Earthquake news: ದೆಹಲಿ, ಜಮ್ಮು ಮತ್ತು ಕಾಶ್ಮೀರ ಸುತ್ತಮುತ್ತ ಭೂಕಂಪದ ಅನುಭವ; ದೆಹಲಿಯಲ್ಲಿ 5.4 ತೀವ್ರತೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Earthquake News: ದೆಹಲಿ, ಜಮ್ಮು ಮತ್ತು ಕಾಶ್ಮೀರ ಸುತ್ತಮುತ್ತ ಭೂಕಂಪದ ಅನುಭವ; ದೆಹಲಿಯಲ್ಲಿ 5.4 ತೀವ್ರತೆ

Earthquake news: ದೆಹಲಿ, ಜಮ್ಮು ಮತ್ತು ಕಾಶ್ಮೀರ ಸುತ್ತಮುತ್ತ ಭೂಕಂಪದ ಅನುಭವ; ದೆಹಲಿಯಲ್ಲಿ 5.4 ತೀವ್ರತೆ

Earthquake news: ದೆಹಲಿ, ಜಮ್ಮು ಮತ್ತು ಕಾಶ್ಮೀರ ಸುತ್ತಮುತ್ತಲಿನ ಪ್ರದೇಶದಲ್ಲಿ ಮಂಗಳವಾರ ಅಪರಾಹ್ನ ಭೂಕಂಪನದ ಅನುಭವವಾಗಿದೆ. ದೆಹಲಿಯಲ್ಲಿ ಭೂಕಂಪನದ ತೀವ್ರತೆ 5.4 ದಾಖಲಾಗಿದೆ. ಈ ಕುರಿತ ವಿವರ ಇಲ್ಲಿದೆ.

ದೆಹಲಿ ಸುತ್ತಮುತ್ತ ಭೂಕಂಪ
ದೆಹಲಿ ಸುತ್ತಮುತ್ತ ಭೂಕಂಪ (iStock /HTNews)

ರಾಷ್ಟ್ರ ರಾಜಧಾನಿ ದೆಹಲಿ-ಎನ್‌ಸಿಆರ್ (Delhi NCR) ಮತ್ತು ಉತ್ತರ ಭಾರತ (North India) ದ ಹಲವು ಭಾಗಗಳಲ್ಲಿ ಮಂಗಳವಾರ ಮಧ್ಯಾಹ್ನ ಭೂಕಂಪನ (Earthquake) ದ ಅನುಭವವಾಯಿತು. ಜಮ್ಮು ಮತ್ತು ಕಾಶ್ಮೀರ (Jammu and Kashmir) ದ ಕಿಶ್ತ್ವಾರ್‌ನ ಆಗ್ನೇಯಕ್ಕೆ 30 ಕಿಲೋ ಮೀಟರ್ ದೂರದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ (ಇಎಂಎಸ್‌ಸಿ) ತಿಳಿಸಿದೆ.

ಭೂಕಂಪವು 60 ಕಿಲೋ ಮೀಟರ್‌ (37.28 ಮೈಲುಗಳು) ಆಳದಲ್ಲಿತ್ತು. ಭೂಕಂಪದ ಕೇಂದ್ರ ಬಿಂದುವು ಪಂಜಾಬ್‌ನ ಪಠಾಣ್‌ಕೋಟ್‌ನಿಂದ ಉತ್ತರಕ್ಕೆ 99 ಕಿಲೋ ಮೀಟರ್‌ ದೂರದಲ್ಲಿದೆ ಎಂದು ಇಎಂಎಸ್‌ಸಿ ತಿಳಿಸಿದೆ.

ಮಂಗಳವಾರ (ಜೂ.13) ಮಧ್ಯಾಹ್ನ 1.30ರ ಸುಮಾರಿಗೆ ಭೂಕಂಪದ ಅನುಭವವಾಗಿದೆ. ಇದುವರೆಗೆ ಯಾವುದೇ ಆಸ್ತಿ-ಪಾಸ್ತಿ ಹಾನಿ ಮತ್ತು ಪ್ರಾಣ ಹಾನಿ ವರದಿಯಾಗಿಲ್ಲ.

ಮ್ಯಾನ್ಮಾರ್‌ನಲ್ಲೂ ಸಂಭವಿಸಿದ ಭೂಕಂಪ

ಮ್ಯಾನ್ಮಾರ್‌ನಲ್ಲಿ ಕೂಡ 3.7 ತೀವ್ರತೆಯ ಭೂಕಂಪ ಸಂಭವಿಸಿತ್ತು. ಮ್ಯಾನ್ಮಾರ್‌ನಲ್ಲಿ ಮಂಗಳವಾರ ಮುಂಜಾನೆ 2:53 ಕ್ಕೆ (IST) ಮತ್ತು 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.

