UGC-NET exams: ಮಕರ ಸಂಕ್ರಾಂತಿ, ಪೊಂಗಲ್ ಕಾರಣ ಯುಜಿಸಿ ನೆಟ್ ಪರೀಕ್ಷೆ ನಾಳೆ ಇರಲ್ಲ, ಜ 16ರ ಪರೀಕ್ಷೆ ನಡೆಯಲಿದೆ ಎಂದ ಎನ್‌ಟಿಎ
UGC-NET exams: ಮಕರ ಸಂಕ್ರಾಂತಿ, ಪೊಂಗಲ್ ಕಾರಣ ಯುಜಿಸಿ ನೆಟ್ ಪರೀಕ್ಷೆ ನಾಳೆ (ಜನವರಿ 15) ಇರಲ್ಲ. ಆದರೆ, ಜನವರಿ 16ರ ಪರೀಕ್ಷೆ ಯಥಾವತ್ ನಡೆಯಲಿದೆ ಎಂದ ಎನ್‌ಟಿಎ ತಿಳಿಸಿದೆ. ತಮಿಳುನಾಡು ಸರ್ಕಾರದ ಮನವಿಗೆ ಸ್ಪಂದಿಸಿ ಎನ್‌ಟಿಎ ಈ ತೀರ್ಮಾನ ಪ್ರಕಟಿಸಿದೆ.

UGC-NET exams: ಭಾರತದ ಉದ್ದಗಲಕ್ಕೂ ಮಕರ ಸಂಕ್ರಾಂತಿ, ಪೊಂಗಲ್ ಹಬ್ಬಗಳ ಆಚರಣೆ ಇರುವ ಕಾರಣ, ಜನವರಿ 15, 2025 (ಬುಧವಾರ) ರಂದು ನಿಗದಿಯಾಗಿದ್ದ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) -ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC-NET) ಅನ್ನು ಮುಂದೂಡಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸೋಮವಾರ ತಿಳಿಸಿದೆ. ಬುಧವಾರ (ಜನವರಿ 15) ನಿಗದಿಯಾಗಿರುವ ಪರೀಕ್ಷೆಯ ಪರಿಷ್ಕೃತ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು. ಆದರೆ, ಜನವರಿ 16ರ ಪರೀಕ್ಷೆ ಯಥಾವತ್ ನಡೆಯಲಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಮಕರ ಸಂಕ್ರಾಂತಿ, ಪೊಂಗಲ್ ಕಾರಣ ಯುಜಿಸಿ ನೆಟ್ ಪರೀಕ್ಷೆ ನಾಳೆ ಇರಲ್ಲ
ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಕಾನೂನು, ಎಲೆಕ್ಟ್ರಾನಿಕ್ ವಿಜ್ಞಾನ ಮತ್ತು ಪರಿಸರ ವಿಜ್ಞಾನ ಸೇರಿದಂತೆ 17 ವಿಷಯಗಳ ಪರೀಕ್ಷೆಗಳು ಜನವರಿ 15 ರಂದು ಎರಡು ಪಾಳಿಗಳಲ್ಲಿ ನಡೆಯಬೇಕಾಗಿತ್ತು. ಎಲ್ಲರೂ ಹಬ್ಬಗಳ ಆಚರಣೆಯ ಮೂಡ್‌ನಲ್ಲಿರುವ ಕಾರಣ ಇಂತಹ ದಿನ ಪರೀಕ್ಷೆ ನಡೆಸುವುದು ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಹೀಗಾಗಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಮುಂದೂಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎನ್‌ಟಿಎ ತಿಳಿಸಿದೆ. ಈ ಸಂಬಂಧ ಎನ್‌ಟಿಎ ಮಾಡಿರುವ ಟ್ವೀಟ್ ಹೀಗಿದೆ.
2025 ರ ಜನವರಿ 15 ರಂದು ಪೊಂಗಲ್, ಮಕರ ಸಂಕ್ರಾಂತಿ ಮತ್ತು ಇತರ ಹಬ್ಬಗಳ ಕಾರಣಕ್ಕಾಗಿ ಯುಜಿಸಿ - ನೆಟ್ ಡಿಸೆಂಬರ್ 2024 ಪರೀಕ್ಷೆಯನ್ನು ಮುಂದೂಡಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಮನವಿ ಬಂದ ಕಾರಣ ಅದನ್ನು ಮಾನ್ಯಮಾಡಿ ಈ ತೀರ್ಮಾನ ಪ್ರಕಟಿಸಲಾಗಿದೆ. ಆಕಾಂಕ್ಷಿಗಳ ಹಿತದೃಷ್ಟಿಯಿಂದ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮುಂದೂಡಲು ನಿರ್ಧರಿಸಿದೆ. ಜನವರಿ 15 ರಂದು ನಿಗದಿಪಡಿಸಿರುವ ಪರೀಕ್ಷೆಯನ್ನು ಮಾತ್ರವೇ ಮುಂದೂಡಲಾಗಿದೆ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.
