ದೆಹಲಿ ಚುನಾವಣೆ: ಮಾಧ್ಯಮಗಳ ಮೂಗುದಾರ ಹಿಡಿದ ಚುನಾವಣಾ ಆಯೋಗ; ಮತದಾನ ದಿನ ಸಂಜೆ 6.30ರವರೆಗೆ ಎಕ್ಸಿಟ್‌ ಪೋಲ್‌ಗೆ ನಿಷೇಧ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ದೆಹಲಿ ಚುನಾವಣೆ: ಮಾಧ್ಯಮಗಳ ಮೂಗುದಾರ ಹಿಡಿದ ಚುನಾವಣಾ ಆಯೋಗ; ಮತದಾನ ದಿನ ಸಂಜೆ 6.30ರವರೆಗೆ ಎಕ್ಸಿಟ್‌ ಪೋಲ್‌ಗೆ ನಿಷೇಧ

ದೆಹಲಿ ಚುನಾವಣೆ: ಮಾಧ್ಯಮಗಳ ಮೂಗುದಾರ ಹಿಡಿದ ಚುನಾವಣಾ ಆಯೋಗ; ಮತದಾನ ದಿನ ಸಂಜೆ 6.30ರವರೆಗೆ ಎಕ್ಸಿಟ್‌ ಪೋಲ್‌ಗೆ ನಿಷೇಧ

ಫೆಬ್ರುವರಿ 5ರಂದು ದೆಹಲಿ ವಿಧಾನಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಆ ದಿನ ಸಂಜೆ 6.30ರವರೆಗೆ ಚುನಾವಣೋತ್ತರ ಸಮೀಕ್ಷೆಗಳನ್ನು ಚುನಾವಣಾ ಆಯೋಗ ನಿಷೇಧಿಸಿದೆ.

ದೆಹಲಿ ಚುನಾವಣೆ: ಮತದಾನ ದಿನ ಸಂಜೆ 6.30ರವರೆಗೆ ಎಕ್ಸಿಟ್‌ ಪೋಲ್‌ಗೆ ನಿಷೇಧ (ಜಂಗ್‌ಪುರ ವಿಧಾನಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಮನೀಶ್ ಸಿಸೋಡಿಯಾ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಚುನಾವಣಾ ಪ್ರಚಾರದ ಚಿತ್ರ)
ದೆಹಲಿ ಚುನಾವಣೆ: ಮತದಾನ ದಿನ ಸಂಜೆ 6.30ರವರೆಗೆ ಎಕ್ಸಿಟ್‌ ಪೋಲ್‌ಗೆ ನಿಷೇಧ (ಜಂಗ್‌ಪುರ ವಿಧಾನಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಮನೀಶ್ ಸಿಸೋಡಿಯಾ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಚುನಾವಣಾ ಪ್ರಚಾರದ ಚಿತ್ರ) (Hindustan Times)

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಈ ನಡುವೆ ಭಾರತೀಯ ಚುನಾವಣಾ ಆಯೋಗವು ಮಾಧ್ಯಮಗಳಿಗೆ ಮೂಗುದಾರ ಹಾಕಲು ಮುಂದಾಗಿದೆ. ಮತದಾನದ ದಿನವಾದ ಫೆಬ್ರುವರಿ 5ರಂದು ಸಂಜೆ 6.30ರವರೆಗೆ ಚುನಾವಣೋತ್ತರ ಸಮೀಕ್ಷೆಗಳ (exit polls) ಫಲಿತಾಂಶ ಬಿಡುಗಡೆಗೆ ಚುನಾವಣಾ ಆಯೋಗ ನಿಷೇಧ ಹೇರಿದೆ. ಎಕ್ಸಿಟ್‌ ಪೋಲ್‌ ಫಲಿತಾಂಶದ ನಿಖರತೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆ, ಚುನಾವಣಾ ಪ್ರಕ್ರಿಯೆಯ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಉದ್ದೇಶ ಆಯೋಗದ್ದು. ಹೀಗಾಗಿ ಈ ಮಹತ್ವದ ನಿರ್ಧಾರ ಹೊರಬಂದಿದೆ.

ಫೆಬ್ರುವರಿ 8ರಂದು ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.

