Eid ul adha Bakrid celebration: ಇಂದು ವಿಶ್ವಾದ್ಯಂತ ಬಕ್ರೀದ್ ಆಚರಣೆ; ಈ ಹಬ್ಬದ ಇತಿಹಾಸ ಮಹತ್ವವೇನು, ಕುರಿಯನ್ನು ಬಲಿ ಕೊಡುವುದೇಕೆ?
ಹಬ್ಬದ ದಿನ ಕುರಿ ಅಥವಾ ಮೇಕೆಯನ್ನು ಅಲ್ಲಾಹ್‌ಗೆ ಬಲಿ ನೀಡಿ, ಆ ಮಾಂಸವನ್ನು ಮೂರು ಭಾಗವನ್ನಾಗಿ ಮಾಡಲಾಗುತ್ತದೆ. ಅದರಲ್ಲಿ ಒಂದು ಭಾಗವನ್ನು ನೆಂಟರಿಷ್ಟರಿಗೆ, ಇನ್ನೊಂದು ಭಾಗವನ್ನು ಬಡವರಿಗೆ ಹಾಗೂ ಉಳಿದ ಭಾಗವನ್ನು ವಿವಿಧ ಭಕ್ಷ್ಯಗಳನ್ನು ತಯಾರಿಸಿ ತಮ್ಮ ಕುಟುಂಬದವರೊಂದಿಗೆ ಭೋಜನ ಸ್ವೀಕರಿಸುತ್ತಾರೆ.
ವಿವಿಧ ಧರ್ಮಗಳನ್ನು ಒಳಗೊಂಡ ಏಕೈಕ ದೇಶ ಭಾರತ. ಇಲ್ಲಿ ಎಲ್ಲಾ ಧರ್ಮೀಯರ ಹಬ್ಬಗಳನ್ನು ಅದ್ಧೂರಿಯಿಂದ ಆಚರಿಸಲಾಗುತ್ತದೆ. ಹಿಂದೂ,ಮುಸ್ಲಿಂ, ಜೈನ, ಬೌದ್ಧ ಧರ್ಮೀಯರು ಆಚರಿಸುವ ಹಬ್ಬಗಳಲ್ಲಿ ಅನ್ಯಧರ್ಮದವರೂ ಜೊತೆ ಸೇರುತ್ತಾರೆ. ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ಅಥವಾ ಈದ್ ಉಲ್ ಅಧಾ ಹತ್ತಿರ ಬರುತ್ತಿದೆ. ಈ ಬಾರಿ ಬಕ್ರೀದ್ ಯಾವಾಗ? ಇದರ ಇತಿಹಾಸ, ಮಹತ್ವ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಈ ಬಾರಿ ಹಬ್ಬ ಆಚರಣೆ ಯಾವಾಗ
ಮುಸ್ಲಿಮರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಈದ್ ಉಲ್ ಅಧಾ ಕೂಡಾ ಒಂದು. ಈ ಹಬ್ಬವನ್ನು ಭಾರತ, ಸೌದಿ ಅರೇಬಿಯಾ, ಪಾಕಿಸ್ತಾನ, ಆಫ್ಘಾನಿಸ್ತಾನ, ಇರಾಕ್ ಸೇರಿದಂತೆ ಇನ್ನೂ ಕೆಲವೊಂದು ದೇಶಗಳಲ್ಲಿ ಆಚರಿಸುತ್ತಾರೆ. ಈ ಹಬ್ಬವನ್ನು ತ್ಯಾಗ ಬಲಿದಾನದ ಹಬ್ಬ ಎಂದು ಕರೆಯಲಾಗುತ್ತದೆ. ಈ ಹಬ್ಬಕ್ಕೆ ಬಕ್ರಾ ಈದ್, ಈದ್ ಕುರ್ಬಾನ್, ಕುರ್ಬಾನ್ ಬಯಾರಾಮಿ ಎಂಬ ಹೆಸರೂ ಇವೆ. ಪ್ರತಿ ವರ್ಷ, ಇಸ್ಲಾಮಿಕ್ ಚಂದ್ರನ ಕ್ಯಾಲೆಂಡರ್‌ನ ಹನ್ನೆರಡನೇ ತಿಂಗಳ ಧು ಅಲ್ ಹಿಜ್ಜಾದ ಹತ್ತನೇ ದಿನ ಈದ್ ಉಲ್ ಅಧಾ ಆಚರಿಸಲಾಗುತ್ತದೆ. ಈ ಬಾರಿ ಜೂನ್ 28 ಸಂಜೆಯಿಂದ (ಬುಧವಾರ) ಆಚರಣೆ ಆರಂಭವಾಗಿ ಜೂನ್ 29 ಸಂಜೆ ( ಗುರುವಾರ) ವರೆಗೂ ಬಕ್ರೀದ್ ಆಚರಿಸಲಾಗುತ್ತಿದೆ.
