Amritpal Singh: 'ಪಂಜಾಬ್‌ನ ಪ್ರತಿ ಮನೆಯಲ್ಲೂ ಡ್ರಗ್ಸ್ ಇರತ್ತೆ' - ಪರಾರಿಯಾಗಿರುವ ಅಮೃತ್‌ಪಾಲ್ ಸಿಂಗ್ ತಂದೆ ಹೇಳಿದ್ದಿಷ್ಟು..
ಪಂಜಾಬ್‌ನಲ್ಲಿ ಕೋಮು ಸಂಘರ್ಷ ಹರಡಲು ಯತ್ನಿಸಿದ ಆರೋಪ ಎದುರಿಸುತ್ತಿರುವ ತೀವ್ರಗಾಮಿ ಸಿಖ್ ಬೋಧಕ ಮತ್ತು ಖಲಿಸ್ತಾನ್ ಬಗ್ಗೆ ಸಹಾನುಭೂತಿ ಹೊಂದಿರುವ ಅಮೃತ್‌ಪಾಲ್ ಸಿಂಗ್ ಪತ್ತೆಗಾಗಿ ಪಂಜಾಬ್ ಪೊಲೀಸರು ಬಲೆ ಬೀಸಿದ್ದಾರೆ. ಸಿಂಗ್ ನೇತೃತ್ವದ 'ವಾರಿಸ್ ಪಂಜಾಬ್ ದೇ' ಸಂಘಟನೆಯ 78 ಸದಸ್ಯರನ್ನು ಶನಿವಾರ ಬಂಧಿಸಿದ್ದಾರೆ. ಇನ್ನೇನು ಅಮೃತ್‌ಪಾಲ್ ಸಿಂಗ್ ಸಿಕ್ಕೇ ಬಿಟ್ಟರು ಎನ್ನುವಷ್ಟರಲ್ಲಿ ಸಿಂಗ್ ಪರಾರಿಯಾಗಿದ್ದಾರೆ.
ಪಂಜಾಬ್: ಪಂಜಾಬ್‌ನಲ್ಲಿ ಕೋಮು ಸಂಘರ್ಷ ಹರಡಲು ಯತ್ನಿಸಿದ ಆರೋಪ ಎದುರಿಸುತ್ತಿರುವ ತೀವ್ರಗಾಮಿ ಸಿಖ್ ಬೋಧಕ ಮತ್ತು ಖಲಿಸ್ತಾನ್ ಬಗ್ಗೆ ಸಹಾನುಭೂತಿ ಹೊಂದಿರುವ ಅಮೃತ್‌ಪಾಲ್ ಸಿಂಗ್ ಪತ್ತೆಗಾಗಿ ಪಂಜಾಬ್ ಪೊಲೀಸರು ಬಲೆ ಬೀಸಿದ್ದಾರೆ. ಸಿಂಗ್ ನೇತೃತ್ವದ 'ವಾರಿಸ್ ಪಂಜಾಬ್ ದೇ' ಸಂಘಟನೆಯ 78 ಸದಸ್ಯರನ್ನು ಶನಿವಾರ ಬಂಧಿಸಿದ್ದಾರೆ. ಇನ್ನೇನು ಅಮೃತ್‌ಪಾಲ್ ಸಿಂಗ್ ಸಿಕ್ಕೇ ಬಿಟ್ಟರು ಎನ್ನುವಷ್ಟರಲ್ಲಿ ಸಿಂಗ್ ಪರಾರಿಯಾಗಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಅಮೃತ್‌ಪಾಲ್ ಸಿಂಗ್ ಮನೆಯಲ್ಲಿ ಪೊಲೀಸರು ಶೋಧ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರ ತಂದೆ ತಾರ್ಸೆಮ್ ಸಿಂಗ್, "ಪಂಜಾಬ್ ಪೊಲೀಸರು ನಮ್ಮ ಮನೆಯಲ್ಲಿ ಮೂರ್ನಾಲ್ಕು ಗಂಟೆಗಳ ಕಾಲ ಶೋಧ ನಡೆಸಿದರು ಆದರೆ ಯಾವುದೇ ಅಕ್ರಮ ಪತ್ತೆಯಾಗಿಲ್ಲ" ಎಂದು ತಿಳಿಸಿದರು.
