ಸೈಬರ್ ವಂಚಕರ ಬಲೆಗೆ ಬಿದ್ದು ಡಿಜಿಟಲ್ ಅರೆಸ್ಟ್ ಆಗಿದ್ರು ನಿವೃತ್ತ ಟೀಚರ್; 79 ಲಕ್ಷ ರೂ ವರ್ಗಾವಣೆ ತಡೆದರು ಎಸ್‌ಬಿಐ ಮ್ಯಾನೇಜರ್
Digital Arrest Scam: ದೆಹಲಿಯಲ್ಲಿ ಸೈಬರ್ ವಂಚಕರ ಬಲೆಗೆ ಬಿದ್ದು ನಿವೃತ್ತ ಶಿಕ್ಷಕಿಯೊಬ್ಬರು ಅರೆಸ್ಟ್ ಆಗಿದ್ರು. ಅವರು ಹೇಳಿದಂತೆ ಕೇಳಿ, ಹಣ ವರ್ಗಾವಣೆ ಮಾಡುವುದಕ್ಕಾಗಿ ಎಸ್‌ಬಿಐಗೆ ಹೋಗಿದ್ದರು. ನಿವೃತ್ತ ಶಿಕ್ಷಕಿಯ ವರ್ತನೆ ಕಂಡು ಜಾಗೃತರಾದ ಎಸ್‌ಬಿಐ ಮ್ಯಾನೇಜರ್, ಸೈಬರ್ ವಂಚಕರ ಖಾತೆಗೆ 79 ಲಕ್ಷ ರೂ ವರ್ಗಾವಣೆ ತಡೆದರು. ಜಾಗೃತಿಗಾಗಿ ಇಲ್ಲಿದೆ ಆ ವಿವರ.

Digital Arrest Scam: ಭಾರತದಲ್ಲಿ 2024ರ ಜನವರಿ 1 ರಿಂದ ನವೆಂಬರ್ 15ರ ನಡುವೆ 92,323 ಡಿಜಿಟಲ್ ಅರೆಸ್ಟ್ ಪ್ರಕರಣ ದಾಖಲಾಗಿದ್ದು, ಇದರಲ್ಲಿ 2,140.99 ಕೋಟಿ ರೂಪಾಯಿ ವಂಚಕರ ಪಾಲಾಗಿದೆ. ಇಂತಹ ಕಳವಳಕಾರಿ ಸನ್ನಿವೇಶದಲ್ಲಿ ಬ್ಯಾಂಕ್ ಮ್ಯಾನೇಜರ್ ಒಬ್ಬರು ಜಾಗೃತರಾದ ಕಾರಣ ನಿವೃತ್ತ ಶಿಕ್ಷಕಿಯೊಬ್ಬರು 79 ಲಕ್ಷ ರೂಪಾಯಿ ಕಳೆದುಕೊಳ್ಳುವುದನ್ನು ತಪ್ಪಿಸಿದರು. ಹೌದು, ಕೇಂದ್ರ ದೆಹಲಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ದ ಮ್ಯಾನೇಜರ್ ಒಬ್ಬರು 68 ವರ್ಷದ ನಿವೃತ್ತ ಶಿಕ್ಷಕಿ ಡಿಜಿಟಲ್ ಅರೆಸ್ಟ್ ಆಗದಂತೆ ತಡೆದರು. ಮ್ಯಾನೇಜರ್ ಜಾಗೃತರಾದ ಕಾರಣ ಸಂತ್ರಸ್ತ ಮಹಿಳೆಗೆ ಸೇರಿದ 79 ಲಕ್ಷ ರೂಪಾಯಿ ವರ್ಗಾವಣೆ ಮಾಡಿಸಿಕೊಳ್ಳುವುದು ವಂಚಕರಿಗೆ ಸಾಧ್ಯವಾಗಿಲ್ಲ ಎಂಬ ಅಂಶ ಈಗ ಗಮನಸೆಳೆದಿದೆ.
