ಛಲದಂಕ ಮಲ್ಲ ಈ 3 ಅಡಿ ಎತ್ತರದ ಯುವಕ; ವೈದ್ಯಕೀಯ ಮಂಡಳಿಗೆ ತೊಡೆತಟ್ಟಿ ಗೆದ್ದ ಗಣೇಶ್ ಈಗ ಡಾಕ್ಟರ್, ಇದು ಯಶೋಗಾಥೆ-education news meet 3 ft tall ganesh baraiya who became a doctor with determination india news motivational story uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಛಲದಂಕ ಮಲ್ಲ ಈ 3 ಅಡಿ ಎತ್ತರದ ಯುವಕ; ವೈದ್ಯಕೀಯ ಮಂಡಳಿಗೆ ತೊಡೆತಟ್ಟಿ ಗೆದ್ದ ಗಣೇಶ್ ಈಗ ಡಾಕ್ಟರ್, ಇದು ಯಶೋಗಾಥೆ

ಛಲದಂಕ ಮಲ್ಲ ಈ 3 ಅಡಿ ಎತ್ತರದ ಯುವಕ; ವೈದ್ಯಕೀಯ ಮಂಡಳಿಗೆ ತೊಡೆತಟ್ಟಿ ಗೆದ್ದ ಗಣೇಶ್ ಈಗ ಡಾಕ್ಟರ್, ಇದು ಯಶೋಗಾಥೆ

ಕಣ್ಣ ಮುಂದೆ ಬದುಕಿಗೆ ಒಂದು ಗುರಿ, ಅದನ್ನು ಈಡೇರಿಸುವ ಛಲ ಮತ್ತು ಪರಿಶ್ರಮ ಇದ್ದರೆ ಯಾವುದೂ ಅಡ್ಡಿಯಾಗಲ್ಲ. ಅದಕ್ಕೆ ನಿದರ್ಶನವಾಗಿ ನಿಂತಿದ್ದಾರೆ ಡಾ.ಗಣೇಶ್ ಬರೈಯಾ. ಮೂರು ಅಡಿ ಎತ್ತರದ ಈ ಯುವಕ ಎಂಬಿಬಿಎಸ್ ಪದವಿ ಪಡೆದು ಡಾಕ್ಟರ್ ಆದ ಯಶೋಗಾಥೆ ಇಲ್ಲಿದೆ.

ಗುಜರಾತ್‌ನ ಭಾವನಗರದ ಡಾ.ಗಣೇಶ್ ಬರೈಯಾ
ಗುಜರಾತ್‌ನ ಭಾವನಗರದ ಡಾ.ಗಣೇಶ್ ಬರೈಯಾ (PTI)

ಭಾವನಗರ: ಈತ ಛಲದಂಕ ಮಲ್ಲ. ಎತ್ತರ 3.5 ಅಡಿ. ಡಾಕ್ಟರ್ ಆಗಬೇಕೆಂಬ ಆಸೆ, ಕನಸು. ಆದರೆ ಎಂಬಿಬಿಎಸ್‌ಗೆ ಪ್ರವೇಶ ನಿರಾಕರಿಸುವ ಮೂಲಕ ಈತನ ಆಸೆಗೆ ತಣ್ಣೀರೆರಚಿದ್ದು ಭಾರತೀಯ ವೈದ್ಯಕೀಯ ಮಂಡಳಿ. ಆದಾಗ್ಯೂ ಎದೆಗುಂದದೇ ಹೋರಾಟ ನಡೆಸಿದ ಈತ ಈಗ ಎಂಬಿಬಿಎಸ್ ಪದವೀಧರ, ಡಾಕ್ಟರ್‌. ಜಗತ್ತಿನ ಪುಟ್ಟ ಡಾಕ್ಟರ್ (world's shortest doctor).

ಹೆಸರು ಡಾ.ಗಣೇಶ್ ಬರೈಯಾ, ಗುಜರಾತ್‌ನ ಭಾವನಗರದವರು. ಬದುಕಿಗೊಂದು ಗುರಿ ಇರಬೇಕು ಅಂತಾರಲ್ಲ. ಅಂತಹ ಗುರಿಯನ್ನು ಡಾ.ಗಣೇಶ್ ಶಾಲಾ ಶಿಕ್ಷಣ ಪಡೆಯುತ್ತಿರುವಾಗಲೇ ಹೊಂದಿದ್ದರು. ಎಂಬಿಬಿಎಸ್ ಪದವಿ ಪಡೆದು ಡಾಕ್ಟರ್ ಆಗಬೇಕು ಎಂಬ ಕನಸು ಕಂಡವರು. ಆದರೆ ಈ ಕನಸು ನನಸು ಮಾಡಲು ಅವರು ಸವೆಸಿದ ಹಾದಿ ಸ್ವಲ್ಪ ಕಷ್ಟದ್ದೇ ಆಗಿತ್ತು. ಕಾರಣ ಅವರ ಎತ್ತರ. ಕಡಿಮೆ ಎತ್ತರ ಇದ್ದ ಕಾರಣ ವೈದ್ಯ ವೃತ್ತಿಯ ಕೋರ್ಸ್‌ಗೆ ಪ್ರವೇಶ ನೀಡಲಾಗದು ಎಂದು ಭಾರತೀಯ ವೈದ್ಯಕೀಯ ಮಂಡಳಿ ಹೇಳಿದಾಗ, 23 ವರ್ಷದ ಡಾ.ಗಣೇಶ್ ಬರೈಯಾ ತನ್ನ ಪ್ರಯತ್ನವನ್ನು ಕೈಬಿಡಲಿಲ್ಲ.

