ಮೋದಿ ಸರ್ಕಾರಕ್ಕೆ ಎಂಟು ವರ್ಷ: 8 ದೊಡ್ಡ ಸಾಧನೆಗಳು ಇಲ್ಲಿವೆ..
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಎಂಟು ವರ್ಷಗಳನ್ನು ಪೂರೈಸಿದ್ದು, ಸರ್ಕಾರದ 8 ಪ್ರಮುಖ ಸಾಧನೆಗಳು ಇಲ್ಲಿವೆ ನೋಡಿ..
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಎಂಟು ವರ್ಷಗಳನ್ನು ಪೂರೈಸಿದೆ. ಪಿಎಂ ಮೋದಿ ಅವರು 2014 ರಿಂದ ದೇಶವನ್ನು ಮುನ್ನಡೆಸುತ್ತಿದ್ದಾರೆ. ಎರಡನೇ ಅವಧಿಯ ಅಧಿಕಾರದಲ್ಲಿ ಕಳೆದ ಮೂರು ವರ್ಷಗಳು ನಿರ್ಣಾಯಕ ನಾಯಕತ್ವ ಮತ್ತು ಪ್ರಬಲ ಸವಾಲುಗಳಿಂದ ತುಂಬಿತ್ತು. ಮೋದಿ 2.0 ನಲ್ಲಿ ಎದ್ದುಕಾಣುವ ಪ್ರಮುಖ ಎಂಟು ಸಾಧನೆಗಳು ಇಲ್ಲಿವೆ..
370 ನೇ ವಿಧಿಯ ರದ್ದತಿ
ಆಗಸ್ಟ್ 5, 2019 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿಯನ್ನು ರದ್ದುಗೊಳಿಸಲಾಯಿತು. ಈ ಮೂಲಕ ಜಮ್ಮು- ಕಾಶ್ಮೀರದಿಂದ ಲಡಾಖ್ ಅನ್ನು ಪ್ರತ್ಯೇಕಗೊಳಿಸಲಾಯಿತು. ಜಮ್ಮು- ಕಾಶ್ಮೀರ ಮತ್ತು ಲಡಾಖ್ ಎರಡನ್ನೂ ಮುಖ್ಯವಾಹಿನಿಗೆ ತರಲು ಇವುಗಳನ್ನು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಲಾಯಿತು.
ಅಯೋಧ್ಯೆಯಲ್ಲಿ ರಾಮಮಂದಿರ
ಕೋಟ್ಯಂತರ ಹಿಂದೂಗಳ ಕನಸಾಗಿದ್ದ ರಾಮಮಂದಿರ ನಿರ್ಮಾಣ ಬಿಜೆಪಿಯ ಪ್ರಣಾಳಿಕೆಯಲ್ಲಿತ್ತು. ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಪಿಎಂ ಮೋದಿಯವರು ಆಗಸ್ಟ್ 2020 ರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆ ಮಾಡಿದರು. ಲಭ್ಯವಿರುವ ಇತ್ತೀಚಿನ ಮಾಹಿತಿಯ ಪ್ರಕಾರ 2023ರ ಅಂತ್ಯದ ವೇಳೆಗೆ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣವಾಗಲಿದೆ. ಮುಂದಿನ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು, ಅಂದರೆ ಜನವರಿ 24, 2020 ರಂದು ಉದ್ಘಾಟನೆಗೊಳ್ಳಲಿದೆ.
