Shiv Sena news: ಉದ್ಧವ್ ಠಾಕ್ರೆ ಬಣಕ್ಕೆ ಇಸಿ ಬಿಗ್ ಶಾಕ್; ಶಿವಸೇನೆ ಹೆಸರು, ಪಕ್ಷದ ಚಿಹ್ನೆ ಬಿಲ್ಲು ಬಾಣವನ್ನ ಶಿಂಧೆ ಬಣ್ಣಕ್ಕೆ ನೀಡಿ ಆದೇಶ
ಶಿವಸೇನೆ ಪಕ್ಷದ ಹೆಸರು, ಚಿಹ್ನೆಯಾದ ಬಿಲ್ಲು ಬಾಣವನ್ನು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಣಕ್ಕೆ ನೀಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಇದು ಉದ್ಧವ್ ಠಾಕ್ರೆ ಬಣಕ್ಕೆ ಹಿನ್ನಡೆ ಉಂಟು ಮಾಡಿದೆ.
ಮುಂಬೈ: ಮಹಾರಾಷ್ಟ್ರದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಪೈಪೋಟಿಗೆ ವೇದಿಕೆ ಸಿದ್ಧವಾದಂತಿದೆ. ಕೇಂದ್ರ ಚುನಾವಣಾ ಆಯೋಗ ನೀಡಿರುವ ಆದೇಶವೊಂದು ಉದ್ಧವ್ ಠಾಕ್ರೆ ಬಣಕ್ಕೆ ಭಾರಿ ಹಿನ್ನಡೆ ಉಂಟುಮಾಡಿದೆ.
ಶಿವಸೇನೆ ಪಕ್ಷದ ಹೆಸರು ಮತ್ತು ಪಕ್ಷದ ಚಿಹ್ನೆಯಾದ ಬಿಲ್ಲು ಬಾಣವನ್ನು ಸಿಎಂ ಏಕನಾಥ್ ಶಿಂಧೆ ಬಣಕ್ಕೆ ನೀಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ಆದೇಶ ಹೊರಬರುತ್ತಿದ್ದಂತೆ ಮುಂಬೈನಲ್ಲಿ ಶಿಂಧೆ ಬಣದ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ. ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿರುವ ಕಾರ್ಯಕರು, ಸಹಿ ಹಂಚಿ ಸಂಭ್ರಮಿಸಿದ್ದಾರೆ.
ರಾಜಕೀಯ ಪಕ್ಷಗಳ ಸಂವಿಧಾನಿಕ ಪದಾಧಿಕಾರಿಗಳ ಹುದ್ದೆಗಳಿಗೆ ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳನ್ನು ನಡೆಸಬೇಕು. ಆಂತರಿಕ ವಿವಾದಗಳ ಪರಿಹಾರಕ್ಕಾಗಿ ಮತ್ತಷ್ಟು ಮುಕ್ತ ಮತ್ತು ನ್ಯಾಯಯುತ ಕಾರ್ಯವಿಧಾನವನ್ನು ಒದಗಿಸಬೇಕು ಎಂದು ಈ ಇದೇ ವೇಳೆ ಚುನಾವಣಾ ಆಯೋಗ ಹೇಳಿದೆ.
ಈ ಕಾರ್ಯವಿಧಾನಗಳನ್ನು ತಿದ್ದುಪಡಿ ಮಾಡಲು ಕಷ್ಟವಾಗುತ್ತೆ. ಸಾಂಸ್ಥಿಕ ಸದಸ್ಯರ ದೊಡ್ಡ ಬೆಂಬಲವನ್ನು ಖಾತ್ರಿಪಡಿಸಿಕೊಂಡ ನಂತರವೇ ತಿದ್ದುಪಡಿ ಮಾಡಬೇಕು ಎಂಬುದನ್ನು ಇಸಿ ಆದೇಶದ ವೇಳೆ ಪ್ರಸ್ತಾಪಿಸಿದೆ.
