ಆರ್ಥಿಕ ಸಮೀಕ್ಷೆ 2025 ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮುಂದಿನ ವರ್ಷಕ್ಕೆ ಜಿಡಿಪಿ ಬೆಳವಣಿಗೆ ಶೇ 6.3 - ಶೇ 6.8, 10 ಮುಖ್ಯ ಅಂಶ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆರ್ಥಿಕ ಸಮೀಕ್ಷೆ 2025 ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮುಂದಿನ ವರ್ಷಕ್ಕೆ ಜಿಡಿಪಿ ಬೆಳವಣಿಗೆ ಶೇ 6.3 - ಶೇ 6.8, 10 ಮುಖ್ಯ ಅಂಶ

ಆರ್ಥಿಕ ಸಮೀಕ್ಷೆ 2025 ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮುಂದಿನ ವರ್ಷಕ್ಕೆ ಜಿಡಿಪಿ ಬೆಳವಣಿಗೆ ಶೇ 6.3 - ಶೇ 6.8, 10 ಮುಖ್ಯ ಅಂಶ

Economic Survey 2025: ಕೇಂದ್ರ ಬಜೆಟ್ ಅಧಿವೇಶನ ಶುರುವಾಗಿದ್ದು, ಮೊದಲ ದಿನವಾದ ಇಂದು (ಜನವರಿ 31) ಆರ್ಥಿಕ ಸಮೀಕ್ಷೆ 2025 ಮಂಡನೆಯಾಗಿದೆ. ಇದರಲ್ಲಿ ಮುಂಬರುವ ವರ್ಷಕ್ಕೆ ಜಿಡಿಪಿ ಬೆಳವಣಿಗೆಯನ್ನು ಶೇಕಡ 6.3 ರಿಂದ ಶೇ 6.8 ಅಂದಾಜಿಸಲಾಗಿದೆ. ಆರ್ಥಿಕ ಸಮೀಕ್ಷೆಯ 10 ಮುಖ್ಯ ಅಂಶಗಳ ವಿವರ ಇಲ್ಲಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ 2025 ಮಂಡಿಸಿದರು. ಮುಂದಿನ ವರ್ಷಕ್ಕೆ ಜಿಡಿಪಿ ಬೆಳವಣಿಗೆ ಶೇ 6.3 - ಶೇ 6.8 ನಿಗದಿ ಮಾಡಲಾಗಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ 2025 ಮಂಡಿಸಿದರು. ಮುಂದಿನ ವರ್ಷಕ್ಕೆ ಜಿಡಿಪಿ ಬೆಳವಣಿಗೆ ಶೇ 6.3 - ಶೇ 6.8 ನಿಗದಿ ಮಾಡಲಾಗಿದೆ.

Economic Survey 2025: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಜನವರಿ 31 ರ ಶುಕ್ರವಾರ ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆ ಯನ್ನು ಮಂಡಿಸಿದರು. ಸಮೀಕ್ಷೆಯ ಪ್ರಕಾರ, ಜಾಗತಿಕ ಮಟ್ಟದಲ್ಲಿ ಅರ್ಥ ವ್ಯವಸ್ಥೆಯ ಅಸ್ಥಿರತೆಯ ನಡುವೆಯೂ, ಮುಂಬರುವ ವರ್ಷದ (2025-26) ಭಾರತದ ಜಿಡಿಪಿ ಬೆಳವಣಿಗೆ ಶೇಕಡ 6.3 ರಿಂದ ಶೇಕಡ 6.8 ಇರಲಿದೆ ಎಂದು ಆರ್ಥಿಕ ಸಮೀಕ್ಷೆ ವಿವರಿಸಿದೆ. ಬಳಕೆದಾರರ ಚಟುವಟಿಕೆ ತಣ್ಣಗಿದ್ದು, ಹಣದುಬ್ಬರ ನಿಯಂತ್ರಣದಲ್ಲಿ ಇರಲಿದೆ. ಗ್ರಾಮೀಣ ಪ್ರದೇಶದ ಬೇಡಿಕೆಯು ದೇಶದ ಅರ್ಥ ವ್ಯವಸ್ಥೆಗೆ ಚಾಲನಾ ಶಕ್ತಿಯಾಗಿ ಇರಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.