ಸೈಬರ್ ವಂಚಕರ ಬಲೆಗೆ ಬಿದ್ದು ಡಿಜಿಟಲ್ ಅರೆಸ್ಟ್ ಆಗಿದ್ರು ನಿವೃತ್ತ ಟೀಚರ್; ಆ ಕರೆ ಹೀಗಿತ್ತು
ವೈಯಕ್ತಿಕ ಮಾಹಿತಿ ಸಂಗ್ರಹಿಸಿಕೊಳ್ಳುವ ಸೈಬರ್ ವಂಚಕರು ನಿರೀಕ್ಷಿತ ಸಂತ್ರಸ್ತರಿಗೆ ಫೋನ್/ ವಿಡಿಯೋ ಕರೆ ಮಾಡಿ, ತಾವು ವಿವಿಧ ಕಾನೂನು ಜಾರಿ ಸಂಸ್ಥೆಗಳ ಅಂದರೆ ಸಿಬಿಐ, ಪೊಲೀಸ್, ಕಸ್ಟಮ್ಸ್ ಇತ್ಯಾದಿ ಅಧಿಕಾರಿಗಳಂತೆ ಬಿಂಬಿಸಿಕೊಳ್ಳುತ್ತಾರೆ. ಭಯದ ವಾತಾವರಣ ಸೃಷ್ಟಿಸಿ, ಹಣ ದೋಚುವುದನ್ನೇ ಕೆಲಸ ಮಾಡಿಕೊಂಡಿದ್ದಾರೆ. ಇದೇ ರೀತಿ, ಸನ್ನಿವೇಶವನ್ನು ದೆಹಲಿಯ ನಿವೃತ್ತ ಶಿಕ್ಷಕಿ ಎದುರಿಸಿದ್ದ ವಿಚಾರವನ್ನು ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಜಾಗೃತಿ ಮೂಡಿಸುವ ಸಲುವಾಗಿ ಬಹಿರಂಗಪಡಿಸಿರುವುದಾಗಿ ದ ಹಿಂದೂ ವರದಿ ಮಾಡಿದೆ.
ಅಂದು ಡಿಸೆಂಬರ್ 21. ನಿವೃತ್ತ ಶಿಕ್ಷಕಿಗೆ ಒಂದು ಫೋನ್ ಕರೆ ಬಂತು. ಕೆನರಾ ಬ್ಯಾಂಕ್‌ನ 300 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ನಿಮ್ಮ ಹೆಸರಿದೆ. ಅದನ್ನು ತೆಗೆದುಹಾಕಬೇಕಾದರೆ ನೀವು ಪೊಲೀಸರ ತನಿಖೆಗೆ ಸಹಕರಿಸಬೇಕು ಎಂದು ಫೋನ್ ಕರೆ ಮೂಲಕ ಹೇಳಲಾಗಿತ್ತು. ಕೆಲವೇ ನಿಮಿಷಗಳಲ್ಲಿ ವಾಟ್ಸ್‌ಆಪ್ ವಿಡಿಯೋ ಕರೆ ಬಂತು. ಆ ಕರೆಯಲ್ಲಿ ದೆಹಲಿ ಪೊಲೀಸ್ ಎಂಬ ನಾಮಫಲಕದ ಹಿನ್ನೆಲೆ ಇತ್ತು.
ನಿಮ್ಮನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ನೀವು ನಿಮ್ಮ ಹೆಸರಿನಲ್ಲಿರುವ ಎಲ್ಲ ಬ್ಯಾಂಕ್ ಖಾತೆಗಳ ವಿವರವನ್ನು ಬಹಿರಂಗಪಡಿಸಬೇಕು. ಆ ಹಣ ನಿಮ್ಮ ಖಾತೆಗೆ ಬಂದ ರೀತಿಯನ್ನು ಪರಿಶೀಲಿಸಬೇಕು. ಎಲ್ಲವೂ ಕಾನೂನುಬದ್ಧವಾಗಿರುವ ಹಣವೇ ಎಂಬುದನ್ನು ಖಾತರಿಪಡಿಸಬೇಕು. ಅದಕ್ಕಾಗಿ ಆ ಹಣವನ್ನು ವರ್ಗಾವಣೆ ಮಾಡಬೇಕು. ತನಿಖೆ ಮುಗಿದ ಕೂಡಲೇ ಶೇಕಡ 4ರ ಬಡ್ಡಿದರದೊಂದಿಗೆ ಅದನ್ನು ಸದರಿ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಆ ವಂಚಕರು ವಿಡಿಯೋ ಕರೆಯಲ್ಲಿ ಭರವಸೆ ನೀಡಿದರು. ಡೆಪಾಸಿಟ್ ಹಣವನ್ನೂ ವರ್ಗಾಯಿಸಬೇಕು ಎಂದು ತಾಕೀತು ಮಾಡಿದ್ದರು ವಂಚಕರು. ಹೀಗಾಗಿ ನಿವೃತ್ತ ಶಿಕ್ಷಕಿ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕಾಯಿತು.
