DK Shivakumar: ನನ್ನನ್ನು ತಿಹಾರ ಜೈಲಿಗೆ ಕಳುಹಿಸಿದರೂ ಜಗ್ಗೋಲ್ಲ: ಚೆನ್ನೈನಲ್ಲಿ ಬಿಜೆಪಿ ಕಪ್ಪುಬಾವುಟ ಪ್ರದರ್ಶಿಸಿದ್ದಕ್ಕೆ ಡಿಕೆಶಿ ಉತ್ತರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Dk Shivakumar: ನನ್ನನ್ನು ತಿಹಾರ ಜೈಲಿಗೆ ಕಳುಹಿಸಿದರೂ ಜಗ್ಗೋಲ್ಲ: ಚೆನ್ನೈನಲ್ಲಿ ಬಿಜೆಪಿ ಕಪ್ಪುಬಾವುಟ ಪ್ರದರ್ಶಿಸಿದ್ದಕ್ಕೆ ಡಿಕೆಶಿ ಉತ್ತರ

DK Shivakumar: ನನ್ನನ್ನು ತಿಹಾರ ಜೈಲಿಗೆ ಕಳುಹಿಸಿದರೂ ಜಗ್ಗೋಲ್ಲ: ಚೆನ್ನೈನಲ್ಲಿ ಬಿಜೆಪಿ ಕಪ್ಪುಬಾವುಟ ಪ್ರದರ್ಶಿಸಿದ್ದಕ್ಕೆ ಡಿಕೆಶಿ ಉತ್ತರ

DK Shivakumar: ಚೆನ್ನೈನಲ್ಲಿ ನಡೆದಿರುವ ಜನಸಂಖ್ಯೆ ಆಧರಿತ ಲೋಕಸಭಾ ಕ್ಷೇತ್ರದ ಪುನರ್‌ರಚನೆ ಪ್ರಯತ್ನ ಕುರಿತಾದ ಡಿಎಂಕೆ ನೇತೃತ್ವದ ಸಭೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್‌ ಆಗಮಿಸಿದರು.

ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಳಿದ ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಅಣ್ಣಾಮಲೈ ನೇತೃತ್ವದಲ್ಲಿ ಕಪ್ಪು ಬಾವುಟ ಪ್ರದರ್ಶನ ನಡೆಯಿತು.
ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಳಿದ ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಅಣ್ಣಾಮಲೈ ನೇತೃತ್ವದಲ್ಲಿ ಕಪ್ಪು ಬಾವುಟ ಪ್ರದರ್ಶನ ನಡೆಯಿತು.

DK Shivakumar: ನೋಡ್ರೀ ನನ್ನನ್ನು ದೆಹಲಿಯ ತಿಹಾರ್‌ ಜೈಲಿಗೆ ಹಾಕಿದರೂ ನಾನು ಜಗ್ಗುವವನಲ್ಲ.ಬಗ್ಗುವವನೂ ಅಲ್ಲ. ನಮ್ಮ ಹೋರಾಟ ಇದ್ದೇ ಇರುತ್ತದೆ. ಬಿಜೆಪಿಯವರು ನಾನು ಬಂದಾಗ ಕಪ್ಪು ಬಾವುಟ, ಕಪ್ಪು ಅಂಗಿ ಧರಿಸಿ ನನ್ನ ವಿರುದ್ದ ಹಾಗೂ ನಾವು ನಡೆಸುತ್ತಿರುವ ಸಭೆಗಳ ವಿರುದ್ದ ಪ್ರತಿಭಟನೆ ಮಾಡಿರಬಹುದು. ಹೋರಾಟವನ್ನು ನಾನು ಸ್ವಾಗತಿಸುತ್ತೇನೆ. ಆದರೆ ನಮ್ಮ ಹೋರಾಟವನ್ನು ನಿಲ್ಲಿಸಲು ಆಗುವುದಿಲ್ಲ. ನನ್ನನ್ನು ಜೈಲಿಗೆ ಹಾಕಿದರೂ ಸರಿಯೇ ಹೋರಾಟ ಮಾಡುತ್ತೇವೆ. ಇದು ಚೆನ್ನೈ ನಗರದ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ ಬಿಜೆಪಿಯಿಂದ ಹೋರಾಟ ಎದುರಿಸಿದಾಗ ಕರ್ನಾಟಕದ ಡಿಸಿಎಂ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ನೀಡಿದ ಉತ್ತರ.

