ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಎನ್‌ಡಿಎ Vs ಇಂಡಿಯಾ, ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಯಾರಿಗೆ ಕೊಡಬೇಕು, 30 ಸ್ಥಾನ ಬಲದ ನಿತೀಶ್, ಚಂದ್ರಬಾಬು ಕಿಂಗ್‌ಮೇಕರ್‌ ಆಗೋದು ಸಾಧ್ಯವಾ

ಎನ್‌ಡಿಎ vs ಇಂಡಿಯಾ, ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಯಾರಿಗೆ ಕೊಡಬೇಕು, 30 ಸ್ಥಾನ ಬಲದ ನಿತೀಶ್, ಚಂದ್ರಬಾಬು ಕಿಂಗ್‌ಮೇಕರ್‌ ಆಗೋದು ಸಾಧ್ಯವಾ

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ಎನ್‌ಡಿಎಗೆ ಸರಳ ಬಹುಮತ ಸಿಗುವ ಸಾಧ್ಯತೆ ಕಂಡುಬಂದಿದೆ. ಎನ್‌ಡಿಎ vs ಇಂಡಿಯಾ ಮೈತ್ರಿ ಕೂಟದಲ್ಲಿ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಯಾರಿಗೆ ಎಂಬುದು ಸದ್ಯದ ಕುತೂಹಲ. 30 ಸ್ಥಾನ ಬಲದ ನಿತೀಶ್, ಚಂದ್ರಬಾಬು ಕಿಂಗ್‌ಮೇಕರ್‌ ಆಗೋದು ಸಾಧ್ಯವಾ ಎಂಬುದು ಚರ್ಚೆಯ ವಿಚಾರ.

ಎನ್‌ಡಿಎ vs ಇಂಡಿಯಾ, ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಯಾರಿಗೆ ಕೊಡಬೇಕು, 30 ಸ್ಥಾನ ಬಲದ ನಿತೀಶ್, ಚಂದ್ರಬಾಬು ಕಿಂಗ್‌ಮೇಕರ್‌ ಆಗೋದು ಸಾಧ್ಯವಾ (ಸಾಂಕೇತಿಕ ಚಿತ್ರ)
ಎನ್‌ಡಿಎ vs ಇಂಡಿಯಾ, ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಯಾರಿಗೆ ಕೊಡಬೇಕು, 30 ಸ್ಥಾನ ಬಲದ ನಿತೀಶ್, ಚಂದ್ರಬಾಬು ಕಿಂಗ್‌ಮೇಕರ್‌ ಆಗೋದು ಸಾಧ್ಯವಾ (ಸಾಂಕೇತಿಕ ಚಿತ್ರ)

ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಬಹುತೇಕ ಅತಂತ್ರವಾಗಿರಲಿದ್ದು, ಎನ್‌ಡಿಎ ಮೈತ್ರಿ ಕೂಟಕ್ಕೆ ಬಹುಮತ ನಿರೀಕ್ಷಿಸಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಎನ್‌ಡಿಎ ಮೈತ್ರಿ ಕೂಟ ಸರಳ ಬಹುಮತದ ಮ್ಯಾಜಿಕ್ ನಂಬರ್ 272ರ ಗಡಿದಾಟುವಂತೆ ಕಾಣುತ್ತಿದೆ. ಬಿಜೆಪಿಗೆ ಸರಳ ಬಹುಮತ ಸಿಗದ ಕಾರಣ ಸ್ಥಿರ ಸರ್ಕಾರ ನಿರೀಕ್ಷಿಸುವುದು ಕಷ್ಟ.