79 ಲಕ್ಷ ರೂ ವರ್ಗಾವಣೆ ತಡೆದರು ಎಸ್‌ಬಿಐ ಮ್ಯಾನೇಜರ್; ಅವರು ಜಾಗೃತರಾದ್ದು ಹೀಗೆ..
ಅಂದು ಡಿಸೆಂಬರ್ 24. ನಿವೃತ್ತ ಟೀಚರ್ ಎಸ್‌ಬಿಐ ಬ್ಯಾಂಕ್ ಶಾಖೆಗೆ ಭೇಟಿ ನೀಡಿದರು. 20 ಲಕ್ಷ ರೂಪಾಯಿ ಹಣವನ್ನು ಗುಜರಾತ್‌ನಲ್ಲಿರುವ ಖಾತೆಯೊಂದಕ್ಕೆ ವರ್ಗಾವಣೆ ಮಾಡಬೇಕು ಎಂದು ಬ್ಯಾಂಕ್ ಮ್ಯಾನೇಜರ್ ಬಳಿ ವಿನಂತಿಸಿದರು. ನಿವೃತ್ತ ಶಿಕ್ಷಕಿಯ ವರ್ತನೆ ಎಂದಿನಂತೆ ಇಲ್ಲ ಎಂಬುದನ್ನು ಮ್ಯಾನೇಜರ್ ಗಮನಿಸಿದರು ಎಂದು ವರದಿ ವಿವರಿಸಿದೆ.
ನಿವೃತ್ತ ಶಿಕ್ಷಕಿ ಬಹುಕಾಲದ ಗ್ರಾಹಕರಾಗಿದ್ದು, ಒಂದು ಸಣ್ಣ ಮೊತ್ತ ಕಡಿತವಾದರೂ ಅದನ್ನು ಕೇಳಿ ಖಚಿತ ಪಡಿಸಿಕೊಳ್ಳುವ ಪ್ರವೃತ್ತಿಯವರು. ಡಿಸೆಂಬರ್ 24 ರಂದು ಬ್ಯಾಂಕ್ ಶಾಖೆಗೆ ಬಂದಾಗ, ಪದೇಪದೆ ನೀರು ಕುಡಿಯುತ್ತಿದ್ದರು. ಸೀನಿಯರ್ ಸಿಟಿಜೆನ್ಸ್ ಸೇವಿಂಗ್ಸ್ ಸರ್ಟಿಫಿಕೇಟ್ ಅನ್ನು ನಗದೀಕರಿಸುತ್ತಿರುವುದೇಕೆ? ಏನಾದರೂ ಸಮಸ್ಯೆ ಆಯಿತಾ ಎಂದು ವಿಚಾರಿಸಿದೆ. ಸಿಟ್ಟಿಗೆದ್ದ ನಿವೃತ್ತ ಶಿಕ್ಷಕಿ, ನಿಮ್ಮ ಕೆಲಸ ನೋಡಿ ಎಂದು ಹೇಳಿದರು. ಅವರು ಬೆವೆತಿದ್ದರು. ಅವರ ಶರೀರ ನಡುಗುತ್ತಿತ್ತು. ಪದೇಪದೆ ಫೋನ್ ನೋಡ್ತಾ ಇದ್ರು. ಬ್ಯಾಂಕ್ ಒಳಗೆ ನೆಟ್ ವರ್ಕ್ ಸಮಸ್ಯೆ ಇರುವ ಕಾರಣ ಹೊರಗೆ ಹೋಗಿ ಮಾತನಾಡುತ್ತಿದ್ದರು, ವಾಪಸ್ ಬರುತ್ತಿದ್ದರು. ಹೀಗೆ ಕೆಲವು ಸಲ ಮಾಡಿದರು.