ಆಜಾದಿ ಕಾ ಅಮೃತ ಮಹೋತ್ಸವ
ಭಾರತವು ತನ್ನ 75ನೇ ಸ್ವಾತಂತ್ರ್ಯದ ವರ್ಷವನ್ನು ಗುರುತಿಸುತ್ತಿರುವಾಗ ಕೇಂದ್ರ ಸರ್ಕಾರವು "ಆಜಾದಿ ಕಾ ಅಮೃತ್ ಮಹೋತ್ಸವ" ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. ಇದರಡಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ ಎಲ್ಲರನ್ನು ಗುರುತಿಸಿ ದೇಶಾದ್ಯಂತ ಆಚರಿಸಲಾಗುತ್ತಿದೆ. ಈ ಅಭಿಯಾನವು ರಾಷ್ಟ್ರದ ವೀರರ ಕೊಡುಗೆಯನ್ನು ಎತ್ತಿ ತೋರಿಸುತ್ತದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನಾ ಯೋಜನೆ (PMGKAY)
ಕೋವಿಡ್‌ನ ಮೊದಲ ಅಲೆಯ ಸಮಯದಲ್ಲಿಯೇ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನಾ ಯೋಜನೆಯನ್ನು ಪ್ರಧಾನಿ ಮೋದಿ ಜಾರಿಗೆ ತಂದರು. ಕೋವಿಡ್ ಸಾಂಕ್ರಾಮಿಕದಲ್ಲಿ ಕಡು ಬಡವರಿಗೆ ಉಚಿತ ಪಡಿತರವನ್ನು ನೀಡುವುದು ಈ ಯೋಜನೆಯ ಗುರಿಯಾಗಿತ್ತು. ಕೊರೊನಾ ಎರಡನೇ ಅಲೆಯಲ್ಲಿ ಮತ್ತೆ ಈ ಯೋಜನೆಯ ಅವಧಿಯನ್ನು ವಿಸ್ತರಿಸಲಾಯಿತು. ಈ ಯೋಜನೆಯ ಮೂಲಕ 80 ಕೋಟಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಉಚಿತ ಪಡಿತರವನ್ನು ನೀಡಲಾಯಿತು.
ಎಲ್ಲರಿಗೂ ವ್ಯಾಕ್ಸಿನೇಷನ್ ಮತ್ತು ಆಯುಷ್ಮಾನ್ ಭಾರತ್
ಕೋವಿಡ್-19 ರ ಕಠಿಣ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ರಾಷ್ಟ್ರವ್ಯಾಪಿ ಲಸಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಿತು. ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಭಾರತದಲ್ಲಿ ನಡೆಸಲಾಯಿತು. ಭಾರತವು ಇದುವರೆಗೆ 193 ಕೋಟಿ ಡೋಸ್‌ಗಳ ಕೋವಿಡ್ ಲಸಿಕೆಯನ್ನು ನೀಡಿದೆ. ಅಲ್ಲದೇ ತನ್ನ ವಯಸ್ಕ ನಾಗರಿಕರಿಗೆ ಮುನ್ನೆಚ್ಚರಿಕೆ ಡೋಸ್‌ಗಾಗಿ ತನ್ನ ಅಭಿಯಾನವನ್ನು ಯಶಸ್ವಿಯಾಗಿ ನಡೆಸುತ್ತಿದೆ.
ದೇಶವು ಕಡಿಮೆ ಸಮಯದಲ್ಲಿ ಸ್ಥಳೀಯ ಲಸಿಕೆಗಳನ್ನು ಅಭಿವೃದ್ಧಿಪಡಿಸಿದೆ. ದೇಶವು ತನ್ನ ಜನರಿಗೆ ಮಾತ್ರ ಲಸಿಕೆ ನೀಡಲಿಲ್ಲ, ಬದಲಾಗಿ ಪ್ರಪಂಚದ ವಿವಿಧ ರಾಷ್ಟ್ರಗಳಿಗೆ ಲಸಿಕೆಯನ್ನು ವಿತರಿಸಿ ಸಹಾಯ ಹಸ್ತವನ್ನು ಚಾಚಿದೆ.
