ಸಮುದ್ರದ ಉಪ್ಪು ನೀರನ್ನು ಸಿಹಿ ನೀರು ಮಾಡುವ ಹೊಸ ತಂತ್ರಜ್ಞಾನವನ್ನು ಎಂಟೇ ತಿಂಗಳಲ್ಲಿ ಅಭಿವೃದ್ಧಿ ಪಡಿಸಿದೆ ಡಿಆರ್‌ಡಿಒ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸಮುದ್ರದ ಉಪ್ಪು ನೀರನ್ನು ಸಿಹಿ ನೀರು ಮಾಡುವ ಹೊಸ ತಂತ್ರಜ್ಞಾನವನ್ನು ಎಂಟೇ ತಿಂಗಳಲ್ಲಿ ಅಭಿವೃದ್ಧಿ ಪಡಿಸಿದೆ ಡಿಆರ್‌ಡಿಒ

ಸಮುದ್ರದ ಉಪ್ಪು ನೀರನ್ನು ಸಿಹಿ ನೀರು ಮಾಡುವ ಹೊಸ ತಂತ್ರಜ್ಞಾನವನ್ನು ಎಂಟೇ ತಿಂಗಳಲ್ಲಿ ಅಭಿವೃದ್ಧಿ ಪಡಿಸಿದೆ ಡಿಆರ್‌ಡಿಒ

ಡಿಫೆನ್ಸ್ ರೀಸರ್ಚ್ ಆಂಡ್ ಡೆವಲಪ್‌ಮೆಂಟ್ ಆರ್ಗನೈಸೇಷನ್ (ಡಿಆರ್‌ಡಿಒ) 'ಮೇಕ್ ಇನ್ ಇಂಡಿಯಾ' ಮತ್ತು 'ಸ್ವಾವಲಂಬಿ ಭಾರತ'ದ ದೃಷ್ಟಿಕೋನವನ್ನು ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡುತ್ತಿದೆ. ಸಮುದ್ರದ ಉಪ್ಪು ನೀರನ್ನು ಸಿಹಿ ನೀರು ಮಾಡುವ ಡಿಆರ್‌ಡಿಒದ ಹೊಸ ತಂತ್ರಜ್ಞಾನ 8 ತಿಂಗಳಲ್ಲಿ ರೆಡಿ ಮಾಡಿ ಗಮನಸೆಳೆದಿದೆ.

ಸಮುದ್ರದ ಉಪ್ಪು ನೀರನ್ನು ಸಿಹಿ ನೀರು ಮಾಡುವ ಡಿಆರ್‌ಡಿಒದ ಹೊಸ ತಂತ್ರಜ್ಞಾನ 8 ತಿಂಗಳಲ್ಲಿ ರೆಡಿ (ಸಾಂಕೇತಿಕ ಚಿತ್ರ)
ಸಮುದ್ರದ ಉಪ್ಪು ನೀರನ್ನು ಸಿಹಿ ನೀರು ಮಾಡುವ ಡಿಆರ್‌ಡಿಒದ ಹೊಸ ತಂತ್ರಜ್ಞಾನ 8 ತಿಂಗಳಲ್ಲಿ ರೆಡಿ (ಸಾಂಕೇತಿಕ ಚಿತ್ರ)

ಭಯೋತ್ಪಾದನೆ ವಿರುದ್ಧ ಭಾರತ ಸಮರ ಸಾರಿದ್ದು, ಗಡಿಯಾಚೆಗಿನ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಪಾಕಿಸ್ತಾನದ ನೆಲದಲ್ಲಿದ್ದ ಉಗ್ರ ಶಿಬಿರ, ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದೆ. ಇದಕ್ಕೆ ಬಳಕೆಯಾದ ಶಸ್ತ್ರಗಳನ್ನು ಫೆನ್ಸ್ ರೀಸರ್ಚ್ ಆಂಡ್ ಡೆವಲಪ್‌ಮೆಂಟ್ ಆರ್ಗನೈಸೇಷನ್ (ಡಿಆರ್‌ಡಿಒ) ಅಭಿವೃದ್ಧಿ ಪಡಿಸಿದ್ದು, ಜಗತ್ತಿನ ಗಮನಸೆಳೆದಿದೆ. ಇದೀಗ, ಇದರ ಜತೆಗೆ, ಭಾರತೀಯ ಸೇನೆಗೆ ಬೇಕಾದ ಪೂರಕ ಅಗತ್ಯ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವುದರ ಕಡೆಗೂ ಡಿಆರ್‌ಡಿಒ ಗಮನಹರಿಸಿದೆ.

ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ನಿರ್ಮಾಣ ದಿಶೆಯಲ್ಲಿ ಸಾಗುತ್ತಿರುವ ನಮ್ಮ ದೇಶದ ಮಟ್ಟಿಗೆ ಮಹತ್ವದ ವಿದ್ಯಮಾನ. ಡಿಫೆನ್ಸ್ ರೀಸರ್ಚ್ ಆಂಡ್ ಡೆವಲಪ್‌ಮೆಂಟ್ ಆರ್ಗನೈಸೇಷನ್ (ಡಿಆರ್‌ಡಿಒ) 'ಮೇಕ್ ಇನ್ ಇಂಡಿಯಾ' ಮತ್ತು 'ಸ್ವಾವಲಂಬಿ ಭಾರತ'ದ ದೃಷ್ಟಿಕೋನವನ್ನು ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡುತ್ತಿದ್ದು, ದೇಶದ ಕರಾವಳಿ ಪ್ರದೇಶಗಳು ಮತ್ತು ರಕ್ಷಣಾ ವಲಯಕ್ಕೆ ಬಹಳ ಮುಖ್ಯವೆಂದು ಸಾಬೀತುಪಡಿಸುವ ಅಂತಹ ಸಾಧನೆಯನ್ನು ಮಾಡಿದೆ. ಕಾನ್ಪುರ ಮೂಲದ ಡಿಆರ್‌ಡಿಒ ಪ್ರಯೋಗಾಲಯವು ಕೇವಲ 8 ತಿಂಗಳಲ್ಲಿ ನ್ಯಾನೊಪೊರಸ್ ಮಲ್ಟಿಲೇಯರ್ಡ್ ಪಾಲಿಮರ್ ಮೆಂಬ್ರೇನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

ಏನಿದು ನ್ಯಾನೊಪೊರಸ್ ಮಲ್ಟಿಲೇಯರ್ಡ್ ಪಾಲಿಮರ್ ಮೆಂಬ್ರೇನ್ ತಂತ್ರಜ್ಞಾನ

ಡಿಫೆನ್ಸ್ ರೀಸರ್ಚ್ ಆಂಡ್ ಡೆವಲಪ್‌ಮೆಂಟ್ ಆರ್ಗನೈಸೇಷನ್ (ಡಿಆರ್‌ಡಿಒ) ಕಾನ್ಪುರ ಪ್ರಯೋಗಾಲಯ ಸಮುದ್ರದ ಉಪ್ಪು ನೀರನ್ನು ಕುಡಿಯುವ ಸಿಹಿ ನೀರನ್ನಾಗಿ ಪರಿವರ್ತಿಸುವ ತಂತ್ರಜ್ಞಾವನ್ನು ಅಭಿವೃದ್ಧಿ ಪಡಿಸಿದೆ. ಇದಕ್ಕೆ ಡಿಆರ್‌ಡಿಒ ನ್ಯಾನೊಪೊರಸ್ ಮಲ್ಟಿಲೇಯರ್ಡ್ ಪಾಲಿಮರ್ ಮೆಂಬ್ರೇನ್ ತಂತ್ರಜ್ಞಾನ ಎಂದು ಹೆಸರಿಟ್ಟಿದೆ. ಈ ತಂತ್ರಜ್ಞಾನವನ್ನು ಭಾರತೀಯ ಕರಾವಳಿ ರಕ್ಷಣಾ ಪಡೆಯ ಹಡಗುಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಕೋಸ್ಟ್ ಗಾರ್ಡ್ ಹಡಗುಗಳಲ್ಲಿ ಯಶಸ್ವಿ ಪ್ರಯೋಗ