ಆ ಖಾತೆಯಲ್ಲಿ 20 ಲಕ್ಷ ರೂಪಾಯಿಗೆ 1000 ರೂಪಾಯಿ ಕಡಿಮೆ ಇತ್ತು. ಆಕೆ, 1000 ರೂಪಾಯಿ ಸೇರಿಸಿ ಗುಜರಾತ್‌ನ ಬ್ಯಾಂಕ್ ಖಾತೆಗೆ ವರ್ಗಾಯಿಸುವಂತೆ ವಿನಂತಿಸಿದರು. ಇದ್ದ ಹಣವನ್ನು ಗುಜರಾತ್ ಬ್ಯಾಂಕ್‌ನ ಖಾತೆಗೆ ವರ್ಗಾಯಿಸಿದರೂ, ಅದನ್ನು ತಡೆಹಿಡಿದಿಡುವಂತೆ ಮಾಡಿದೆ. ಮಹಿಳೆಯ ಫೋಟೋ ಒಂದು ದಾಖಲೆಗಾಗಿ ತೆಗೆದಿಟ್ಟುಕೊಳ್ಳುವುದಾಗಿ ಹೇಳಿದೆ. ಆದರೆ ಆಕೆ ನಿರಾಕರಿಸಿ ಹೋದರು ಎಂದು ಬ್ಯಾಂಕ್ ಮ್ಯಾನೇಜರ್ ವಿವರಿಸಿದ್ದಾಗಿ ವರದಿ ಹೇಳಿದೆ.
ಬಹಳ ಸಲ ವಿಚಾರಿಸಿದ ಬಳಿಕ ಗುಜರಾತ್‌ನಲ್ಲಿ ಆಸ್ತಿ ಖರೀದಿಸುತ್ತಿದ್ದು, ಅದಕ್ಕೆ ಈ ಹಣ ವರ್ಗಾವಣೆ ಮಾಡುತ್ತಿರುವುದಾಗಿ ಹೇಳಿದ್ದರು ಆ ನಿವೃತ್ತ ಶಿಕ್ಷಕಿ. ವಂಚಕರಲ್ಲೊಬ್ಬ ಅವರ ಬಾಮೈದನಂತೆ ನಟಿಸಿದ್ದ.
ಡಿಸೆಂಬರ್ 27ರಂದು ನಿವೃತ್ತ ಶಿಕ್ಷಕಿ ಮತ್ತೆ ಬ್ಯಾಂಕಿಗೆ ಬಂದರು. ಈ ಸಲ ಮೊದಲೇ ಸಿಬ್ಬಂದಿಯನ್ನು ಎಚ್ಚರಿಸಿದ ಕಾರಣ ಅವರು ಯಾರೂ ಚೆಕ್ ಮೂವ್ ಮಾಡಲಿಲ್ಲ. ಹೀಗಾಗಿ ನಿವೃತ್ತ ಶಿಕ್ಷಕಿ ಸೀದಾ ನನ್ನ ಕ್ಯಾಬಿನ್‌ಗೆ ಬಂದರು. ಅದು ಇನ್ನೊಂದು ಸರ್ಟಿಫಿಕೇಟ್. 30 ಲಕ್ಷ ರೂಪಾಯಿಯದ್ದು. ಅದೇ ರೀತಿ ಮ್ಯೂಚುವಲ್ ಫಂಡ್‌ನಲ್ಲಿದ್ದ 30 ಲಕ್ಷ ರೂಪಾಯಿಯನ್ನು ನಗದೀಕರಿಸಲು ಮುಂದಾಗಿದ್ದರು. ಈ ಬಾರಿ ಮನೆಯಿಂದ ಜತೆಗೆ ಯಾರಾನ್ನಾದರೂ ಕರೆದುಕೊಂಡು ಬನ್ನಿ ಎಂದು ವಿನಂತಿಸಿದೆ. ಆದರೆ, ಆಕೆ ಅದನ್ನು