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯು ಭಾರತ ಸರ್ಕಾರದ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ವಿಮಾ ನಿಧಿಯಾಗಿದ್ದು, ದೇಶದಲ್ಲಿ ಕಡಿಮೆ ಆದಾಯದವರಿಗೆ ಉಚಿತ ಆರೋಗ್ಯ ವಿಮಾ ರಕ್ಷಣೆ ಒದಗಿಸುವ ಗುರಿಯನ್ನು ಹೊಂದಿದೆ. 22 ಕೋಟಿಗೂ ಹೆಚ್ಚು ಜನರು ಈ ಯೋಜನೆಗೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಅಫ್ಘಾನಿಸ್ತಾನ ಮತ್ತು ಉಕ್ರೇನ್‌ನಿಂದ ರಕ್ಷಣಾ ಕಾರ್ಯಾಚರಣೆಗಳು
ತಾಲಿಬಾನ್ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ದೇವಿ ಶಕ್ತಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಅಫ್ಘಾನಿಸ್ತಾನದಿಂದ 700ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.
ಯುದ್ಧ ಪೀಡಿತ ಉಕ್ರೇನ್‌ನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿರುವುದು ಸರ್ಕಾರದ ಮತ್ತೊಂದು ಪ್ರಮುಖ ಸಾಧನೆಯಾಗಿದೆ. ಕೆಲವು ವಿದೇಶಿ ಪ್ರಜೆಗಳು ಸೇರಿದಂತೆ ಸುಮಾರು 23,000 ವಿದ್ಯಾರ್ಥಿಗಳನ್ನು ಕೇಂದ್ರ ಸರ್ಕಾರ ಸುರಕ್ಷಿತವಾಗಿ ಸ್ಥಳಾಂತರಿಸಿದೆ. ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆಗಾಗಿ ನಾಲ್ಕು ಕೇಂದ್ರ ಸಚಿವರನ್ನು ವಿಶೇಷ ಪ್ರತಿನಿಧಿಗಳಾಗಿ ಉಕ್ರೇನ್‌ನ ನೆರೆಯ ರಾಷ್ಟ್ರಗಳಿಗೆ ಕಳುಹಿಸಲಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ
ಈ ಯೋಜನೆಯ ಮೂಲಕ ರೈತರ ಬ್ಯಾಂಕ್ ಖಾತೆಗೆ ನೇರವಾಗಿ 2,000 ರೂ.ನಂತೆ ಮೂರು ಕಂತುಗಳಲ್ಲಿ ವರ್ಷಕ್ಕೆ 6,000 ರೂ. ಹಣವನ್ನು ಜಮಾ ಮಾಡಲಾಗುತ್ತಿದೆ. ಮೇ 31 ಅಂದರೆ ನಾಳೆ 11 ನೇ ಕಂತಿನ ಹಣವನ್ನು ರೈತರಿಗೆ ವರ್ಗಾಯಿಸಲಾಗುತ್ತದೆ. ಗಮನಾರ್ಹವಾಗಿ ಸರ್ಕಾರವು ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡಿದೆ. ಆದರೆ ಈ ಕಾನೂನುಗಳ ಪ್ರಯೋಜನವನ್ನು ರೈತರಿಗೆ ವಿವರಿಸಲು ಸಾಧ್ಯವಾಗದಿರುವುದು ದುರದೃಷ್ಟಕರ ಎಂದು ಪ್ರಧಾನಿ ಹೇಳಿದ್ದಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ
ಎಲ್ಲರಿಗೂ ಕೈಗೆಟಕುವ ದರದಲ್ಲಿ ವಸತಿ ಒದಗಿಸುವ ಈ ಯೋಜನೆಯನ್ನು ಮೋದಿ ಸರ್ಕಾರವು 2015 ರಲ್ಲಿ ಪ್ರಾರಂಭಿಸಿತು. ಲಭ್ಯವಿರುವ ಮಾಹಿತಿಯ ಪ್ರಕಾರ, ಮಾರ್ಚ್ 2020 ರ ಅಂತ್ಯದವರೆಗೆ ಈ ಯೋಜನೆಯಡಿಯಲ್ಲಿ 2 ಕೋಟಿಗೂ ಹೆಚ್ಚು ಜನರಿಗೆ ಮನೆಗಳನ್ನು ನೀಡಲಾಗಿದೆ.
ವಿಭಾಗ