"ಅಮೃತ್‌ಪಾಲ್ ಡ್ರಗ್ಸ್ ವಿರುದ್ಧ ಕೆಲಸ ಮಾಡುತ್ತಿದ್ದಾನೆ. ಹೀಗಾಗಿ ಆತನನ್ನು ಬಂಧಿಸುವಂತೆ ರಾಜಕೀಯ ಒತ್ತಡವಿದೆ. ಪಂಜಾಬ್‌ನ ಪ್ರತಿ ಮನೆಯಲ್ಲೂ ಡ್ರಗ್ಸ್ ಇರತ್ತೆ. ಆದರೆ ಆ ವಿಚಾರದ ಬಗ್ಗೆ ಗಮನ ಹರಿಸಿಲ್ಲ. ನನ್ನ ಮಗ ಯುವಕರನ್ನು ಮಾದಕ ದ್ರವ್ಯಗಳಿಂದ ದೂರವಿಡುತ್ತಿದ್ದಾನೆ. ಯಾರಾದರೂ ಡ್ರಗ್ಸ್ ಹಾವಳಿಯನ್ನು ಕೊನೆಗಾಣಿಸಲು ಪ್ರಯತ್ನಿಸುತ್ತಿದ್ದರೆ, ಅವರನ್ನು ತಡೆಯಲಾಗುತ್ತಿದೆ. ಅಮೃತ್‌ಪಾಲ್ ವಿರುದ್ಧದ ಈ ಕ್ರಮ ಅಸಮರ್ಥನೀಯ " ಎಂದು ಕಿಡಿಕಾರಿದರು.
"ಕೆಲ ತಿಂಗಳ ಹಿಂದಷ್ಟೇ ಅಮೃತ್‌ಪಾಲ್ ಪಂಜಾಬ್ ಗೆ ಬಂದಿದ್ದನು. ಅವನು ಬರುವ ಮೊದಲು ಪೊಲೀಸರು ಏನು ಮಾಡುತ್ತಿದ್ದರು? ಕ್ರಿಮಿನಲ್‌ಗಳು ಮತ್ತು ಡ್ರಗ್ಸ್‌ನಲ್ಲಿ ತೊಡಗಿರುವವರ ವಿರುದ್ಧ ಪೊಲೀಸರು ಏಕೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ ತಾರ್ಸೆಮ್ ಸಿಂಗ್, ನನ್ನ ಮಗನಿಗೆ ಏನಾದರೂ ಆಗತ್ತೆ ಅಂತ ನಮಗೆ ಆತಂಕ ಶುರುವಾಗಿದೆ" ಎಂದರು.
"ಅಮೃತ್‌ಪಾಲ್ ಸಿಂಗ್ ಬಗ್ಗೆ ನಮಗೆ ಸರಿಯಾದ ಮಾಹಿತಿ ಇಲ್ಲ. ಬಂಧಿಸುವುದಾದರೆ ಆತ ಬೆಳಗ್ಗೆ ಮನೆಯಿಂದ ಹೊರಡುವಾಗಲೇ ಪೊಲೀಸರು ಬಂಧಿಸಬೇಕಿತ್ತು. ಆತನಿಗೆ ಶರಣಾಗಲು ಹೇಳಿ ಎಂದು ಪೊಲೀಸರು ನಮ್ಮ ಕುಟುಂಬಕ್ಕೆ ಹೇಳಿದ್ದಾರೆ" ಎಂದು ಹೇಳಿದರು.