ಆದಾಗ್ಯೂ, ಮೂರು ಅಡಿ ಎತ್ತರದ ಡಾ. ಬರೈಯಾ ಅವರು ತಮ್ಮ ದೃಢನಿಶ್ಚಯವನ್ನು ಬಲಿಗೊಡಲಿಲ್ಲ. ಬದಲಾಗಿ, ಅವರು ತಮ್ಮ ಶಾಲಾ ಪ್ರಾಂಶುಪಾಲರ ಸಹಾಯವನ್ನು ಪಡೆದರು. ಜಿಲ್ಲಾಧಿಕಾರಿ, ರಾಜ್ಯ ಶಿಕ್ಷಣ ಸಚಿವರನ್ನು ಸಂಪರ್ಕಿಸಿದರು ಮತ್ತು ನಂತರ ಗುಜರಾತ್ ಹೈಕೋರ್ಟ್ನ ಬಾಗಿಲು ತಟ್ಟಿದರು.

ಗುಜರಾತ್ ಹೈಕೋರ್ಟಿನಲ್ಲಿ ಈ ಪ್ರಕರಣದಲ್ಲಿ ಸೋತ ನಂತರವೂ ಡಾ. ಬರೈಯಾ ಅವರು ಎಂಬಿಬಿಎಸ್ ಪದವಿ ಪಡೆದು ಡಾಕ್ಟರ್ ಆಗುವ ಕನಸಿನ ಮೇಲಿನ ಭರವಸೆ ಕಳೆದುಕೊಳ್ಳಲಿಲ್ಲ. ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು. ಅಲ್ಲಿ ವಿಚಾರಣೆ ನಡೆಯಿತು. 2018 ರಲ್ಲಿ ಪ್ರಕರಣವನ್ನು ಗೆದ್ದರು. 2019 ರಲ್ಲಿ ಎಂಬಿಬಿಎಸ್‌ಗೆ ಪ್ರವೇಶ ಪಡೆದರು ಮತ್ತು ಈಗ ಎಂಬಿಬಿಎಸ್ ಮುಗಿಸಿದ ನಂತರ ಅವರು ಭಾವನಗರದ ಸರ್-ಟಿ ಆಸ್ಪತ್ರೆಯಲ್ಲಿ ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದಾರೆ.

ಡಾ.ಗಣೇಶ್ ಬರೈಯಾ ಯಶೋಗಾಥೆ (Motivational Story) ಹೀಗಿದೆ ನೋಡಿ

"ನಾನು 12 ನೇ ತರಗತಿಯಲ್ಲಿ ಉತ್ತೀರ್ಣನಾಗಿ ಎಂಬಿಬಿಎಸ್‌ಗೆ ಸೇರಲು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ಭಾರತೀಯ ವೈದ್ಯಕೀಯ ಮಂಡಳಿ ಸಮಿತಿಯು ನನ್ನ ಎತ್ತರದ ಕಾರಣ ನೀಡಿ ನನಗೆ ಪ್ರವೇಶ ನಿರಾಕರಿಸಿತು. ನನ್ನ ಕಡಿಮೆ ಎತ್ತರದ ಕಾರಣ ತುರ್ತು ಪ್ರಕರಣಗಳನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ ಎಂಬುದು ಅವರ ವಾದವಾಗಿತ್ತು. ನಂತರ, ನಾನು ನೀಲಕಂಠ ವಿದ್ಯಾಪೀಠದ ಪ್ರಾಂಶುಪಾಲ ಡಾ.ದಲ್ಪತ್ ಭಾಯ್ ಕಟಾರಿಯಾ ಮತ್ತು ರೇವಶಿಶ್ ಸರ್ವೈಯಾ ಅವರೊಂದಿಗೆ ಈ ಬಗ್ಗೆ ಮಾತನಾಡಿದ್ದೇನೆ. ಈ ಬಗ್ಗೆ ನಾವು ಏನು ಮಾಡಬಹುದು ಎಂದು ಕೇಳಿದೆ " ಎಂದು ಡಾ.ಬರೈಯಾ ತಮ್ಮ ಆರಂಭಿಕ ಹೋರಾಟವನ್ನು ಎಎನ್‌ಐಗೆ ವಿವರಿಸಿದ್ದು ಹೀಗೆ.

