ಶ್ರೀಕೃಷ್ಣನ ದ್ವಾರಕೆಯನ್ನು ಹುಡುಕಲು ಸಮುದ್ರದಾಳಕ್ಕಿಳಿದು ಅನ್ವೇಷಿಸಿದ ಎಎಸ್ಐಗೆ ಸಿಕ್ಕಿದ್ದೇನು; ಮುಂದೇನು
ದ್ವಾರಕಾ ಮತ್ತು ಬೆಟ್ ದ್ವಾರಕಾದಲ್ಲಿನ ಕಡಲಿನಲ್ಲಿ ಶ್ರೀಕೃಷ್ಣನ ದ್ವಾರಕೆಯ ಶೋಧ ಕಾರ್ಯ ಪೂರ್ಣಗೊಳಿಸಿರುವ ಎಎಸ್ಐನ ತಂಡ ಹೆಚ್ಚಿನ ಪರಿಶೋಧನೆಗಾಗಿ ಈ ವರ್ಷಾಂತ್ಯದಲ್ಲಿ ಮೂರನೇ ಬಾರಿ ಸಮುದ್ರದಾಳಕ್ಕಿಳಿಯಲಿದೆ. (ಬರಹ- ಪರಿಣೀತಾ, ಬೆಂಗಳೂರು)

ಭಗವಾನ್ ಶ್ರೀಕೃಷ್ಣನ ದ್ವಾರಕೆಯನ್ನು ಹುಡುಕುವುದಕ್ಕಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI) ತಜ್ಞರು ಗುಜರಾತ್‌ನಲ್ಲಿ ಸಮುದ್ರದಾಳಕ್ಕಿಳಿದು ಅನ್ವೇಷಿಸಿದ್ದರು. ದ್ವಾರಕಾ ಮತ್ತು ಬೆಟ್ ದ್ವಾರಕಾದಲ್ಲಿನ ಕಡಲಿನಲ್ಲಿ ಈ ಶೋಧ ಕಾರ್ಯ ಪೂರ್ಣಗೊಳಿಸಿರುವ ಎಎಸ್ಐನ ತಂಡ ಹೆಚ್ಚಿನ ಪರಿಶೋಧನೆಗಾಗಿ ಈ ವರ್ಷಾಂತ್ಯದಲ್ಲಿ ಮೂರನೇ ಬಾರಿ ಸಮುದ್ರದಾಳಕ್ಕಿಳಿಯಲಿದೆ.
ಇತ್ತೀಚಿನ ಪರಿಶೋಧನೆಯಲ್ಲಿ ಸಿಕ್ಕಿದ್ದೇನು?
ಫೆಬ್ರವರಿಯಲ್ಲಿ ಪ್ರಾರಂಭವಾದ ಅಧ್ಯಯನದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಂಡರ್‌ವಾಟರ್ ಆರ್ಕಿಯಾಲಜಿ ವಿಭಾಗವು ದ್ವಾರಕಾ ಮತ್ತು ಬೆಟ್ ದ್ವಾರಕಾದಲ್ಲಿ ಕಡಲೊಳಗೆ ಮತ್ತು ಕರಾವಳಿಯಲ್ಲಿ ಎರಡು ಹಂತಗಳಲ್ಲಿ ಪರಿಶೋಧನೆ ನಡೆಸಿತ್ತು.
ದ್ವಾರಕಾವು ಭಾರತದ ಮುಖ್ಯ ಭೂಭಾಗದ ಪಶ್ಚಿಮದ ತುದಿ ಮತ್ತು ಕಚ್ ಕೊಲ್ಲಿ ಅರೇಬಿಯನ್ ಸಮುದ್ರಕ್ಕೆ ತೆರೆದುಕೊಳ್ಳುವ ಸ್ಥಳದ ದಕ್ಷಿಣಕ್ಕಿದೆ. ಶಂಕೋಧರ್ ಎಂದೂ ಕರೆಯಲ್ಪಡುವ ಬೆಟ್ ದ್ವಾರಕಾ, ದ್ವಾರಕಾದ ಈಶಾನ್ಯಕ್ಕೆ ಸುಮಾರು 25 ಕಿ.ಮೀ ದೂರದಲ್ಲಿರುವ ಓಖಾ ಪಟ್ಟಣದ ಹೊರಗೆ ಕಚ್ ಕೊಲ್ಲಿಯ ಮುಂಭಾಗದಲ್ಲಿರುವ ಒಂದು ಸಣ್ಣ ದ್ವೀಪ.
