Kannada News  /  Nation And-world  /  Devotee Registration: Devotees Will Not Get Entry Without Registration In Kedarnath Badrinath Dham, Process Starting From February 21
ಕೇದಾರನಾಥ -ಬದರಿನಾಥ ಪ್ರವೇಶಕ್ಕೂ ಭಕ್ತರ ನೋಂದಣಿ ಕಡ್ಡಾಯ ಮಾಡಿದೆ ಸರ್ಕಾರ.
ಕೇದಾರನಾಥ -ಬದರಿನಾಥ ಪ್ರವೇಶಕ್ಕೂ ಭಕ್ತರ ನೋಂದಣಿ ಕಡ್ಡಾಯ ಮಾಡಿದೆ ಸರ್ಕಾರ. (Livehindustan)

Devotee registration: ಕೇದಾರನಾಥ- ಬದರಿನಾಥಕ್ಕೆ ಹೋಗುವ ಪ್ಲಾನ್‌ ಏನಾದರೂ ಇದೆಯಾ? ನೋಂದಣಿ ಮಾಡಿಸ್ಕೊಂಡೇ ಹೋಗಿ, ಇಲ್ಲಿದೆ ಆ ವಿವರ

21 February 2023, 6:42 ISTHT Kannada Desk
21 February 2023, 6:42 IST

Devotee registration: ಕೇದಾರನಾಥ- ಬದರಿನಾಥಕ್ಕೆ ಹೋಗುವ ಪ್ಲಾನ್‌ ಏನಾದರೂ ಇದೆಯಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ.. ಕೇದಾರನಾಥ- ಬದರಿನಾಥ ದರ್ಶಕರ ನೋಂದಣಿ ಇಂದಿನಿಂದ ಶುರುವಾಗುತ್ತಿದೆ. ನೋಂದಣಿ ಮಾಡಿಸಿಕೊಳ್ಳದೆ ಇದ್ದರೆ ಅಲ್ಲಿಗೆ ಹೋಗುವುದಕ್ಕೆ ಅವಕಾಶ ಸಿಗಲ್ಲ. ನೋಂದಣಿ ಮಾಡಿಸುವುದು ಹೇಗೆ? ಯಾರನ್ನು ಸಂಪರ್ಕಿಸಬೇಕು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಉತ್ತರಾಖಂಡದ ಪ್ರಸಿದ್ಧ ಹಿಂದುಗಳ ಶ್ರದ್ಧಾಕೇಂದ್ರಗಳಾಗಿರುವ ಕೇದಾರನಾಥ-ಬದರಿನಾಥ ಧಾಮಗಳಿಗೆ ನೋಂದಣಿ ಮಾಡಿಸಿಕೊಳ್ಳದೆ ಪ್ರವೇಶ ಪಡೆಯವುದು ಇನ್ನು ಕಷ್ಟ ಸಾಧ್ಯ. ಈ ದೇಗುಲಗಳನ್ನು ದರ್ಶಿಸುವ ಭಕ್ತರು ನೋಂದಣಿ ಮಾಡಿಸುವುದು ಕಡ್ಡಾಯ ಎಂದಿದೆ ಅಲ್ಲಿನ ಸರ್ಕಾರ. ಭಕ್ತರ ನೋಂದಣಿ ಪ್ರಕ್ರಿಯೆ ಇಂದು ಅಂದರೆ ಫೆಬ್ರವರಿ 21ರಿಂದ ಶುರುವಾಗುತ್ತಿದೆ.

ಕೇದಾರನಾಥ ಮತ್ತು ಬದರಿನಾಥ ಧಾಮಕ್ಕೆ ಭಕ್ತರ ನೋಂದಣಿ ಪ್ರಕ್ರಿಯೆ ಫೆಬ್ರವರಿ 21 ಮಂಗಳವಾರದಿಂದ ಆರಂಭವಾಗಲಿದೆ. ಬೆಳಗ್ಗೆ ಏಳು ಗಂಟೆಯಿಂದ ವೆಬ್‌ಸೈಟ್, ಟೋಲ್ ಫ್ರೀ ಸಂಖ್ಯೆ, ವಾಟ್ಸಾಪ್ ಸಂಖ್ಯೆಗಳಲ್ಲಿ ನೋಂದಣಿ ಪ್ರಾರಂಭವಾಗುತ್ತದೆ.

