Political Consultants: ರಾಜಕೀಯ ಸಲಹೆಗಾರರು, ಚುನಾವಣಾ ತಂತ್ರಗಾರರಾಗುವುದು ಹೇಗೆ, ಅರ್ಹತೆ ಏನಿರಬೇಕು
ಭಾರತದಲ್ಲಿ ರಾಜಕೀಯ ಕ್ಷೇತ್ರದ ಕಡೆಗೆ ಯುವಜನರ ಸೆಳೆತ ಹೆಚ್ಚಾಗಿದೆ. ಅದರಲ್ಲೂ ವಿಶೇಷವಾಗಿ ವಿದ್ಯಾವಂತರು ಈಗ ಆಕರ್ಷಿತರಾಗಿದ್ದಾರೆ. ಅಧಿಕಾರದಲ್ಲಿದ್ದಾಗ ಎಲ್ಲರಿಂದಲೂ ಸಲಾಂ ಹೊಡೆಸಿಕೊಳ್ಳುವ ರಾಜಕಾರಣಿಗಳೇ, ಇದೊಂದು ಸಲ ನಮ್ಮನ್ನು ಗೆಲ್ಲಿಸಿಬಿಡಿ.. ಎಂದು ಸಲಾಂ ಹೊಡೆಯುವ ಉದ್ಯೋಗ ಇದು. ರಾಜಕೀಯ ತಂತ್ರಗಾರರಾಗುವುದು ಹೇಗೆ? ಅರ್ಹತೆ ಏನು- ಇಲ್ಲಿದೆ ವಿವರ.
ಚುನಾವಣಾ ತಂತ್ರಗಾರ, ರಾಜಕೀಯ ತಂತ್ರಗಾರ, ರಾಜಕೀಯದ ಚಾಣಕ್ಯ ಎಂಬಿತ್ಯಾದಿ ಪದಗಳನ್ನು ಕೇಳುತ್ತಿದ್ದರೆ ಬಹುತೇಕ ಯುವ ರಾಜಕಾರಣಿಗಳ ಕಂಗಳಲ್ಲಿ ಕನಸುಗಳು ಕಂಗೊಳಿಸತೊಡಗುತ್ತವೆ. ಹಳೆತಲೆಮಾರಿನವರಿಗಾದರೆ ರಾಜಕಾರಣಿಗಳ ಹೆಸರುಗಳು ನೆನಪಾಗಬಹುದು. ಆದರೆ ಹೊಸ ತಲೆಮಾರಿನವರು ಚುನಾವಣಾ ತಂತ್ರಗಾರ, ರಾಜಕೀಯ ತಂತ್ರಗಾರ ಎಂದ ಕೂಡಲೇ ಪ್ರಶಾಂತ್ ಕಿಶೋರ್, ಸುನೀಲ್ ಕನುಗೋಲು ಮತ್ತಿತರರ ಹೆಸರು ಹೇಳಬಹುದು.
ಪ್ರಶಾಂತ್ ಕಿಶೋರ್, ಸುನೀಲ್ ಕನುಗೋಲು ಮುಂತಾದವರ ಹಾಗೆ ಚುನಾವಣಾ ತಂತ್ರಗಾರರು ಅಥವಾ ರಾಜಕೀಯ ತಂತ್ರಗಾರರು ಆಗುವುದು ಹೇಗೆ? ಅದಕ್ಕೇನಾದರೂ ಶೈಕ್ಷಣಿಕ ಅರ್ಹತೆ ಬೇಕಾ? ಯಾವೆಲ್ಲ ರೀತಿಯ ಕೌಶಲಗಳು ಬೇಕು ಎಂಬ ಪ್ರಶ್ನೆಗಳು ಸಹಜ. ದೇಶದ ರಾಜಕೀಯ ರಂಗದಲ್ಲಿ ಪೊಲಿಟಿಕಲ್ ಕನ್ಸಲ್ಟೆನ್ಸಿ ಅಥವಾ ರಾಜಕೀಯ ತಂತ್ರಗಾರ, ಚುನಾವಣಾ ತಂತ್ರಗಾರರಾಗಿ ವೃತ್ತಿ ಆರಂಭಿಸುವುದಕ್ಕೆ ಈಗ ಅವಕಾಶಗಳು ಹೆಚ್ಚು.