ಈದ್ ಉಲ್ ಅಧಾ ಇತಿಹಾಸ
ಒಮ್ಮೆ ಅಲ್ಲಾಹ್‌ನು ಹಸ್ರತ್ ಇಬ್ರಾಹಿಮ್ ಅವರನ್ನು ಪರೀಕ್ಷಿಸಲು ಕನಸಿನಲ್ಲಿ ಬಂದು ಅವರ ಬಳಿ ಇರುವ ಯಾವುದಾದರೂ ಅತ್ಯಂತ ಅಮೂಲ್ಯವಾದ ವಸ್ತುವೊಂದನ್ನು ನನಗೆ ಬಲಿ ನೀಡಬೇಕೆಂದು ಹೇಳುತ್ತಾರೆ. ಈ ವಿಚಾರ ತಿಳಿದ ಪ್ರವಾದಿ ಇಬ್ರಾಹಿಮ್ ಅವರಿಗೆ ತಮ್ಮ ಮಗ ಇಸ್ಮಾಯಿಲ್ ಬಹಳ ಅಮೂಲ್ಯ ಆದ ಕಾರಣ, ಪ್ರೀತಿಯ ಮಗನನ್ನೇ ಅಲ್ಲಾಹ್‌ಗೆ ಬಲಿ ಕೊಡಲು ಮುಂದಾಗುತ್ತಾರೆ. ಆದರೆ ಬಲಿ ಕೊಡುವಷ್ಟರಲ್ಲಿ ಇಬ್ರಾಹಿಮ್ ಮಾಯಮಾಗಿ ಬಲಿಪೀಠದಲ್ಲಿ ಒಂದು ಕುರಿ ಕಾಣಿಸಿಕೊಳ್ಳುತ್ತದೆ. ಅದು ಅಲ್ಲಾಹ್, ಸ್ವರ್ಗಲೋಕದಿಂದ ಕಳಿಸಿದ ಕುರಿ ಆಗಿರುತ್ತದೆ. ಅಂದಿನಿಂದ ಆ ದಿನವನ್ನೇ ಈದ್ ಉಲ್ ಅಧಾ ಹಬ್ಬವಾಗಿ ಆಚರಿಸುತ್ತಾ ಬರಲಾಗಿದೆ.
ಹಜ್ ಯಾತ್ರೆ
ಬಕ್ರೀದ್ ಸಮಯದಲ್ಲಿ ಮುಸ್ಲಿಮರು ಹಜ್ ಯಾತ್ರೆಗೆ ತೆರಳುತ್ತಾರೆ. ಹಬ್ಬ ಆಚರಿಸುವ 1 ತಿಂಗಳ ಮುನ್ನ ಪ್ರವಾದಿ ಇಬ್ರಾಹಿಂ ಹಾಗೂ ಪ್ರವಾದಿ ಇಸ್ಮಾಯಿಲ್ ಕಟ್ಟಿಸಿದ ಮಸೀದಿಗೆ ಪ್ರಪಂಚದ ವಿವಿಧ ಸ್ಥಳಗಳಿಂದ ಮುಸ್ಲಿಮರು ಭೇಟಿ ನೀಡಿ ಹಬ್ಬದ ದಿನ ಪ್ರಾರ್ಥನೆ ಸಲ್ಲಿಸುತ್ತಾರೆ. ಹಜ್, ಪ್ರತಿಯೊಬ್ಬ ಮುಸ್ಲಿಮರೂ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮಾಡಲೇಬೇಕಾದ ಯಾತ್ರೆ ಆಗಿದೆ. ಆದರೆ ಆರ್ಥಿಕವಾಗಿ ಸದೃಢರಾಗಿರುವವರು ಮಾತ್ರ ಸೌದಿ ಅರೆಬಿಯಾದ ಮಕ್ಕಾವರೆಗೂ ತೆರಳಿ ಹಜ್ ಯಾತ್ರೆ ಮಾಡುತ್ತಾರೆ. ಯಾತ್ರೆಗೆ ಹೋಗುವ ಪ್ರತಿಯೊಬ್ಬರೂ ಬಡವ ಶ್ರೀಮಂತ ಎನ್ನದೆ ಬಿಳಿ ವಸ್ತ್ರವನ್ನು ಧರಿಸಿ ಪ್ರಾರ್ಥನೆ ಮಾಡುತ್ತಾರೆ. ಇಲ್ಲಿಗೆ ಹೋಗಲು ಕೆಲವೊಂದು ನೀತಿ ನಿಯಮಗಳಿವೆ.
