UGC Clarification: ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ನೆಟ್‌ ಸೆಟ್‌ ಸ್ಲೆಟ್‌ ಕನಿಷ್ಠ ಅರ್ಹತೆ, ಹೊಸ ನಿಯಮದ ಕುರಿತು ಸ್ಪಷ್ಟನೆ ನೀಡಿದ ಯುಜಿಸಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ugc Clarification: ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ನೆಟ್‌ ಸೆಟ್‌ ಸ್ಲೆಟ್‌ ಕನಿಷ್ಠ ಅರ್ಹತೆ, ಹೊಸ ನಿಯಮದ ಕುರಿತು ಸ್ಪಷ್ಟನೆ ನೀಡಿದ ಯುಜಿಸಿ

UGC Clarification: ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ನೆಟ್‌ ಸೆಟ್‌ ಸ್ಲೆಟ್‌ ಕನಿಷ್ಠ ಅರ್ಹತೆ, ಹೊಸ ನಿಯಮದ ಕುರಿತು ಸ್ಪಷ್ಟನೆ ನೀಡಿದ ಯುಜಿಸಿ

NET SET and SLET: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಬೇಕಿದ್ದರೆ ನೆಟ್‌ ಸೆಟ್‌ ಸ್ಲೆಟ್‌ ಕನಿಷ್ಠ ವಿದ್ಯಾರ್ಹತೆ ಎಂದಿದ್ದ ಯುಜಿಸಿಯ ಸುತ್ತೊಲೆ ಪಿಎಚ್‌.ಡಿ ಪದವಿ ಪಡೆದವರಿಗೆ ಆತಂಕ ತಂದಿತ್ತು. ಇದೀಗ ಯುಜಿಸಿ ಈ ಕುರಿತು ಸ್ಪಷ್ಟನೆ ನೀಡಿದೆ.

UGC Clarification: ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ನೆಟ್‌ ಸೆಟ್‌ ಸ್ಲೆಟ್‌ ಕನಿಷ್ಠ ಅರ್ಹತೆ
UGC Clarification: ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ನೆಟ್‌ ಸೆಟ್‌ ಸ್ಲೆಟ್‌ ಕನಿಷ್ಠ ಅರ್ಹತೆ (HT_PRINT)

ನವದೆಹಲಿ: ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಪಕರನ್ನು ನೇರ ನೇಮಕ ಮಾಡಿಕೊಳ್ಳುವುದಕ್ಕೆ ಕನಿಷ್ಠ ಅರ್ಹತೆ ನಿಗದಿಪಡಿಸಿದ್ದ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗವು (ಯುಜಿಸಿ) ಇದೀಗ ಕನಿಷ್ಠ ಅರ್ಹತೆಯನ್ನು ಪರಿಷ್ಕರಿಸಿದ್ದು, ಸ್ಪಷ್ಟನೆಯನ್ನು ನೀಡಿದೆ. "ಸ್ನಾತಕೋತ್ತರ ಪದವಿ ಜತೆಗೆ ಯುಜಿಸಿ ನೆಟ್‌/ಸ್ಲೆಟ್‌, ಸೆಟ್‌ (UGC-NET/SLET/SET) ಎನ್ನುವುದು ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಇರುವ ಕನಿಷ್ಠ ವಿದ್ಯಾರ್ಹತೆಯಾಗಿದೆ. ಇದರ ಜತೆಗೆ, ಯುಜಿಸಿ ನಿಯಮಗಳಂತೆ ಪಿಎಚ್‌.ಡಿ ಪಡೆದಿರುವವರನ್ನು ಯುಜಿಸಿ ನೆಟ್‌/ಸ್ಲೆಟ್‌, ಸೆಟ್‌ ಕನಿಷ್ಠ ಅರ್ಹತೆ ನಿಯಮದಿಂದ ಹೊರಗಿರುತ್ತಾರೆ" ಎಂದು ಯುಜಿಸಿ ಚೇರ್ಮನ್‌ ಎಂ ಜಗದೀಶ್‌ ಕುಮಾರ್‌ ಹೇಳಿದ್ದಾರೆ. ಈ ಮೂಲಕ ಪಿಎಚ್‌.ಡಿ ಪದವಿ ಪಡೆದಿರುವವರು ಕೂಡ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆ ಹೊಂದಿರುತ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದೇ ಸಮಯದಲ್ಲಿ ಎಂ ಜಗದೀಶ್‌ ಕುಮಾರ್‌ ಅವರು ಇನ್ನೊಂದು ವಿಷಯನವನ್ನೂ ಹೇಳಿದ್ದಾರೆ. "ಒಂದು ನಿರ್ದಿಷ್ಟ ವಿಭಾಗದಲ್ಲಿ ಸ್ವೀಕರಿಸಿದ ಅರ್ಜಿಗಳ ಸಂಖ್ಯೆಯನ್ನು ಅವಲಂಬಿಸಿ ಉನ್ನತ ಶಿಕ್ಷಣ ಸಂಸ್ಥೆಗಳು ಸಹಾಯಕ ಪ್ರಾಧ್ಯಾಪಕರ ಮಟ್ಟದಲ್ಲಿ ನೇಮಕಾತಿಗಾಗಿ ನಿಯಮಗಳಲ್ಲಿ ನೀಡಲಾದ ಸೂಕ್ತ ಮಾನದಂಡಗಳನ್ನು ಬಳಸಬಹುದು" ಎಂದು ಕುಮಾರ್ ಹೇಳಿದ್ದಾರೆ.

