ಆಕಸ್ಮಿಕವಾಗಿ ಐ ಫೋನ್ ಕೂಡ ಹುಂಡಿಗೆ ಹಾಕಿದ ಭಕ್ತ; ಅದನ್ನು ಕಾಣಿಕೆ ಎಂದ ದೇಗುಲ ಮಂಡಳಿ, ತಮಿಳುನಾಡಿನಲ್ಲಿ ಮೊಬೈಲ್ ಕಳೆದುಕೊಂಡವನ ಪರದಾಟ
ಇದೊಂದು ವಿಚಿತ್ರ ಪ್ರಕರಣ. ಭಕ್ತನೊಬ್ಬ ಹಣವನ್ನು ಹುಂಡಿಗೆ ಹಾಕುವಾಗ ಐ ಫೋನ್ ಕೂಡ ಬಿದ್ದು ಹುಂಡಿ ಸೇರಿದ್ದು, ಅದನ್ನು ವಾಪಾಸ್ ಪಡೆಯಲು ಇನ್ನಿಲ್ಲದ ಹರಸಾಹಸ ಪಡೆಯುತ್ತಿರುವ ಪ್ರಸಂಗ ತಮಿಳುನಾಡಿನಲ್ಲಿ ನಡೆದಿದೆ. ಮೊಬೈಲ್ ಆತನಿಗೆ ಸಿಕ್ಕಿತಾ ಇಲ್ಲಿದೆ ವಿವರ.
![ತಮಿಳುನಾಡು ಹುಂಡಿಗೆ ಬಿದ ಐ ಫೋನ್ ವಾಪಾಸ್ ಪಡೆಯಲು ಹರಸಾಹಸ ಪಡುತ್ತಿರುವ ಭಕ್ತ ದಿನೇಶ್. ತಮಿಳುನಾಡು ಹುಂಡಿಗೆ ಬಿದ ಐ ಫೋನ್ ವಾಪಾಸ್ ಪಡೆಯಲು ಹರಸಾಹಸ ಪಡುತ್ತಿರುವ ಭಕ್ತ ದಿನೇಶ್.](https://images.hindustantimes.com/kannada/img/2024/12/25/550x309/i_ph_1735097828191_1735097834671.png)
ಚೆನ್ನೈ: ಭಕ್ತರು ದೇಗುಲ ಹುಂಡಿಗೆ ಕಾಣಿಕೆ ರೂಪದಲ್ಲಿ ಹಣ ಹಾಕುವುದು ಸಾಮಾನ್ಯ. ಮತ್ತೆ ಕೆಲವರು ಚಿನ್ನ ಇಲ್ಲವೇ ಬೆಳ್ಳಿ ಆಭರಣಗಳನ್ನು ಹಾಕುತ್ತಾರೆ. ಕೆಲವರು ಪ್ರೀತಿ ಪಾತ್ರ ವಸ್ತುಗಳನ್ನೂ ಹಾಕಬಹುದು. ಇನ್ನು ಕೆಲವರು ದೇವರಿಗೆ ಮೊರೆ ಹೋಗಲು ಪತ್ರ ಹಾಕುವುದೂ ಉಂಟು. ಆದರೆ ಇಲ್ಲೊಬ್ಬ ಭಕ್ತ ದೇಗುಲಕ್ಕೆ ಹೋದಾಗ ಹಣ ಹಾಕಲು ಮುಂದಾದರು. ಹಣ ಹಾಕುವ ಭರದಲ್ಲಿ ಅಂಗಿ ಜೇಬಿನಲ್ಲಿದ್ದ ಭಾರೀ ಬೆಲೆ ಬಾಳುವ ಐ ಫೋನ್ ಕೂಡ ಬಿದ್ದಿತು. ಅದು ನೇರವಾಗಿ ಸೇರಿದ್ದು ದೇಗುಲದ ಹುಂಡಿಯನ್ನು. ಭಕ್ತನಿಗೆ ಏನು ಮಾಡುವುದು ಎಂಬುದು ತೋಚದಾಯಿತು. ಕೂಡಲೇ ದೇಗುಲದ ಆಡಳಿತ ಕಚೇರಿ ಸಂಪರ್ಕಿಸಿ ಮೊಬೈಲ್ ಬಿದ್ದ ವಿಷಯ ತಿಳಿಸಲಾಯಿತು. ಆದರೆ ಆಡಳಿತ ಮಂಡಳಿ ಮಾತ್ರ ಹುಂಡಿಗೆ ಬಿದ್ದಿದ್ದು ಕಾಣಿಕೆ. ಅದನ್ನು ವಾಪಾಸ್ ನೀಡಲಾಗದು ಎನ್ನುವ ಉತ್ತರ ನೀಡಿತು. ಮೊದಲ ಬಾರಿ ನಡೆದ ಇಂತಹ ಪ್ರಕರಣ ಈಗ ತಮಿಳುನಾಡಿನ ಧಾರ್ಮಿಕ ದತ್ತಿ ಹಾಗೂ ಹಿಂದೂ ದೇಗುಲಗಳ ಇಲಾಖೆ ಹಿರಿಯ ಅಧಿಕಾರಿಗಳ ಹಂತಕ್ಕೂ ತಲುಪಿದೆ ?.
