CBSE Exams 2024: ಸಿಬಿಎಸ್‌ಇ 10, 12 ನೇ ತರಗತಿ ಪರೀಕ್ಷೆಯಲ್ಲಿನ್ನು ಡಿವಿಷನ್, ಡಿಸ್ಟಿಂಕ್ಷನ್ ಇರಲ್ಲ, ಮತ್ತೇನು ವ್ಯವಸ್ಥೆ..
ಸಿಬಿಎಸ್‌ಇ 2024ರಲ್ಲಿ ನಡೆಯಲಿರುವ 10 ಮತ್ತು 12ನೇ ತರಗತಿ ಪರೀಕ್ಷೆಯ ಫಲಿತಾಂಶದಲ್ಲಿ ಡಿವಿಷನ್, ಡಿಸ್ಟಿಂಕ್ಷನ್ ಅಥವಾ ಅಗ್ರಿಗೇಟ್ ಮಾರ್ಕ್ ನೀಡಲಾಗುವುದಿಲ್ಲ. ಆ ವ್ಯವಸ್ಥೆಯನ್ನು ನಿಲ್ಲಿಸುತ್ತಿರುವುದಾಗಿ ಸಿಬಿಎಸ್‌ಇ ಮಂಡಳಿ ತಿಳಿಸಿದೆ.
ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜುಕೇಶನ್ (ಸಿಬಿಎಸ್‌ಇ) 10 ಮತ್ತು 12ನೇ ತರಗತಿ ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಇನ್ನು ಮುಂದೆ 10 ಮತ್ತು 12ನೇ ತರಗತಿ ಪರೀಕ್ಷೆಗೆ ಇನ್ನು ಡಿವಿಷನ್, ಡಿಸ್ಟಿಂಕ್ಷನ್ ಅಥವಾ ಸರಾಸರಿ ಅಂಕವನ್ನೂ ನೀಡಲ್ಲ.
ಅಭ್ಯರ್ಥಿಯು ಉನ್ನತ ಶಿಕ್ಷಣ ಪ್ರವೇಶಕ್ಕೆ ಅಥವಾ ಉದ್ಯೋಗಕ್ಕೆ ಸಲ್ಲಿಸುವ ಅರ್ಜಿಯಲ್ಲಿ ಉಲ್ಲೇಖಿಸುವ 5 ಅಥವಾ ಅದಕ್ಕಿಂತ ಹೆಚ್ಚು ವಿಷಯಗಳನ್ನು ಪರಿಗಣಿಸಿ ಆ ಅಭ್ಯರ್ಥಿಯ ಡಿವಿಷನ್ / ಡಿಸ್ಟಿಂಕ್ಷನ್ / ಸರಾಸರಿ ಅಂಕ ಲೆಕ್ಕಹಾಕಬಹುದು ಎಂದು ಸಿಬಿಎಸ್‌ಇ ತಿಳಿಸಿದೆ.
ಸಿಬಿಎಸ್‌ಇ ಅಧಿಕೃತ ಪ್ರಕಟಣೆಯಲ್ಲಿ ಏನಿದೆ
ಸಿಬಿಎಸ್‌ಇ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, “ಮಂಡಳಿಯ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಶೇಕಡಾವಾರು ಪ್ರಮಾಣವನ್ನು ಲೆಕ್ಕಾಚಾರ ಮಾಡುವ ಮಾನದಂಡಗಳನ್ನು ತಿಳಿಸುವಂತೆ ಹಲವರು ವಿನಂತಿಸುತ್ತಿದ್ದಾರೆ. ಹೀಗಾಗಿ, ಪರೀಕ್ಷಾ ಉಪ-ನಿಯಮಗಳ ಅಧ್ಯಾಯ-7 ರ ಉಪ-ವಿಭಾಗ 40.1 (iii)ರ ಪ್ರಕಾರ, ಡಿವಿಷನ್ / ಡಿಸ್ಟಿಂಕ್ಷನ್ / ಸರಾಸರಿ ಅಂಕದ ವಿವರ ನೀಡಲಾಗುವುದಿಲ್ಲ” ಎಂದು ತಿಳಿಸಿದೆ.