ಆರ್ಥಿಕ ಸಮೀಕ್ಷೆ ಎಂಬುದು ಭಾರತದ ಆರ್ಥಿಕತೆಯ ಕಾರ್ಯಕ್ಷಮತೆ, ಸರ್ಕಾರದ ನೀತಿಗಳು ಮತ್ತು ಮುಂಬರುವ ಹಣಕಾಸು ವರ್ಷದ ದೃಷ್ಟಿಕೋನದ ಸಂಕಲನವಾಗಿದೆ. ಇದನ್ನು ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ನೇತೃತ್ವದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗವು ಈ ಸಮೀಕ್ಷೆಯನ್ನು ಸಿದ್ಧಪಡಿಸಿದೆ. ಸದ್ಯ ವಿ. ಅನಂತ ನಾಗೇಶ್ವರನ್ ಅವರು ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ಈ ಹೊಣೆಗಾರಿಕೆಯನ್ನು ನಿರ್ವಹಿಸಿದರು.

ಲೋಕಸಭಾ ಚುನಾವಣೆ ಬಳಿಕ ಹೊಸ ಸರ್ಕಾರ ರಚನೆಯಾದ ಬಳಿಕ 2024- 25ರ ಕೇಂದ್ರ ಬಜೆಟ್ ಜುಲೈ 23 ರಂದು ಮಂಡನೆಯಾಗಿತ್ತು. ಅದಾಗಿ ಆರು ತಿಂಗಳ ಅಲ್ಪ ಅವಧಿಯಲ್ಲಿ ಈಗ ಮತ್ತೊಂದು ಆರ್ಥಿಕ ಸಮೀಕ್ಷೆ ಪ್ರಕಟವಾಗಿದೆ. 2024ರ ಜುಲೈ 22 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24ರ ಆರ್ಥಿಕ ಸಮೀಕ್ಷೆ ಮಂಡಿಸಿದ್ದರು.

ಆರ್ಥಿಕ ಸಮೀಕ್ಷೆ 2025; 10 ಮುಖ್ಯ ಅಂಶಗಳು

1) ಸ್ಥಿರವಾಗಿ ಉಳಿಯಲಿದೆ ಭಾರತದ ಅರ್ಥವ್ಯವಸ್ಥೆ: ಜಾಗತಿಕ ಅನಿಶ್ಚಿತತೆಯ ಹೊರತಾಗಿಯೂ, ಪ್ರಸಕ್ತ ಹಣಕಾಸು ವರ್ಷ (2024-25) ಭಾರತದ ನೈಜ ಜಿಡಿಪಿ ಬೆಳವಣಿಗೆಯು ಶೇ 6.4 ರಷ್ಟು (ರಾಷ್ಟ್ರೀಯ ಆದಾಯದ ಮೊದಲ ಮುಂಗಡ ಅಂದಾಜಿನ ಪ್ರಕಾರ) ದಶಕದ ಸರಾಸರಿಗೆ ಹತ್ತಿರದಲ್ಲಿರಲಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಬೆಳವಣಿಗೆಗೆ ಅನುಗುಣವಾಗಿ ಮತ್ತು ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ಹಣಕಾಸು ವರ್ಷ 2026ರಲ್ಲಿ ನೈಜ ಜಿಡಿಪಿ ಬೆಳವಣಿಗೆಯು 6.3 ಮತ್ತು ಶೇಕಡಾ 6.8 ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಒಟ್ಟು ಪೂರೈಕೆ ತೀವ್ರತೆಯಿಂದ, ನೈಜ ಒಟ್ಟು ಮೌಲ್ಯವರ್ಧನೆಯು ಶೇಕಡಾ 6.4 ರಷ್ಟು ಏರಿಕೆಯಾಗುತ್ತದೆ ಎಂದು ಅಂದಾಜಿಸುತ್ತಿರುವುದಾಗಿ ಆರ್ಥಿಕ ಸಮೀಕ್ಷೆ ವಿವರಿಸಿದೆ.