ಜನವರಿ 16ರ ಪರೀಕ್ಷೆ ಯಥಾವತ್ ನಡೆಯಲಿದೆ ಎಂದ ಎನ್‌ಟಿಎ
ಆದಾಗ್ಯೂ, ಜನವರಿ 16 ರಂದು ನಿಗದಿಯಾಗಿರುವ ಪರೀಕ್ಷೆಯನ್ನು ಹಿಂದಿನ ವೇಳಾಪಟ್ಟಿಯಂತೆ ನಡೆಸಲಾಗುವುದು ಎಂದು ಎನ್‌ಟಿಎ ತಿಳಿಸಿದೆ. ಸಮಾಜಶಾಸ್ತ್ರ, ಜರ್ಮನ್ ಮತ್ತು ಹಿಂದೂ ಅಧ್ಯಯನಗಳು ಸೇರಿದಂತೆ 13 ವಿಷಯಗಳ ಪರೀಕ್ಷೆಗಳನ್ನು ಜನವರಿ 16 ರಂದು ನಿಗದಿಪಡಿಸಲಾಗಿದೆ. ಈ ಪರೀಕ್ಷೆಗಳನ್ನು ಆಕಾಂಕ್ಷಿಗಳು ಬರೆಯಬೇಕು. ಜನವರಿ 15ರ ಪರೀಕ್ಷೆಯ ಹೊಸ ದಿನಾಂಕವನ್ನು ಶೀಘ್ರವೇ ಪ್ರಕಟಿಸುವುದಾಗಿ ಎನ್‌ಟಿಎ ತಿಳಿಸಿದೆ.
ಜನವರಿ 9 ರಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಪೊಂಗಲ್ ಹಬ್ಬದ ಋತುವಿನಲ್ಲಿ ನಡೆಸಲು ಉದ್ದೇಶಿಸಿರುವ ಯುಜಿಸಿ-ನೆಟ್ ಪರೀಕ್ಷೆಗಳನ್ನು ಮರುಹೊಂದಿಸುವಂತೆ ಒತ್ತಾಯಿಸಿದರು. ಈ ರೀತಿ ಪರೀಕ್ಷೆ ನಡೆಸುವುದು ಕೇವಲ ನಿರ್ಲಕ್ಷ್ಯವಲ್ಲ. ಇದು ನಮ್ಮ ಸಾಂಸ್ಕೃತಿಕ ಪರಂಪರೆಗೆ ಉದ್ದೇಶಪೂರ್ವಕ ಅವಮಾನವಾಗಿದೆ. ಮತ್ತೊಮ್ಮೆ, ಕೇಂದ್ರ ಸರ್ಕಾರವು ನಮ್ಮ ರಾಜ್ಯ ಮತ್ತು ಅದರ ಜನರನ್ನು ನಿರ್ಲಕ್ಷಿಸಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೂ ಮೊದಲು, ಡಿಸೆಂಬರ್ 22 ರಂದು, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದೆ ಕನಿಮೊಳಿ ಕರುಣಾನಿಧಿ, ಪೊಂಗಲ್ ಹಬ್ಬದ ಸಂದರ್ಭದಲ್ಲಿ ನಡೆಸುವ ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿದ್ದರು.
ಯುಜಿಸಿ - ನೆಟ್ ರಾಷ್ಟ್ರಮಟ್ಟದ ಪರೀಕ್ಷೆಯಾಗಿದ್ದು, ಇದನ್ನು ಯುಜಿಸಿ ಪರವಾಗಿ ಭಾರತದಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸುತ್ತದೆ. ಇದರಲ್ಲಿ, ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆಆರ್‌ಎಫ್), ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿ ಮತ್ತು ಪಿಎಚ್‌ಡಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ. ವರ್ಷಕ್ಕೆ ಎರಡು ಸಲ ಈ ಪರೀಕ್ಷೆ ನಡೆಯುತ್ತದೆ.