ಈ ದೇಶೀಯ ತಂತ್ರಜ್ಞಾನವನ್ನು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ)ನ ಕಡಲಾಚೆಯ ಗಸ್ತು ಹಡಗಿನಲ್ಲಿ (ಒಪಿವಿ) ಪ್ರಯೋಗಕ್ಕೆ ಒಳಪಡಿಸಲಾಗಿದೆ. ಆರಂಭಿಕ ಸುರಕ್ಷತೆ ಮತ್ತು ಕಾರ್ಯಕ್ಷಮತೆ ಪರೀಕ್ಷೆಯಲ್ಲಿ ಇದು ಸಂಪೂರ್ಣವಾಗಿ ಯಶಸ್ವಿಯಾಗಿದೆ. ಈಗ 500 ಗಂಟೆಗಳ ಕಾರ್ಯಾಚರಣೆಯ ಪರೀಕ್ಷೆಯ ನಂತರ ಅಂತಿಮ ಅನುಮೋದನೆ ಪಡೆಯುವುದಕ್ಕೆ ಈ ತಂತ್ರಜ್ಞಾನ ಸಿದ್ಧವಾಗಿದೆ ಎಂದು ಡಿಆರ್‌ಡಿಒ ಮೂಲಗಳು ತಿಳಿಸಿರುವುದಾಗಿ ಲೈವ್ ಹಿಂದೂಸ್ತಾನ್ ವರದಿ ಹೇಳಿದೆ.

ನೀರಿನ ಕೊರತೆ ಇರುವ ಪ್ರದೇಶಗಳಿಗೂ ನೆರವಾಗಬಲ್ಲ ತಂತ್ರಜ್ಞಾನ

ವಾಸ್ತವವಾಗಿ, ಸಮುದ್ರದ ನೀರಿನಲ್ಲಿ ಇರುವ ಕ್ಲೋರೈಡ್ ಅಯಾನುಗಳು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಆದರೆ, ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಈ ಹೊಸ ತಂತ್ರಜ್ಞಾನವು ಈ ರೀತಿ ಸಮಸ್ಯೆಗಳು ಉಂಟಾಗದಂತೆ ಸಮುದ್ರ ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸಿಕೊಡುತ್ತದೆ. ಈ ತಂತ್ರಜ್ಞಾನವು ಭಾರತೀಯ ಕೋಸ್ಟ್ ಗಾರ್ಡ್‌ಗೆ ಮಾತ್ರವಲ್ಲದೇ ಜನರಿಗೂ ಉಪಯುಕ್ತವಾಗಲಿದೆ. ನೀರಿನ ಭಾರಿ ಕೊರತೆ ಇರುವ ಭಾರತದ ಪ್ರದೇಶಗಳಿಗೆ ಭವಿಷ್ಯದಲ್ಲಿ ಜಲ ಜೀವನ್ ಮಿಷನ್ ನಂತಹ ಯೋಜನೆಗಳಿಗೆ ಸಮುದ್ರ ನೀರು ಬಳಕೆಯಾದರೆ ಖಚಿತವಾಗಿ ಈ ತಂತ್ರಜ್ಞಾನ ನೆರವಿಗೆ ಬರಲಿದೆ ಎಂದು ಪರಿಣತರು ಅಭಿಪ್ರಾಯ ಪಡುತ್ತಾರೆ.

ಆತ್ಮನಿರ್ಭರ ಭಾರತ ನಿರ್ಮಾಣದ ಕಡೆಗೆ ಮಹತ್ವದ ಹೆಜ್ಜೆ

ತೇಜಸ್ ಯುದ್ಧ ವಿಮಾನ, ಅಗ್ನಿ-ಪೃಥ್ವಿ ಕ್ಷಿಪಣಿ, ಪಿನಾಕಾ ರಾಕೆಟ್ ವ್ಯವಸ್ಥೆ ಮತ್ತು ಆಕಾಶ್ ವಾಯು ರಕ್ಷಣೆಯಂತಹ ದೇಶೀಯ ರಕ್ಷಣಾ ವ್ಯವಸ್ಥೆಗಳನ್ನು ತಯಾರಿಸುವಲ್ಲಿ ಡಿಫೆನ್ಸ್ ರೀಸರ್ಚ್ ಆಂಡ್ ಡೆವಲಪ್‌ಮೆಂಟ್ ಆರ್ಗನೈಸೇಷನ್ (ಡಿಆರ್‌ಡಿಒ) ಈಗಾಗಲೇ ಮುಂಚೂಣಿಯಲ್ಲಿದೆ. ಈಗ ಈ ಹೊಸ ಮೆಂಬರೇನ್ ತಂತ್ರಜ್ಞಾನವು ಭಾರತವನ್ನು ಜಲ ಸುರಕ್ಷತೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಹೊಸ ಮೆಟ್ಟಿಲಾಗಿ ಗೋಚರಿಸಿದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.