ಕೇದಾರನಾಥ ಮತ್ತು ಬದರಿನಾಥ ಧಾಮಕ್ಕೆ ಭಕ್ತರ ನೋಂದಣಿ ಪ್ರಕ್ರಿಯೆಯನ್ನು ಸರಾಗಗೊಳಿಸುವುದಕ್ಕೆ ಪ್ರವಾಸೋದ್ಯಮ ಇಲಾಖೆಯು, ವೆಬ್ ಸೈಟ್, ಟೋಲ್ ಫ್ರೀ ನಂಬರ್, ವಾಟ್ಸ್ ಆ್ಯಪ್ ನಂಬರ್ ಮತ್ತು ಮೊಬೈಲ್‌ ಆ್ಯಪ್‌ ಎಂಬ ನಾಲ್ಕು ಆಯ್ಕೆಯನ್ನು ಒದಗಿಸಿದೆ. ಬೆಳಗ್ಗೆ ಏಳು ಗಂಟೆಯಿಂದ ನೋಂದಣಿ ಆರಂಭವಾಗಲಿದೆ.

ಧಾರ್ಮಿಕ ಶ್ರದ್ಧಾಳುಗಳು ನೋಂದಣಿ ಮಾಡಿಸಿಕೊಳ್ಳಲು ಪ್ರವಾಸೋದ್ಯಮ ಇಲಾಖೆ ಸಿದ್ಧಪಡಿಸಿರುವ ವೆಬ್‌ಸೈಟ್‌ ವಿಳಾಸ ಹೀಗಿದೆ - registerandtouristcare.uk.gov.in

ವಾಟ್ಸಾಪ್ ಸಂಖ್ಯೆ - 8394833833

ಟೋಲ್ ಫ್ರೀ ಸಂಖ್ಯೆ - 01351364

ಇದಲ್ಲದೆ ಗೂಗಲ್‌ ಪ್ಲೇಸ್ಟೋರ್‌ಗೆ ಹೋದರೆ ಅಲ್ಲಿ ʻTourist Care Uttarakhandʼ ಎಂಬ ಆಂಡ್ರಾಯ್ಡ್‌ ಅಪ್ಲಿಕೇಶನ್‌ ಲಭ್ಯವಿದೆ. ಡೌನ್‌ಲೋಡ್‌ ಮಾಡಿಕೊಳ್ಳಲು ನೇರ ಲಿಂಕ್‌ ಇಲ್ಲಿದೆ - Tourist Care Uttarakhand

ಇದೇ ರೀತಿ ಆಪಲ್‌ ಸ್ಟೋರ್‌ಗೆ ಹೋದರೆ ಅಲ್ಲಿ ಕೂಡ ʻTourist Care Uttarakhandʼ ಎಂಬ ಅಪ್ಲಿಕೇಶನ್‌ ಲಭ್ಯವಿದೆ. ಡೌನ್‌ಲೋಡ್‌ ಮಾಡಿಕೊಳ್ಳಲು ನೇರಲಿಂಕ್‌ ಇಲ್ಲಿದೆ- Tourist Care Uttarakhand

ಈ ಮೇಲೆ ಸೂಚಿಸಿದ ವಿಧಾನಗಳನ್ನು ಅನುಸರಿಸಿಕೊಂಡು ನೋಂದಣಿ ಪ್ರಕ್ರಿಯೆಯನ್ನು ಪೂರೈಸಿಕೊಳ್ಳಬಹುದು.

ಇದೀಗ ಮೊದಲ ಹಂತದಲ್ಲಿ ಕೇದಾರನಾಥ ಮತ್ತು ಬದರಿನಾಥ ಧಾಮಕ್ಕೆ ಮಾತ್ರ ನೋಂದಣಿ ನಡೆಯಲಿದೆ.