ಈ ಘಟನೆ ನಡೆದಿರುವುದು ತಮಿಳುನಾಡಿನ ತಿರುಪೋರೂರಿನ ಪುರಾತನ ಅರುಲ್ಮಿಗು ಕಂದಸ್ವಾಮಿ ದೇವಸ್ಥಾನದಲ್ಲಿ. ತಮಿಳುನಾಡು ಸರ್ಕಾರದ ಧಾರ್ಮಿಕ ದತ್ತಿ ಹಾಗೂ ಹಿಂದೂ ದೇಗುಲಗಳ ಇಲಾಖೆ ವ್ಯಾಪ್ತಿಯ ದೇಗುಲವಿದು.
ಆಗಿದ್ದಾದರೂ ಏನು
ಈ ದೇಗುಲಕ್ಕೆ ದಿನೇಶ್ ಎಂಬುವ ಭಕ್ತರೊಬ್ಬರು ಕುಟುಂಬ ಸಮೇತವಾಗಿ ಬಂದಿದ್ದರು. ದೇವರ ದರ್ಶನದ ಬಳಿ ಅವರು ದೇಗುಲದ ಹುಂಡಿಗೆ ಕಾಣಿಕೆ ಹಾಕಲು ಮುಂದಾದರು. ಜೇಬಿನಲ್ಲಿದ್ದ ಹಣವನ್ನು ತೆಗೆದುಕೊಂಡು ಹುಂಡಿಗೆ ಹಾಕುವ ವೇಳೆ ಅದೇ ಜೇಬಿನಲ್ಲಿದ್ದ ಐ ಫೋನ್ ಕೂಡ ಹುಂಡಿ ಮೇಲೆ ಬಿದ್ದಿತು. ಅದನ್ನು ಹಿಡಿಯುವ ಹೊತ್ತಿಗೆ ಹುಂಡಿ ಒಳಗೆ ಮೊಬೈಲ್ ಹೋಗಿ ಆಗಿತ್ತು.
ಏಕಾಏಕಿ ಆದ ಘಟನೆಯಿಂದ ಗಲಿಬಿಲಿಗೊಂಡ ದಿನೇಶ್‌ಗೆ ಏನು ಮಾಡಬೇಕು ಎನ್ನುವುದು ತಿಳಿಯದಾಯಿತು. ಅಲ್ಲಿದ್ದವರು ನೀಡಿದ ಸಲಹೆಯಂತೆ ಕೂಡಲೇ ದಿನೇಶ್ ದೇವಸ್ಥಾನದ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಫೋನ್ ವಾಪಸ್ ನೀಡುವಂತೆ ಮನವಿ ಮಾಡಿದ್ದಾರೆ.