ಟ್ರೆಂಡಿಂಗ್​ ಸುದ್ದಿ

ಲೋಕಸಭಾ ಚುನಾವಣೆಗೆ ಮೊದಲು ಕಾಂಗ್ರೆಸ್ ಪಕ್ಷದ ಜೊತೆಗಿದ್ದ ಜೆಡಿಯು, ಟಿಡಿಪಿ ಪಾಳಯ ಬದಲಿಸಿ ಎನ್‌ಡಿಎಗೆ ಬಂದಿದ್ದವು. ಅದಕ್ಕೂ ಮೊದಲು ಬಿಜೆಪಿ ಜೊತೆಗೇ ಇದ್ದ ಪಕ್ಷಗಳಿವು. ಆದರೆ ಬದಲಾದ ಸನ್ನಿವೇಶದಲ್ಲಿ ಈ ಎರಡೂ ಪಕ್ಷಗಳು ಗಾಳಿ ಬೀಸಿದ ಕಡೆಗೆ ಹೋಗುವ ಮನಸ್ಥಿತಿಯವು ಎಂಬ ಇಮೇಜ್ ಹೊಂದಿರುವುದು ರಾಜಕೀಯವಾಗಿ ಕಳವಳಕಾರಿ ಅಂಶ.

ಸರ್ಕಾರ ರಚಿಸುವ ಮಟ್ಟಿಗೆ ಈ ಎರಡೂ ಪಕ್ಷಗಳನ್ನು ಎನ್‌ಡಿಎ ಅಥವಾ ಇಂಡಿಯಾ ಮೈತ್ರಿ ಬಲವಾಗಿ ನಂಬುವಂತೆ ಇಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು, ತಾವು ಅಧಿಕಾರ ಚುಕ್ಕಾಣಿ ಹಿಡಿಯಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ ಈ ಎರಡೂ ಪಕ್ಷಗಳನ್ನು ಇಂಡಿಯಾ ಮೈತ್ರಿಗೆ ಆಹ್ವಾನಿಸಿದರೆ ಅಚ್ಚರಿ ಇಲ್ಲ.

ಜೆಡಿಯು 14, ಟಿಡಿಪಿ 16 ; ನಿತೀಶ್ ಮತ್ತು ಚಂದ್ರಬಾಬುಗೆ 30 ಸ್ಥಾನಗಳ ‘ಬಲ’

ರಾಜಕಾರಣದಲ್ಲಿ ಖಾಯಂ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ ಎಂಬ ಮಾತು ಅಧಿಕಾರದ ವಿಚಾರಕ್ಕೆ ಬಂದಾಗ ಎರಡನೇ ಮಾತು ಇಲ್ಲದೆ ಅಂಗೀಕಾರವಾಗಿ ಬಿಡುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯ ಸ್ವಂತ ಸದಸ್ಯ ಬಲ 240ರ ಆಸುಪಾಸಿನಲ್ಲಿದ್ದರೆ, ಎನ್‌ಡಿಎ ಸಂಖ್ಯಾ ಬಲ 280-90ರ ಆಸುಪಾಸಿನಲ್ಲಿದೆ.

ಇನ್ನೊಂದೆಡೆ ಇಂಡಿಯಾ ಒಕ್ಕೂಟದಲ್ಲಿ ಕಾಂಗ್ರೆಸ್ ಸಂಖ್ಯಾ ಬಲ 100ರ ಆಸುಪಾಸಿನಲ್ಲಿದೆ. ಇನ್ನು ಮಿತ್ರ ಪಕ್ಷಗಳ ಸಂಖ್ಯಾಬಲಗಳನ್ನು ಒಟ್ಟು ಸೇರಿಸಿದರೆ 230ರ ಆಸುಪಾಸಿಗೆ ಬಂದುಬಿಡುತ್ತದೆ. ಇದು ಬಿಟ್ಟರೆ ಉಳಿದಿರುವ 18 ಸ್ಥಾನಗಳಲ್ಲಿ ಯಾವುದೇ ಮೈತ್ರಿಯಲ್ಲಿ ಇಲ್ಲದವರಿದ್ದಾರೆ.

ಇಂತಹ ಸನ್ನಿವೇಶದಲ್ಲಿ ನಿತೀಶ್ ಮತ್ತು ಚಂದ್ರಬಾಬು ಅವರು ಕಿಂಗ್ ಮೇಕರ್‌ಗಳಾಗಿ ಮೂಡುವುದು ಸಾಧ್ಯವಿದೆ. ಈ ಇಬ್ಬರೂ ಗಾಳಿ ಬಂದ ಕಡೆಗೆ ತೂರುವವರಾದ ಕಾರಣ ಎಲ್ಲಿ ಲಾಭವಿದೆಯೋ ಆ ಕಡೆಗೆ ತಿರುಗಿಬಿಡುವ ಸಾಧ್ಯತೆ ದಟ್ಟವಾಗಿದೆ.