ಬಕ್ರೀದ್ ಆಚರಣೆ ಹೇಗೆ?
ಈದ್ ಉಲ್ ಅಧಾ ದಿನದಂದು ಮುಸ್ಲಿಮ್ ಬಾಂಧವರು ಹೊಸ ಬಟ್ಟೆ ಧರಿಸಿ ಸೂರ್ಯೋದಯದ ಬಳಿಕ ಮಸೀದಿ ಅಥವಾ ವಿಶಾಲ ಮೈದಾನಗಳಿಗೆ ತೆರಳಿ ಒಟ್ಟಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಬಡವರಿಗೆ, ನೆಂಟರಿಗೆ ಮಾಂಸವನ್ನು ಹಂಚುವುದು ಕೂಡಾ ಈ ಹಬ್ಬದ ಆಚರಣೆಗಳಲ್ಲಿ ಒಂದು. ಆ ದಿನ ಕುರಿ ಅಥವಾ ಮೇಕೆಯನ್ನು ಅಲ್ಲಾಹ್‌ಗೆ ಬಲಿ ನೀಡಿ, ಆ ಮಾಂಸವನ್ನು ಮೂರು ಭಾಗವನ್ನಾಗಿ ಮಾಡಲಾಗುತ್ತದೆ. ಅದರಲ್ಲಿ ಒಂದು ಭಾಗವನ್ನು ನೆಂಟರಿಷ್ಟರಿಗೆ, ಇನ್ನೊಂದು ಭಾಗವನ್ನು ಬಡವರಿಗೆ ಹಾಗೂ ಉಳಿದ ಭಾಗವನ್ನು ವಿವಿಧ ಭಕ್ಷ್ಯಗಳನ್ನು ತಯಾರಿಸಿ ತಮ್ಮ ಕುಟುಂಬದವರೊಂದಿಗೆ ಭೋಜನ ಸ್ವೀಕರಿಸುತ್ತಾರೆ. ಕೆಲವೆಡೆ ಒಂಟೆಯನ್ನೂ ಬಲಿ ಕೊಡುವುದುಂಟು. ಹಿಂದೂ ಹಾಗೂ ಇತರ ಧರ್ಮದ ಸ್ನೇಹಿತರನ್ನು ಕೂಡಾ ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸುತ್ತಾರೆ. ಆತ್ಮೀಯರಿಗೆ ಈದ್ ಮುಬಾರಕ್ ಶುಭಾಶಯಗಳನ್ನು ತಿಳಿಸಿ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.
ಈದ್ ಉಲ್ ಅಧಾ ಆಚರಣೆಗೆ ಇನ್ನು 4 ದಿನಗಳಷ್ಟೇ ಬಾಕಿ ಉಳಿದಿವೆ. ಈಗಾಗಲೇ ಮುಸ್ಲಿಂ ಬಾಂಧವರು ಹಬ್ಬದ ಆಚರಣೆಗೆ ಸಕಲ ತಯಾರಿ ನಡೆಸಿದ್ದಾರೆ.