Shayani Ekadashi: ಮಹಾರಾಷ್ಟ್ರದ ಫಂಡರಪುರದಲ್ಲೀಗ ದಿಂಡಿ ಸೇವೆ; ವಿಠಲನ ಭಕ್ತರ ವಾರಕರಿ ಸಂಪ್ರದಾಯದ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Shayani Ekadashi: ಮಹಾರಾಷ್ಟ್ರದ ಫಂಡರಪುರದಲ್ಲೀಗ ದಿಂಡಿ ಸೇವೆ; ವಿಠಲನ ಭಕ್ತರ ವಾರಕರಿ ಸಂಪ್ರದಾಯದ ಮಾಹಿತಿ ಇಲ್ಲಿದೆ

Shayani Ekadashi: ಮಹಾರಾಷ್ಟ್ರದ ಫಂಡರಪುರದಲ್ಲೀಗ ದಿಂಡಿ ಸೇವೆ; ವಿಠಲನ ಭಕ್ತರ ವಾರಕರಿ ಸಂಪ್ರದಾಯದ ಮಾಹಿತಿ ಇಲ್ಲಿದೆ

ಮಹಾರಾಷ್ಟ್ರದ ಪ್ರಮುಖ ಕ್ಷೇತ್ರ ಫಂಡರಪುರ. ಸೋಲಾಪುರದಿಂದ 80 ಕಿ.ಮಿ ದೂರದಲ್ಲಿರುವ ಚಂದ್ರಭಾಗಾ ನದಿ ತೀರದ ಐತಿಹಾಸಿಕ ಧಾರ್ಮಿಕ ತಾಣ. ಅಲ್ಲಿನ ವಿಠ್ಠೋಬ ಮಹಾರಾಜನನ್ನು ನೋಡಲು ಭಕ್ತರು ದಂಡಿಯಾಗಿಯೇ ಹೋಗುತ್ತಾರೆ. ಅದೂ ದಿಂಡಿ ಯಾತ್ರೆ ಮಾಡಿಕೊಂಡು. ಫಂಡರಪುರದಲ್ಲೇ ಇದ್ದು ಕೆಲ ದಿನ ವಿಠಲನ ಸೇವೆಯನ್ನೂ ಮಾಡಿದರೆ ವರ್ಷವಿಡೀ ಖುಷಿಯಾಗಿರುತ್ತೇವೆ ಎನ್ನುವುದು ನಂಬಿಕೆ.

ಮಹಾರಾಷ್ಟ್ರದ ಫಂಡರಪುರದಲ್ಲೀಗ ದಿಂಡಿ ಸೇವೆ ಸುಖ. ಎಲ್ಲೆಲ್ಲೂ ಭಕ್ತರ ದಂಡು.
ಮಹಾರಾಷ್ಟ್ರದ ಫಂಡರಪುರದಲ್ಲೀಗ ದಿಂಡಿ ಸೇವೆ ಸುಖ. ಎಲ್ಲೆಲ್ಲೂ ಭಕ್ತರ ದಂಡು.

ಸೋಲಾಪುರ: ಪುಂಡಲೀಕ ವರದ ಹರಿವಿಠಲ ಮತ್ತು ಜಯ ಜಯ ರಾಮಕೃಷ್ಣ ಹರಿ ಎನ್ನುವ ಉದ್ಘೋಷಗಳು ಈಗ ಪಂಢರಪುರ ಮಾತ್ರವಲ್ಲ. ಆ ಊರಿಗೆ ಸಂಪರ್ಕಿಸುವ ಎಲ್ಲಾ ಮಾರ್ಗಗಳಲ್ಲೂ ಪ್ರತಿಧ್ವನಿಸುತ್ತಿವೆ.

ಅದೂ ದೂರದ ಊರುಗಳಿಂದ ನಡೆದುಕೊಂಡೇ ವಿಠೋಬನನ್ನು ನೋಡಲು ಕಾತರದಿಂದ ಬರುವ ಭಕ್ತರ ವಿಶೇಷ ಉದ್ಘೋಷ. ಅವರಿಗೆ ವಿಠೋಬನನ್ನು ದರ್ಶನ ಮಾಡಿದ ಸಂತಸಕ್ಕೇ ಪಾರವೇ ಇರುವುದಿಲ್ಲ. ಆಗ ವಿಠ್ಠೋಬನ ಮೇಲೆ ಹಾಡುಗಳನ್ನಾ ಹೇಳುತ್ತಾ ಉದ್ಘೋಷಗಳನ್ನು ಮೊಳಗಿಸುತ್ತಾರೆ. ಇದು ಫಂಡರಪುರ ವಾರಕರಿಗಳು ಕೈಗೊಳ್ಳುವ ದಿಂಡಿ ಸೇವೆಯ ವಿಶೇಷ.

