UPSC Inspiring story: ಆಕೆಗೆ ಬಲಗೈ ಇಲ್ಲ, ಅವನಿಗೆ ಎರಡು ಕಾಲಿಲ್ಲ, ಯುಪಿಎಸ್‌ಸಿ ಸಾಧಕರ ಸ್ಪೂರ್ತಿದಾಯಕ ಯಶೋಗಾಥೆಗಳು ಇಲ್ಲಿವೆ ಓದಿ
UPSC Success story: ಐಎಎಸ್, ಐಪಿಎಸ್ ಇತ್ಯಾದಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ತಮ್ಮಿಂದಾಗದು ಎಂದು ಬಹುತೇಕರು ಪ್ರಯತ್ನವೇ ನಡೆಸುವುದಿಲ್ಲ. ಆದರೆ, ಇನ್ನು ಕೆಲವರು ಎಷ್ಟೇ ಕಷ್ಟವಿರಲಿ, ಛಲದಿಂದ ಪ್ರಯತ್ನಿಸಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಪಡೆಯುತ್ತಾರೆ. ಅಂತಹ ಏಳು ಸಾಧಕರ ಪರಿಚಯ ಇಲ್ಲಿದೆ. ಇದು ನಿಮಗೂ ಸ್ಪೂರ್ತಿಯಾಗಬಲ್ಲದು.
ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ಸು ಪಡೆದು ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಯಾಗಬೇಕೆಂದು ಬಹುತೇಕರು ಬಯಸುತ್ತಾರೆ. ಆದರೆ, ಈ ಪರೀಕ್ಷೆ ಎದುರಿಸಲು ತಮ್ಮಿಂದಾಗದು ಎಂದು ಪ್ರಯತ್ನವೇ ನಡೆಸದೆ ಕೈಚೆಲ್ಲುತ್ತಾರೆ. ಆದರೆ, ಜೀವನದಲ್ಲಿ ಸಾಕಷ್ಟು ಕಷ್ಟ ಕಾರ್ಪಣ್ಯಗಳನ್ನು ಕಂಡವರು, ವಿಶೇಷ ಚೇತನರು ಅಥವಾ ಬಡವರು ಕೂಡ ಈ ನಾಗರಿಕ ಸೇವೆ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಉಳಿದವರಿಗೆ ಸ್ಪೂರ್ತಿಯಾಗುತ್ತಾರೆ.
ಇತ್ತೀಚೆಗೆ ಪ್ರಕಟಗೊಂಡ 2022ರ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಇಶಿತಾ ಕಿಶೋರ್ ಅವರು ದೇಶಕ್ಕೆ ನಂಬರ್ ಒನ್ ಸ್ಥಾನ ಪಡೆದಿದ್ದರು. ಗರಿಮಾ ಲೋಹಿಯಾ ಮತ್ತು ಉಮಾ ಹರಥಿ ಎನ್ ಅವರು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದಿದ್ದರು. ಯುಪಿಎಸ್‌ಸಿಯಲ್ಲಿ ಯಶಸ್ಸು ಪಡೆಯಲು ಬಯಸುವವರಿಗೆ ಸ್ಪೂರ್ತಿದಾಯಕವಾದ ಏಳು ಜನರ ಯಶೋಗಾಥೆ ಇಲ್ಲಿದೆ. ಪೂರಕ ಮಾಹಿತಿ scoopwhoopನಿಂದ ಪಡೆದುಕೊಳ್ಳಲಾಗಿದೆ.