ರಾಜಕೀಯ ರಂಗದಲ್ಲಿ ಪರಿಣತರಿಗೆ ಏನೇನು ಕೆಲಸಗಳಿವೆ…
ಬದಲಾದ ರಾಜಕೀಯ ಸನ್ನಿವೇಶದಲ್ಲಿ, ಲಕ್ಷಾಂತರ ಜನರ ಹೃದಯಗಳನ್ನು ಗೆಲ್ಲುವುದಕ್ಕೆ ನಾಯಕರಿಗೆ ಸಹಾಯ ಮಾಡುವಲ್ಲಿ ರಾಜಕೀಯ ಸಲಹೆಗಾರರು/ ರಾಜಕೀಯ ತಂತ್ರಗಾರರು ಪ್ರಮುಖ ಪಾತ್ರವಹಿಸುತ್ತಾರೆ.
ನಮ್ಮ ದೇಶದಲ್ಲಿ ಚುನಾವಣೆ ಇಲ್ಲದ ವರ್ಷವೇ ಇಲ್ಲ. ಹೀಗಾಗಿ ರಾಜಕೀಯ ಸಲಹೆಗಾರರು (Political Advisers), ರಾಜಕೀಯ ತಂತ್ರಗಾರರು (Political strategists) ಮುಂತಾದವರಿಗೆ ಕೆಲಸಕ್ಕೆ, ಸಂಭಾವನೆಗೆ ಕೊರತೆ ಇಲ್ಲ.
1. ಚುನಾವಣಾ ಸಂಶೋಧನೆ (ಅಗತ್ಯ ಮಾಹಿತಿ ಸಂಗ್ರಹ)
2. ಡಿಜಿಟಲ್ ಮೀಡಿಯಾ ಅಭಿಯಾನ
3. ಸಾರ್ವಜನಿಕ ಸಂಪರ್ಕ
4. ನಿಧಿ ಸಂಗ್ರಹ
5. ಭಾಷಣ ಬರೆಹ
ರಾಜಕೀಯ ನಾಯಕರೊಬ್ಬರು ಭಾಷಣಕ್ಕೆ ಬರುತ್ತಾರೆ ಎಂದರೆ ಕನಿಷ್ಠ ಈ ಐದು ತಂಡ ಕೆಲಸ ನಿರತವಾಗಿರುತ್ತದೆ. ಅವರು ಹೋಗುವ ಪ್ರದೇಶದ ರಾಜಕೀಯ, ಭೌಗೋಳಿಕ, ಸಾಮಾಜಿಕ, ಐತಿಹಾಸಿಕ, ಜಾತಿ ಸಮೀಕರಣ ಎಲ್ಲ ಮಾಹಿತಿಗಳನ್ನೂ ಸಂಗ್ರಹಿಸಬೇಕು. ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ನಡೆಸಿ ಪ್ರಚಾರ ಮಾಡಬೇಕು. ಸಾರ್ವಜನಿಕ ಸಂಪರ್ಕ ಸಾಧಿಸಿ, ಒಂದು ಛಾಪು ಮೂಡಿಸಬೇಕು. ನಾಯಕನಿಗೆ ಭಾಷಣ ಬರೆದುಕೊಡಬೇಕು.