2) ಹಣದುಬ್ಬದ ಪ್ರಮಾಣ ನಿಯಂತ್ರಣಕ್ಕೆ: ಹಣಕಾಸು ವರ್ಷ 2024ರಲ್ಲಿ ಹಣದುಬ್ಬರ ಪ್ರಮಾಣ ಶೇಕಡ 5.4 ಇದ್ದದ್ದು, 2024ರ ಏಪ್ರಿಲ್ - ಡಿಸೆಂಬರ್‌ ಅವಧಿಗೆ ಶೇಕಡ 4.9ಕ್ಕೆ ಇಳಿಕೆಯಾಗಿದೆ. ಕೇಂದ್ರ ಸರ್ಕಾರ ತೆಗೆದುಕೊಂಡ ವಿವಿಧ ಉಪಕ್ರಮಗಳು ಮತ್ತು ವಿತ್ತೀಯ ನೀತಿಗಳ ಅನುಷ್ಠಾನದ ಕಾರಣ ಇದು ಸಾಧ್ಯವಾಗಿದೆ ಎಂದು ಆರ್ಥಿಕ ಸಮೀಕ್ಷೆ ವಿವರಿಸಿದೆ. ಸವಾಲುಗಳ ಹೊರತಾಗಿಯೂ, ಭಾರತದಲ್ಲಿ ಹಣದುಬ್ಬರ ನಿರ್ವಹಣೆಯಲ್ಲಿ ಸಕಾರಾತ್ಮಕ ಲಕ್ಷಣಗಳಿವೆ. ಭಾರತದ ಗ್ರಾಹಕ ಬೆಲೆ ಹಣದುಬ್ಬರವು ಕ್ರಮೇಣ ಕಡಿಮೆಯಾಗುವ ಸೂಚನೆಯನ್ನುಅಂತಾರಾಷ್ಟ್ರೀಯ ಹಣಕಾಸು ನಿಧಿ ಯೋಜನೆಯು ಸೂಚಿಸಿದ್ದು, ಮುಂದಿನ ಹಣಕಾಸು ವರ್ಷದಲ್ಲಿ ಇದು ಶೇಕಡ 4ಕ್ಕೆ ಇಳಿಯಲಿದೆ ಎಂಬುದನ್ನು ಆರ್ಥಿಕ ಸಮೀಕ್ಷೆ ಉಲ್ಲೇಖಿಸಿದೆ.

3) ಬೆಳವಣಿಗೆಗೆ ಎಲ್ಲ ಕ್ಷೇತ್ರಗಳ ಕೊಡುಗೆ: ಕೃಷಿ ವಲಯವು ಪ್ರಬಲವಾಗಿದೆ, ಸ್ಥಿರವಾದ ಪ್ರವೃತ್ತಿಯ ಮಟ್ಟಕ್ಕಿಂತ ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿದೆ. ಕೈಗಾರಿಕಾ ವಲಯವು ಸೇವಾ ವಲಯವನ್ನು ಅದರ ಪ್ರವೃತ್ತಿಯ ಮಟ್ಟಕ್ಕೆ ಕೊಂಡೊಯ್ದಿರುವುದು ಕಂಡುಬಂದಿದೆ ಎಂದು ಸಮೀಕ್ಷೆ ತಿಳಿಸಿದೆ.