ಕೇಂದ್ರ ಸರ್ಕಾರವು ಭಾರತದಲ್ಲಿನ ಲೋಕಸಭೆ ಕ್ಷೇತ್ರಗಳ ಪುನರ್‌ವಿಂಗಡನೆ ನಡೆಸಲಿದ್ದು, ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷ ದನಿ ಎತ್ತಿದೆ. ಇದಕ್ಕೆ ಪೂರಕವಾಗಿ ದಕ್ಷಿಣ ಹಾಗೂ ಉತ್ತರ ಭಾರತದ ಆಡಳಿತ ಪಕ್ಷಗಳು ಹಾಗೂ ಪ್ರಮುಖ ನಾಯಕರ ಸಭೆಯನ್ನು ಚೆನ್ನೈನಲ್ಲಿ ಶನಿವಾರ ನಡೆಸಿದೆ. ಈ ಸಭೆಗೆಂದು ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರ ಬದಲಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಆಗಮಿಸಿದರು. ಈ ವೇಳೆ ಅವರು ಮಾತನಾಡಿದರು.

ಸಂಸದೀಯ ಕ್ಷೇತ್ರಗಳ ಪುನರ್‌ವಿಂಗಡನೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಡಿಕೆಶಿ, ಸಂಸತ್ತಿನಲ್ಲಿ ತಮ್ಮ ಸ್ಥಾನಗಳನ್ನು ಯಾವುದೇ ಹಂತದಲ್ಲೂ ಕಡಿಮೆ ಮಾಡಲು ಬಿಡುವುದಿಲ್ಲ.ಈ ಹೆಜ್ಜೆ ಇಟ್ಟಿದ್ದಕ್ಕಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಅಭಿನಂದಿಸುವೆ. ಸ್ಟಾಲಿನ್ ಈ ದೇಶದ ಒಕ್ಕೂಟ ರಚನೆ ಮತ್ತು ಸಂವಿಧಾನವನ್ನು ರಕ್ಷಿಸುತ್ತಿದ್ದಾರೆ ಎಂದು ಹೇಳಿದರು.

ಸ್ಟಾಲಿನ್‌ಗೆ ಶುಭಾಶಯ

ನಾನು ಎಂ.ಕೆ.ಸ್ಟಾಲಿನ್ ಅವರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಅವರು ಮೊದಲ ಹೆಜ್ಜೆ ಇಟ್ಟಿದ್ದಾರೆ. ಈ ದೇಶದ ಒಕ್ಕೂಟ ರಚನೆ ಮತ್ತು ಸಂವಿಧಾನವನ್ನು ರಕ್ಷಿಸಲು ನಾವು ತುಂಬಾ ಹೆಮ್ಮೆಪಡುತ್ತೇವೆ. ಒಟ್ಟಿಗೆ ಸೇರುತ್ತಿರುವುದು ಆರಂಭ. ಇಂದು, ನಾವೆಲ್ಲರೂ ಸುಧಾರಣೆ ಏನು ಎಂದು ಚರ್ಚಿಸುತ್ತೇವೆ ಮತ್ತು ಒಟ್ಟಿಗೆ ಕೆಲಸ ಮಾಡುತ್ತೇವೆ ಎನ್ನುವುದು ಡಿಕೆಶಿ ನೇರ ಅಭಿಪ್ರಾಯ.

ತೆಲಂಗಾಣ, ಪಂಜಾಬ್ ಮತ್ತು ಕೇರಳದ ಎಲ್ಲಾ ನಾಯಕರು ಇಲ್ಲಿ ಸೇರಿದ್ದಾರೆ. ನಾವು ಯಾವುದೇ ಕಾರಣಕ್ಕೂ ನಮ್ಮ ದೇಶದ ಗೌರವ ಮತ್ತು ನಮ್ಮ ಸ್ಥಾನಗಳನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ನಮ್ಮದು ಪ್ರಗತಿಪರ ದೇಶ. ನಾವು ಆರ್ಥಿಕವಾಗಿ ಮತ್ತು ಅಕ್ಷರಶಃ ವೇಗವಾಗಿ ಮುಂದೆ ಹೊರಟಿದ್ದೇವೆ. ನಾವು ಒಗ್ಗಟ್ಟಾಗಿ ನಿಲ್ಲುತ್ತೇವೆ ಮತ್ತು ನಮ್ಮ ಯಾವುದೇ ಸ್ಥಾನಗಳು ಕಡಿಮೆಯಾಗದಂತೆ ನೋಡಿಕೊಳ್ಳುತ್ತೇವೆ. ಬಿಜೆಪಿಯ ಕಪ್ಪು ಬಾವುಟ ಪ್ರತಿಭಟನೆಯನ್ನು ನಾನು ಸ್ವಾಗತಿಸುತ್ತೇನೆ. ಅವರು ನನ್ನನ್ನು ತಿಹಾರ್ ಜೈಲಿಗೆ ಕಳುಹಿಸಿದರೂ ನಾನು ಹೆದರುವುದಿಲ್ಲ" ಎಂದು ಶಿವಕುಮಾರ್ ಸುದ್ದಿಸಂಸ್ಥೆ ಎಎನ್ಐಗೆ ವಿವರಿಸಿದರು.

