Jaishankar: ಸುಡಾನ್‌ನಲ್ಲಿರುವ ಕನ್ನಡಿಗರ ಕುರಿತು ರಾಜಕೀಯ ಮಾಡಬೇಡಿ, ವಿದೇಶಾಂಗ ಸಚಿವ ಜೈಶಂಕರ್ ತಿರುಗೇಟು
Jaishankar to Cong leader Siddaramaiah: “ನಿಮ್ಮ ಟ್ವೀಟ್ ನೋಡಿ ಗಾಬರಿಯಾಯಿತು! ಅಪಾಯದಲ್ಲಿ ಜೀವಗಳಿವೆ; ರಾಜಕೀಯ ಮಾಡಬೇಡಿ. ಏಪ್ರಿಲ್ 14 ರಂದು ಸಂಘರ್ಷ ಪ್ರಾರಂಭವಾದಾಗಿನಿಂದ ಭಾರತದ ರಾಯಭಾರ ಕಚೇರಿಯು ಸುಡಾನ್‌ನಲ್ಲಿರುವ ಭಾರತೀಯ ಪ್ರಜೆಗಳು ಮತ್ತು ಪಿಐಒ ಜತೆ ನಿರಂತರವಾಗಿ ಸಂಪರ್ಕದಲ್ಲಿದೆ ”ಎಂದು ವಿದೇಶಾಂಗ ಸಚಿವರಾದ ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ನವದೆಹಲಿ: ಸಂಘರ್ಷ ಪೀಡಿತ ಸುಡಾನ್‌ನಲ್ಲಿ ಕರ್ನಾಟಕದ 31 ಜನರು ಸಿಲುಕಿಕೊಂಡಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ವಿದೇಶಾಂಗ ವ್ಯವಹಾರಗಳ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಮಂಗಳವಾರ ತಿರುಗೇಟು ನೀಡಿದ್ದಾರೆ.
“ನಿಮ್ಮ ಟ್ವೀಟ್ ನೋಡಿ ಗಾಬರಿಯಾಯಿತು! ಅಪಾಯದಲ್ಲಿ ಜೀವಗಳಿವೆ; ರಾಜಕೀಯ ಮಾಡಬೇಡಿ. ಏಪ್ರಿಲ್ 14 ರಂದು ಸಂಘರ್ಷ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಖಾರ್ಟೂಮ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ಸುಡಾನ್‌ನಲ್ಲಿರುವ ಭಾರತೀಯ ಪ್ರಜೆಗಳು ಮತ್ತು ಪಿಐಒ ಜತೆ ನಿರಂತರವಾಗಿ ಸಂಪರ್ಕದಲ್ಲಿದೆ ”ಎಂದು ವಿದೇಶಾಂಗ ಸಚಿವರಾದ ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಡಾನ್‌ನಲ್ಲಿರುವ ಕನ್ನಡಿಗರ ಕುರಿತು ಟ್ವೀಟ್ ಮಾಡಿದ್ದರು. ಕರ್ನಾಟಕದ 31 ಹಕ್ಕಿ ಪಿಕ್ಕಿ ಟ್ರೈಬ್‌ನ 31 ಜನರು ಸುಡಾನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್ ಜೈಶಂರ್ ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕನ್ನಡಿಗರು ಸುರಕ್ಷಿತವಾಗಿ ಹಿಂತುರುಗಲು ಸಹಾಯ ಮಾಡಬೇಕೆಂದು ಟ್ವೀಟ್ ಮಾಡಿದ್ದರು.