“ಭಾವನಗರ ಜಿಲ್ಲಾಧಿಕಾರಿ ಮತ್ತು ಗುಜರಾತ್ ಶಿಕ್ಷಣ ಸಚಿವರನ್ನು ಭೇಟಿಯಾಗಲು ಅವರು ನನಗೆ ಹೇಳಿದರು. ಭಾವನಗರ ಕಲೆಕ್ಟರ್ ನಿರ್ದೇಶನದ ಮೇರೆಗೆ, ನಾವು ಪ್ರಕರಣವನ್ನು ಗುಜರಾತ್ ಹೈಕೋರ್ಟ್‌ಗೆ ಕೊಂಡೊಯ್ಯಲು ನಿರ್ಧರಿಸಿದೆವು. ಇತರ ಇಬ್ಬರು ಅಭ್ಯರ್ಥಿಗಳು ನಮ್ಮೊಂದಿಗೆ ಇದ್ದರು, ಅವರು ವಿಕಲಚೇತನರು... ಹೈಕೋರ್ಟ್‌ನಲ್ಲಿ ನಮಗೆ ಸೋಲಾಯಿತು. ಆದರೆ ನಂತರ ನಾವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆವು” ಎಂದು ಅವರು ಹೇಳಿದರು.

"ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದು 2018ರಲ್ಲಿ ನಮ್ಮ ಪರವಾಗಿ ತೀರ್ಪು ಬಂತು. ನನಗೆ ಎಂಬಿಬಿಎಸ್‌ಗೆ ಪ್ರವೇಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿತು. ಭಾರತೀಯ ವೈದ್ಯಕೀಯ ಮಂಡಳಿಗೆ ನಿರ್ದೇಶನ ನೀಡಿತು. 2018ರಲ್ಲಿಯೇ ಎಂಬಿಬಿಎಸ್ ಕೋರ್ಸ್ ಪ್ರವೇಶಾತಿ ಪೂರ್ಣಗೊಂಡಿದ್ದರಿಂದ, ನಾನು 2019ರ ಎಂಬಿಬಿಎಸ್ ಕೋರ್ಸ್ ಗೆ ಪ್ರವೇಶ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಇದರಂತೆ, ಭಾವನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದೆ. ಅಲ್ಲಿ ನನ್ನ ಎಂಬಿಬಿಎಸ್ ಪ್ರಯಾಣ ಪ್ರಾರಂಭವಾಯಿತು" ಎಂದು ಡಾ.ಗಣೇಶ್ ಬರೈಯಾ ವಿವರಿಸಿದರು.

ಅವರ ಎತ್ತರದಿಂದಾಗಿ ದೈನಂದಿನ ಸವಾಲುಗಳ ಬಗ್ಗೆ ಮಾತನಾಡಿದ ಡಾ.ಬರೈಯಾ, ರೋಗಿಗಳು ಆರಂಭದಲ್ಲಿ ಅವರ ಎತ್ತರವನ್ನು ಗಮನಿಸಿದರೂ, ಕಾಲಾನಂತರದಲ್ಲಿ ಚಿಕಿತ್ಸೆ ಕಡೆಗೆ ಗಮನಹರಿಸುತ್ತಾರೆ. ಆರಾಮವಾಗಿ ನನ್ನ ಚಿಕಿತ್ಸೆಯನ್ನೂ ಪಡೆಯುತ್ತಾರೆ. ಡಾಕ್ಟರ್ ಆಗಿ ನನ್ನನ್ನೂ ಸ್ವೀಕರಿಸುತ್ತಾರೆ ಎಂಬ ಭರವಸೆಯ ನುಡಿಗಳನ್ನಾಡಿದ್ದಾರೆ.

"ರೋಗಿಗಳು ನನ್ನನ್ನು ನೋಡಿದಾಗಲೆಲ್ಲಾ ಅವರು ಮೊದಲು ಸ್ವಲ್ಪ ಬೆಚ್ಚಿಬೀಳುತ್ತಾರೆ ಆದರೆ ನಂತರ ಅವರು ನನ್ನನ್ನು ಸ್ವೀಕರಿಸುತ್ತಾರೆ. ಅವರ ಆರಂಭಿಕ ನಡವಳಿಕೆಯನ್ನು ನಾನು ಸಹ ಒಪ್ಪಿಕೊಳ್ಳುತ್ತೇನೆ. ಅವರು ನನ್ನೊಂದಿಗೆ ಸೌಹಾರ್ದಯುತವಾಗಿ ಮತ್ತು ಸಕಾರಾತ್ಮಕವಾಗಿ ವರ್ತಿಸುತ್ತಾರೆ. ಅವರೂ ಸಂತೋಷವಾಗುತ್ತಾರೆ, "ಎಂದು ಅವರು ಹೇಳಿದರು.

(This copy first appeared in Hindustan Times Kannada website. To read more like this please logon to kannada.hindustantimes.com)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.