ಫೆಬ್ರವರಿ 2024 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಪ್ರಾರ್ಥನೆ ಸಲ್ಲಿಸಲು ಸಮುದ್ರಕ್ಕಿಳಿದಿದ್ದು, ಅದೊಂದು "ದೈವಿಕ ಅನುಭವ" ಎಂದು ಬಣ್ಣಿಸಿದ್ದರು. ಓಖಾವನ್ನು ಬೆಟ್ ದ್ವಾರಕಾ ದ್ವೀಪಕ್ಕೆ ಸಂಪರ್ಕಿಸುವ ನಾಲ್ಕು ಪಥಗಳ ಕೇಬಲ್ ಸೇತುವೆ ಸುದರ್ಶನ ಸೇತುವನ್ನು ಅಂದು ಮೋದಿ ಉದ್ಘಾಟಿಸಿದ್ದರು.
2007 ರ ಆರಂಭದಲ್ಲಿ ದ್ವಾರಕೆಯ ಶೋಧಕ್ಕಾಗಿ ಐದು ಸದಸ್ಯರ ASI ತಂಡವು ದ್ವಾರಕಾದ ಪೂರ್ವ ಭಾಗದಲ್ಲಿರುವ ಗೋಮತಿ ಕೊಲ್ಲಿಯ ದಕ್ಷಿಣದಲ್ಲಿ ಪರಿಶೋಧನೆ ನಡೆಸಿತ್ತು . ನಂತರ ಮಾರ್ಚ್‌ನಲ್ಲಿ ಪುರಾತತ್ವ ಇಲಾಖೆಯ ತಜ್ಞರ ದೊಡ್ಡ ತಂಡವೊಂದು ನೀರಿನಲ್ಲಿ ಮುಳುಗಿರುವ ಪುರಾತತ್ತ್ವ ಶಾಸ್ತ್ರದ ಅವಶೇಷಗಳನ್ನು ಹುಡುಕಲು, ದಾಖಲಿಸಲು ಮತ್ತು ಅಧ್ಯಯನ ಮಾಡಲು ಸಮುದ್ರದಾಳಕ್ಕೆ ಧುಮುಕಿತ್ತು.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಂಡರ್‌ವಾಟರ್ ಆರ್ಕಿಯಾಲಜಿ ವಿಂಗ್ ಈ ಪರಿಶೋಧನೆ ವೇಳೆ ಹಲವಾರು ಅಡೆತಡೆಗಳನ್ನು ಎದುರಿಸುತ್ತಿರುವುದರಿಂದ ಶೋಧ ಕಾರ್ಯ ವಿಳಂಬವಾಗುತ್ತಿದೆ. 1981 ಮತ್ತು 2000 ರ ದಶಕದ ಆರಂಭದಲ್ಲಿ ತಮಿಳುನಾಡಿನ ಪೂಂಪುಹಾರ್‌ನಲ್ಲಿ 2,000 ವರ್ಷಗಳಷ್ಟು ಹಳೆಯದಾದ ಕಾವೇರಿಪಟ್ಟಣಂ ಬಂದರಿನ ಅವಶೇಷಗಳನ್ನು ಪತ್ತೆಹಚ್ಚಲು ನಡೆಸಿದ ಪರಿಶೋಧನೆ ಸೇರಿದಂತೆ ಇತರ ಉತ್ಖನನಗಳಿಗೂ ಇದೇ ರೀತಿ ಅಡ್ಡಿಯುಂಟಾಗಿತ್ತು.