ಬಲಗೈ ಇಲ್ಲ, ಆದರೆ, ಯುಪಿಎಸ್‌ಸಿ ಸಾಧನೆಗೆ ಅಡ್ಡಿಯಿಲ್ಲ
ಕೇರಳದ ಅಖಿಲಾ ಬಿಎಸ್ ಎಂಬ ಯಶೋಗಾಥೆ ಎಲ್ಲರಿಗೂ ಸ್ಪೂರ್ತಿದಾಯಕ. ತಿರುವನಂತಪುರ ಮೂಲದ ಇವರು ಬಾಲ್ಯದಲ್ಲಿಯೇ ತನ್ನ ಬಲಗೈ ಕಳೆದುಕೊಂಡಿದ್ದರು. ಮೊನ್ನೆ ಪ್ರಕಟಗೊಂಡ ಯುಪಿಎಸ್‌ಸಿ ಫಲಿತಾಂಶದಲ್ಲಿ ಆಲ್ ಇಂಡಿಯಾ 760 ರಾಂಕ್ ಪಡೆದು ಎಲ್ಲರಿಗೂ ಸ್ಪೂರ್ತಿಯಾಗಿದ್ದಾಳೆ. ಆಕೆ ಐದು ವರ್ಷದ ಪುಟಾಣಿಯಾಗಿದ್ದಾಗ ಸಂಭವಿಸಿದ ಅಪಘಾತದಲ್ಲಿ ಬಲಗೈ ಕಳೆದುಕೊಂಡಿದ್ದರು. ಇವರು ಒಂದೇ ಬಾರಿಯ ಪ್ರಯತ್ನದಲ್ಲಿ ಯುಪಿಎಸ್‌ಸಿಯಲ್ಲಿ ಯಶಸ್ಸು ಪಡೆದಿರುವುದಲ್ಲ. 2020ರಲ್ಲಿಯೂ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದರು. ಆದರೆ, ಆಗಿನ ಪ್ರಯತ್ನ ವಿಫಲವಾಗಿತ್ತು. ಮರಳಿ ಯತ್ನವ ಮಾಡು ಎಂಬ ಮಾತಿನ ಮೇಲೆ ನಂಬಿಕೆಯಿಟ್ಟ ಇವರು ಎರಡನೇ ಬಾರಿಯ ಪ್ರಯತ್ನದಲ್ಲಿ ಯಶಸ್ಸು ಪಡೆದಿದ್ದಾರೆ.
"ಐಎಎಸ್ ಅಧಿಕಾರಿಯಾಗಬೇಕೆನ್ನುವುದು ನನ್ನ ಕನಸು. ಈಗ ಪಡೆದಿರುವ ರಾಂಕ್‌ನಲ್ಲಿ ಐಎಎಸ್ ಅಧಿಕಾರಿಯಾಗುವುದು ಸಾಧ್ಯವಿಲ್ಲ. ಮುಂದಿನ ಪರೀಕ್ಷೆಗೆ ಸಿದ್ಧತೆ ನಡೆಸುವೆ" ಎಂದು ಅವರು ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಪೊಲೀಸ್ ಕಾನ್ಸ್‌ಟೇಬಲ್ ಸಾಧನೆ
ದೆಹಲಿ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ರಾಮ ಭಜನ್ ಕುಮಾರ್ ಕೂಡ ಯುಪಿಎಸ್‌ಸಿ ಪರೀಕ್ಷೆ ಕ್ಲಿಯರ್ ಮಾಡಿದ್ದಾರೆ. ರಾಜಸ್ಥಾನದ ಕೂಲಿ ಕಾರ್ಮಿಕನ ಮಗನಾದ ರಾಮ್ ಭಜನ್ ತನ್ನ ಎಂಟನೇ ಪ್ರಯತ್ನದಲ್ಲಿ 667ನೇ ರಾಂಕ್ ಪಡೆದಿದ್ದಾರೆ. ಇಲ್ಲಿಯವರೆಗೆ ಇತರ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆಯುತ್ತ ಇದ್ದವರು ಇನ್ಮುಂದೆ ಪ್ರಮುಖ ಹುದ್ದೆ ಪಡೆಯಲಿದ್ದಾರೆ. ಇವರ ಕುಟುಂಬದಲ್ಲಿ ಪದವಿ ಪಡೆದ ಮೊದಲ ವ್ಯಕ್ತಿ ಕೂಡ ಇವರೇ.
