AISSEE 2025: ಸೈನಿಕ ಶಾಲೆಯ 6, 9ನೇ ತರಗತಿಗೆ ಪ್ರವೇಶಾತಿ ಶುರು; ಪ್ರವೇಶ ಪರೀಕ್ಷೆಗೆ ಜ 13 ರೊಳಗೆ ನೋಂದಾಯಿಸಿ, ಪರೀಕ್ಷಾ ವಿಧಾನ ಮತ್ತು ವಿವರ
AISSEE 2025: ಭಾರತದ ಸೈನಿಕ ವಸತಿ ಶಾಲೆಗಳಲ್ಲಿ 6ನೇ ತರಗತಿ ಮತ್ತು 9ನೇ ತರಗತಿಗೆ ಪ್ರವೇಶ ಪ್ರಕ್ರಿಯೆ ಶುರುವಾಗಿದೆ. 2025-26ನೇ ಸಾಲಿನ ಸೈನಿಕ ಶಾಲಾ ಪ್ರವೇಶಕ್ಕೆ ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆ ಗೆ ಅರ್ಜಿ ಆಹ್ವಾನಿಸಲಾಗಿದೆ. ಜನವರಿ 13ರ ಒಳಗೆ ಹೆಸರು ನೋಂದಾಯಿಸಬೇಕು. ಪರೀಕ್ಷಾ ವಿಧಾನ ಮತ್ತು ವಿವರ ಇಲ್ಲಿದೆ.
AISSEE 2025: ಭಾರತದ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸೈನಿಕ ವಸತಿ ಶಾಲೆಗಳಲ್ಲಿ 6ನೇ ತರಗತಿ ಮತ್ತು 9ನೇ ತರಗತಿಗೆ ಪ್ರವೇಶ ಪ್ರಕ್ರಿಯೆ ಶುರುವಾಗಿದೆ. 2025-26ನೇ ಸಾಲಿನ ಸೈನಿಕ ಶಾಲಾ ಪ್ರವೇಶಕ್ಕೆ ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆ (All India Sainik Schools Entrance Exam)ಗೆ ಅರ್ಜಿ ಆಹ್ವಾನಿಸಲಾಗಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಅಖಿಲ ಭಾರತ ಶಾಲಾ ಪ್ರವೇಶ ಪರೀಕ್ಷೆ ಅಥವಾ ಎಐಎಸ್‌ಎಸ್‌ಇಇ 2025ರ ಆನ್‌ಲೈನ್ ನೋಂದಣಿ /ಅರ್ಜಿ ಪ್ರಕ್ರಿಯೆಯನ್ನು exams.nta.ac.in/ AISSEE ನಲ್ಲಿ ಪ್ರಾರಂಭಿಸಿದೆ. ಈ ಸೈನಿಕ ಶಾಲೆಗಳಲ್ಲಿ ವಸತಿ ಶಾಲಾ ಮಾದರಿಯಲ್ಲಿ ಶಿಕ್ಷಣ ನೀಡಲಾಗುತ್ತದೆ.
ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆ 2025; ಮುಖ್ಯ ಅಂಶಗಳು
1) 2025-26ನೇ ಸಾಲಿನ ಸೈನಿಕ ಶಾಲಾ ಪ್ರವೇಶಕ್ಕೆ ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆ (All India Sainik Schools Entrance Exam)ಗೆ ಅರ್ಜಿ ಆಹ್ವಾನಿಸಲಾಗಿದೆ.
2) ಸೈನಿಕ ಶಾಲೆಯ 6 ಮತ್ತು 9ನೇ ತರಗತಿಗೆ ಪ್ರವೇಶ ಬಯಸುವವರಿಗೆ ಆಫ್‌ಲೈನ್‌ನಲ್ಲಿ ಪರೀಕ್ಷೆ ನಡೆಯಲಿದ್ದು, ಒಎಂಆರ್ ಶೀಟ್‌ಗಳನ್ನು ಬಳಸಲಾಗುತ್ತದೆ.
3) ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆ 2025ಕ್ಕೆ ಆನ್‌ಲೈನ್ ನೋಂದಣಿ ಜನವರಿ 13ರ ಸಂಜೆ 5 ಗಂಟೆ ತನಕ ಮಾಡಬಹುದು. ಪರೀಕ್ಷಾ ಶುಲ್ಕ ಪಾವತಿಗೆ ಜನವರಿ 14 ಕೊನೇ ದಿನ.
4) ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆ 2025ರ ಸಾಮಾನ್ಯರಿಗೆ, ಒಬಿಸಿ, ಎನ್‌ಸಿಎಲ್, ಡಿಫೆನ್ಸ್ ಮತ್ತು ನಿವೃತ್ತ ಸೈನಿಕ ವಿಭಾಗದವರಿಗೆ ಪರೀಕ್ಷಾ ಶುಲ್ಕ 800 ರೂಪಾಯಿ. ಎಸ್‌ಸಿ ಮತ್ತು ಎಸ್‌ಟಿ ವಿಭಾಗದವರು 650 ರೂಪಾಯಿ ಪರೀಕ್ಷಾ ಶುಲ್ಕ ಪಾವತಿಸಬೇಕು.
ಪರೀಕ್ಷಾ ದಿನಾಂಕ ಮತ್ತು ಅಡ್ಮಿಟ್ ಕಾರ್ಡ್ ಬಿಡುಗಡೆ ದಿನಾಂಕವನ್ನು ಎನ್‌ಟಿಎ ಶೀಘ್ರವೇ ಪ್ರಕಟಿಸಲಿದೆ.