ಜುಲೈ 5ರಂದು ಯುಜಿಸಿ ಹೊರಡಿಸಿದ ಅಧಿಸೂಚನೆ ಸಾಕಷ್ಟು ಚರ್ಚೆಗೆ ಈಡಾಗಿತ್ತು. ಯುಜಿಸಿ ಆದೇಶದಿಂದಾಗಿ ಪಿಎಚ್‌.ಡಿ ಪಡೆದವರು ಈ ನೇರ ನೇಮಕಾತಿಗೆ ಅರ್ಹತೆ ಪಡೆಯದೆ ಇರುವ ಆತಂಕ ಎದುರಾಗಿತ್ತು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಸಿಸ್ಟೆಂಟ್‌ ಪ್ರೊಫೆಸರ್‌ ಹುದ್ದೆ ಪಡೆಯಲು ನೆಟ್‌, ಸೆಟ್‌ ಅಥವಾ ಸ್ಲೆಟ್‌ ಕನಿಷ್ಠ ಅಗತ್ಯ ಅರ್ಹತೆಯಾಗಿದೆ ಎಂದು ಯುಜಿಸಿ ಹೇಳಿತ್ತು. ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET), ರಾಜ್ಯ ಅರ್ಹತಾ ಪರೀಕ್ಷೆ (SET) ಮತ್ತು ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆ (SLET) ಪಡೆಯದೆ ಇರುವವರು ಈ ಹುದ್ದೆಗೆ ಅರ್ಹರಲ್ಲವೇ ಎಂಬ ಪ್ರಶ್ನೆ ಎದ್ದಿತ್ತು. ಇದೀಗ ಪಿಎಚ್‌ಡಿ ಪಡೆದವರೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.

 

ಸಹಾಯಕ ಪ್ರಾಧ್ಯಾಪಕರ ನೇರ ನೇಮಕಾತಿಗೆ ಪಿಎಚ್‌ಡಿ ಕಡ್ಡಾಯವಲ್ಲಎಂದು ಯುಜಿಸಿ ಈ ಹಿಂದೆಯೇ ಹೇಳಿತ್ತು. ಪಿಎಚ್‌ಡಿ ಐಚ್ಛಿಕವಾಗಿದ್ದು, ನೆಟ್‌, ಸೆಟ್‌ ಅಥವಾ ಸ್ಲೆಟ್‌ ಕನಿಷ್ಠ ಅಗತ್ಯ ಅರ್ಹತೆ ಎಂದು ಹೇಳಲಾಗಿತ್ತು. ಈಗಲೂ ಇದನ್ನೇ ಒತ್ತಿ ಹೇಳಲಾಗಿದ್ದು, ಆದರೆ, ಪಿಎಚ್‌.ಡಿ ಪಡೆದವರೂ ಈ ಹುದ್ದೆಗಳ ನೇರ ನೇಮಕದಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಿದೆ. ಈ ಮೂಲಕ ಪಿಎಚ್‌ಡಿ ಪಡೆದು ನೆಟ್‌, ಸೆಟ್‌ ಅಥವಾ ಸ್ಲೆಟ್‌ ಪಡೆಯದೆ ಇರುವವರಿಗೆ ನಿರಾಳವಾಗಿದೆ.

ಯುಜಿಸಿಯು ಎರಡು ದಿನದ ಹಿಂದೆ ಹೊರಡಿಸಿದ ಸುತ್ತೊಲೆಯಲ್ಲಿ ಉಂಟಾದ ಗೊಂದಲಕ್ಕೆ ಈಗ ಸ್ಪಷ್ಟನೆ ದೊರಕಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗ (ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಇತರ ಶೈಕ್ಷಣಿಕ ಸಿಬ್ಬಂದಿಗಳ ನೇಮಕಾತಿಗೆ ಕನಿಷ್ಠ ಅರ್ಹತೆಗಳು ಮತ್ತು ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಇತರ ಕ್ರಮಗಳು) ನಿಯಮ 2018 ಪ್ರಕಾರ ತಿದ್ದುಪಡಿಗಳನ್ನು ಮಾಡಲಾಗಿದೆ ಎಂದು ಯುಜಿಸಿ ಹೇಳಿತ್ತು. ಯುಜಿಸಿ ನಿಯಮಗಳಂತೆ ಪಿಎಚ್‌.ಡಿ ಪಡೆದಿರುವವರಿಗೆ ಯುಜಿಸಿ ನೆಟ್‌/ಸ್ಲೆಟ್‌, ಸೆಟ್‌ ಕನಿಷ್ಠ ಅರ್ಹತೆ ನಿಯಮ ಅನ್ವಯವಾಗುವುದಿಲ್ಲ ಎಂದು ಯುಜಿಸಿ ತಿಳಿಸಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.