"ಫಲಿತಾಂಶ ನೋಡುವಾಗ ನನಗೆ ಆಶ್ಚರ್ಯವಾಯಿತು. ಇದು ನನ್ನ ಕೊನೆಯ ಪ್ರಯತ್ನವಾಗಿತ್ತು. ಇದರಲ್ಲಿ ಗೆಲುವು ಪಡೆದೆ. ನಾನು ಯಾವತ್ತು ಖುಷಿಯಾಗಿರಲಿಲ್ಲ. ಇದೀಗ, ಎಲ್ಲರೂ ಖುಷಿಯಾಗಿದ್ದಾರೆ. ನನ್ನ ತಂದೆ ಖುಷಿಯಿಂದ ಅತ್ತಿದ್ದಾರೆ" ಎಂದು ಇವರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಳಿಕೆ ನೀಡಿದ್ದಾರೆ.
ಕುಟುಂಬದವರನ್ನು ಕಳೆದುಕೊಂಡ ಕೃಷಿಕನ ಮಗನ ಸಾಧನೆ
ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಭಜರಂಗ್ ಯಾದವ್ ಕೂಡ ಈ ಬಾರಿಯ ಯುಪಿಎಸ್‌ಸಿ ಫಲಿತಾಂಶದಲ್ಲಿ ಯಶಸ್ಸು ಪಡೆದಿದ್ದಾನೆ. ಈತ ಕೃಷಿಕನ ಮಗನಾಗಿದ್ದು, ಯುಪಿಎಸ್‌ಸಿ ಪರೀಕ್ಷೆ ಉತ್ತೀರ್ಣವಾಗುವ ಈತನ ಪ್ರಯತ್ನ ಸುಲಭದಾಗಿರಲಿಲ್ಲ. ಈತನ ತಂದೆ ಬಡತನವಿದ್ದರೂ ಕಷ್ಟಪಟ್ಟು ಸಾಕಿ, ಓದಿ ಬೆಳೆಸಿದ್ದ. 2020ರಲ್ಲಿ ಈತನ ತಂದೆಯ ಕೊಲೆಯಾಗಿತ್ತು. ಅಂದಿನಿಂದ ತಾನು ಐಎಎಸ್ ಅಧಿಕಾರಿಯಾಗಬೇಕೆಂದು ಹಠದಿಂದ ಭಜರಂಗ್ ಯಾದವ್ ಓದುತ್ತಿದ್ದ. ಇದೀಗ ಯಶಸ್ಸು ತನ್ನದಾಗಿಸಿಕೊಂಡಿದ್ದಾರೆ.
ಸಾಧನೆಗೆ ಅಡ್ಡಿಯಾಗದ ವೈಕಲ್ಯ
ಉತ್ತರ ಪ್ರದೇಶದ ಮೈನ್‌ಪುರಿಯ ಸೂರಜ್ ತಿವಾರಿಯು 2017ರಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ತನ್ನೆರಡು ಕಾಲುಗಳನ್ನು ಕಳೆದುಕೊಂಡಿದ್ದನು. ಇದರ ಜತೆಗೆ ಬಲಗೈಯೂ ತುಂಡಾಗಿತ್ತು. ಎಡಗೈನ ಎರಡು ಬೆರಳುಗಳನ್ನು ಕಳೆದುಕೊಂಡಿದ್ದನು. ಇಷ್ಟೆಲ್ಲ ತೊಂದರೆಗಳಿದ್ದರೂ ಯುಪಿಎಸ್‌ಸಿ ಸಿಎಸ್‌ಇ ಪರೀಕ್ಷೆಯಲ್ಲಿ 917ನೇ ರಾಂಕ್ ತನ್ನದಾಗಿಸಿಕೊಂಡಿದ್ದಾನೆ. "ನನ್ನ ಮಗನ ಸಾಧನೆ ನನಗೆ ಹೆಮ್ಮೆ ತಂದಿದೆ. ಆತನಿಗೆ ಯಶಸ್ಸು ಪಡೆಯಲು ಮೂರು ಬೆರಳು ಸಾಕಾಗಿದೆ" ಎಂದು ಸೂರಜ್ ತಂದೆ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಮೃತ ತಂದೆಯ ಆಸೆ ಈಡೇರಿಸಿದ ಮಗಳು