ರಾಜಕೀಯ ರಂಗದಲ್ಲಿ ಕೆಲಸ ಮಾಡಲು ಇಚ್ಛಿಸುವ ಪರಿಣತರಿಗೆ ಇರಬೇಕಾದ ಅರ್ಹತೆಗಳೇನು
ನಿಖರವಾಗಿ ಇಂಥದ್ದೇ ಅರ್ಹತೆ ಬೇಕು ಎಂದು ಈ ಕೆಲಸಗಳು ಬಯಸುವುದಿಲ್ಲ. ಆದರೆ, ರಾಜಕೀಯಕ್ಕೆ ಸಂಬಂಧಿಸಿದ ತಿಳಿವಳಿಕೆ, ಪ್ರಾಥಮಿಕ ಜ್ಞಾನ, ತಿಳಿದುಕೊಳ್ಳುವ ಕುತೂಹಲ ಬೇಕೇ ಬೇಕು. ಪ್ರಸ್ತುತ ರಾಜಕೀಯ ಸನ್ನಿವೇಶ, ಇತಿಹಾಸದ ಅರಿವು, ರಾಜಕಾರಣಿಗಳ ಕುರಿತಾದ ಮಾಹಿತಿ, ಕ್ಷೇತ್ರದ ಮಾಹಿತಿ ಇರಬೇಕಾದ್ದು ಅವಶ್ಯ.
ರಾಜಕೀಯ ವಿಜ್ಞಾನ, ಪತ್ರಿಕೋದ್ಯಮ, ಇಂಗ್ಲಿಷ್, ಸಾರ್ವಜನಿಕ ನೀತಿ, ಸಾರ್ವಜನಿಕ ಆಡಳಿತ, ದತ್ತಾಂಶ ವಿಜ್ಞಾನಿ (ಡೇಟಾ ಸೈಂಟಿಸ್ಟ್ ), ಸಮಾಜಶಾಸ್ತ್ರಜ್ಞರು, ಮನಶ್ಶಾಸ್ತ್ರಜ್ಞರು ಅಥವಾ ವ್ಯವಹಾರ ನಿರ್ವಹಣೆ ಹಿನ್ನೆಲೆ ಹೊಂದಿರುವವರು ಮೇಲುಗೈ ಹೊಂದುತ್ತಾರೆ. ಇಂಥವರಿಗೆ ರಾಜಕೀಯ ವಿಶ್ಲೇಷಣೆಯ ಪರಿಣತಿಯೂ ಇರುತ್ತದೆ. ಇದು ಇವರನ್ನು ಯಶಸ್ಸಿನತ್ತ ಕರೆದೊಯ್ಯುತ್ತದೆ.
ಭಾರತದ ಮತದಾರರನ್ನು ಗಮನಿಸಿದರೆ ಅಂದಾಜು 47 ಕೋಟಿ ಮತದಾರರ ವಯಸ್ಸು 43 ವಯಸ್ಸಿನೊಳಗೇ ಇದೆ. ಇವರು ಚುನಾವಣಾ ರಾಜಕೀಯಲ್ಲಿ ನಾಯಕರ ಭವಿಷ್ಯ ನಿರ್ಧರಿಸುವವರು. ಹೀಗಾಗಿ ಯುವಜನರ ನಾಡಿಮಿಡಿತ ಅರಿತವರೇ ರಾಜಕೀಯ ರಂಗದಲ್ಲಿ ಮಿಂಚಲು ಸಾಧ್ಯ.
ರಾಜಕೀಯ ಸಲಹೆಗಾರ/ ರಾಜಕೀಯ ತಂತ್ರಗಾರರ ಕೆಲಸದ ಅವಧಿ, ವೇತನ ಮತ್ತು ಇತರೆ ವಿವರ
ರಾಜಕೀಯ ಸಲಹೆಗಾರ/ ರಾಜಕೀಯ ತಂತ್ರಗಾರರ ಹುದ್ದೆ ಎನ್ನುವುದು ಪೂರ್ಣಕಾಲಿಕ ಕೆಲಸ ಇರುವಂಥದ್ದು. ಇತರೆ ಕಂಪನಿಗಳಲ್ಲಿರುವಂತೆಯೇ ಇಲ್ಲೂ ಉದ್ಯೋಗಿಗಳಿಗೆ ಉತ್ತಮ ವೇತನ, ಸವಲತ್ತುಗಳು ಇದ್ದೇ ಇದೆ.
