ಹಿಂದೂ ಮಹಾಸಾಗರದಲ್ಲಿ ಹೆಚ್ಚಾಗುತ್ತಿದೆ ಕಡಲುಗಳ್ಳರ ಉಪಟಳ; ನೌಕಾಪಡೆಯ ಎದುರಿಗಿದೆ ಸವಾಲು, ಸಾಮರ್ಥ್ಯ ವೃದ್ಧಿ ಚಿಂತನೆಗಿದು ಸಕಾಲ -ಸಂಪಾದಕೀಯ
Editorial: ವಿಶ್ವದ ಅತಿಮುಖ್ಯ ಜಲಮಾರ್ಗವಾಗಿರುವ ಹಿಂದೂ ಮಹಾಸಾಗರದಲ್ಲಿ ಕಡಲುಗಳ್ಳರ ಉಪಟಳ ಹೆಚ್ಚಾಗಿದೆ. ಇಸ್ರೇಲ್ ಸಂಘರ್ಷವು ಜಾಗತಿಕ ಬಲಾಬಲಗಳಲ್ಲಿ ಹಲವು ಏರಿಳಿತಗಳಿಗೆ ಕಾರಣವಾಗಿದೆ. ಚೀನಾ ಸಹ ಈ ಪ್ರದೇಶದಲ್ಲಿ ಬಾಹುಳ್ಯ ಸಾಧಿಸಲು ಸತತ ಪ್ರಯತ್ನ ಮಾಡುತ್ತಿದೆ.
ಸಂಪಾದಕೀಯ: ಹಿಂದೂ ಮಹಾಸಾಗರ ಪ್ರದೇಶವು ಪ್ರಕ್ಷುಬ್ಧವಾಗಿದೆ. ಪಶ್ಚಿಮ ಏಷ್ಯಾದ (ಇಸ್ರೇಲ್-ಪ್ಯಾಲಸ್ತೀನ್) ಯುದ್ಧವು ಭಾರತದ ಸುತ್ತಲಿನ ಸಮುದ್ರಗಳಲ್ಲಿ ಪ್ರತಿಧ್ವನಿಸುತ್ತಿದೆ. ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಮತ್ತು ಹಡಗುಗಳನ್ನು ಅಪಹರಿಸುವ ಪ್ರಯತ್ನಗಳು ಈ ಸಂಘರ್ಷದ ಭಾಗವಾಗಿರುವುದು ಆತಂಕದ ಸಂಗತಿ. ಹೌತಿ ಬಂಡುಕೋರರ ದಾಳಿಗೆ ಗುರಿಯಾಗುವ ಹಡಗುಗಳ ರಕ್ಷಣೆಗೆ ಭಾರತೀಯ ನೌಕಾಪಡೆ ಹಲವು ಬಾರಿ ಧಾವಿಸಿದೆ. ಜಾಗತಿಕ ಹಡಗು ಕಂಪನಿಗಳಲ್ಲಿ ಭಾರತ ಮೂಲದ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಾರೆ. ಭಾರತೀಯರನ್ನು ಕಾಪಾಡುವುದು ನಮ್ಮ ನೌಕಾಪಡೆಯ ಉಪಕ್ರಮವನ್ನು ಸಮರ್ಥಿಸುತ್ತದೆ. ಇದರ ಜೊತೆಗೆ ನೆರೆಹೊರೆಯಲ್ಲಿ ತುರ್ತು ಸಂದರ್ಭ ನಿರ್ಮಾಣವಾದಾಗ ಭಾರತೀಯ ನೌಕಾಪಡೆಯು ಪ್ರತಿಕ್ರಿಯಿಸುತ್ತಿದೆ. ಭಾರತವು 2008 ರಿಂದ ಸೊಮಾಲಿಯಾ ಕರಾವಳಿಯಲ್ಲಿ ಕಡಲ್ಗಳ್ಳತನ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದೆಯಾದರೂ ಈಗಿನ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಈ ಪ್ರದೇಶದಲ್ಲಿ ನೌಕಾಪಡೆಯ ಕಮಾಂಡೋಗಳ ಘಟಕಗಳೊಂದಿಗೆ 10 ಮುಂಚೂಣಿ ಯುದ್ಧನೌಕೆಗಳನ್ನು ನಿಯೋಜಿಸಬೇಕಾಗಿದೆ.
ಮತ್ತೊಂದೆಡೆ ಹಿಂದೂ ಮಹಾಸಾಗರದಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ-ನೌಕಾಪಡೆ ಸಹ ಸಕ್ರಿಯವಾಗಿದೆ. ಜಾಗತಿಕ ಸೂಪರ್ ಪವರ್ ಆಗಿ ಹೊರಹೊಮ್ಮುವ ಆಕಾಂಕ್ಷೆಯೊಂದಿಗೆ ಕಾರ್ಯಾಚರಣೆ ನಡೆಸುತ್ತಿರುವ ಚೀನಾ ನೌಕಾಪಡೆಯನ್ನು ಎದುರಿಸುವುದು ಸುಲಭವಲ್ಲ. ಅಪಾಯ ಹೀಗೆಯೇ ಎದುರಾಗಬಹುದು ಎಂದು ನೇರವಾಗಿ ಮತ್ತು ಸ್ಪಷ್ಟವಾಗಿ ಹೇಳಲು, ಊಹಿಸಲೂ ಆಗುವುದಿಲ್ಲ. ಈ ಬೆಳವಣಿಗೆಯು ಭಾರತೀಯ ನೌಕಾಪಡೆಯ ಕಾರ್ಯಬಾಹುಳ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ಇತ್ತೀಚೆಗೆ ಪಾಕಿಸ್ತಾನ, ಮಾಲ್ಡೀವ್ಸ್ ಮತ್ತು ಶ್ರೀಲಂಕಾದಲ್ಲಿ ನಡೆದ ಕೆಲ ವಿದ್ಯಮಾನಗಳನ್ನು ಈ ಹಿನ್ನೆಲೆಯಲ್ಲಿ ಪರಿಶೀಲಿಸಬಹುದು. ಭಾರತದ ಸುತ್ತಲೂ ಇರುವ ಹಲವು ದೇಶಗಳ ಬಂದರುಗಳಲ್ಲಿ ಚೀನಾ ತನ್ನ ಪ್ರಭಾವ ವಿಸ್ತರಿಸಿಕೊಳ್ಳುತ್ತಿದೆ. ಈ ಪ್ರದೇಶದಲ್ಲಿ ಚೀನಾದ ವಾಣಿಜ್ಯ ಹಡಗುಗಳ ಸಂಚಾರ ಹೆಚ್ಚಾಗುವುದರ ಜೊತೆಗೆ ನೀಡಿದಾಗ ಹಲವು ಜಲಾಂತರ್ಗಾಮಿಗಳು ಮತ್ತು ಸರ್ವೇಕ್ಷಣ ಹಡಗುಗಳು ಹಲವು ಬಾರಿ ಸಂಚರಿಸಿರುವುದು ವರದಿಯಾಗಿದೆ.
ಭಾರತ ಮತ್ತು ಭಾರತದೊಂದಿಗೆ ಸ್ನೇಹಪರವಾಗಿ ವರ್ತಿಸುವ ದೇಶಗಳು ಸಂಘಟಿತ ಪ್ರಯತ್ನಗಳು ಇದೀಗ ಫಲ ಕೊಡುತ್ತಿವೆ. ಕೆಂಪು ಸಮುದ್ರದಲ್ಲಿ ಸೋಮಾಲಿಯಾ ಕಡಲ್ಗಳರ ಉಪಟಳಕ್ಕೆ ಕಡಿವಾಣ ಹಾಕುವುದು ಮತ್ತು ಹಿಂದೂ ಮಹಾಸಾಗರದಲ್ಲಿ ವಾಣಿಜ್ಯ ಹಡಗುಗಗಳ ಸುಲಲಿತ ಸಂಚಾರಕ್ಕೆ ಭಾರತದ ನೆರವು ಈಗ ವಿಶ್ವದ ಹಲವು ದೇಶಗಳಿಗೆ ಬೇಕಾಗಿದೆ. ಇತ್ತೀಚೆಗೆ ನೌಕಾಪಡೆಯ ಸಾಮರ್ಥ್ಯ ಕೂಡ ರಾಜತಾಂತ್ರಿಕ ಪ್ರಭಾವದ ಭಾಗವಾಗುತ್ತಿದೆ. ವಿದೇಶಿ ಸರ್ವೇಕ್ಷಣಾ (ಗೂಢಚರ್ಯೆ) ಹಡಗುಗಳ ಭೇಟಿಗೆ ಶ್ರೀಲಂಕಾ ಇತ್ತೀಚೆಗಷ್ಟೇ ಒಂದು ವರ್ಷದ ನಿಷೇಧ ಹೇರಿತ್ತು. ಶ್ರೀಲಂಕಾ ತನ್ನ ಕೈಜಾರುತ್ತಿರುವುದನ್ನು ಮನಗಂಡ ಚೀನಾ ಇದೀಗ ತಮ್ಮ ಗಮನವನ್ನು ಮಾಲ್ಡೀವ್ಸ್ ಕಡೆಗೆ ತಿರುಗಿಸಿದೆ. ಭಾರತ ಮತ್ತು ಮಾಲ್ಡೀವ್ಸ್ ನಡುವಣ ರಾಜತಾಂತ್ರಿಕ ಸಂಬಂಧ ಹಳಸಿದೆ.