ಈ ಎರಡೂ ಪಕ್ಷ ಇಂಡಿಯಾ ಮೈತ್ರಿಕೂಟಕ್ಕೆ ಸೇರಿದರೆ ಆಗ ಎನ್‌ಡಿಎ ಸಂಖ್ಯಾ ಬಲ 260ರ ಆಸುಪಾಸಿಗೆ ಕುಸಿಯಬಹುದು. ಹಾಗಾದರೆ ಸರಳ ಬಹುಮತ ಇರದು. ಇದೇ ವೇಳೆ ಇಂಡಿಯಾ ಮೈತ್ರಿಕೂಟದ ಸಂಖ್ಯಾಬಲ 260ರ ಆಸುಪಾಸಿಗೆ ಏರಿಕೆಯಾಗಬಹುದು. ಆಗ ಕಿಂಗ್ ಮೇಕರ್‌ಗಳಾಗುವುದು ಯಾವುದೇ ಮೈತ್ರಿಗೆ ಸೇರಿಕೊಳ್ಳದೇ ಉಳಿದಿರುವ 18 ಸದಸ್ಯರು.

ನಿತೀಶ್‌ ಕುಮಾರ್‌ಗೆ ಉಪ ಪ್ರಧಾನಿ ಹುದ್ದೆಯ ಆಮಿಷ?

ಇಂಡಿಯಾ ಮೈತ್ರಿಕೂಟಕ್ಕೆ ನಿತೀಶ್ ಕುಮಾರ್ ಅವರನ್ನು ಸೇರ್ಪಡೆಗೊಳಿಸುವುದಕ್ಕೆ ಕಾಂಗ್ರೆಸ್ ನಾಯಕರು ಪ್ರಯತ್ನಿಸಿದ್ದಾರೆ. ಅವರಿಗೆ ಉಪ ಪ್ರಧಾನಿ ಹುದ್ದೆಯನ್ನು ಕೊಡುವ ಭರವಸೆ ನೀಡಲಾಗಿದೆ. ಇದೇ ರೀತಿ ಚಂದ್ರಬಾಬು ನಾಯ್ಡು ಅವರನ್ನು ಮೈತ್ರಿಗೆ ಬರಮಾಡಿಕೊಳ್ಳಲು ಪ್ರಯತ್ನ ನಡೆದಿದೆ ಎಂದು ಮೂಲಗಳು ತಿಳಿಸಿದ್ದಾಗಿ ಟೈಮ್ಸ್ ನೌ ವರದಿ ಮಾಡಿದೆ.

ಇನ್ನೊಂದೆಡೆ, ಎನ್‌ಡಿಎ ಮಿತ್ರ ಪಕ್ಷಗಳ ನಾಯಕರ ಸಭೆ ನಡೆಸಲು ಬಿಜೆಪಿ ವರಿಷ್ಠರು ಮುಂದಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿ ಪ್ರಮುಖರು ಸಭೆಯಲ್ಲಿ ಇರಲಿದ್ದಾರೆ ಎಂದು ಮೂಲಗಳು ತಿಳಿಸಿದ್ದಾಗಿ ವರದಿ ಹೇಳಿದೆ.

ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಮತಗಳ ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರ ಸ್ವಲ್ಪ ಬದಲಾಗಬಹುದು. ಇಲ್ಲಿರುವ ವಿಶ್ಲೇಷಣೆ ಸದ್ಯದ ಫಲಿತಾಂಶ ಆಧರಿಸಿದ್ದು.

👉🏻 ಲೋಕಸಭಾ ಚುನಾವಣೆ ಫಲಿತಾಂಶ: ಸ್ಪಷ್ಟ & ನಿಖರ ಮಾಹಿತಿಗೆ

ಟಿ20 ವರ್ಲ್ಡ್‌ಕಪ್ 2024