ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸುವುದಕ್ಕೆ ಎರಡು ಬೈಬಲ್ ಬಳಸಿದ ಡೊನಾಲ್ಡ್ ಟ್ರಂಪ್: ಹೀಗಿತ್ತು ಸಮಾರಂಭ
Donald Trump Inauguration: ಅಮೆರಿಕದ 47ನೇ ಅಧ್ಯಕ್ಷರಾಗಿ ರಿಪಬ್ಲಿಕನ್ ನಾಯಕ ಡೊನಾಲ್ಡ್ ಟ್ರಂಪ್ ಸೋಮವಾರ (ಜನವರಿ 20) ಪ್ರಮಾಣವಚನ ಸ್ವೀಕರಿಸಿದರು. ಈ ಪ್ರಮಾಣ ಸ್ವೀಕರಿಸುವುದಕ್ಕೆ ಡೊನಾಲ್ಡ್ ಟ್ರಂಪ್ ಎರಡು ಬೈಬಲ್ ಬಳಸಿದರು. ಈ ಕ್ರಮ ಕಡ್ಡಾಯವಾ? ಹೇಗಿತ್ತು ಸಮಾರಂಭ ಎಂಬಿತ್ಯಾದಿ ಕುತೂಹಲದ ವಿಚಾರಗಳ ವಿವರ ಇಲ್ಲಿದೆ.

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಸೋಮವಾರ (ಜನವರಿ 20) ಪ್ರಮಾಣ ವಚನ ಸ್ವೀಕರಿಸಿದರು. ಇದು ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯ ಆಡಳಿತ. ಇದಕ್ಕೂ ಮೊದಲು ಅವರು 45ನೇ ಅಧ್ಯಕ್ಷರಾಗಿ ಅಮೆರಿಕದ ಆಡಳಿತ ನಡೆಸಿದ್ದರು. ನಂತರದ ಚುನಾವಣೆಯಲ್ಲಿ ಸೋಲು ಅನುಭವಿಸಿದ ಕಾರಣ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಅಧ್ಯಕ್ಷರಾಗಿದ್ದರು. ಈಗ ಮತ್ತೊಂದು ಅವಧಿಗೆ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಅವರು ಎರಡು ಬೈಬಲ್‌ಗಳನ್ನು ಹಿಡಿದು ಪ್ರಮಾಣ ವಚನ ಸ್ವೀಕರಿಸಿದರಾ ಅಥವಾ ಕೈಯಲ್ಲಿ ಒಂದೇ ಬೈಬಲ್ ಇತ್ತಾ?. ಇದು ಸಹಜವಾಗಿಯೆ ಎಲ್ಲರ ಕುತೂಹಲ ಕೆರಳಿಸಿದ್ದು, ಅದನ್ನು ತಣಿಸುವ ವಿವರ ಇಲ್ಲಿದೆ.
ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸಲು ಡೊನಾಲ್ಡ್ ಟ್ರಂಪ್ 2 ಬೈಬಲ್ ಬಳಸಿದರಾ?
ವಾಷಿಂಗ್ಟನ್‌ನ ಯುಎಸ್ ಕ್ಯಾಪಿಟಲ್‌ನ ರೊಟುಂಡಾದಲ್ಲಿ 60 ನೇ ಅಧ್ಯಕ್ಷೀಯ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷರಾಗಿ ಚುನಾಯಿತ ಡೊನಾಲ್ಡ್ ಟ್ರಂಪ್ ಅವರು 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹೀಗೆ ಪ್ರಮಾಣವಚನ ಸ್ವೀಕರಿಸುವಾಗ ಅವರು ಎರಡು ಬೈಬಲ್‌ಗಳನ್ನು ಹಿಡಿದುಕೊಂಡಿದ್ರಾ? ಅಥವಾ ಒಂದೇ ಬೈಬಲ್? ಬೈಬಲ್ ವಿಚಾರ ಬಹಳ ಕುತೂಹಲ ಕೆರಳಿಸಿದೆ. ಅವರು ಎರಡು ಬೈಬಲ್ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ್ದರು.
ಸೋಮವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಡೊನಾಲ್ಡ್ ಟ್ರಂಪ್ ಎರಡು ಬೈಬಲ್‌ಗಳನ್ನು ಹಿಡಿದು ಪ್ರಮಾಣ ಮಾಡಲಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿತ್ತು. ಅಬ್ರಾಹಂ ಲಿಂಕನ್ ಅವರು 1861ರಲ್ಲಿ 16ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲು ಬಳಸಿದ ಬೈಬಲ್ ಒಂದು. ಲಿಂಕನ್ ಬೈಬಲ್ ಅನ್ನು ಒಟ್ಟು ಮೂರು ಸಲ ಬಳಸಲಾಗಿದೆ. ಬರಾಕ್ ಒಬಾಮ ಅವರು 2013ರಲ್ಲಿ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸಿದ ಸಂದರ್ಭ, 2017ರಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸಿದಾಗ ಬಳಸಲಾಗಿತ್ತು.
