Delhi Earth Quake: ದೆಹಲಿ, ಉತ್ತರ ಭಾರತದ ಹಲವು ಭಾಗಗಳಲ್ಲಿ ಬೆಳ್ಳಂಬೆಳಗ್ಗೆ ಭೂಕಂಪನ, ಭಯದಿಂದ ಓಡಿ ಬಂದ ಜನ
Delhi Earth Quake: ದೆಹಲಿ ನಗರದಲ್ಲಿ ಸೋಮವಾರ ಬೆಳಿಗ್ಗೆ ಭೂಮಿ ನಡುಗಿದ ಅನುಭವ ಹಲವು ಭಾಗಗಳಲ್ಲಿ ಆಗಿದೆ. ಇದಲ್ಲದೇ ಉತ್ತರ ಭಾರತದ ಕೆಲವು ಕಡೆಗಳಲ್ಲೂ ಇದೇ ಅನುಭವವಾಗಿದೆ.

Delhi Earth Quake: ರಾಜಧಾನಿ ನಗರಿ ದೆಹಲಿಯಲ್ಲಿ ಸೋಮವಾರ ಬೆಳಿಗ್ಗೆ ಭೂಕಂಪನ ಉಂಟಾಯಿತು. 4.0 ತೀವ್ರತೆಯ ಭೂಕಂಪನದ ಅನುಭವವು ದೆಹಲಿ ನಗರದಲ್ಲಿ ಆಯಿತು, ಉತ್ತರ ಭಾರತದಾದ್ಯಂತ ಪ್ರಬಲವಾದ ನಡುಕವೂ ಆಯಿತು. ಇದರಿಂದ ಭಯಗೊಂಡ ಜನತೆ ಮನೆಯಿಂದ ಹೊರ ಬಂದ ಸಂಗತಿಯೂ ನಡೆಯಿತು. ಕೆಲ ಹೊತ್ತು ಮನೆಯಿಂದ ಹೊರಗೆ ಇದ್ದ ಜನತೆಗೆ ಅಲ್ಲಿಯೂ ಭೂಮಿ ಕಂಪಿಸಿದ ಅನುಭವವಾಯಿತು. ಕೆಲವು ಕ್ಷಣದ ನಂತರ ಸಹಜಸ್ಥಿತಿ ಉಂಟಾಗಿದ್ದರಿಂದ ಜನ ನಿಟ್ಟುಸಿರು ಬಿಟ್ಟರು. ದೆಹಲಿ ಮಾತ್ರವಲ್ಲದೇ ಉತ್ತರ ಭಾರತದ ಹಲವು ಭಾಗಗಳಲ್ಲಿ ಆಗಾಗ ಭೂಕಂಪನ ಸಂಭವಿಸುತ್ತಿವೆ. ಕಳೆದ ವರ್ಷ ಎರಡು ಮೂರು ಬಾರಿ ಭೂಕಂಪನದ ಅನುಭವಗಳು ಆಗಿದ್ದವು.
ಸೋಮವಾರ ಬೆಳಗಿನ ಜಾವ ಇನ್ನೂ ಕೆಲವರು ಕಣ್ಣು ಬಿಡುವುದರಲ್ಲಿದ್ದರು. ಮತ್ತೆ ಕೆಲವರು ಬೆಳಗಿನ ವಾಯು ವಿಹಾರಕ್ಕೆ ಹೋಗಲೆಂದು ಎದಿದ್ದರು. ಈ ವೇಳೆ ನಾಲ್ಕೈದು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವ ಆಯಿತು. 4.0 ತೀವ್ರತೆಯಲ್ಲಿ ಭೂಕಂಪದ ಪ್ರಮಾಣ ಇತ್ತು. ಏಕಾಏಕಿ ಭೂಮಿ ಕಂಪಿಸಿದ್ದರಿಂದ ಭಯಗೊಂಡ ಹಲವರು ಅಲ್ಲಿಯೇ ಕೂಗಿಕೊಂಡರು. ಮಲಗಿದವರೂ ಎದ್ದು ಹೊರ ಬಂದರು. ದೆಹಲಿ ನಗರ, ನೋಯ್ಡಾ. ಗ್ರೇಟರ್ ನೋಯ್ಡಾ, ಗಾಜಿಯಾಬಾದ್ ಸಹಿತ ಹಲವು ಭಾಗಗಳಲ್ಲಿ ಈ ಅನುಭವವಾಯಿತು.
