವೆಚ್ಚಗಳು ಹೀಗೆ ಜಾಗತಿಕ ಕಂಪನಿಗಳು ಮೇಲಿಂದ ಮೇಲೆ ಸಮಸ್ಯೆಗಳನ್ನು ಎದುರಿಸುತ್ತಿವೆ. ಹೀಗಾಗಿ ಬಹುತೇಕ ಎಲ್ಲಾ ಟೆಕ್ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ. ಬೇರೆ ದಾರಿ ಇಲ್ಲದೆ ಸಿಬ್ಬಂದಿ ವಜಾ ನಿರ್ಧಾರ ಕೈಗೊಂಡಿರುವ ಕಂಪನಿಗಳು, ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿವೆ.
ಅಡೋಬ್ ಸುಮಾರು 100 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ತಂತ್ರಜ್ಞಾನ ದೈತ್ಯ ಗೂಗಲ್ ವಿಶ್ವಾದ್ಯಂತ 12,000 ಉದ್ಯೋಗಿಗಳನ್ನು ವಜಾಗೊಳಿಸಲು ಹೊರಟಿದೆ. ಇದು ಸಂಸ್ಥೆಯಲ್ಲಿರುವ ಒಟ್ಟು ಉದ್ಯೋಗಿಗಳ ಸರಿಸುಮಾರು 6 ಶೇಕಡ ಆಗಿದೆ. ಉದ್ಯೋಗ ಕಡಿತ ಘೋಷಿಸಿದ ಇತರೆ ಕಂಪನಿಗಳ ಲಿಸ್ಟ್ ಇಲ್ಲಿದೆ.
ಸಂದರ್ಶನ ಮಾಡುತ್ತಿದ್ದಾಗಲೇ ಕೆಲಸ ಕಳೆದುಕೊಂಡ ಗೂಗಲ್ ಹೆಚ್‌ಆರ್!
ಭಾರೀ ಉದ್ಯೋಗ ಕಡಿತಗೊಳಿಸಿರುವ ಜಾಗತಿಕ ಸರ್ಚ್ ಇಂಜಿನ್ ದೈತ್ಯ ಗೂಗಲ್, 12,000 ಉದ್ಯೋಗಿಗಳನ್ನು ಏಕಕಾಲದಲ್ಲಿ ಕೆಲಸದಿಂದ ವಜಾಗೊಳಿಸಿದೆ. ಈ ಪೈಕಿ ಸಂಸ್ಥೆಗೆ ಹೊಸ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು. ಸಂದರ್ಶನ ನಡೆಸುತ್ತಿದ್ದ ಹೆಚ್‌ಆರ್ ಓರ್ವನನ್ನು ಪ್ರಕ್ರಿಯೆ ಮಧ್ಯೆಯೇ ಕೆಲಸದಿಂದ ವಜಾಗೊಳಿಸಿರುವುದು ಗಮನ ಸೆಳೆದಿದೆ. ಗೂಗಲ್‌ನಲ್ಲಿ ಹೆಚ್‌ಆರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡ್ಯಾನ್ ಲಾನಿಗನ್ ರಯಾನ್ ಎಂಬಾತ, ಹೊಸ ಅಭ್ಯರ್ಥಿಗಳ ಸಂದರ್ಶನ ನಡೆಸುತ್ತಿದ್ದಾಗಲೇ ನನ್ನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು ಎಂದು ತನ್ನ ಅಧಿಕೃತ ಲಿಂಕ್ಡ್‌ಇನ್ ಖಾತೆಯಲ್ಲಿ ಬರೆದುಕೊಂಡಿದ್ದಾನೆ. ಈ ಕುರಿತ ವರದಿ ಇಲ್ಲಿದೆ.