ನಿರೀಕ್ಷಿಸಿರಲಿಲ್ಲ. ಪ್ರತಿರೋಧ ತೋರಿಸಿದರು. ಬಳಿಕ ಹೊರಗೆ ಹೋಗಿ ಯಾರೊಂದಿಗೂ ಜೋರಾಗಿ ಕೂಗಿ ಬೇಡಿಕೊಳ್ಳುತ್ತಿರುವ ದೃಶ್ಯ ಸಿಸಿ ಕ್ಯಾಮೆರಾ ಮೂಲಕ ವೀಕ್ಷಿಸಿದೆ. ಕೂಡಲೇ ಹೋಗಿ, ಆಕೆಯ ಬಳಿ ಫೋನ್ ತಗೊಂಡು ಯಾರು ಎಂದು ವಿಚಾರಿಸಿದೆ. ತಾನು ಆಕೆಯ ಬಾಮೈದ ಎಂದು ಹೇಳಿದ. ಕೂಡಲೇ ಶಿಕ್ಷಕಿಯ ಸಹೋದರಿಯ ಹೆಸರು ಹೇಳುವಂತೆ ತಿಳಿಸಿದೆ. ಆತ ಮೌನವಾದ. ಮತ್ತೆ ಕರೆ ಮಾಡಿದಾಗ ಸ್ಪಂದಿಸಲಿಲ್ಲ. ಕರೆ ಕಟ್ ಮಾಡಿದರು. ಫೋನ್ ಸ್ವಿಚ್ ಆಫ್ ಆಯಿತು. ವಂಚಕರು ವಿಡಿಯೋ ಕರೆ ಮೂಲಕ ನಿವೃತ್ತ ಶಿಕ್ಷಕಿ ಮೇಲೆ ನಿಗಾ ಇರಿಸಿದ್ದರು. ಹೀಗಾಗಿ ಇತ್ತ, ಬ್ಯಾಂಕ್‌ನ ಗೇಟ್ ಎದುರು ನಿವೃತ್ತ ಶಿಕ್ಷಕಿ ಭಯಭೀತರಾಗಿ ನಡುಗುತ್ತ ಕುಸಿದುಬಿದ್ದರು. ಹಣ ಹೊಂದಿಸಿಕೊಡದೇ ಇದ್ದರೆ ಸಮಸ್ಯೆ ಆಗುತ್ತೆ ಎಂದು ಗೋಳಾಡಿಕೊಂಡರು. ವಂಚಕರು ಅಷ್ಟರಮಟ್ಟಿಗೆ ಅವರ ಧೈರ್ಯಗುಂದುವಂತೆ ಮಾಡಿದ್ದರು ಎಂದು ಎಸ್‌ಬಿಐ ಮ್ಯಾನೇಜರ್ ವಿವರಿಸಿದ್ದಾಗಿ ವರದಿ ಹೇಳಿದೆ. ಹೀಗೆ, ಎಸ್‌ಬಿಐ ಬ್ಯಾಂಕ್‌ನಿಂದ ವಂಚಕರ ಖಾತೆ ಸೇರುವುದರಲ್ಲಿದ್ದ 79 ಲಕ್ಷ ರೂಪಾಯಿ ಉಳಿದಿದೆ.
ದೆಹಲಿ ಪೊಲೀಸರು ಸೈಬರ್ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಬಂಧಿಸಿಲ್ಲ. ತನಿಖೆ ಮುಂದುವರಿದಿದೆ. ಸೈಬರ್ ವಂಚನೆಗೆ ಒಳಗಾದರೆ ಕೂಡಲೇ ಸೈಬರ್ ಅಪರಾಧ ತಡೆ ಸಹಾಯವಾಣಿ 1930ಕ್ಕೆ ಕರೆ ಮಾಡಿ.