4) ಹಣಕಾಸು ಕ್ಷೇತ್ರ ಸ್ಥಿರ: ನಿಗದಿತ ವಾಣಿಜ್ಯ ಬ್ಯಾಂಕುಗಳ ಒಟ್ಟು ಅನುತ್ಪಾದಕ ಸ್ವತ್ತುಗಳ ಅನುಪಾತವು 2018ರ ಗರಿಷ್ಠ ಮಟ್ಟದಿಂದ 2024ರ ಸೆಪ್ಟೆಂಬರ್ ಕೊನೆಯಲ್ಲಿ ಶೇಕಡಾ 2.6 ಕ್ಕೆ ಇಳಿಕೆಯಾಗಿದೆ. ಇದಲ್ಲದೆ, ಕ್ರೆಡಿಟ್ -ಜಿಡಿಪಿ ಅಂತರವು 2023ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಶೇ 10.3 ರಿಂದ ಹಣಕಾಸು ವರ್ಷ 2025ರ ಮೊದಲ ತ್ರೈಮಾಸಿಕದಲ್ಲಿ ಶೇಕಡ 10ಕ್ಕೆ ಇಳಿದಿದೆ. ಇದು ಬ್ಯಾಂಕ್ ಬೆಳವಣಿಗೆ ಸ್ಥಿರವಾಗಿರುವುದನ್ನು ಸೂಚಿಸುತ್ತದೆ ಎಂದು ಆರ್ಥಿಕ ಸಮೀಕ್ಷೆ ವಿವರಿಸಿದೆ. ವಿಮಾ ಮಾರುಕಟ್ಟೆ ಕೂಡ ವಿಸ್ತರಣೆಯ ಹಾದಿಯಲ್ಲಿದ್ದು, ವಿಮಾ ಪ್ರೀಮಿಯಂ 2024ರ ಹಣಕಾಸು ವರ್ಷದಲ್ಲಿ ಶೇಕಡ 7.7 ಏರಿದ್ದು 11.2 ಲಕ್ಷ ಕೋಟಿ ರೂಪಾಯಿ ತಲುಪಿದೆ. ಪಿಂಚಣಿ ವಲಯವೂ ಬೆಳವಣಿಗೆ ಹಾದಿಯಲ್ಲಿದ್ದು 2024ರ ಸೆಪ್ಟೆಂಬರ್‌ನಲ್ಲಿ ವರ್ಷದಿಂವ ವರ್ಷಕ್ಕೆ ಶೇಕಡ 16 ಬೆಳವಣಿಗೆ ದಾಖಲಿಸಿದೆ.

5) ವಿದೇಶ ವ್ಯವಹಾರ, ವಿದೇಶಿ ಹೂಡಿಕೆ; ಭಾರತದ ಒಟ್ಟು ವಿದೇಶಿ ನೇರ ಹೂಡಿಕೆಯ ಒಳಹರಿವು ಪ್ರಸಕ್ತ ಹಣಕಾಸು ವರ್ಷದಲ್ಲಿ ಹೆಚ್ಚಳವಾಗಿದೆ. ಹಣಕಾಸು ವರ್ಷ 2024ರ ಮೊದಲ 8 ತಿಂಗಳಲ್ಲಿ 47.2 ಶತಕೋಟಿ ಡಾಲರ್ ಇತ್ತು. ಹಣಕಾಸು ವರ್ಷ 2025ರ ಅದೇ ಅವಧಿಯಲ್ಲಿ 55.6 ಶತಕೋಟಿ ಡಾಲರ್ ಆಗಿದೆ. ಇದು 17.9 ರಷ್ಟು ಬೆಳವಣಿಗೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.

6) ನಿರ್ಬಂಧ ತೆರವಿನ ಅಗತ್ಯ: ವಿಕಸಿತ ಭಾರತ್‌ನ ಗುರಿ ಸಾಧಿಸಬೇಕಾದರೆ ನಿರ್ಬಂಧಿತ ಬೆಳವಣಿಗೆಗಿಂತ ಅನಿರ್ಬಂಧಿತ ಬೆಳವಣಿಗೆಗೆ ಅವಕಾಶ ನೀಡಬೇಕು. ಇದು ಜಾಗತಿಕ ವಾಸ್ತವಗಳಾದ ಭೌಗೋಳಿಕ ಆರ್ಥಿಕ ಬೆಳವಣಿಗೆ, ಚೀನಾದ ಉತ್ಪಾದನಾ ಸಾಮರ್ಥ್ಯ ಮತ್ತು ವ್ಯೂಹಾತ್ಮಕ ಪ್ರಾಬಲ್ಯದ ಕಡೆಗೆ ಸಮೀಕ್ಷೆ ಗಮನಸೆಳೆದಿದೆ. ಈಸ್ ಆಫ್ ಡೂಯಿಂಗ್ ಬಿಜಿನೆಸ್ 2.0 ಬೇಕು ಎಂದು ಪ್ರತಿಪಾದಿಸಿದೆ.

