ಯಾರೆಲ್ಲಾ ಸಿಬಿಎಸ್‌ಇ ಪೂರಕ ಪರೀಕ್ಷೆ ಬರೆಯಬಹುದು? 10ನೇ ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಭಿನ್ನ ಮಾನದಂಡ
ಸಿಬಿಎಸ್‌ಇ 10ನೇ ಮತ್ತು 12ನೇ ತರಗತಿಯ ಫಲಿತಾಂಶ ಪ್ರಕಟವಾಗಿದೆ. ಇದೀಗ ಪೂರಕ ಪರೀಕ್ಷೆಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳಿಗೆ ಸಂಬಂದಿಸಿದ ಕೆಲವೊಂದು ಮಾನದಂಡಗಳ ಕುರಿತ ವಿವರ ಇಲ್ಲಿ ಕೊಡಲಾಗಿದೆ. 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಭಿನ್ನ ನಿಯಮಗಳಿವೆ.

ಸಿಬಿಎಸ್‌ಇ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ಮೇ 13ರಂದು ಮೊದಲಿಗೆ 12ನೇ ತರಗತಿ ಹಾಗೂ ನಂತರ 10ನೇ ತರಗತಿ ಫಲಿತಾಂಶ ಪ್ರಕಟಿಸಿದೆ. 10ನೇ ತರಗತಿಯಲ್ಲಿ ಉತ್ತೀರ್ಣರಾದರ ಪ್ರಮಾಣ ಶೇಕಡಾ 93.66ರಷ್ಟಿದೆ. ಕಳೆದ ವರ್ಷದ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಶೇಕಡಾ 0.06ರಷ್ಟು ಹೆಚ್ಚಾಗಿದೆ. 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣ ಶೇಕಡಾ 88.39ರಷ್ಟು ಫಲಿತಾಂಶ ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 0.41 ರಷ್ಟು ಹೆಚ್ಚಳವಾಗಿದೆ.
ಫಲಿತಾಂಶ ಪ್ರಕಟದ ನಂತರ, ಫಲಿತಾಂಶವು ವಿದ್ಯಾರ್ಥಿಗಳಿಗೆ ಸಮಾಧಾನ ತರದಿದ್ದರೆ, ಅಂಥಾ ವಿದ್ಯಾರ್ಥಿಗಳು ಮೌಲ್ಯಮಾಪನ ಮಾಡಿದ ತಮ್ಮ ಉತ್ತರ ಪತ್ರಿಕೆಯ ಫೋಟೋಕಾಪಿಗೆ ಅರ್ಜಿ ಸಲ್ಲಿಸಬಹುದು. ಉತ್ತರ ಪತ್ರಿಕೆ ನೋಡಿದ ನಂತರ ಫಲಿತಾಂಶದಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇದ್ದರೆ, ಅಂಕಗಳ ಪರಿಶೀಲನೆ ಅಥವಾ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು.
ಫಲಿತಾಂಶ ಪ್ರಕಟವಾದ ನಂತರ ಪೂರಕ ಪರೀಕ್ಷೆಗೆ ಹಾಜರಾಗುವ ಕುರಿತು ವಿದ್ಯಾರ್ಥಿಗಳು ತಿಳಿಯಲು ಬಯಸುತ್ತಾರೆ. ಸಪ್ಲಿಮೆಂಟರಿ ಪರೀಕ್ಷೆ ಬರೆಯಲು ಸಂಬಂಧಿಸಿದ ಅರ್ಹತಾ ಮಾನದಂಡದ ಕುರಿತ ವಿವರ ಇಲ್ಲಿದೆ. ಈ ಕೆಳಗಿನ ವಿದ್ಯಾರ್ಥಿಗಳು ಸಿಬಿಎಸ್‌ಇ 10ನೇ ಮತ್ತು 12ನೇ ತರಗತಿಯ ಪೂರಕ ಪರೀಕ್ಷೆಗಳಿಗೆ ಹಾಜರಾಗಲು ಅರ್ಹರಾಗಿರುತ್ತಾರೆ.
- 10ನೇ ತರಗತಿಯಲ್ಲಿ 2 ವಿಷಯಗಳವರೆಗೆ ಉತ್ತೀರ್ಣರಾಗಲು ಸಾಧ್ಯವಾಗದ ವಿದ್ಯಾರ್ಥಿಗಳು ಮತ್ತು 12ನೇ ತರಗತಿಯಲ್ಲಿ ಒಂದು ವಿಷಯದಲ್ಲಿ ಉತ್ತೀರ್ಣರಾಗಲು ಸಾಧ್ಯವಾಗದ ವಿದ್ಯಾರ್ಥಿಗಳನ್ನು ಕಂಪಾರ್ಟ್‌ಮೆಂಟ್ ವರ್ಗದಲ್ಲಿ (Compartment Category) ಇಡಲಾಗುತ್ತದೆ.
- 6ನೇ ಅಥವಾ 7ನೇ ವಿಷಯವನ್ನು ಬದಲಿಸುವ ಮೂಲಕ ಘೋಷಿಸಲ್ಪಟ್ಟ ವಿದ್ಯಾರ್ಥಿಗಳು ಅನುತ್ತೀರ್ಣರಾದ ವಿಷಯದಲ್ಲಿ ಪೂರಕ ಪರೀಕ್ಷೆ ಬರೆಯಬಹುದು.
- ಉತ್ತೀರ್ಣರೆಂದು ಘೋಷಿಸಲ್ಪಟ್ಟ, ಆದರೆ10 ಮತ್ತು 12ನೇ ತರಗತಿಯಲ್ಲಿ ಕ್ರಮವಾಗಿ 2 ಮತ್ತು 1 ವಿಷಯಗಳಲ್ಲಿ ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಬಯಸುವ ವಿದ್ಯಾರ್ಥಿಗಳು ಸಿಬಿಎಸ್‌ಇ 10ನೇ ಮತ್ತು 12ನೇ ಪೂರಕ ಪರೀಕ್ಷೆಗಳಿಗೆ ಹಾಜರಾಗಲು ಅರ್ಹರಾಗಿರುತ್ತಾರೆ.
ಅಂದರೆ, ಫೆಬ್ರುವರಿ ಹಾಗೂ ಮಾರ್ಚ್‌ನಲ್ಲಿ ನಡೆದ ಮುಖ್ಯ ಬೋರ್ಡ್ ಪರೀಕ್ಷೆಯಲ್ಲಿ ಹಾಜರಾದ ಮತ್ತು ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಬಯಸುವ 12ನೇ ತರಗತಿಯ ಸಿಬಿಎಸ್‌ಇ ವಿದ್ಯಾರ್ಥಿಗಳು ಅದೇ ವರ್ಷದ ಜುಲೈನಲ್ಲಿ ನಡೆಯುವ ಪೂರಕ ಪರೀಕ್ಷೆಗೆ ಹಾಜರಾಗುವ ಮೂಲಕ ಒಂದು ವಿಷಯವನ್ನು ಬರೆಯಬಹುದು. ಇದೇ ವೇಳೆ 10ನೇ ವಿದ್ಯಾರ್ಥಿಗಳು ಎರಡು ವಿಷಯಗಳಿಗೆ ಹಾಜರಾಗಬಹುದು.