"ಕಳೆದ ಕೆಲವು ದಿನಗಳಿಂದ ಸುಡಾನ್‌ನಲ್ಲಿ ಹಕ್ಕಿ ಪಿಕ್ಕಿ ಜನರು ಆಹಾರವಿಲ್ಲದೆ ಕಷ್ಟಪಡುತ್ತಿದ್ದಾರೆ. ಅವರನ್ನು ಮರಳಿ ಕರೆತರಲು ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ. @BJP4India ಸರ್ಕಾರವು ತಕ್ಷಣವೇ ರಾಜತಾಂತ್ರಿಕ ಕ್ರಮಗಳನ್ನು ಆರಂಭಿಸಬೇಕು. ಹಕ್ಕಿ ಪಿಕ್ಕಿ ಟ್ರೈಮ್‌ನ ಜನರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಅಂತಾರಾಷ್ಟ್ರೀಯ ಏಜೆನ್ಸಿಗಳನ್ನು ಸಂಪರ್ಕಿಸಬೇಕು” ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
“ಸುಡಾನ್‌ನಲ್ಲಿ ನಡೆಯುತ್ತಿರುವ ಅಂತರ್ಯುದ್ಧದಲ್ಲಿ ನಾವು ಒಬ್ಬ ಭಾರತೀಯ ಮತ್ತು 60 ಇತರರನ್ನು ಕಳೆದುಕೊಂಡಿದ್ದೇವೆ. ಅವರ ಕುಟುಂಬಗಳಿಗೆ ನನ್ನ ಸಂತಾಪ ಮತ್ತು ಈ ಪ್ರದೇಶದಲ್ಲಿ ಶಾಂತಿಗಾಗಿ ಪ್ರಾರ್ಥಿಸುತ್ತೇನೆ” ಎಂದು ಅವರು ಟ್ವೀಟ್ ಮಾಡಿದ್ದರು.
ಕರ್ನಾಟಕದಿಂದ ಸುಡಾನ್‌ಗೆ ತೆರಳಿದ 31 ಮಂದಿ ಅಪಾಯದಲ್ಲಿ ಸಿಲುಕಿರುವ ಮಾಹಿತಿ ಸಿಕ್ಕಿದೆ. ಈ ಸಂಬಂಧ ನಾವು ಈಗಾಗಲೇ ವಿದೇಶಾಂಗ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಸುಡಾನ್ ದೇಶದಲ್ಲಿ ಇರುವ ಭಾರತೀಯ ರಾಯಭಾರ ಕಚೇರಿಗೂ ಮಾಹಿತಿ ತಲುಪಿಸಿದ್ದೇವೆ. ಸದ್ಯ ಸುಡಾನ್‌ನಲ್ಲಿ ಇರುವ ಕನ್ನಡಿಗರು ಸುರಕ್ಷಿತ ನೆಲೆಯಲ್ಲಿ ಇದ್ದಾರೆ. ಅವರು ಹೊರಗೆ ಬಾರದಂತೆ ಮನವಿ ಮಾಡಿದ್ದೇವೆ. ಈ ಕುರಿತಾಗಿ ಭಾರತೀಯ ರಾಯಭಾರ ಕಚೇರಿ ತುರ್ತು ಕ್ರಮ ಕೈಗೊಳ್ಳುತ್ತಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಡಾ. ಮನೋಜ್ ರಂಜನ್ ಹೇಳಿದ್ದರು.
ಸುಡಾನ್ ನಡೆಯುತ್ತಿರುವ ಸೇನಾ ಸಂಘರ್ಷದಲ್ಲಿ ಓರ್ವ ಭಾರತೀಯ ಸೇರಿದಂತೆ ಕನಿಷ್ಠ 65 ಮಂದಿ ಸಾವಿಗೀಡಾಗಿದ್ದು, 500 ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಮಿಲಿಟರಿ ಹಾಗೂ ಪ್ಯಾರಾಮಿಲಿಟರಿ ನಡುವೆ ಸಂಘರ್ಷ ಸಂಭವಿಸಿದ ಪರಿಣಾಮ ಕನಿಷ್ಠ 65 ಮಂದಿ ಸಾವಿಗೀಡಾಗಿದ್ದು, ಈ ಪೈಕಿ ಸುಡಾನ್ ನಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಭಾರತ ಮೂಲದ ವ್ಯಕ್ತಿ ಕೂಡ ಮೃತಪಟ್ಟಿದ್ದಾರೆ.