ಭೂಕಂಪನದಿಂದ ರಕ್ಷಣೆಗೆ ಜನ ಹೊರ ಬಂದರಾದರೂ ಯಾರಿಗೂ ಗಾಯಗಳಾಗಳಾಗಲಿ. ಎಲ್ಲಿಯೂ ಅನಾಹುತ ಆಗಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಅದರಲ್ಲೂ ಹೆಚ್ಚು ಜನಸಂದಣಿ ಹಾಗೂ ಬೃಹತ್ ಕಟ್ಟಡಗಳಿರುವ ನೋಯ್ಡಾ, ಗ್ರೇಟರ್ ನೋಯ್ಡಾ, ದೆಹಲಿ ಸಹಿತ ಪ್ರಮುಖ ಭಾಗದಲ್ಲಿ ಅನುಭವವಾಗಿದೆ.
ಕೂಡಲೇ ಎಕ್ಸ್ ಮೂಲಕ ಪೋಸ್ಟ್ ಹಾಕಿದ ದೆಹಲಿ ಪೊಲೀಸರು, ನೀವೆಲ್ಲರೂ ಸುರಕ್ಷಿತವಾಗಿದ್ದೀರಿ ಎಂದು ಭಾವಿಸುತ್ತೇವೆ. ಏನಾದರೂ ಸಮಸ್ಯೆಯಾದರೂ ಕೂಡಲೇ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಎಂದು ಮನವಿ ಮಾಡಿದರು.
ದೆಹಲಿ ರೈಲ್ವೆ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕರೊಬ್ಬರು ತಮಗಾದ ಅನುಭವ ಹಂಚಿಕೊಂಡರು. ನಾನು ಬೆಳಿಗ್ಗೆಯೇ ನಿಲ್ದಾಣಕ್ಕೆ ಬಂದಿದ್ದೆ. ಏಕಾಏಕಿ ಭೂಮಿ ಕಂಪಿಸಿದ ಹಾಗಾಯಿತು. ಯಾವುದೇ ಸೇತುವೆ ಕುಸಿದಿರಬೇಕು. ಇಲ್ಲದೇ ದುರಂತ ಸಂಭವಿಸಿರಬೇಕು ಎಂದು ಲಾಂಜ್ ನಿಂದ ಹೊರಗೆ ಓಡಿ ಬಂದು ನೋಡಿದೆ. ನನ್ನ ರೀತಿಯಲ್ಲಿಯೇ ಹಲವರಿಗೂ ಅನುಭವವಾಗಿತ್ತು.,
ಗಾಜಿಯಾಬಾದ್‌ನ ನಿವಾಸಿಯೊಬ್ಬರ ಪ್ರಕಾರ, ಹಿಂದೆ ಹಲವು ಬಾರಿ ದೆಹಲಿಯಲ್ಲಿ ಭೂಕಂಪನವಾಗಿದೆ. ಈ ರೀತಿ ಹಿಂದೆ ಎಂದೂ ಆಗಿರಲಿಲ್ಲ. ಸಮೀಪದಲ್ಲೇ ಯಾವುದೋ ರೈಲು ಸಂಚರಿಸದಂತೆ ಕಂಪನದ ಅನುಭವಾಯಿತು. ಎಲ್ಲವನ್ನೂ ಅಲ್ಲಾಡಿಸಿದ ಹಾಗಾಯಿತು. ಅಲ್ಲದೇ ನಮ್ಮ ಇಡೀ ಕಟ್ಟಡವೂ ಅಲ್ಲಾಡಿಸಿದಂತ ಅನುಭವಾಯಿತು ಎಂದು ಹೇಳಿಕೊಂಡರು.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ಆತಂಕಕ್ಕೆ ಒಳಗಾಗದೇ ದೆಹಲಿ ಜನತೆ ಶಾಂತವಾಗಿರುವಂತೆ ಮನವಿ ಮಾಡಿದರು.
ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ. ಪ್ರತಿಯೊಬ್ಬರೂ ಶಾಂತವಾಗಿರಲು ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಸಂಭವನೀಯ ನಂತರದ ಆಘಾತಗಳ ಬಗ್ಗೆ ಎಚ್ಚರದಿಂದಿರಿ. ಅಧಿಕಾರಿಗಳು ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇರಿಸಿದ್ದಾರೆ ಎಂದು ಮೋದಿ ತಮ್ಮ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.
ದೆಹಲಿಯು ಭೂಕಂಪಗಳಿಗೆ ಆಗಾಗ ಹೀಗೆ ಗುರಿಯಾಗುತ್ತಲೇ ಇರುತ್ತದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS)ನ ಭೂಕಂಪನ ವಲಯ ನಕ್ಷೆಯಲ್ಲಿ ದೆಹಲಿ ನಗರವು ಹೆಚ್ಚಿನ ಭೂಕಂಪನ ವಲಯದಲ್ಲಿ (ವಲಯ IV) ನೆಲೆಗೊಂಡಿದೆ. ಹೀಗಾಗಿ ಈ ರೀತಿ ಆಗುತ್ತಲೇ ಇರುತ್ತದೆ. ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

ವಿಭಾಗ