ನವರಾತ್ರಿಯ ಮೊದಲ ದಿನದಂದು ಗಂಗೋತ್ರಿ ಮತ್ತು ಯಮುನೋತ್ರಿ ಧಾಮದ ಬಾಗಿಲು ತೆರೆಯುವ ಸಮಯವನ್ನು ನಿಗದಿಪಡಿಸಿದ ತಕ್ಷಣ, ಎಲ್ಲಾ ನಾಲ್ಕು ಧಾಮಗಳಿಗೆ ಪೂರ್ಣ ಸಂಖ್ಯೆಯ ನೋಂದಣಿಗಳು ಆರಂಭವಾಗಲಿದೆ. ಅಲ್ಲಿಯವರೆಗೆ ಪ್ರತಿದಿನ ಒಂಬತ್ತು ಸಾವಿರ ಭಕ್ತರು ಕೇದಾರನಾಥ ಧಾಮದಲ್ಲಿ ಮತ್ತು 10 ಸಾವಿರ ಭಕ್ತರು ಬದರಿನಾಥ ಧಾಮದಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.

ಬದರಿನಾಥ ಧಾಮದಲ್ಲಿ 18 ಸಾವಿರ, ಕೇದಾರನಾಥ ಧಾಮದಲ್ಲಿ 15 ಸಾವಿರ, ಗಂಗೋತ್ರಿಯಲ್ಲಿ 9 ಸಾವಿರ ಮತ್ತು ಯಮುನೋತ್ರಿ ಧಾಮಕ್ಕೆ, 5500 ಭಕ್ತರು ದರ್ಶನದ ಪ್ರಕಾರ ಪ್ರತಿದಿನ ನೋಂದಾಯಿಸಲು ಸಾಧ್ಯವಾಗುತ್ತದೆ.

ಚಾರ್ ಧಾಮ್ ಯಾತ್ರೆಗೆ ಆನ್‌ಲೈನ್ ನೋಂದಣಿ ಮುಗಿದಿದೆ.

ಚಾರ್ ಧಾಮ್ ಯಾತ್ರೆಗೆ ಕಡ್ಡಾಯವಾಗಿ ನೋಂದಣಿಗೆ ವ್ಯವಸ್ಥೆ ಮಾಡಿದರು. ಅದನ್ನು ರದ್ದುಪಡಿಸುವಂತೆ ಚಾರ್ ಧಾಮ್‌ನಲ್ಲಿರುವ ಹೋಟೆಲ್ ಅಸೋಸಿಯೇಷನ್ ​​ಪ್ರತಿನಿಧಿಗಳು ಆಗ್ರಹಿಸಿದರು. ದೇಗುಲಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯ ಮೇಲಿನ ನಿರ್ಬಂಧವನ್ನೂ ಅವರು ವಿರೋಧಿಸಿದರು.

ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ನಿವಾಸದಲ್ಲಿ ಸೋಮವಾರ ಸಂಜೆ ನಡೆದ ಸಭೆಯಲ್ಲಿ ಹೊಟೇಲ್ ಉದ್ಯಮಿಗಳು ಚಾರ್‌ ಧಾಮ ಯಾತ್ರೆಗೆ ಕಡ್ಡಾಯ ಆನ್‌ಲೈನ್‌ ನೋಂದಣಿ ನಿಲ್ಲಿಸಬೇಕು. ಯಾತ್ರಾರ್ಥಿಗಳ ಸಂಖ್ಯೆ ಮೇಲಿನ ಮಿತಿಯನ್ನೂ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಆನ್‌ಲೈನ್ ನೋಂದಣಿಯೊಂದಿಗೆ ಆಫ್‌ಲೈನ್ ನೋಂದಣಿಯನ್ನು ಸಹ ಮೊದಲಿನಂತೆ ಶುರುಮಾಡಬೇಕು ಎಂದು ಬೇಡಿಕೆ ಇರಿಸಿದ್ದರು.

ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು ಈ ದಿನ ಚಾರ್‌ ಧಾಮ್‌ ಯಾತ್ರೆಗೆ ಸಂಬಂಧಿಸಿದ ಸಿದ್ಧತೆಗಳ ಪರಿಶೀಲನೆ ನಡೆಸಲಿದ್ದಾರೆ. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಆಡಳಿತಕ್ಕೆ ಸೂಚನೆಕೊಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಹೆಚ್ಚಿನ ಮಾಹಿತಿಗೆ - ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆಯು ಸಹಾಯವಾಣಿ ಸಂಖ್ಯೆಗಳು : 0135 - 2559898, 2552627, 0135 - 3520100