ಆಷಾಢ ಏಕಾದಶಿ ಸೇವೆ

ತೀರ್ಥಯಾತ್ರೆಯ ಮಾಸವನ್ನು ಆಷಾಢ ಏಕಾದಶಿ ಎಂದು ವ್ಯಾಖ್ಯಾನಿಸಲಾಗುತ್ತದೆ. ಆಷಾಢ ಏಕಾದಶಿಯ ಯಾತ್ರೆಯು ಭಕ್ತರಿಗೆ ಅತ್ಯಂತ ಮಹತ್ವವೂ ಹೌದು. ಈ ಏಕಾದಶಿಯನ್ನು ದೇವಶಯನಿ ಏಕಾದಶಿ ಎನ್ನುವ ಹೆಸರೂ ಇದೆ. ಈ ಸಮಯದಲ್ಲಿ ಪಂಢರಪುರದಲ್ಲಿ ಹೆಚ್ಚಿನ ಸಂಖ್ಯೆಯ ವಾರಕರಿಗಳು ಸೇರುತ್ತಾರೆ. ಈ ದಿನದಿಂದ ಚಾತುರ್ಮಾಸದ ಪುಣ್ಯಕಾಲ ಪ್ರಾರಂಭವಾಗುತ್ತದೆ. ಈ ದಿನದಿಂದ ವಿಠ್ಠಲನು ತನ್ನ ನಿದ್ರೆಯನ್ನು ಪ್ರಾರಂಭಿಸುತ್ತಾನೆ ಎಂದು ನಂಬಿಕೆ ಈಗಲೂ ಇದೆ. ಈ ಅವಧಿಯಲ್ಲಿ ಭಕ್ತರು ವಿಠ್ಠಲನನ್ನು ಆರಾಧಿಸುವುದರಲ್ಲಿ ಸಾಧ್ಯವಾದಷ್ಟು ಸಮಯವನ್ನು ಕಳೆಯುತ್ತಾರೆ.

ಲಕ್ಷಾಂತರ ಜನರ ಹೆಜ್ಜೆ

ಈ ವೇಳೆಯಂತೂ ಲಕ್ಷಾಂತರ ದಿಂಡಿಗಳು ಫಂಡರಪುರಕ್ಕೆಆಗಮಿಸುತ್ತಾರೆ. ಮಹಾರಾಷ್ಟ್ರ ಮಾತ್ರವಲ್ಲದೇ ಕರ್ನಾಟಕದಿಂದಲೂ ಬರುತ್ತಾರೆ. ಎಲ್ಲಾ ದಿಂಡಿಗಳು ವಖಾರಿ ಗ್ರಾಮದ ಸಾಂತನಗರದಲ್ಲಿ ಒಟ್ಟುಗೂಡುತ್ತಾರೆ. ಈ ಎಲ್ಲಾ ದಿಂಡಿಗಳು ಆಷಾಢ ಶುದ್ಧ ದಶಮಿಯ ದಿನದಂದು ಪರಸ್ಪರ ಭೇಟಿಯಾಗುತ್ತವೆ. ಅದೇ ದಿನದ ಸಂಜೆ ಎಲ್ಲಾ ಭಕ್ತರು ಮತ್ತು ಅವರವರ ದಿಂಡಿಗಳು ನಿಧಾನವಾಗಿ ಫಂಡರಪುರದ ಕಡೆಗೆ ಚಲಿಸುತ್ತವೆ. ಅಲ್ಲಿಗೆ ತಲುಪಿದ ನಂತರ ಅವರು ಚಂದ್ರಭಾಗ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸುವುದು ವಾಡಿಕೆ.