ಶನಿವಾರ ಜಲಂಧರ್ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಕಾರುಗಳಲ್ಲಿ ಅಮೃತ್‌ಪಾಲ್ ಸಿಂಗ್ ಹಾಗೂ ಅವರ ಸಹಚರರನ್ನು ಪೊಲೀಸರು ಬೆನ್ನೆಟ್ಟಿದ್ದರು. ಅಮೃತಪಾಲ್ ಸಿಂಗ್‌ನ 78 ಸಹಚರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು. ಆದರೆ, ಪೊಲೀಸರ ಕೈಗೆ ಇನ್ನೇನು ಸಿಕ್ಕೇಬಿಟ್ಟರು ಎನ್ನುವಷ್ಟರಲ್ಲ ಅಮೃತಪಾಲ್ ಸಿಂಗ್ ಮಾತ್ರ ತಪ್ಪಿಸಿಕೊಂಡಿದ್ದರು. ರಾಜ್ಯಾದ್ಯಂತ ನಡೆಸಿದ ಕಾರ್ಯಾಚರಣೆಯಲ್ಲಿ 300ಕ್ಕೂ ಹೆಚ್ಚು ರೈಫಲ್ಗಳು, 373 ಸಜೀವ ಗುಂಡುಗಳನ್ನು ಹಾಗೂ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮುಕ್ತಸರ್ ಜಿಲ್ಲೆಯಿಂದ ಅಮೃತಪಾಲ್ ಅವರ ‘ಖಾಲ್ಸಾ ವಾಹಿರ್’ ಧಾರ್ಮಿಕ ಮೆರವಣಿಗೆ ಪ್ರಾರಂಭವಾಗುವ ಒಂದು ದಿನ ಮುಂಚಿತವಾಗಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಘಟನೆಯ ಬಳಿಕ ಪಂಜಾಬ್‌ನ ಮೋಗಾ ಜಿಲ್ಲೆಯಲ್ಲಿ ಇಂಟರ್‌ನೆಟ್ ಸೇವೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ಈ ತಿಂಗಳ ಆರಂಭದಲ್ಲಿ ಅಮೃತ್‌ಪಾಲ್ ಸಿಂಗ್‌ನ ನಿಕಟ ಸಹಚರರಾದ ವಾರಿಸ್ ಪಂಜಾಬ್ ದೇ ನಾಯಕ, ಖಲಿಸ್ತಾನ ಮುಖಂಡ, ಲವ್‌ಪ್ರೀತ್ ಸಿಂಗ್ನನ್ನು ಪೊಲೀಸರು ಬಂಧಿಸಿದ್ದರು. ಆತ ಅಮೃತಸರ ವಿಮಾನ ನಿಲ್ದಾಣದ ಮೂಲಕ ಎಸ್ಕೇಪ್ ಆಗಲು ಪ್ರಯತ್ನಿಸಿದಾಗ ಪೊಲೀಸರು ಬಂಧಿಸಿದ್ದರು. ಆ ಬಳಿಕ ಪಂಜಾಬ್‌ನಲ್ಲಿ ಖಲಿಸ್ತಾನ ಹೋರಾಟ ಭುಗಿಲೆದ್ದಿತ್ತು. ಲವ್‌ಪ್ರೀತ್ ಸಿಂಗ್ ಬಂಧನ ವಿರೋಧಿಸಿ ಅಮೃತ್‌ಪಾಲ್ ಸಿಂಗ್ ನೇತೃತ್ವದಲ್ಲಿ ಪ್ರತಿಭಟನೆ, ಹೋರಾಟ ತೀವ್ರಗೊಂಡಿತ್ತು. ವಾರಿಸ್ ಪಂಜಾಬ್ ದೇ ಸಂಘಟನೆಯ ಕಾರ್ಯಕರ್ತರು ಖಡ್ಗ, ಬಂದೂಕು, ದೊಣ್ಣೆ ಹಿಡಿದುಕೊಂಡು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು.