ಸಿಬಿಎಸ್‌ಇ ಫಲಿತಾಂಶ: ವಿಜಯವಾಡಕ್ಕೆ ಅಗ್ರಸ್ಥಾನ, ಜೆಎನ್‌ವಿ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ, ಟಾಪರ್‌ಗಳ ಪಟ್ಟಿ ಪ್ರಕಟಿಸದ ಮಂಡಳಿ
ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಈ ಬಾರಿಯೂ ಮಂಡಳಿ ಟಾಪರ್‌ಗಳ ಪಟ್ಟಿ ಪ್ರಕಟಿಸಿಲ್ಲ. ಈ ನಡುವೆ ವಿಜಯವಾಡ ಪ್ರದೇಶ ಉತ್ತಮ ರಿಸಲ್ಟ್ ದಾಖಲಿಸಿದೆ. ಜವಾಹರ್ ನವೋದಯ ವಿದ್ಯಾಲಯಗಳ (ಜೆಎನ್‌ವಿ) ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (CBSE) ಇಂದು (ಮೇ 13) 2025ನೇ ಸಾಲಿನ ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶ ಪ್ರಕಟಿಸಿದೆ. ಮಂಡಳಿಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ವೀಕ್ಷಿಸಬಹುದು. ವಿದ್ಯಾರ್ಥಿಗಳು ತಮ್ಮ ರೋಲ್ ಸಂಬರ್, ಪ್ರವೇಶ ಕಾರ್ಡ್ ಸಂಖ್ಯೆ ಮತ್ತು ಶಾಲಾ ಕೋಡ್ ನಮೂದಿಸಿ ಫಲಿತಾಂಶ ನೋಡಬಹುದಾಗಿದೆ. ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶದ ಜೊತೆಗೆ, ಮಂಡಳಿಯು ಟಾಪರ್‌ಗಳ ಪಟ್ಟಿಯನ್ನು ಸಹ ಪ್ರಕಟಿಸುವ ನಿರೀಕ್ಷೆಯಿತ್ತು. ಆದರೆ, ವಿದ್ಯಾರ್ಥಿಗಳಲ್ಲಿ ಅನಾರೋಗ್ಯಕರ ಸ್ಪರ್ಧೆಯನ್ನು ತಡೆಗಟ್ಟಲು ಸಿಬಿಎಸ್‌ಇ 12ನೇ ತರಗತಿಯ ಟಾಪರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.
ಕಳೆದ ವರ್ಷದಿಂದ, ಸಿಬಿಎಸ್‌ಇ 10 ಮತ್ತು 12ನೇ ತರಗತಿ ಪರೀಕ್ಷೆಗಳ ಫಲಿತಾಂಶಗಳಲ್ಲಿ ಟಾಪರ್‌ಗಳನ್ನು ಘೋಷಿಸುವುದನ್ನು ಮಂಡಳಿ ನಿಲ್ಲಿಸಿದೆ. ವಿಷಯಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸುವ ಶೇಕಡಾ 0.1ರಷ್ಟು ವಿದ್ಯಾರ್ಥಿಗಳಿಗೆ ಮಂಡಳಿಯು ಮೆರಿಟ್ ಪ್ರಮಾಣಪತ್ರಗಳನ್ನು ನೀಡುತ್ತದೆ.
ವಿಜಯವಾಡ ಪ್ರದೇಶವು ಅತಿ ಹೆಚ್ಚು ಫಲಿತಾಂಶ ದಾಖಲಿಸಿದೆ. ಇಲ್ಲಿನ ಉತ್ತೀರ್ಣ ಪ್ರಮಾಣ 99.60 ಶೇ., ತಿರುವನಂತಪುರಂ 99.32 ಶೇ., ಮತ್ತು ಚೆನ್ನೈ 97.39 ಶೇ. ಫಲಿತಾಂಶ ದಾಖಲಿಸಿದೆ. ಪ್ರಯಾಗ್‌ರಾಜ್ ಅತ್ಯಂತ ಕಡಿಮೆ, ಅಂದರೆ ಶೇ. 79.53ರಷ್ಟು ಫಲಿತಾಂಶ ಸಾಧಿಸಿದೆ.
ಬೆಂಗಳೂರು (95.95 ಶೇ), ದೆಹಲಿ ಪಶ್ಚಿಮ (95.37 ಶೇ), ದೆಹಲಿ ಪೂರ್ವ (95.06 ಶೇ), ಚಂಡೀಗಢ (91.61 ಶೇ), ಪಂಚಕುಲ (91.17 ಶೇ), ಪುಣೆ (90.93 ಶೇ), ಮತ್ತು ಅಜ್ಮೀರ್ (90.40 ಶೇ) ಫಲಿತಾಂಶ ದಾಖಲಿಸಿದೆ.
ಜೆಎನ್‌ವಿ ಶಾಲೆಗಳ ಅತ್ಯುತ್ತಮ ಸಾಧನೆ
ಜವಾಹರ್ ನವೋದಯ ವಿದ್ಯಾಲಯಗಳು (ಜೆಎನ್‌ವಿ) 99.29 ಶೇ. ಫಲಿತಾಂಶದೊಂದಿಗೆ, ಫಲಿತಾಂಶ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಇದೇ ವೇಳೆ ಕೇಂದ್ರೀಯ ವಿದ್ಯಾಲಯಗಳು (ಕೆವಿ) 99.05 ಶೇ. ಫಲಿತಾಂಶದೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಕೇಂದ್ರೀಯ ಟಿಬೆಟಿಯನ್ ಶಾಲೆಗಳು (ಎಸ್‌ಟಿಎಸ್‌ಎಸ್) 98.96 ಶೇ. ಫಲಿತಾಂಶ ದಾಖಲಿಸಿದೆ. ಸರ್ಕಾರಿ ಅನುದಾನಿತ ಶಾಲೆಗಳು 91.57 ಶೇಕಡದಷ್ಟು ಫಲಿತಾಂಶ ಪಡೆದರೆ, ಸರ್ಕಾರಿ ಶಾಲೆಗಳು 90.48 ಶೇ.ದಷ್ಟು ಫಲಿತಾಂಶ ದಾಖಲಿಸಿವೆ.
ಬಾಲಕಿಯರ ಮೇಲುಗೈ
ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಲಕಿಯರ ಪೈಕಿ ಶೇ. 91.64ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಬಾಲಕರು ಶೇ. 85.70ರಷ್ಟು ಉತ್ತೀರ್ಣರಾಗಿದ್ದಾರೆ. ಬಾಲಕರು ಹಾಗೂ ಬಾಲಕಿಯರ ಫಲಿತಾಂಶದ ನಡುವೆ ಶೇ. 5.94ರಷ್ಟು ಅಂತರವಿದೆ. ಗಮನಾರ್ಹ ಅಂಶವೆಂದರೆ, ಟ್ರಾನ್ಸ್‌ಜಂಡರ್ ವರ್ಗವು ಈ ಬಾರಿ 100 ಶೇ. ಫಲಿತಾಂಶ ಸಾಧಿಸಿದೆ.