ಎಎಸ್ಐ ಈಗ ಅಂಡರ್‌ವಾಟರ್ ಆರ್ಕಿಯಾಲಜಿ ವಿಭಾಗವನ್ನು ಸಕ್ರಿಯವಾಗಿರಿಸಲು ಯೋಚಿಸಿದೆ. ಮುಂದಿನ ಕೆಲವು ವರ್ಷಗಳಲ್ಲಿ, ತಮಿಳುನಾಡಿನ ಕಾವೇರಿ ಡೆಲ್ಟಾ ಮತ್ತು ಮಹಾರಾಷ್ಟ್ರ ಮತ್ತು ಒಡಿಶಾದ ಕರಾವಳಿಯಲ್ಲಿ ಹಲವಾರು ಸ್ಥಳಗಳನ್ನು ಅನ್ವೇಷಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದ್ವಾರಕೆಯ ಹಿಂದಿರುವ ಕತೆ
ಮಥುರಾದಲ್ಲಿ ತನ್ನ ಮಾವ ಕಂಸನನ್ನು ಕೊಂದ ನಂತರ ಶ್ರೀಕೃಷ್ಣನು ನೆಲೆಸಿದ ಸ್ಥಳ ದ್ವಾರಕೆ ಎಂದು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ. ದ್ವಾರಕೆಯನ್ನು ಸೃಷ್ಟಿಸಲು ಶ್ರೀಕೃಷ್ಣ ಪರಮಾತ್ಮ ಸಮುದ್ರದಿಂದ 12 ಯೋಜನಾಗಳನ್ನು ಅಂದರೆ ಸುಮಾರು 96 ಚದರ ಕಿ.ಮೀ. ಭೂಮಿಯನ್ನು ತನ್ನದಾಗಿಸಿಕೊಂಡನು ಎಂದು ಹೇಳಲಾಗಿದೆ.
"ದ್ವಾರಕೆ ಬಗ್ಗೆ ಪ್ರಾಚೀನ ಸಾಹಿತ್ಯದಲ್ಲಿಯೂ ಉಲ್ಲೇಖವಿದೆ. ಐತಿಹಾಸಿಕ, ಪುರಾತತ್ವ ಮತ್ತು ಸಾಂಸ್ಕೃತಿಕ ದೃಷ್ಟಿಕೋನದಿಂದಲೂ ಇದು ಮುಖ್ಯವಾಗಿದೆ. ಹೀಗಾಗಿ, ಇದನ್ನು ಇತಿಹಾಸಕಾರರು ಮತ್ತು ಪುರಾತತ್ತ್ವಜ್ಞರು ಹಲವು ವರ್ಷಗಳಿಂದ ಅನ್ವೇಷಿಸುತ್ತಿದ್ದಾರೆ ಎಂದು ಈ ವರ್ಷದ ಪರಿಶೋಧನೆಯ ನೇತೃತ್ವ ವಹಿಸಿದ್ದ ಎಎಸ್‌ಐ ಹೆಚ್ಚುವರಿ ಮಹಾನಿರ್ದೇಶಕ ಅಲೋಕ್ ತ್ರಿಪಾಠಿ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಆದಾಗ್ಯೂ, ಐತಿಹಾಸಿಕ ದ್ವಾರಕದ ಸ್ಥಳ ಮತ್ತು ಅದು ಎಷ್ಟು ಪುರಾತನವಾದುದು ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ. “1963 ರಲ್ಲಿ ಮೊದಲ ಭಾರಿ ಶೋಧ ನಡೆಸಿದ್ದು ಆಗ ಹಲವಾರು ಕಲಾಕೃತಿಗಳು ಸಿಕ್ಕಿದ್ದವು ಎಂದು ಗುಜರಾತ್ ಸರ್ಕಾರದ ವೆಬ್‌ಸೈಟ್‌ನಲ್ಲಿ ದ್ವಾರಕಾ ಬಗ್ಗೆ ಹೇಳಲಾಗಿದೆ. ದ್ವಾರಕಾಧೀಶ ದೇವಾಲಯದ ಸುತ್ತಲಿನ ತೆರೆದ ಪ್ರದೇಶಗಳ ಸೀಮಿತ ಲಭ್ಯತೆಯಿಂದಾಗಿ ಈ ಉತ್ಖನನಗಳು ಸಣ್ಣ ಪ್ರದೇಶದಲ್ಲಿ ನಡೆದವು ಎಂದು ಪುರಾತತ್ತ್ವಜ್ಞರು ತಿಳಿಸಿದ್ದಾರೆ.
ದ್ವಾರಕೆಯ ಸಮುದ್ರದ ಕಡೆಗೆ ಎರಡು ಸ್ಥಳಗಳಲ್ಲಿ ನಡೆದ ಉತ್ಖನನ ವೇಳೆ ಮುಳುಗಿರುವ ಬಡಾವಣೆ, ಕಲ್ಲಿನಿಂದ ನಿರ್ಮಿಸಲಾದ ದೊಡ್ಡ ಜೆಟ್ಟಿ ಮತ್ತು ಮೂರು ರಂಧ್ರಗಳನ್ನು ಹೊಂದಿರುವ ತ್ರಿಕೋನಾಕಾರದ ಕಲ್ಲಿನ ಲಂಗರುಗಳು ಲಭಿಸಿತ್ತು. ಬಡಾವಣೆಗಳು ಬಾಹ್ಯ, ಆಂತರಿಕ ಗೋಡೆ ಮತ್ತು ಕೋಟೆಯ ಕೊತ್ತಲಗಳ ರೂಪದಲ್ಲಿದ್ದವು.