ಅಲ್ಲದೆ, ಅಭ್ಯರ್ಥಿಯು 5 ಕ್ಕಿಂತ ಹೆಚ್ಚು ವಿಷಯಗಳನ್ನು ನೀಡಿದ್ದರೆ, ಅತ್ಯುತ್ತಮ 5 ವಿಷಯಗಳನ್ನು ಆಯ್ಕೆ ಮಾಡುವ ನಿರ್ಧಾರವನ್ನು ಪ್ರವೇಶ ಸಂಸ್ಥೆ ಅಥವಾ ಉದ್ಯೋಗದಾತರು ತೆಗೆದುಕೊಳ್ಳಬಹುದು. ಇದಲ್ಲದೆ, ಮಂಡಳಿಯು ಅಂಕಗಳ ಶೇಕಡಾವಾರು ಲೆಕ್ಕಾಚಾರ/ಘೋಷಣೆ/ಮಾಹಿತಿ ಮಾಡುವುದಿಲ್ಲ. ಅಂಕಗಳ ಶೇಕಡಾವಾರು ಪ್ರಮಾಣವನ್ನು ಲೆಕ್ಕ ಹಾಕುವುದಿಲ್ಲ, ಘೋಷಿಸುವುದಿಲ್ಲ ಅಥವಾ ತಿಳಿಸುವುದಿಲ್ಲ ಎಂದು ಸಿಬಿಎಸ್‌ಇ ಸ್ಪಷ್ಟಪಡಿಸಿದೆ.
ಈ ಹಿಂದೆ, ಅನಾರೋಗ್ಯಕರ ಸ್ಪರ್ಧೆಯನ್ನು ತಪ್ಪಿಸುವ ಸಲುವಾಗಿ ಮೆರಿಟ್ ಪಟ್ಟಿಗಳನ್ನು ನೀಡುವ ಕ್ರಮವನ್ನೂ ಸಿಬಿಎಸ್‌ಇ ನಿಲ್ಲಿಸಿತ್ತು.
ಸಿಬಿಎಸ್‌ಇ 10 ಮತ್ತು 12 ನೇ ತರಗತಿಯ 2023-24ನೇ ಸಾಲಿನ ಪರೀಕ್ಷೆಗಳ ಡೇಟ್ ಶೀಟ್ ಬಿಡುಗಡೆ
ಇದೇ ವೇಳೆ ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜುಕೇಶನ್ 10 ಮತ್ತು 12ನೇ ತರಗತಿಯ 2023 -24ನೇ ಸಾಲಿನ ಪರೀಕ್ಷೆಗಳ ಡೇಟ್ ಶೀಟ್ ಅನ್ನು ಬಿಡುಗಡೆ ಮಾಡಿದೆ. ಸಿಬಿಎಸ್‌ಇ 10 ನೇ ಮತ್ತು 12 ನೇ ತರಗತಿಯ ಪ್ರಾಯೋಗಿಕ ಪರೀಕ್ಷೆಗಳು ಜನವರಿ 1ರಿಂದ ಪ್ರಾರಂಭವಾಗಲಿದೆ.
“ಸಿಬಿಎಸ್‌ಇ 2023-24ನೇ ಶೈಕ್ಷಣಿಕ ವರ್ಷದ 10 ಮತ್ತು 12 ನೇ ತರಗತಿಗಳ ಬೋರ್ಡ್ ಪರೀಕ್ಷೆಯು 2024ರ ಫೆಬ್ರವರಿ 15ರಿಂದ ನಡೆಯಲಿದೆ. ಈ ಪರೀಕ್ಷೆಗಳನ್ನು 55 ದಿನಗಳ ಅವಧಿಯೊಳಗೆ ನಡೆಸಲಾಗುತ್ತಿದೆ. ಏಪ್ರಿಲ್ 10 ರೊಳಗೆ ಪರೀಕ್ಷೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ" ಎಂದು ಸಿಬಿಎಸ್‌ಇ ಅಧಿಕೃತ ಸೂಚನೆ ತಿಳಿಸಿದೆ.
ಈ ವರ್ಷದ ಮೇ ತಿಂಗಳಲ್ಲಿ 2022-23ರ ಶೈಕ್ಷಣಿಕ ಅವಧಿಯ CBSE ಪರೀಕ್ಷೆಗಳ ಫಲಿತಾಂಶವನ್ನು ಮಂಡಳಿಯು ಪ್ರಕಟಿಸಿದೆ. ಶೇಕಡ 87.33 ರಷ್ಟು ವಿದ್ಯಾರ್ಥಿಗಳು 12 ನೇ ತರಗತಿ ಪರೀಕ್ಷೆಯನ್ನು ಉತ್ತೀರ್ಣರಾಗಿದ್ದಾರೆ. ಆದರೆ ಈ ಫಲಿತಾಂಶ ಕಳೆದ ವರ್ಷಕ್ಕೆ ಹೋಲಿಸಿದರೆ 5.38 ಶೇಕಡಾ ಕಡಿಮೆಯಾಗಿದೆ. 10 ನೇ ತರಗತಿಯ 93.12 ಪ್ರತಿಶತ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, ಕಳೆದ ವರ್ಷಕ್ಕಿಂತ ಶೇಕಡಾ 1.28 ಅಂಕಗಳ ಉತ್ತೀರ್ಣತೆ ಕಡಿಮೆಯಾಗಿದೆ.
ವಿಭಾಗ