ಯುಪಿಎಸ್‌ಸಿ ಪ್ರಿಲಿಮ್ಸ್ 2025: ಪರೀಕ್ಷೆಯ ಸಮಯ, ಪಾಲಿಸಬೇಕಾದ ನಿಯಮಗಳು ಇನ್ನಿತರ ವಿವರ ಇಲ್ಲಿದೆ, ಮರೆಯದೇ ಗಮನಿಸಿ
ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆ ನಾಳೆ (ಮೇ 25) ದೇಶದಾದ್ಯಂತ ನಡೆಯಲಿದೆ. ಯುಪಿಎಸ್‌ಸಿ ಪರೀಕ್ಷೆಯ ಸಮಯ ಹಾಗೂ ಇತರ ನಿಯಮಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಅಭ್ಯರ್ಥಿಗಳು ಈ ನಿಯಮಗಳನ್ನು ತಪ್ಪದೇ ಪಾಲಿಸಬೇಕು.

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ (UPSC) 2025ರ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯನ್ನು ಮೇ 25ರ, ಭಾನುವಾರ ನಡೆಸಲಿದೆ. ಈ ಪರೀಕ್ಷೆಯು 2 ಪಾಳಿಗಳಲ್ಲಿ ನಡೆಯಲಿದೆ. ಮೊದಲನೇ ಪಾಳಿ ಬೆಳಿಗ್ಗೆ 9.30ಕ್ಕೆ ಪ್ರಾರಂಭವಾದರೆ, ಎರಡನೇ ಪಾಳಿ ಮಧ್ಯಾಹ್ನ 2.30ಕ್ಕೆ ನಡೆಯಲಿದೆ.
ಪರೀಕ್ಷೆ ಆರಂಭವಾಗಲು 30 ನಿಮಿಷ ಇರುವಾಗಲೇ ಪರೀಕ್ಷಾ ಕೇಂದ್ರದ ಗೇಟ್ ಮುಚ್ಚುವ ಕಾರಣ ಅಭ್ಯರ್ಥಿಗಳು ಮುಂಚಿತವಾಗಿ ಪರೀಕ್ಷೆ ಕೇಂದ್ರಗಳಿಗೆ ತಲುಪಿಕೊಳ್ಳಬೇಕಿದೆ.
ಪರೀಕ್ಷೆಯ ದಿನ ಯಾವುದೇ ಗೊಂದಲ, ಗಡಿಬಿಡಿ ಸೃಷ್ಟಿಯಾಗುವುದನ್ನು ತಡೆಯಲು ಆಯೋಗವು ನೀಡಿದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಯುಪಿಎಸ್‌ಸಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಏನನ್ನು ತೆಗೆದುಕೊಂಡು ಹೋಗಬೇಕು, ಏನನ್ನು ತರಬಾರದು, ಇನ್ನಿತರ ಪ್ರೋಟೊಕಾಲ್ ಕುರಿತ ವಿವರ ಇಲ್ಲಿದೆ.
ಪರೀಕ್ಷೆಗೆ ತೆಗೆದುಕೊಂಡು ಹೋಗಬೇಕಾದ ದಾಖಲೆಗಳು
- ಇ–ಪ್ರವೇಶ ಪತ್ರ: ಪ್ರವೇಶಕ್ಕೆ ಇದು ಕಡ್ಡಾಯ. ಪ್ರವೇಶ ಪತ್ರದ ಹಾರ್ಡ್ ಕಾಪಿ ಇಲ್ಲದೆ, ಅಭ್ಯರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳಲು ಅನುಮತಿಸಲಾಗುವುದಿಲ್ಲ.
- ಮಾನ್ಯವಾದ ಫೋಟೊ ಐಡಿ: ಐಡಿಯು ಪ್ರವೇಶ ಪತ್ರದಲ್ಲಿ ಒದಗಿಸಲಾದ ವಿವರಗಳಿಗೆ ಹೊಂದಿಕೆಯಾಗಬೇಕು ಮತ್ತು ಎರಡೂ ಅವಧಿಗಳಿಗೆ ಅದನ್ನು ತೆಗೆದುಕೊಂಡು ಹೋಗಬೇಕು.