ಹೆಚ್ಚುವರಿ ಪ್ರಯೋಜನ ಏನು ಎಂದರೆ, ಈ ಉದ್ಯೋಗಿಗಳಿಗೆ ರಾಜಕೀಯ ನಾಯಕರ ನೆರಳಿನಲ್ಲಿ ಕೆಲಸ ಮಾಡುವುದಕ್ಕೆ ಅವಕಾಶವಿದೆ. ಚುನಾವಣಾ ಗೆಲುವು ಸಿಕ್ಕರೆ ಈ ಉದ್ಯೋಗಿಗಳ ಮೇಲೆ ಅವರ ಗೌರವ ಕೂಡ ಹೆಚ್ಚಾಗುವುದು.
ಅಗತ್ಯಕ್ಕೆ ತಕ್ಕಂತೆ ಹಗಲು ರಾತ್ರಿ ಎನ್ನದೆ ಕೆಲಸ ಮಾಡುವ ಸಾಮರ್ಥ್ಯ ಹೊಂದಿರಬೇಕು. ಚುನಾವಣಾ ಪ್ರಚಾರದಿಂದ ಹಿಡಿದು ಗೆಲುವಿನ ತನಕ ಯಾವ್ಯಾವ ಸಂದರ್ಭದಲ್ಲಿ ಯಾವ ರೀತಿ ತಂತ್ರಗಾರಿಕೆ ಬಳಸಬೇಕು ಎಂಬುದನ್ನು ನಿರ್ಧರಿಸಬೇಕು.
ಇದಕ್ಕೆ ಕೊನೆ ಎಂಬುದಿಲ್ಲ. ರಾಜಕೀಯ ಪರಿಣತಿ, ಅನುಭವ ದಕ್ಕಿದರೆ ಈ ಉದ್ಯೋಗ ನಿರಂತರವಾಗಿರುತ್ತದೆ. ಸ್ವತಂತ್ರವಾಗಿ ಕೂಡ ರಾಜಕೀಯ ನಾಯಕರಿಗೆ ಅಗತ್ಯ ಸೇವೆಗಳನ್ನು ಒದಗಿಸಬಹುದು.
ರಾಜಕೀಯ ಸಲಹೆಗಾರ/ ರಾಜಕೀಯ ತಂತ್ರಗಾರರಿಂದ ನಾಯಕರು ಬಯಸುವುದೇನು
ರಾಜಕೀಯವಾಗಿ ಮುಂದುವರಿಯಲು ಬಯಸುವ ರಾಜಕೀಯ ಕಾರ್ಯಕರ್ತ ತನ್ನನ್ನು ನಾಯಕನ ಮಟ್ಟಕ್ಕೆ, ಅಲ್ಲಿಂದ ಸಚಿವರ ಮಟ್ಟಕ್ಕೆ, ಮುಖ್ಯಮಂತ್ರಿ ಮಟ್ಟಕ್ಕೆ ತನ್ನ ಪ್ರೊಫೈಲ್ ಬಿಲ್ಡ್ ಮಾಡಬೇಕು ಎಂದರೆ ಅದಕ್ಕೆ ಪರ್ಸನಲ್ ಬ್ರಾಂಡಿಂಗ್ ಅಗತ್ಯ. ಆಗ ನೆರವಿಗೆ ಬರುವವರೇ ರಾಜಕೀಯ ಸಲಹೆಗಾರ/ ರಾಜಕೀಯ ತಂತ್ರಗಾರರು. ಬಿಕ್ಕಟ್ಟಿನ ಸನ್ನಿವೇಶದಲ್ಲಿ ಅದನ್ನು ಬಗೆಹರಿಸಿ ಇಮೇಜ್ ಕಾಪಾಡುವ ಕೆಲಸಕ್ಕೂ ರಾಜಕೀಯ ಸಲಹೆಗಾರ/ ರಾಜಕೀಯ ತಂತ್ರಗಾರರ ನೆರವು ಕೋರುತ್ತಾರೆ.