ಪರೀಕ್ಷೆಗಳಲ್ಲಿ ಆಧಾರ್ ಆಧಾರಿತ ಬಯೋಮೆಟ್ರಿಕ್ ಪರಿಶೀಲನೆ ಮತ್ತು ಎಐ ಮೇಲ್ವಿಚಾರಣೆ ವ್ಯವಸ್ಥೆ ಜಾರಿಗೆ ತರಲು ಮುಂದಾದ ಯುಪಿಎಸ್‌ಸಿ
ನೇಮಕಾತಿ ಮತ್ತು ಪರೀಕ್ಷಾ ಕಾರ್ಯವಿಧಾನಗಳಲ್ಲಿ ಸಮಗ್ರತೆ ಮತ್ತು ಪಾರದರ್ಶಕತೆಯನ್ನು ಕಾಪಾಡಲು ಯುಪಿಎಸ್‌ಸಿ ಪ್ರಯತ್ನ ಮಾಡುತ್ತಿದೆ. ಹೀಗಾಗಿ 2025ರ ಜೂನ್ ತಿಂಗಳಿಂದ ತನ್ನ ಪರೀಕ್ಷಾ ಕೇಂದ್ರಗಳಲ್ಲಿ ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ ಮತ್ತು AI-ಚಾಲಿತ ಕಣ್ಗಾವಲು ವ್ಯವಸ್ಥೆಯನ್ನು ಪರಿಚಯಿಸಲಿದೆ.
ಕೇಂದ್ರ ಲೋಕಸೇವಾ ಆಯೋಗ (UPSC)ವು 2025ರ ಜೂನ್ ತಿಂಗಳಿಂದ ನಡೆಸುವ ತನ್ನ ಎಲ್ಲಾ ಪರೀಕ್ಷೆಗಳಲ್ಲಿ ಆಧಾರ್ ಆಧಾರಿತ ಬಯೋಮೆಟ್ರಿಕ್ ಪರಿಶೀಲನೆ ಮತ್ತು ಕೃತಕ ಬುದ್ಧಿಮತ್ತೆ (AI) ಆಧಾರಿತ ಮೇಲ್ವಿಚಾರಣೆ ವ್ಯವಸ್ಥೆಯನ್ನು ಜಾರಿಗೆ ತರಲಿದೆ. ನೇಮಕಾತಿ ಕಾರ್ಯವಿಧಾನಗಳಲ್ಲಿ ನಕಲಿ ಮತ್ತು ವಂಚನೆಯನ್ನು ತಡೆಯುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.
ಈ ಬೆಳವಣಿಗೆಯು 2025ರ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಂದರೆ, ಈ ಬಾರಿ ಇಂದು (ಮೇ 25ರ ಭಾನುವಾರ) ಪರೀಕ್ಷೆ ನಡೆಯುತ್ತಿದ್ದು, 80 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗೆ ಆಧಾರ್ ಆಧಾರಿತ ಬಯೋಮೆಟ್ರಿಕ್ ಪರಿಶೀಲನೆ ಇರುವುದಿಲ್ಲ.
ಪ್ರಸ್ತಾವಿತ ಪರಿಶೀಲನಾ ವ್ಯವಸ್ಥೆಯು ಫಿಂಗರ್‌ಪ್ರಿಂಟ್ ಗುರುತಿಸುವಿಕೆ, ಮುಖ ಗುರುತಿಸುವಿಕೆ ಮತ್ತು ಇ-ಪ್ರವೇಶ ಕಾರ್ಡ್‌ಗಳ QR ಕೋಡ್ ಸ್ಕ್ಯಾನಿಂಗ್ ಒಳಗೊಂಡಿರುತ್ತದೆ. ಪರೀಕ್ಷೆಗಳ ಸಮಯದಲ್ಲಿ ದುಷ್ಕೃತ್ಯಗಳನ್ನು ಗುರುತಿಸಲು ಮತ್ತು ತಡೆಯಲು ಲೈವ್ ಎಐ-ಸುಸಜ್ಜಿತ ಸಿಸಿಟಿವಿ ಟ್ರ್ಯಾಕಿಂಗ್ ಅನ್ನು ಸಹ ಬಳಸಿಕೊಳ್ಳಲಾಗುತ್ತದೆ.
ಪಾರದರ್ಶಕ ಪ್ರಯತ್ನ
ಇಂಥಾ ಸುಧಾರಣೆಗಳು ಯುಪಿಎಸ್‌ಸಿ ತನ್ನ ನೇಮಕಾತಿ ಮತ್ತು ಪರೀಕ್ಷಾ ಕಾರ್ಯವಿಧಾನಗಳಲ್ಲಿ ಸಮಗ್ರತೆ ಮತ್ತು ಪಾರದರ್ಶಕತೆಯನ್ನು ಕಾಪಾಡಲು ಮಾಡುತ್ತಿರುವ ವ್ಯಾಪಕ ಪ್ರಯತ್ನದ ಭಾಗವಾಗಿದೆ.
ಕಳೆದ ವರ್ಷ ಇಂತಹ ತಂತ್ರಜ್ಞಾನಗಳ ಅನುಷ್ಠಾನಕ್ಕಾಗಿ ಬಿಡ್ ಮಾಡಲು ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಯುಪಿಎಸ್‌ಸಿ ಆಹ್ವಾನಿಸಿದಾಗ ಈ ಪ್ರಸ್ತಾಪ ಮಾಡಲಾಗಿತ್ತು. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ನೋಂದಣಿ ಸಮಯದಲ್ಲಿ ಮತ್ತು ಪರೀಕ್ಷೆಯ ವಿವಿಧ ಹಂತಗಳಲ್ಲಿ ಅಭ್ಯರ್ಥಿಗಳ ಪರಿಶೀಲನೆಗಾಗಿ ಆಧಾರ್ ದೃಢೀಕರಣವನ್ನು ಬಳಸಲು ಆಯೋಗಕ್ಕೆ ಅಧಿಕಾರ ನೀಡಿತ್ತು.
ನಿವೃತ್ತ ಐಎಎಸ್ ಪ್ರೊಬೆಷನರಿಯೊಬ್ಬರು ನಕಲಿ ಗುರುತಿನ ಚೀಟಿಗಳನ್ನು ಬಳಸಿ ಪರೀಕ್ಷೆ ಬರೆಯಲು ಪ್ರಯತ್ನ ನಡೆಸಿದ್ದು ಬೆಳಕಿಗೆ ಬಂದಿತ್ತು. ಹಲವು ಬಾರಿ ಪರೀಕ್ಷೆ ಬರೆಯಲು ಯತ್ನಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಪರಿಶೀಲನೆಗೆ ಕಠಿಣ ಕ್ರಮ ಕೈಗೊಳ್ಳಲಾಗಿದೆ.