- ಫೋಟೊ: ಅಗತ್ಯವಿದ್ದರೆ ಫೋಟೊ ಕೂಡ ನಿಮ್ಮ ಜೊತೆಗಿರಲಿ. ಇ-ಪ್ರವೇಶ ಪತ್ರದ ಫೋಟೋ ಅಸ್ಪಷ್ಟವಾಗಿದ್ದರೆ, ಕಳೆದು ಹೋಗಿದ್ದರೆ, ಹೆಸರು ಮತ್ತು ದಿನಾಂಕ ಇಲ್ಲದಿದ್ದರೆ ಅಭ್ಯರ್ಥಿಗಳು ಹೆಸರು ಮತ್ತು ದಿನಾಂಕ ಮುದ್ರಿತವಾದ ಎರಡು ಪಾಸ್‌ಪೋರ್ಟ್ ಗಾತ್ರದ ಫೋಟೋಗಳನ್ನು ಎರಡೂ ಹಂತದಲ್ಲಿ ನಡೆಯುವ ಪರೀಕ್ಷೆಗೆ ತೆಗೆದುಕೊಂಡು ಹೋಗಬೇಕು.
- ಕಪ್ಪು ಬಾಲ್ ಪಾಯಿಂಟ್ ಪೆನ್: ಕಪ್ಪು ಬಾಲ್ ಪಾಯಿಂಟ್ ಪೆನ್ ಬಳಸಿ ಗುರುತಿಸಲಾದ ಉತ್ತರಗಳನ್ನು ಮಾತ್ರ ಮೌಲ್ಯಮಾಪನ ಮಾಡಲಾಗುತ್ತದೆ.
- ಸರಳ ಮಣಿಕಟ್ಟಿನ ಗಡಿಯಾರ: ಯಾವುದೇ ಸ್ಮಾರ್ಟ್ ಅಥವಾ ಡಿಜಿಟಲ್ ಕಾರ್ಯನಿರ್ವಹಣೆಯಿಲ್ಲದ ಅನಲಾಗ್ ವಾಚ್‌ಗಳನ್ನು ಪರೀಕ್ಷೆಯಂದು ಧರಿಸಲು ಅವಕಾಶವಿದೆ.
ಇದನ್ನೂ ಓದಿ: ಯುಪಿಎಸ್‌ಸಿ ಪ್ರಿಲಿಮ್ಸ್ 2025: ಪ್ರಿಲಿಮ್ಸ್ ಪರೀಕ್ಷೆಗೆ ಅಂತಿಮ ಹಂತದ ಸಿದ್ಧತೆಗೆ 10 ಸಲಹೆಗಳು
ಪರೀಕ್ಷೆಗೆ ಏನನ್ನು ತೆಗೆದುಕೊಂಡು ಹೋಗುವಂತಿಲ್ಲ
- ಬ್ಯಾಗ್, ಹ್ಯಾಂಡ್‌ಬ್ಯಾಗ್ ಮತ್ತು ಲಗೇಜ್ ಬ್ಯಾಗ್
- ದುಬಾರಿ ಅಥವಾ ಐಷಾರಾಮಿ ವಸ್ತುಗಳು
- ಮೊಬೈಲ್ ಫೋನ್ (ಸ್ವಿಚ್ ಆಫ್ ಮಾಡಿಯೂ ತರುವಂತಿಲ್ಲ)
- ಸ್ಮಾರ್ಟ್‌ವಾಚ್, ಫಿಟ್‌ನೆಸ್ ಬಾಂಡ್ ಹಾಗೂ ಇತರ ಯಾವುದೇ ಡಿಜಿಟಲ್ ಉಪಕರಣಗಳು
- ಬುಕ್, ನೋಟ್ಸ್ ಅಥವಾ ಯಾವುದೇ ಪ್ರಿಂಟೆಡ್ ಮಟಿರಿಯಲ್‌ಗಳು
- ವಿಶೇಷ ಫೀಚರ್‌ಗಳಿರುವ ಯಾವುದೇ ವಾಚ್