ಭಾರತ ಮತ್ತು ಚೀನಾದ ನೌಕಾಪಡೆಗಳ ಸಾಮರ್ಥ್ಯವನ್ನು ಹೋಲಿಸಿದರೆ ಸಂಖ್ಯೆಯ ದೃಷ್ಟಿಯಲ್ಲಿ ಭಾರತ ಸರ್ಕಾರವು ನೌಕಾಪಡೆಗೆ ಬಲ ತುಂಬಲು ತುರ್ತಾಗಿ ಗಮನ ಹರಿಸಬೇಕಾದ ಅಂಶ ಎದ್ದುಕಾಣಿಸುತ್ತದೆ. ಚೀನಾದ ಬಳಿ ಸುಮಾರು 340 ಯುದ್ಧನೌಕೆಗಳಿದ್ದರೆ ಭಾರತದ ಬಳಿ 150 ಕ್ಕಿಂತಲೂ ಕಡಿಮೆ ಯುದ್ಧನೌಕೆಗಳಿವೆ. 60ಕ್ಕೂ ಹೆಚ್ಚು ಯುದ್ಧನೌಕೆಗಳು ನಿರ್ಮಾಣ ಹಂತದಲ್ಲಿವೆ. ಸಾಗರದಲ್ಲಿ ಬಲ ವೃದ್ಧಿಸಿಕೊಳ್ಳುವ ಪ್ರಯತ್ನವನ್ನು ಚೀನಾ ವೇಗವಾಗಿ ಮಾಡುತ್ತಿದೆ. ತನ್ನ ನೌಕೆಗಳಿಗೆ ಸ್ವಾಗತ ಸಿಗುವ ವಿದೇಶಿ ನೆಲೆಗಳನ್ನು ಹೆಚ್ಚಿಸಿಕೊಳ್ಳುತ್ತಿದೆ.
ಸಾಗರದಲ್ಲಿ ದೇಶದ ಹಿತಾಸಕ್ತಿ ಕಾಪಾಡಲು ಅಗತ್ಯವಿರುವ ಕ್ರಮಗಳಿಗೆ ಭಾರತ ಸರ್ಕಾರವೂ ತುರ್ತು ಆದ್ಯತೆ ನೀಡಬೇಕಿದೆ. ನೌಕಾಪಡೆಯ ಸಾಮರ್ಥ್ಯ ವೃದ್ಧಿಗೆ ಕ್ರಮ ವಹಿಸುವ ಜೊತೆಗೆ ವಾಣಿಜ್ಯ ನೌಕೆಗಳ ಸಂಖ್ಯೆ,ಯೂ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಬೇಕಿದೆ. ಸುಧಾರಿತ ತಂತ್ರಜ್ಞಾನ ಮತ್ತು ಮೇಲ್ಮಟ್ಟದ ಪರಿಣಿತಿಯ ಕಡೆಗೆ ಭಾರತ ವೇಗವಾಗಿ ಹೆಜ್ಜೆ ಹಾಕಬೇಕಿದೆ. ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ಪ್ರಭಾವ ವೃದ್ಧಿಗೆ ಮಾಡುತ್ತಿರುವ ಸತತ ಪ್ರಯತ್ನ ಗಮನಿಸಿದರೆ ಈಗಿನಿಂದಲೇ ಸಮರ್ಪಕ ಸಿದ್ಧತೆ ಮಾಡಿಕೊಂಡರೆ ಮಾತ್ರ ಭಾರತವು ಭವಿಷ್ಯದ ಸವಾಲುಗಳನ್ನು ಎದುರಿಸಬಲ್ಲದು ಎನ್ನುವುದು ಮನವರಿಕೆಯಾಗುತ್ತದೆ.