ಇದಕ್ಕೂ ಮೊದಲು ಮೇ 31 ರಂದು ಮ್ಯಾನ್ಮಾರ್‌ನಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿತ್ತು. ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಭೂಕಂಪನ ತೀವ್ರತೆ 5.4 ದಾಖಲಾಗಿತ್ತು ಎಂದು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.

ಭೂಕಂಪದಿಂದಾಗಿ ಶಾಲಾ ಮಕ್ಕಳು ಭಯಭೀತರಾಗಿದ್ದರು. ಅಂಗಡಿಗಳಲ್ಲಿದ್ದ ಜನರು ಹೊರಗೆ ಧಾವಿಸಿದರು. ಇದು ಭಯಹುಟ್ಟಿಸುವಂತೆ ಇತ್ತು. ಹಿಂದಿನ ಭೂ ಕಂಪನಗಳಿಗಿಂತ ಇದು ಹೆಚ್ಚು ತೀವ್ರವಾಗಿತ್ತು..." ಎಂದು ಶ್ರೀನಗರದ ಸ್ಥಳೀಯರೊಬ್ಬರು ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪಾಕಿಸ್ತಾನದ ಕೆಲವು ಭಾಗಗಳಲ್ಲಿ 5.6 ತೀವ್ರತೆಯ ಭೂಕಂಪ

ರಾಜಧಾನಿ ಇಸ್ಲಾಮಾಬಾದ್ ಸೇರಿ ಪಾಕಿಸ್ತಾನದ ಕೆಲವು ಭಾಗಗಳಲ್ಲಿ 5.6 ರಿಕ್ಟರ್ ಮಾಪಕದಲ್ಲಿ ಮಧ್ಯಮ ತೀವ್ರತೆಯ ಭೂಕಂಪ ಸಂಭವಿಸಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ಆತಂಕ ಕಳವಳ ಮೂಡಿತ್ತು. ಜನರು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದ ದೃಶ್ಯ ಸಾಮಾನ್ಯವಾಗಿತ್ತು.

ಪಾಕಿಸ್ತಾನದ ಹವಾಮಾನ ಇಲಾಖೆಯ ಪ್ರಕಾರ, ಭೂಕಂಪವು ಸ್ಥಳೀಯವಾಗಿ ಮಧ್ಯಾಹ್ನ 1:04 ಕ್ಕೆ ಅನುಭವಕ್ಕೆ ಬಂತು. ಈ ಭೂಕಂಪವು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿತ್ತು. ಇದರ ಕೇಂದ್ರ ಬಿಂದು ಪೂರ್ವ ಕಾಶ್ಮೀರದಲ್ಲಿತ್ತು ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಲಾಹೋರ್, ಇಸ್ಲಾಮಾಬಾದ್ ಮತ್ತು ಪೇಶಾವರದಲ್ಲಿ ಕಂಪನದ ಅನುಭವವಾಗಿತ್ತು. ಜನರು ತಮ್ಮ ಕಚೇರಿ ಮತ್ತು ಮನೆಗಳಿಂದ ಹೊರಬಂದಿದ್ದರು. ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ತತ್‌ಕ್ಷಣಕ್ಕೆ ಯಾವುದೇ ವರದಿಗಳಿಲ್ಲ.

ಪಂಜಾಬ್‌ನಲ್ಲಿ ಶಕರ್ ಗಢ್, ಚಿಚಾವತ್ನಿ, ಸಿಯಾಲ್‌ಕೋಟ್, ಮಂಡಿ ಬಹೌದ್ದೀನ್, ರಾವಲ್ಪಿಂಡಿ, ಝೇಲಂ, ಹಫೀಜಾಬಾದ್ ಮತ್ತು ಜಫರ್ವಾಲ್‌ನಲ್ಲಿ ಕಂಪನದ ಅನುಭವವಾಗಿದೆ. ಖೈಬರ್ ಪಖ್ತುಂಖ್ವಾದ ಅಬೋಟಾಬಾದ್, ಸ್ವಾಬಿ ಮತ್ತು ಸ್ವಾತ್ ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿದೆ.

ಏತನ್ಮಧ್ಯೆ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ, ಬಾಗ್, ಧೀರ್ ಕೋಟ್ ಮತ್ತು ಮುಜಾಫರಾಬಾದ್ ಪ್ರದೇಶಗಳಲ್ಲಿ ಕಂಪನದ ಅನುಭವವಾಯಿತು. ಪಾಕಿಸ್ತಾನದಲ್ಲಿ ಆಗಾಗ್ಗೆ ವಿವಿಧ ಪ್ರಮಾಣದ ಭೂಕಂಪಗಳಾಗುತ್ತಲೇ ಇವೆ. ಪಾಕಿಸ್ತಾನದಲ್ಲಿ 2005ರಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ 74,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.