(ಸೂಚನೆ: ಪರೀಕ್ಷಾ ಕೇಂದ್ರದಲ್ಲಿ ವೈಯಕ್ತಿಕ ವಸ್ತುಗಳನ್ನು ಇಡಲು ಯಾವುದೇ ಸೌಲಭ್ಯವಿರುವುದಿಲ್ಲ. ಅಭ್ಯರ್ಥಿಗಳು ಹೊರಗೆ ವ್ಯವಸ್ಥೆ ಮಾಡಿಕೊಳ್ಳಬೇಕು, ಏಕೆಂದರೆ ನಷ್ಟ ಅಥವಾ ಕಳ್ಳತನಕ್ಕೆ ಆಯೋಗವು ಜವಾಬ್ದಾರರಾಗಿರುವುದಿಲ್ಲ)
ಪರೀಕ್ಷೆಯ ಮುಖ್ಯ ನಿಯಮಗಳು
- ಗೇಟ್ ಮುಚ್ಚಿದ ನಂತರ ತಡವಾಗಿ ಬಂದವರಿಗೆ ಪ್ರವೇಶ ಇರುವುದಿಲ್ಲ.
- ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸುವುದರಿಂದ ಅನರ್ಹತೆ (disqualification), ಎಫ್‌ಆರ್‌ಐ (FIR) ದಾಖಲಾಗುವುದು ಅಥವಾ ಭವಿಷ್ಯದ UPSC ಪರೀಕ್ಷೆಗಳಿಂದ ಶಾಶ್ವತವಾಗಿ ನಿಷೇಧಕ್ಕೆ ಒಳಗಾಗಬಹುದು.
- ಪ್ರವೇಶ ಪತ್ರದಲ್ಲಿ (ಛಾಯಾಚಿತ್ರ, QR ಕೋಡ್, ಹೆಸರು, ಇತ್ಯಾದಿ) ಯಾವುದೇ ವ್ಯತ್ಯಾಸವಿದ್ದರೆ ತಕ್ಷಣವೇ UPSC ಗೆ uscsp-upsc@nic.in ನಲ್ಲಿ ವರದಿ ಮಾಡಬೇಕು.
ಪರೀಕ್ಷೆಯ ಸಮಯ
- ಬೆಳಿಗ್ಗೆ 9.30ಕ್ಕೆ ಪರೀಕ್ಷೆ ಆರಂಭ, 9 ಗಂಟೆಗೆ ಪರೀಕ್ಷಾ ಕೇಂದ್ರದ ಗೇಟ್ ಮುಚ್ಚಲಾಗುತ್ತದೆ
- ಮಧ್ಯಾಹ್ನ 2.30ಕ್ಕೆ ಪರೀಕ್ಷೆ ಆರಂಭ, 2 ಗಂಟೆ ಪರೀಕ್ಷಾ ಕೇಂದ್ರ ಗೇಟ್ ಮುಚ್ಚಲಾಗುತ್ತದೆ.
ಈ ಎಲ್ಲಾ ನಿಯಮಗಳನ್ನು ಅಭ್ಯರ್ಥಿಗಳು ತಪ್ಪದೇ ಪಾಲಿಸಬೇಕು. ಕೊನೆ ಕ್ಷಣದಲ್ಲಿ ಗಡಿಬಿಡಿ ಮಾಡಿಕೊಳ್ಳುವುದನ್ನು ತಪ್ಪಿಸಬೇಕು. ಪರೀಕ್ಷಾ ಕೇಂದ್ರವನ್ನು ಆದಷ್ಟು ಬೇಗ ತಲುಪಿಕೊಳ್ಳುವುದು ಉತ್ತಮ.