ಸೈನಿಕ ಶಾಲಾ ಪ್ರವೇಶ ಪರೀಕ್ಷಾ ಮಾದರಿ ಹೀಗಿರಲಿದೆ
ಸೈನಿಕ ಶಾಲೆಯ 6ನೇ ತರಗತಿಯ ಪ್ರವೇಶ ಪರೀಕ್ಷೆ ವಿಧಾನ | ||||
---|---|---|---|---|
ಸೆಕ್ಷನ್ | ವಿಷಯ | ಒಟ್ಟು ಪ್ರಶ್ನೆಗಳು | ಪ್ರತಿ ಪ್ರಶ್ನೆಗೆ ಅಂಕಗಳು | ಒಟ್ಟು ಅಂಕ |
A | ಭಾಷೆ | 25 | 2 | 50 |
B | ಗಣಿತ | 50 | 3 | 150 |
C | ಇಂಟೆಲಿಜೆನ್ಸ್ | 25 | 2 | 50 |
D | ಸಾಮಾನ್ಯ ಜ್ಞಾನ | 25 | 2 | 50 |
ಒಟ್ಟು | 125 | 300 | ||
ಸೈನಿಕ ಶಾಲೆಯ 9ನೇ ತರಗತಿಯ ಪ್ರವೇಶ ಪರೀಕ್ಷೆ ವಿಧಾನ | ||||
A | ಗಣಿತ | 50 | 4 | 200 |
B | ಇಂಟೆಲಿಜಿನ್ಸ್ | 25 | 2 | 50 |
C | ಇಂಗ್ಲಿಷ್ | 25 | 2 | 50 |
D | ಸಾಮಾನ್ಯ ವಿಜ್ಞಾನ | 25 | 2 | 50 |
E | ಸಮಾಜ ವಿಜ್ಞಾನ | 25 | 2 | 50 |
ಒಟ್ಟು | 150 | 400 |
6ನೇ ತರಗತಿಯ ಪರೀಕ್ಷೆಯ ಅವಧಿ 150 ನಿಮಿಷಗಳು ಮತ್ತು 9ನೇ ತರಗತಿಗೆ 180 ನಿಮಿಷಗಳು. 6ನೇ ತರಗತಿ ಪರೀಕ್ಷೆ ಮಧ್ಯಾಹ್ನ 2ರಿಂದ 4:30ರವರೆಗೆ ಹಾಗೂ 9ನೇ ತರಗತಿ ಪರೀಕ್ಷೆ ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ನಡೆಯಲಿದೆ.
AISSEE 2025: ಸೈನಿಕ ಶಾಲೆಯ ಪ್ರವೇಶಕ್ಕೆ ಅರ್ಹತೆಯ ಮಾನದಂಡ
ಸೈನಿಕ ಶಾಲೆಯ 6 ನೇ ತರಗತಿ ಪ್ರವೇಶಕ್ಕಾಗಿ, ಅಭ್ಯರ್ಥಿಗಳು 2025ರ ಮಾರ್ಚ್ 31 ರಂತೆ 10 ರಿಂದ 12 ವರ್ಷ ವಯಸ್ಸಿನವರಾಗಿರಬೇಕು. ಇದರರ್ಥ ಅವರು/ಅವರು 2013ರ ಏಪ್ರಿಲ್ 1 ಮತ್ತು 2015ರ ಮಾರ್ಚ್ 31 ರ ನಡುವೆ (ಎರಡೂ ದಿನಗಳನ್ನು ಒಳಗೊಂಡಂತೆ) ಜನಿಸಿರಬೇಕು. ಎಲ್ಲಾ ಸೈನಿಕ ಶಾಲೆಗಳಲ್ಲಿ 6 ನೇ ತರಗತಿಗೆ ಪ್ರವೇಶಕ್ಕಾಗಿ ಹೆಣ್ಣು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಿವಿಧ ಶಾಲೆಗಳಲ್ಲಿ ಬಾಲಕಿಯರಿಗೆ ಲಭ್ಯವಿರುವ ಸೀಟುಗಳ ಸಂಖ್ಯೆಯನ್ನು ಮಾಹಿತಿ ಬುಲೆಟಿನ್‌ನಲ್ಲಿ ಉಲ್ಲೇಖಿಸಲಾಗಿದೆ.
ಸೈನಿಕ ಶಾಲೆಯ 9 ನೇ ತರಗತಿ ಪ್ರವೇಶಕ್ಕಾಗಿ, ಅಭ್ಯರ್ಥಿಯು 2025ರ ಮಾರ್ಚ್ 31ರ ಪ್ರಕಾರ, 13 ಮತ್ತು 15 ವರ್ಷಗಳ ನಡುವೆ ಇರಬೇಕು (ಅವನು/ಅವನು 2010ರ ಏಪ್ರಿಲ್ 1 ಮತ್ತು 2012ರ ಮಾರ್ಚ್ 31 ರ ನಡುವೆ ಜನಿಸಿರಬೇಕು). 9 ನೇ ತರಗತಿಯಲ್ಲಿ ಬಾಲಕಿಯರ ಪ್ರವೇಶವು ಲಭ್ಯವಿರುವ ಸೀಟುಗಳಿಗೆ ಒಳಪಟ್ಟಿರುತ್ತದೆ. ಪ್ರವೇಶದ ಸಮಯದಲ್ಲಿ, ಅರ್ಜಿದಾರರು ಮಾನ್ಯತೆ ಪಡೆದ ಶಾಲೆಯಿಂದ 8 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.