ದೇಗುಲ ಸಮಿತಿ ಹೇಳಿದ್ದೇನು
ಆದರೆ ದೇವಾಲಯದ ಆಡಳಿತ ಮಂಡಳಿಯು ದೇವಸ್ಥಾನದ ಸಂಪ್ರದಾಯವನ್ನು ಉಲ್ಲೇಖಿಸಿ, ಹುಂಡಿಯಲ್ಲಿ ಹಾಕುವ ಯಾವುದೇ ವಸ್ತುವನ್ನು ವಾಪಸ್ ನೀಡಲಾಗುವುದಿಲ್ಲ, ಅದೆಲ್ಲವೂ ದೇವರಿಗೆ ಸಲ್ಲುತ್ತದೆ. ಅದು ಆಕಸ್ಮಿಕವಾಗಿ ಬಿದ್ದರೂ ಹಿಂದಿರುಗಿಸಲಾಗುವುದಿಲ್ಲ ಎಂದು ಹೇಳಿದೆ.
ನಾನು ಇದನ್ನು ಕಾಣಿಕೆ ರೂಪದಲ್ಲಿ ಹಾಕಿಲ್ಲ. ಬದಲಿಗೆ ಆಕಸ್ಮಿಕವಾಗಿ ಬಿದ್ದಿದೆ ಎಂದು ದಿನೇಶ್ ಪರಿಪರಿಯಾಗಿ ಬೇಡಿಕೊಂಡರು ದೇಗುಲದವರು ಒಪ್ಪಿಲ್ಲ. ಅಲ್ಲದೇ ದೇಗುಲದ ಹುಂಡಿಯನ್ನು ಈಗಲೇ ತೆಗೆಯುವುದು ಆಗುವುದಿಲ್ಲ. ಎರಡು ತಿಂಗಳಿಗೊಮ್ಮೆ ಹುಂಡಿ ತೆಗೆಯುವ ಪದ್ದತಿ ನಮ್ಮಲ್ಲಿದೆ. ಇದರಿಂದ ಮುಂದೆ ಹುಂಡಿ ತೆಗೆದಾಗ ಮೊಬೈಲ್ ಸಿಮ್ ಮಾತ್ರ ಕೊಡಲಾಗುತ್ತದೆ. ಆಗ ಬನ್ನಿ ಎನ್ನುವ ಉತ್ತರವನ್ನು ದೇಗುಲದವರು ನೀಡಿದ್ದರು. ಆದರೆ ದಿನೇಶ್ ನಿರಂತರ ಮನವಿ ನಂತರ ಹುಂಡಿ ತೆಗೆದಾಗ ಅಲ್ಲಿ ಐ ಫೋನ್ ಬಿದ್ದಿರುವುದು ಕಂಡು ಬಂದಿತು.
ಮೇಲಾಧಿಕಾರಿಗಳಿಗೆ ಮನವಿ
ಆದರೆ ದೇಗುಲ ಮಂಡಳಿಯವರು ಯಾವುದೇ ಕಾರಣಕ್ಕೂ ಇದನ್ನು ವಾಪಾಸ್ ನೀಡಲು ಆಗುವುದಿಲ್ಲ. ಸಿಮ್ ಬೇಕಾದರೆ ತೆಗೆದುಕೊಳ್ಳಿ. ದೇವಸ್ಥಾನದ ಹುಂಡಿಗೆ ಬಂದ ಯಾವುದೇ ವಸ್ತುವನ್ನು ಹೀಗೆ ವಾಪಾಸ್ ನೀಡಲು ದೇಗುಲದ ಸಂಪ್ರದಾಯ ಹಾಗೂ ಇಲಾಖೆ ಕಾನೂನಿನಂತೆ ಅವಕಾಶವಿಲ್ಲ. ಈ ಕುರಿತ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಎನ್ನುವ ಸಲಹೆಯನ್ನು ನೀಡಲಾಯಿತು.
ಬಳಿಕ ಅವರು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಅಲ್ಲಿಂದಲೂ ಬಂದಿದ್ದು ಇದೇ ಉತ್ತರ. ಈ ರೀತಿ ತಮಿಳುನಾಡಿನ ದೇಗುಲಗಳ ಹುಂಡಿಗೆ ಬೇರೆ ಬೇರೆ ವಸ್ತುಗಳು ಬಿದ್ದಾಗಲೂ ಹಿಂದುರಿಗಿಸಿಲ್ಲ. ಮೊಬೈಲ್ ಬಿದ್ದಿರುವುದು ಮೊದಲೇ ಪ್ರಕರಣವಾದರೂ ಇದು ಕೂಡ ಅದೇ ವ್ಯಾಪ್ತಿಗೆ ಬರಲಿದೆ ಎನ್ನುವ ಉತ್ತರವನ್ನು ಅಧಿಕಾರಿಗಳು ನೀಡಿದ್ದಾರೆ.