ಲಂಗರುಗಳ ವೈಶಿಷ್ಟ್ಯವನ್ನು ನೋಡಿದರೆ, ಭಾರತದ ಮಧ್ಯ ಸಾಮ್ರಾಜ್ಯಗಳ ಅವಧಿಯಲ್ಲಿ (8 ನೇ - 18 ನೇ ಶತಮಾನಗಳು) ದ್ವಾರಕಾ ಪ್ರಮುಖ ಬಂದರಾಗಿತ್ತು ಎಂದು ತೋರುತ್ತದೆ. ಬಹುಶಃ ಕರಾವಳಿ ಸವೆತದ ಪರಿಣಾಮವಾಗಿ ಅದು ನಾಶವಾಗಿತ್ತು ಎಂದು ಊಹಿಸಲಾಗಿದೆ ಎಂದು ತಜ್ಞರು ಹೇಳಿದ್ದಾರೆ.
2007 ರಲ್ಲಿ, ಶಿಲ್ಪಗಳು ಮತ್ತು ಕಲ್ಲಿನ ಲಂಗರುಗಳು ಪತ್ತೆಯಾದ ಪ್ರದೇಶದಲ್ಲಿ ಕಡಿಮೆ ಉಬ್ಬರವಿಳಿತದ ಸಮಯದಲ್ಲಿ ಕಡಲಾಳದಲ್ಲಿ ಮತ್ತು ತೀರದಲ್ಲಿ ಪರಿಶೋಧನೆಯನ್ನು ನಡೆಸಲಾಯಿತು. ಪುರಾವೆಗಳ ಆಧಾರದ ಮೇಲೆ ಸ್ಥಳದ ಪ್ರಾಚೀನತೆಯನ್ನು ಸ್ಥಾಪಿಸುವುದು ಇದರ ಉದ್ದೇಶವಾಗಿದ್ದು, ಮುಳುಗಿದ್ದ ಅವಶೇಷಗಳನ್ನು ಅಧ್ಯಯನ ಮಾಡಿ ದಾಖಲಿಸಲಾಗುತ್ತಿದೆ.
ದ್ವಾರಕಾಧೀಶ ದೇವಾಲಯದ ಬಳಿಯ ಪ್ರದೇಶದಲ್ಲಿಯೂ ಉತ್ಖನನ ಮಾಡಲಾಗಿದ್ದು, ಇಲ್ಲಿ ಟೆರಾಕೋಟಾ ವಸ್ತುಗಳು, ಮಣಿಗಳು, ಬಳೆಗಳ ತುಂಡು, ತಾಮ್ರದ ಉಂಗುರಗಳು, ಕಬ್ಬಿಣದ ಗಟ್ಟಿಗಳು ಮತ್ತು ಮಡಿಕೆಗಳು ಸೇರಿದಂತೆ ಪ್ರಾಚೀನ ವಸ್ತುಗಳನ್ನು ಸಿಕ್ಕಿವೆ.
ಮುಂದೇನು?
ಈಗ ನಡೆಸಿದ ಪರಿಶೋಧನೆಯಲ್ಲಿ ಸಿಕ್ಕಿರುವ ವಸ್ತುಗಳು ಎಷ್ಟು ಪುರಾತನವಾದುದು ಎಂಬುದನ್ನು ವೈಜ್ಞಾನಿಕ ವಿಶ್ಲೇಷಣೆಯ ಮೂಲಕ ನಿಖರವಾಗಿ ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಹಿರಿಯ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚಿನ ವೈಜ್ಞಾನಿಕ ವಿಧಾನಗಳು ಮತ್ತು ತಂತ್ರಗಳನ್ನು ಬಳಸಿಕೊಂಡು ಉತ್ಖನನ ನಡೆಸುವುದರಿಂದ ಮತ್ತು ಪತ್ತೆಯಾಗಿರುವ ವಸ್ತುಗಳ ನಿಖರವಾದ ಕಾಲನಿರ್ಣಯವು ದ್ವಾರಕಾ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
(ಬರಹ- ಪರಿಣೀತಾ, ಬೆಂಗಳೂರು)
ವಿಭಾಗ