ಟ್ರಂಪ್ ಅವರು ಹಿಡಿದುಕೊಳ್ಳಲಿರುವ ಇನ್ನೊಂದು ಬೈಬಲ್ 1955ರಲ್ಲಿ 1955 ರಲ್ಲಿ ನ್ಯೂಯಾರ್ಕ್‌ನ ಜಮೈಕಾದಲ್ಲಿರುವ ಫಸ್ಟ್ ಪ್ರೆಸ್‌ಬಿಟೇರಿಯನ್ ಚರ್ಚ್‌ನಲ್ಲಿ ಅವರ ಸಂಡೇ ಚರ್ಚ್ ಪ್ರಾಥಮಿಕ ಶಾಲೆಯ ಪದವಿಯ ನೆನಪಿಗಾಗಿ ಅವರ ತಾಯಿ ನೀಡಿದ ಬೈಬಲ್. ಈ ಬೈಬಲ್‌ನ ಮುಖಪುಟದಲ್ಲಿ ಟ್ರಂಪ್ ಅವರ ಹೆಸರನ್ನು ಕೆಳಭಾಗದಲ್ಲಿ ನಮೂದಿಸಲಾಗಿತ್ತು. ಒಳಗೆ ಚರ್ಚ್ ಅಧಿಕಾರಿಗಳ ಸಹಿ ಮತ್ತು ಟ್ರಂಪ್ ಅವರಿಗೆ ಅದನ್ನು ಯಾವಾಗ ನೀಡಲಾಯಿತು ಎಂಬ ವಿವರ ಇದೆ ಎಂದು ವರದಿ ಹೇಳಿತ್ತು.
ಬರಾಕ್ ಒಬಾಮ ಅವರು ಕೂಡ ಎರಡು ಬೈಬಲ್ ಹಿಡಿದು ಪ್ರಮಾಣವಚನ ಸ್ವೀಕರಿಸಿದ್ದರು. ಒಂದು ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಹಿಡಿದಿದ್ದ ಬೈಬಲ್ ಮತ್ತು ಇನ್ನೊಂದು ಲಿಂಕನ್ ಬೈಬಲ್ ಆಗಿತ್ತು.
ಡೊನಾಲ್ಡ್ ಟ್ರಂಪ್ ಅವರು ಪ್ರಮಾಣ ಹೇಗೆ ಮಾಡಿದರು, ಬೈಬಲ್ ಹಿಡಿದು ಪ್ರಮಾಣ ಮಾಡುವುದರ ಮಹತ್ವವೇನು
ಪ್ರಮಾಣ ವಚನ ಸ್ವೀಕಾರದ ವೇಳೆ ಡೊನಾಲ್ಡ್ ಟ್ರಂಪ್ ತಮ್ಮ ಬಲಗೈಯನ್ನು ಮೇಲಕ್ಕೆತ್ತಿ ಎಡಗೈಯನ್ನು ಬೈಬಲ್ ಮೇಲೆ ಇರಿಸಿದ್ದರು. ನಂತರ ಅವರು ಪ್ರಮಾಣ ವಚನ ಸ್ವೀಕರಿಸಿದರು ಮತ್ತು ಯುನೈಟೆಡ್ ಸ್ಟೇಟ್ಸ್‌ನ 47 ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇಲ್ಲಿ ಕುತೂಹಲದ ವಿಚಾರ ಅಂದರೆ, ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸುವಾಗ ಬೈಬಲ್ ಹಿಡಿದು ಪ್ರಮಾಣ ಮಾಡುವುದರ ಮಹತ್ವವೇನು ಎಂಬುದು. ಅದನ್ನು ತಿಳಿಯೋಣ.
ಅಮೆರಿಕದಲ್ಲಿ ಅಧ್ಯಕ್ಷರ ಪ್ರಮಾಣ ವಚನ ಸಮಾರಂಭದಲ್ಲಿ ಬೈಬಲ್ ಹಿಡಿದು ಪ್ರಮಾಣ ವಚನ ಸ್ವೀಕರಿಸುವ ಪರಿಪಾಠ ಶುರುವಾಗಿದ್ದು 1789ರ ಏಪ್ರಿಲ್ 30ರಂದು. ಅವರು ಮೆಸೋನಿಕ್ ಲಾಡ್ಜ್‌ನಿಂದ ಬೈಬಲ್ ತರಿಸಿಕೊಂಡು ಪ್ರಮಾಣ ವಚನ ಸ್ವೀಕರಿಸಿದರು.
ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ಮಾಡುವಾಗ ಬೈಬಲ್ ಅನ್ನು ಬಳಸಬೇಕೆಂಬುದು ಅಲ್ಲಿನ ಸಾಂವಿಧಾನಿಕ ಅವಶ್ಯಕತೆ ಅಲ್ಲ. ಸಂವಿಧಾನದ ಆರ್ಟಿಕಲ್ II, ಸೆಕ್ಷನ್ I, ಷರತ್ತು 8 ರ ಪ್ರಕಾರ, ಅಧ್ಯಕ್ಷರಾಗಿ ಆಯ್ಕೆಯಾದವರು ಪ್ರಮಾಣ ವಚನ ಸ್ವೀಕರಿಸಬೇಕು ಮತ್ತು ನಿರ್ದಿಷ್ಟ ಪದಗಳನ್ನು ಪಠಿಸಬೇಕು. ಆದಾಗ್ಯೂ, ಉಳಿದ ಎಲ್ಲವೂ ಐಚ್ಛಿಕ. ಟೈಮ್ ಮ್ಯಾಗಜೀನ್ ಪ್ರಕಾರ, ಇದು ಸಂಪ್ರದಾಯದ ಕಾರಣ ವಾಡಿಕೆಯಲ್ಲಿ ಬಂದ ಆಚರಣೆ ಅಷ್ಟೆ.
ಪ್ರತಿ ಅಧ್ಯಕ್ಷರು ಪ್ರಮಾಣವಚನ ಸ್ವೀಕರಿಸಲು ತಮ್ಮದೇ ಆದ ಬೈಬಲ್ ಅನ್ನು ಆಯ್ಕೆ ಮಾಡುತ್ತಾರೆ. ಕುತೂಹಲಕಾರಿ ವಿಚಾರ ಅಂದರೆ, ರಿಪಬ್ಲಿಕನ್ ನಾಯಕ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ನಾಯಕ ಬರಾಕ್ ಒಬಾಮಾ ಇಬ್ಬರೂ ಲಿಂಕನ್ ಬೈಬಲ್ ಮೇಲೆ ಪ್ರಮಾಣ ಮಾಡಿದರು.
ಟ್ರಂಪ್ ಪ್ರಮಾಣವಚನ ದಿನಕ್ಕಾಗಿ ವಿಶೇಷ ‘ಇನಾಗುರೇಷನ್ ಡೇ ಬೈಬಲ್’ ಬಿಡುಗಡೆ
ಇತ್ತೀಚೆಗಷ್ಟೇ, ಟ್ರಂಪ್‌ರ ಎರಡನೇ ಪ್ರಮಾಣವಚನಕ್ಕೆ ಕೆಲವೇ ದಿನಗಳ ಮೊದಲು, ಗಾಡ್ ಬ್ಲೆಸ್ ದಿ ಯುಎಸ್‌ಎ ಬೈಬಲ್‌ನ ಪ್ರಕಾಶಕರು ಟ್ರಂಪ್-ಅನುಮೋದಿತ 'ಇನಾಗುರೇಷನ್ ಡೇ ಬೈಬಲ್' ಅನ್ನು 69.99 ಡಾಲರ್‌ಗೆ ಪರಿಚಯಿಸಿದರು. ಗ್ರಾಹಕರು ಈ ಕೆಜೆವಿ ಬೈಬಲ್ ಅನ್ನು ಅಮೆರಿಕದ ಸಂವಿಧಾನ, ಸ್ವಾತಂತ್ರ್ಯದ ಘೋಷಣೆ, ನಿಷ್ಠೆಯ ಪ್ರತಿಜ್ಞೆ ಮತ್ತು ಲೀ ಗ್ರೀನ್‌ವುಡ್ ಅವರ ಗಾಡ್ ಬ್ಲೆಸ್ ದಿ ಯುಎಸ್‌ಎಗೆ ಸಾಹಿತ್ಯದ ಕೋರಸ್‌ನೊಂದಿಗೆ ಸಂಯೋಜಿಸಬಹುದು. ಟ್ರಂಪ್ ಬೆಂಬಲಿಗರಿಗೆ ಈ ಬೈಬಲ್ 10 ಡಾಲರ್ ವಿನಾಯಿತಿಯೊಂದಿಗೆ ಲಭ್ಯವಿತ್ತು. ವಿಶೇಷ ಅಂದರೆ ಟ್ರಂಪ್ ಸಹಿ ಇರುವ ಬೈಬಲ್ 1,000 ಡಾಲರ್‌ಗೆ ಮಾರಾಟಕ್ಕಿತ್ತು.
ಒಟ್ಟಿನಲ್ಲಿ, ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭವೂ ವಿಶೇಷವಾಗಿತ್ತು. ಒಳಾಂಣಗದಲ್ಲಿ ನಡೆದ ಕಾರ್ಯಕ್ರಮವಾದರೂ, ಬೈಬಲ್ ಹಿಡಿದು ಪ್ರಮಾಣ ವಚನ ಸ್ವೀಕರಿಸುವ ಪರಿಪಾಠ ಕುತೂಹಲ ಕೆರಳಿಸಿದ್ದು ವಾಸ್ತವ.