“ಜನತಾ ಪ್ರಾತಿನಿಧ್ಯ ಕಾಯ್ದೆಯ, 1951ರ ಸೆಕ್ಷನ್ 126ಎ ಇದರ ಉಪಸೆಕ್ಷನ್ (1) ರ ಅಡಿಯಲ್ಲಿ ಫೆಬ್ರುವರಿ 5ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6.30ರವರೆಗೆ ಯಾವುದೇ ರೀತಿಯ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವ ಅಥವಾ ಪ್ರಕಟಿಸುವ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶವನ್ನು ನಿಷೇಧಿಸಲಾಗುವುದು” ಎಂದು ಚುನಾವಣಾ ಆಯೋಗವು ಫೆಬ್ರುವರಿ 3ರ ಸೋಮವಾರ ನೋಟಿಸ್‌ನಲ್ಲಿ ತಿಳಿಸಿದೆ.

1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 126 ಎ (ಆರ್‌ಪಿ ಕಾಯ್ದೆ, 1951) ಪ್ರಕಾರ, “ಯಾವುದೇ ವ್ಯಕ್ತಿಯು ಯಾವುದೇ ಚುನಾವಣೋತ್ತರ ಸಮೀಕ್ಷೆಯನ್ನು ನಡೆಸುವಂತಿಲ್ಲ ಮತ್ತು ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಪ್ರಸಾರ ಅಥವಾ ಪ್ರಕಟಿಸಬಾರದು”.

ಎಕ್ಸಿಟ್ ಪೋಲ್ ಎಂದರೇನು?

ಎಕ್ಸಿಟ್‌ ಪೋಲ್‌ ಅಥವಾ ಚುನಾವಣೋತ್ತರ ಸಮೀಕ್ಷೆ ಎಂದರೆ ಮತದಾನದ ನಂತರ ಸಮೀಕ್ಷೆ ಸಂಸ್ಥೆಗಳು ಸಂಗ್ರಹಿಸಿದ ಮತದಾರರ ಪ್ರತಿಕ್ರಿಯೆಯನ್ನು ಆಧರಿಸಿ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ನೀಡುವುದಾಗಿದೆ. ನಿಜವಾದ ಫಲಿತಾಂಶಗಳನ್ನು ಘೋಷಿಸುವ ಮೊದಲು ಸಾರ್ವಜನಿಕ ಭಾವನೆಗಳನ್ನು ಪ್ರತಿಬಿಂಬಿಸುವುದು ಚುನಾವಣೋತ್ತರ ಸಮೀಕ್ಷೆಗಳ ಹಿಂದಿನ ಉದ್ದೇಶವಾಗಿದ್ದರೂ, ಅವುಗಳ ನಿಖರತೆ ಬಗ್ಗೆ ಸಾಕಷ್ಟು ಚರ್ಚೆಗಳು ಈ ಹಿಂದಿನಿಂದಲೂ ನಡೆಯುತ್ತಿವೆ.

ಸಾಮಾನ್ಯವಾಗಿ ಎಕ್ಸಿಟ್ ಪೋಲ್ ಫಲಿತಾಂಶಗಳು ನಿಜವಾದ ಫಲಿತಾಂಶದ ದಿನಕ್ಕಿಂತ ಮೊದಲು ಸಾಕಷ್ಟು ಆಸಕ್ತಿ ಸೃಷ್ಟಿಸುತ್ತವೆ. ಈ ಹಿಂದೆ ಹಲವು ಬಾರಿ, ಚುನಾವಣೆಯ ನೈಜ ಫಲಿತಾಂಶಗಳು ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶಕ್ಕಿಂತ ತುಂಬಾ ಭಿನ್ನವಾಗಿದ್ದ ಉದಾಹರಣೆಗಳಿವೆ. ಕಳೆದ ವರ್ಷ ನಡೆದ ಹರಿಯಾಣ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲೂ ಹೀಗೆಯೇ ಆಗಿತ್ತು. ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷವು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದವು. ಆದರೆ ಬಿಜೆಪಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿತ್ತು.

ದೆಹಲಿ ಚುನಾವಣೆಯ ಇನ್ನಷ್ಟು ಅಪ್ಡೇಟ್‌ಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.