ಭಾರೀ ಸ್ವಾಗತ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕ್ಷೇತ್ರಗಳ ಪುನರ್‌ವಿಂಗಡಣೆ ಕುರಿತು ಚರ್ಚಿಸಲು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ನಾಯಕರ ಸಭೆ ಕರೆದಿದ್ದಾರೆ. ಸಭೆ ನಡೆಯುವ ಸ್ಥಳದ ಸಮೀಪದಿಂದ ಹೆಚ್ಚಿನ ಸಂಖ್ಯೆಯ ಪೋಸ್ಟರ್ ಗಳು ಮತ್ತು ಬ್ಯಾನರ್ ಗಳನ್ನು ಹಾಕಲಾಗಿದೆ.

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಕಾರ್ಯಕಾರಿ ಅಧ್ಯಕ್ಷ ಕೆ.ಟಿ.ರಾಮರಾವ್ ಅವರು ಸಭೆಯಲ್ಲಿ ಭಾಗವಹಿಸಲು ಶುಕ್ರವಾರ ರಾತ್ರಿ ಚೆನ್ನೈಗೆ ಆಗಮಿಸಿದರು. ಜಂಟಿ ಕ್ರಿಯಾ ಸಮಿತಿಯ ಮೊದಲ ಸಭೆಯಲ್ಲಿ ಭಾಗವಹಿಸಲು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಚೆನ್ನೈನಲ್ಲಿದ್ದಾರೆ. ಒಡಿಶಾ ಕಾಂಗ್ರೆಸ್ ಅಧ್ಯಕ್ಷ ಭಕ್ತ ಚರಣ್ ದಾಸ್ ಮತ್ತು ಬಿಜು ಜನತಾ ದಳದ ನಾಯಕ ಸಂಜಯ್ ಕುಮಾರ್ ದಾಸ್ ಬರ್ಮಾ ಕೂಡ ಹಾಜರಾತಿ ಪಟ್ಟಿಯಲ್ಲಿದ್ದಾರೆ.

ಸ್ಟಾಲಿನ್‌ ಸಭೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಚೆನ್ನೈನಲ್ಲಿ ಜಂಟಿ ಕ್ರಿಯಾ ಸಮಿತಿ ಸಭೆ ಕರೆದಿದ್ದಾರೆ ಮತ್ತು ಮುಖ್ಯಮಂತ್ರಿ ಸ್ಟಾಲಿನ್ ತೆಗೆದುಕೊಂಡ ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿಯ ವಿರುದ್ಧ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಕರೆದಿದ್ದಾರೆ.

ಈ ಅನ್ಯಾಯದ ಕ್ರಮದ ವಿರುದ್ಧದ ಹೋರಾಟದಲ್ಲಿ ತಮ್ಮೊಂದಿಗೆ ಸೇರುವಂತೆ ಸ್ಟಾಲಿನ್ ಎನ್ಡಿಎ ಆಡಳಿತದ ಏಳು ರಾಜ್ಯಗಳು ಮತ್ತು ಇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020 ರಲ್ಲಿ ಪ್ರಸ್ತಾಪಿಸಲಾದ ತ್ರಿಭಾಷಾ ನೀತಿ ಮತ್ತು ಡಿಲಿಮಿಟೇಶನ್ ಕಾರ್ಯವಿಧಾನದ ಬಗ್ಗೆ ಎಂ.ಕೆ.ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರವು ಕೇಂದ್ರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದೆ. ಈ ಹಿಂದೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ರಾಜ್ಯದಲ್ಲಿ ಉದ್ದೇಶಿತ ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಯ ಪರಿಣಾಮದ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ಕರೆದಿದ್ದರು. ಇದನ್ನು ಬಿಜೆಪಿ ಬಹಿಷ್ಕರಿಸಿತ್ತು.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.