ಸಚಿವರ ಪ್ರತಿಕ್ರಿಯೆ
ತಮಿಳುನಾಡಿನ ದೇವಸ್ಥಾನದ ಆಡಳಿತವನ್ನು ನೋಡಿಕೊಳ್ಳುವ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಈಗ ಈ ವಿಷಯವನ್ನು ಚರ್ಚಿಸುತ್ತಿದೆ. ಸಚಿವ ಪಿ.ಕೆ.ಶೇಖರ್ ಬಾಬು ಪ್ರತಿಕ್ರಿಯಿಸಿ, ಸಾಂಪ್ರದಾಯಿಕವಾಗಿ, ದೇವಸ್ಥಾನದ ಹುಂಡಿಗೆ ಬೀಳುವ ಯಾವುದನ್ನಾದರೂ ದೇವತೆಯ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಈ ಸಂದರ್ಭದಲ್ಲಿ ವಿನಾಯಿತಿಗಳನ್ನು ಮಾಡಬಹುದೇ ಎಂದು ನಿರ್ಧರಿಸಲು ನಾವು ಕಾನೂನು ಮಾರ್ಗಗಳನ್ನು ಹುಡುಕುತ್ತಿದ್ದೇವೆ. ಈ ಸಂಬಂಧ ನಿಯಮಗಳ ಅಡಿಯಲ್ಲಿಯೇ ಏನು ಮಾಡಬಹುದು ಎನ್ನುವ ಕುರಿತ ಚರ್ಚಿಸಲು ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆಕಸ್ಮಿಕವಾಗಿ ಹೀಗೆ ಬೆಲೆಬಾಳುವ ವಸ್ತು ಬಿದ್ದಾಗ ಏನು ಮಾಡಬಹುದು ಎನ್ನುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಹುಂಡಿಗೆ ಮೊಬೈಲ್ ಬಿದ್ದು ಐದು ದಿನದ ನಂತರವೂ ಯಾವುದೇ ತೀರ್ಮಾನವಾಗಿಲ್ಲ. ಮೊಬೈಲ್ ಇಲಾಖೆ ಅಧಿಕಾರಿಗಳ ಬಳಿ ಇದ್ದು, ಭಕ್ತ ದಿನೇಶ್ ಮಾತ್ರ ಮೊಬೈಲ್ ಸಿಗಬಹುದು ಎಂದು ಕಾಯುತ್ತಿದ್ದಾರೆ.
ಇದು ಸಾಮಾಜಿಕ ಮಾಧ್ಯಮಗಳಲ್ಲೂ ವೈರಲ್ ಆಗಿದೆ. ಹಲವರು ಇಲಾಖೆಯ ಅಧಿಕಾರಿಗಳ ನಡೆಯನ್ನು ವಿರೋಧಿಸಿದ್ದಾರೆ. ಆಕಸ್ಮಿಕವಾಗಿ ಬಿದ್ದಿದೆ ಎಂದ ಮೇಲೆ ವಾಪಾಸ್ ನೀಡುವುದು ಒಳ್ಳೆಯದು. ಹುಂಡಿಯಲ್ಲಿ ಬಾಂಬ್ ಬಿದ್ದರೆ ಏನು ಮಾಡುತ್ತಾರೆ, ಅದಕ್ಕೂ ಹುಂಡಿ ತೆಗೆಯುವವರೆಗೂ ಕಾಯುತ್ತಾರಾ ಎಂದು ವ್ಯಂಗ್ಯವಾಡಿದ್ದಾರೆ.
![Whats_app_banner Whats_app_banner](https://kannada.hindustantimes.com/static-content/1y/wBanner.png)