ದಿಂಡಿ ಸಂಪ್ರದಾಯದ ವಿಶೇಷ

ದಿಂಡಿಯ ಈ ಸಂಪ್ರದಾಯವು ಸಾಕಷ್ಟು ಹಳೆಯದು.ಏಕಾದಶಿಯ ಮಧ್ಯಾಹ್ನ ಶ್ರೀ ರಾಧಾರಾಣಿಯೊಂದಿಗೆ ವಿಠ್ಠಲ ಮತ್ತು ರುಕ್ಮಿಣಿ ದೇವರ ವಿಗ್ರಹಗಳ ಮೆರವಣಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ರಥದಲ್ಲಿ ಪ್ರಾರಂಭವಾಗುತ್ತದೆ. ಈ ಮೆರವಣಿಗೆಯು ಪ್ರದಕ್ಷಿಣಾ ಮಾರ್ಗದಲ್ಲಿ ಹೋಗುತ್ತದೆ. ಈ ಆಚರಣೆಯು ಆಷಾಢ ಶುದ್ಧ ಪೌರ್ಣಿಮಾ ದಿನದಂದು ಕೊನೆಗೊಳ್ಳುತ್ತದೆ. ಇದನ್ನು ಗೋಪಾಲಕಲಾ ಎಂದೂ ಕರೆಯುತ್ತಾರೆ. ಫಂಡರಪುರದಲ್ಲಿ ಗೋಪಾಲಪುರ ಎಂದು ಕರೆಯಲ್ಪಡುವ ಒಂದು ಸ್ಥಳವಿದೆ. ಅಲ್ಲಿ ಎಲ್ಲಾ ದಿಂಡಿಗಳು ಮತ್ತೊಮ್ಮೆ ಒಟ್ಟಿಗೆ ಸೇರಿ ದಿಂಡಿ ಸೇವೆ ಕೊನೆಗೊಳಿಸುತ್ತಾರೆ.

ವಾರಿಗಳ ಗುಂಪೇ ದಿಂಡಿ

ವಾರಿ ಎಂದರೆ ನಿರ್ದಿಷ್ಟ ಧಾರ್ಮಿಕ ಸ್ಥಳಕ್ಕೆ ನಿಯಮಿತವಾಗಿ ಭೇಟಿ ನೀಡುವುದು. ಅದೂ ನಡೆದುಕೊಂಡೇ ಹೋಗುವುದು ವಾರಿ ಸೇವೆಯ ವಿಶೇಷ. ಫಂಡರಪುರದ ವರಿ ಎಂದರೆ ಸ್ವಂತ ಮನೆಯಿಂದ ಪಂಢರಪುರಕ್ಕೆ ಭಗವಂತನಿಗೆ ನಡೆದುಕೊಂಡು ಮನೆಗೆ ಹಿಂದಿರುಗುವುದು. ಯಾತ್ರಿಕ ಪಂಢರಪುರದ ಈ ರೀತಿಯ ವಿವಿಧ ತೀರ್ಥಯಾತ್ರೆಗೆ ಹೋಗುವ ವ್ಯಕ್ತಿಯನ್ನು ವಾರಕರಿ ಸೇವೆ ಎಂದು ಕರೆಯಲಾಗುತ್ತದೆ. ಅನೇಕ ವಾರಕರಿಗಳ ಸಮೂಹವನ್ನು ಸಾಂಪ್ರದಾಯಿಕವಾಗಿ ದಿಂಡಿ ಎಂದು ಹೇಳಲಾಗುತ್ತದೆ . ಅವರು ವಿಠ್ಠಲನ ಭಕ್ತಿಯ ಭಾವನೆಯನ್ನು ವ್ಯಕ್ತಪಡಿಸಲು ಸಂಗೀತ ಮತ್ತು ನೃತ್ಯವನ್ನು ಆನಂದಿಸಲು ವಾರಿಯ ಮೇಲೆ ಹೋಗಲು ಗುಂಪು ರಚಿಸಿಕೊಂಡು ತಿಂಗಳವರೆಗೂ ನಡೆದೇ ಹೋಗುತ್ತಾರೆ

ಸಂತ ಜ್ಞಾನೇಶ್ವರರ ತಂದೆ ವಾರಿ ಯಾತ್ರೆಗೆ ಹೋಗುತ್ತಿದ್ದರು. ಹಿಂದೆಲ್ಲಾ ಹೆಚ್ಚು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರಲಿಲ್ಲ. ಜನ ಗುಂಪಾಗಿ ನಡೆದುಕೊಂಡು ಪಂಢರಪುರಕ್ಕೆ ಹೋಗುತ್ತಿದ್ದರು. ಸಂತ ಜ್ಞಾನೇಶ್ವರನ ಪಾದುಕೆಯನ್ನು ದಿಂಡಿಯೊಂದಿಗೆ ಫಂಡರಪುರಕ್ಕೆ ಕೊಂಡೊಯ್ಯುವ ಸಂಪ್ರದಾಯವೂ ಶುರುವಾಯಿತು.

ಆಷಾಢದಲ್ಲಿ ಫಂಡರಪುರಕ್ಕೆ ಜಾತಿ, ಧರ್ಮವನ್ನು ಮೀರಿ ಭಕ್ತರು ಭೇಟಿ ನೀಡುತ್ತಾರೆ. ಅದೂ ದಿಂಡೀ ಸೇವೆ ಮೂಲಕ. ಇದಕ್ಕೆ ತನ್ನದೇ ಆದ ಇತಿಹಾಸ ಹಾಗೂ ಮಹತ್ವವೂ ಇದೆ. ಫಂಡರಪುರದ ವಿಠೋಬನ ದರ್ಶನದ ಸಂತಸಕ್ಕೆ ಈ ಸೇವೆಯೇ ಮುಖ್ಯ ಮಾರ್ಗ ಎಂದು ದಿಂಡೀ ವಿಶೇಷವನ್ನು ಚಡಚಣದ ಪ್ರಾಂಶುಪಾಲ ಪ್ರೊ.ಮನೋಜ್‌ ವಿ.ಕಟಗೇರಿ ಬಿಡಿಸಿಡುತ್ತಾರೆ.