ಇಸಿಯಿಂದ ಆ ಆದೇಶ ಹೊರಬರುತ್ತಿದ್ದಂತೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು ತಮ್ಮ ಟ್ವಿಟರ್ ಖಾತೆಯ ಡಿಪಿಯನ್ನು ಬದಲಾಯಿಸಿದ್ದಾರೆ. ಶಿವಸೇನೆ ಸಂಸ್ಥಾಪದ ಬಾಳಾ ಸಾಹೇಬ ಠಾಕ್ರೆ ಅವರ ಬಳಿ ಶಿಂಧೆ ಕುಳಿತುಕೊಂಡಿರುವ ಫೋಟೋವನ್ನು ತಮ್ಮ ಡಿಪಿಗೆ ಹಾಕಿಕೊಂಡಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಉದ್ಧವ್ ಠಾಕ್ರೆ, ಚುನಾವಣಾ ಆಯೋಗದ ಈ ಆದೇಶದ ವಿರುದ್ಧ ನಾವು ಖಂಡಿತವಾಗಿಯೂ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ. ಆಯೋಗದ ಈ ಆದೇಶವನ್ನು ಎಸ್ ಸಿ ರದ್ದುಪಡಿಸುತ್ತದೆ. ಜೊತೆಗೆ 16 ಶಾಸಕರನ್ನು ಅನರ್ಹಗೊಳಿಸುತ್ತದೆ ಎಂಬ ನಂಬಿಕೆ ನಮಗಿದೆ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿಗೆ ಮುನ್ನ ಕೇಂದ್ರ ಚುನಾವಣಾ ಆಯೋಗ ನಿರ್ಧಾರವನ್ನು ನೀಡಬಾರದು ಎಂದು ನಾನು ಈ ಹಿಂದೆ ಹೇಳಿದ್ದೆ. ಶಾಸಕರು ಮತ್ತು ಸಂಸದರ ಸಂಖ್ಯೆಯನ್ನು ಆಧರಿಸಿ ಪಕ್ಷದ ಅಸ್ತಿತ್ವವನ್ನು ನಿರ್ಧರಿಸಿದರೆ, ಯಾವುದೇ ಬಂಡವಾಳಶಾಹಿ ಶಾಸಕರು, ಸಂಸದರನ್ನು ಖರೀದಿಸಬಹುದು ಜೊತೆಗೆ ಸಿಎಂ ಆಗಬಹುದು ಎಂದು ಠಾಕ್ರೆ ತಿಳಿಸಿದ್ದಾರೆ.
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಪ್ರತಿಕ್ರಿಯಿಸಿ, ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಮೇಲೆ ಈ ದೇಶ ಸಾಗುತ್ತಿದೆ. ಆ ಸಂವಿಧಾನದ ಆಧಾರದ ಮೇಲೆ ನಾವು ನಮ್ಮ ಸರ್ಕಾರವನ್ನು ರಚಿಸಿದ್ದೇವೆ. ಇಂದು ಬಂದಿರುವ ಆದೇಶ ಅರ್ಹತೆಯ ಆಧಾರದ ಮೇಲಿದೆ. ಚುನಾವಣಾ ಆಯೋಗಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.
ಇದು ಬಾಳಾಸಾಹೇಬ್ ಮತ್ತು ಆನಂದ್ ದಿಘೆ, ನಮ್ಮ ಕಾರ್ಯಕರ್ತರು, ಸಂಸದರು, ಶಾಸಕರು, ಸಾರ್ವಜನಿಕ ಪ್ರತಿನಿಧಿಗಳು ಮತ್ತು ಲಕ್ಷಾಂತರ ಶಿವಸೈನಿಕರ ಸಿದ್ಧಾಂತಗಳ ವಿಜಯವಾಗಿದೆ. ಇದು ಪ್ರಜಾಪ್ರಭುತ್ವದ ವಿಜಯ ಅಂತ ಶಿಂಧೆ ಹೇಳಿದ್ದಾರೆ.
ಉದ್ಧವ್ ಠಾಕ್ರೆ ಬಣ ಸಂಜಯ್ ರಾವತ್ ಈ ಬಗ್ಗೆ ಮಾತನಾಡಿದ್ದು, ನಾವು ಚಿಂತಿಸುವ ಅಗತ್ಯವಿಲ್ಲ. ಸಾರ್ವಜನಿಕರು ನಮ್ಮೊಂದಿಗಿದ್ದಾರೆ. ನಾವು ಹೊಸ ಚಿಹ್ನೆಯೊಂದಿಗೆ ಹೋಗುತ್ತೇವೆ. ಈ ಶಿವಸೇನೆಯನ್ನು ಮತ್ತೊಮ್ಮೆ ಸಾರ್ವಜನಿಕ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಇಸಿ ಹಾಗೂ ಶಿಂಧೆ ಬಣಕ್ಕೆ ಸೆಡ್ಡು ಹೊಡೆದಿದ್ದಾರೆ.
ಮಹಾರಾಷ್ಟ್ರ ಡಿಸಿಎಂ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಪ್ರತಿಕ್ರಿಯಿಸಿ, ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತಗಳ ಮೇಲೆ ನಡೆಯುವ ಸಿಎಂ ಶಿಂಧೆ ಅವರ ಶಿವಸೇನೆಯೇ ಮೂಲ ಶಿವಸೇನೆಯಾಗಿದೆ ಎಂದಿದ್ದಾರೆ.
ವಿಭಾಗ