7) ಹೂಡಿಕೆ ಮತ್ತು ಮೂಲಸೌಕರ್ಯದ ಮೇಲೆ ಗಮನ: ಮುಂದಿನ ದಶಕದಲ್ಲಿ ಭಾರತದ ಬೆಳವಣಿಗೆಯ ಯೋಜನೆಗಳಿಗೆ ಮೂಲಸೌಕರ್ಯದಲ್ಲಿ ಹೆಚ್ಚಿನ ಹೂಡಿಕೆಯ ಅಗತ್ಯವಿರುತ್ತದೆ ಎಂದು ಸಮೀಕ್ಷೆಯು ಒತ್ತಿಹೇಳಿತು. ಕೇಂದ್ರ ಸರ್ಕಾರದ ಬಂಡವಾಳವು ಹಣಕಾಸು ವರ್ಷ 2020 ರಿಂದ ಹಣಕಾಸು ವರ್ಷ 2024 ರವರೆಗೆ ಶೇಕಡಾ 38.8 ದರದಲ್ಲಿ ಬೆಳೆದಿದೆ. ಹಣಕಾಸು ವರ್ಷ 2025 ರಲ್ಲಿ ಇದು ವೇಗ ಪಡೆದುಕೊಂಡಿದೆ.

8) ವಿದ್ಯುತ್, ನಿರ್ಮಾಣ ಕ್ಷೇತ್ರದ ಮೂಲಕ ಕೈಗಾರಿಕಾ ಬೆಳವಣಿಗೆ: ಈ ಎರಡು ಕ್ಷೇತ್ರಗಳ ಮೂಲಕ ಭಾರತದ ಕೈಗಾರಿಕಾ ಬೆಳವಣಿಗೆ ದಾಖಲಾಗಿದೆ ಎಂದು ಆರ್ಥಿಕ ಸಮೀಕ್ಷೆ ವಿವರಿಸಿದೆ.

9) ಕೌಶಲ ಅಭಿವೃದ್ಧಿ: ದೇಶದ ಅರ್ಥ ವ್ಯವಸ್ಥೆಗೆ ಸೇವಾ ವಲಯದ ಕೊಡುಗೆ ಹಣಕಾಸು ವರ್ಷ 204 ರಲ್ಲಿ ಶೇಕಡಾ 50.6 ರಿಂದ ಹಣಕಾಸು ವರ್ಷ 2025 ರಲ್ಲಿ 55.3 ಕ್ಕೆ ಏರಿದೆ ಎಂಬ ಅಂಶವನ್ನು ಆರ್ಥಿಕ ಸಮೀಕ್ಷೆ ದಾಖಲಿಸಿದೆ.

10) ಕೃಷಿ ಮತ್ತು ಆಹಾರ ನಿರ್ವಹಣಾ ಕ್ಷೇತ್ರ: ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳ ವಲಯವನ್ನು ಭಾರತೀಯ ಆರ್ಥಿಕತೆಯ ಬೆನ್ನೆಲುಬು ಎಂದು ಪರಿಗಣಿಸಲಾಗುತ್ತದೆ. ಈ ವಲಯವು ಜಿಡಿಪಿಯಲ್ಲಿ ಶೇಕಡ 16 ಪಾಲು ಹೊಂದಿದೆ ಎಂಬುದರ ಕಡೆಗೆ ಆರ್ಥಿಕ ಸಮೀಕ್ಷೆ ಗಮನಸೆಳೆದಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.