ಆಲ್ ಇಂಡಿಯಾ ರಾಂಕ್‌ನಲ್ಲಿ ಅಗ್ರ ಎರಡನೇ ಸ್ಥಾನ ಪಡೆದಿರುವ ಗರಿಮಾ ಲೋಹಿಯಾ ಸಾಧನೆಯೂ ಸ್ಪೂರ್ತಿದಾಯಕ. ಈಕೆ ಐಎಎಸ್ ಅಧಿಕಾರಿಯಾಗಬೇಕೆನ್ನುವುದು ಆಕೆಯ ತಂದೆಯ ಕನಸಾಗಿತ್ತು. ಬಿಹಾರ ಮೂಲದ ಈಕೆ ದೆಹಲಿ ವಿಶ್ವವಿದ್ಯಾಲಯದ ಕಿರೊರಿ ಮಾಲ್ ಕಾಲೇಜ್‌ನಲ್ಲಿ ಓದಿದ್ದಳು. "ನನ್ನ ತಂದೆಯ ಸಾವಿನ ನಂತರ ತಾಯಿ ಸಾಕಷ್ಟು ಬೆಂಬಲ ನೀಡಿದ್ದಾರೆ. ನಾನು ಐಎಎಸ್ ಅಧಿಕಾರಿಯಾಗಬೇಕೆನ್ನುವುದು ನನ್ನ ತಂದೆಯ ಕನಸ್ಸಾಗಿತ್ತು. ಆತ ಈಗ ಇರಬೇಕಿತ್ತು" ಎಂದು ಗರಿಮಾ ಲೋಹಿಯಾ ಟ್ವೀಟ್ ಮಾಡಿದ್ದಾರೆ.
ಸ್ಲಮ್ ಹುಡುಗನ ಯುಪಿಎಸ್‌ಸಿ ಸಾಧನೆ
ಮುಂಬೈನ ವಾಡಿ ಬಾಂದೆರ್ ಸ್ಲಮ್ ವಾಸಿ ಮಹಮ್ಮದ್ ಹುಸೈನ್ ಯಶೋಗಾಥೆಯೂ ಸ್ಪೂರ್ತಿದಾಯಕ. ಈತ ಯುಪಿಎಸ್‌ಸಿ ಸಿಎಸ್‌ಇ 2022ರಲ್ಲಿ ಯಶಸ್ಸು ಪಡೆದ 933 ಅಭ್ಯರ್ಥಿಗಳಲ್ಲಿ ಒಬ್ಬನಾಗಿದ್ದಾನೆ. ಮನೆಯಲ್ಲಿ ಓದಲು ಸಾಕಷ್ಟು ಸ್ಥಳಾವಕಾಶ ಇರದೆ ಇದ್ದರೂ ಈತ ತನ್ನ ಐದನೇ ಪ್ರಯತ್ನದಲ್ಲಿ 570ನೇ ರಾಂಕ್ ಪಡೆದಿದ್ದಾನೆ.
ಚಹಾ ಮಾರುವವನ ಮಗನ ಯಶಸ್ಸು
ಮಹಾರಾಷ್ಟ್ರ ಮೂಲದ ಮಂಗೀಶ್ ಖಿಲಾರಿಯು ಅಹಮಾದಬಾದ್‌ನ ಸುಖೇವಾಡಿ ಗ್ರಾಮದವನು. ಈತನ ತಂದೆ ಚಹಾ ಮಾರಾಟಗಾರ ಮತ್ತು ಫ್ಯಾಕ್ಟರಿ ಕಾರ್ಮಿಕ. ಇದೀಗ ಮಂಗೀಶ್ ಖಿಲಾರಿಯು ತನ್ನ ಮೂರನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಗ್ರ 396ನೇ ರಾಂಕ್ ಪಡೆದಿದ್ದಾನೆ.