ತುಕಾರಾಂ ವಾರಕರಿ

ಸಂತ ತುಕಾರಾಂ ಕೂಡ ವಾರಕರಿಯಾಗಿದ್ದರು. ಕ್ರಿ.ಶ. 1685ರ ಸುಮಾರಿಗೆ ದಿಂಡಿಯ ಫಂಡರಪುರಕ್ಕೆ ಸಂತ ಜ್ಞಾನೇಶ್ವರ ಮತ್ತು ತುಕಾರಾಮರ ಪಾದುಕೆಯನ್ನು ಕೊಂಡೊಯ್ಯುವ ಸಂಪ್ರದಾಯವನ್ನು ಅವನ ಮಗ ಆರಂಭಿಸಿದನೆಂದು ಇತಿಹಾಸ ಹೇಳುತ್ತದೆ.ಮರಾಠಿ ಮಾಸದ ಆಷಾಢ ಶುಕ್ಲ ಏಕಾದಶಿಯಲ್ಲಿ ಇಂತಹ ಅನೇಕ ದಿಂಡಿಗಳು ಮಹಾರಾಷ್ಟ್ರದ ಪ್ರತಿಯೊಂದು ಹಳ್ಳಿ, ಪಟ್ಟಣ ಮತ್ತು ನಗರಗಳಿಂದ ಪಂಢರಪುರಕ್ಕೆ ಬರುತ್ತಾರೆ. ಇದೊಂದು ರೀತಿಯಲ್ಲಿ ಭಕ್ತಿಯ ಮಾರ್ಗ. ವಿಠೋಬನನ್ನು ಭೇಟಿ ಮಾಡಲು ಭಕ್ತರು ನಾಲ್ಕೈದು ಶತಮಾನಗಳಿಂದ ರೂಢಿಸಿಕೊಂಡು ಬಂದಿರುವ ಸಂಪ್ರದಾಯ. ಅದು ಈಗಲೂ ಜನಪ್ರಿಯವಾಗಿದೆ.

ಎಲ್ಲಿದೆ ಫಂಡರಪುರ

ಮಹಾರಾಷ್ಟ್ರದ ಪ್ರಮುಖ ತೀರ್ಥ ಕ್ಷೇತ್ರ ಫಂಡರಪುರ. ಸೋಲಾಪುರದಿಂದ 80 ಕಿ.ಮಿ ದೂರದಲ್ಲಿರುವ ಚಂದ್ರಭಾಗಾ ನದಿ ತೀರದ ಐತಿಹಾಸಿಕ ಧಾರ್ಮಿಕ ತಾಣ. ಅಲ್ಲಿನ ವಿಠೋಬ ಮಹಾರಾಜನನ್ನು ನೋಡಲು ಭಕ್ತರು ದಂಡಿಯಾಗಿಯೇ ಹೋಗುತ್ತಾರೆ. ಅದೂ ದಿಂಡಿ ಯಾತ್ರೆ ಮಾಡಿಕೊಂಡು. ಅಂದರೆ ತನ್ನೂರಿನಿಂದ ಕುಟುಂಬ, ಸ್ನೇಹಿತರು, ಬಂಧುಬಳಗದೊಡನೆ ನಡೆದುಕೊಂಡೇ ಹೋಗಿ ವಿಠಲನ ದರ್ಶನ ಮಾಡಿದರೆ ಅವರಿಗೆ ಏನೋ ಸಂತಸ. ಫಂಡರಪುರದಲ್ಲೇ ಇದ್ದು ಕೆಲ ದಿನ ವಿಠಲನ ಸೇವೆಯನ್ನೂ ಮಾಡಿಕೊಂಡು ವಾಪಾಸಾದರೆ ವರ್ಷವಿಡೀ ಖುಷಿಯಾಗಿರುತ್ತೇವೆ ಎನ್ನುವುದು ನಂಬಿಕೆ. ಅದೂ ಹಿಂದಿನ ಸಂಪ್ರದಾಯದಂತೆಯೇ ದಿಂಡಿ ಸೇವೆಯು ಈಗಲೂ ಮುಂದುವರಿದಿದೆ.

ಇದನ್ನೂ ಓದಿರಿ..

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.