Twitter rival: ಫೇಸ್‌ಬುಕ್‌ನಿಂದ ಟ್ವಿಟ್ಟರ್‌ಗೆ ಪ್ರತಿಸ್ಪರ್ಧಿ ಸೋಷಿಯಲ್ ಮೀಡಿಯಾ, ಝುಕರ್‌ಬರ್ಗ್‌ನನ್ನು ಕಿಚಾಯಿಸಿದ ಎಲಾನ್ ಮಸ್ಕ್
ಡೈಲಿಲೌಡ್ ಪೋಸ್ಟ್‌ಗೆ ಎಲಾನ್ ಮಸ್ಕ್ ಕೇವಲ ಒಂದು ಪದ ಮತ್ತು ಒಂದು ಇಮೋಜಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಲಂಡನ್: ಫೇಸ್‌ಬುಕ್‌ನ ಮಾತೃಸಂಸ್ಥೆಯಾದ ಮೆಟಾ ಪ್ಲಾಟ್‌ಫಾರ್ಮ್ಸ್, ಟ್ವಿಟ್ಟರ್‌ನಂತಹ ಸೋಷಿಯಲ್ ನೆಟ್‌ವರ್ಕ್ ತಾಣವನ್ನು ಆರಂಭಿಸಲಿದೆ. ಈ ಕುರಿತಾದ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅದಕ್ಕೆ ಟ್ವಿಟ್ಟರ್‌ನ ಎಲಾನ್ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ.
ಡೈಲಿಲೌಡ್ ಎಂಬ ಟ್ವಿಟ್ಟರ್ ಖಾತೆಯಲ್ಲಿ "ಫೇಸ್‌ಬುಕ್ ಕಂಪನಿಯು ಟ್ವಿಟ್ಟರ್‌ಗೆ ಪ್ರತಿಸ್ಪರ್ಧಿ ಸೋಷಿಯಲ್ ಮೀಡಿಯಾವೊಂದನ್ನು ಆರಂಭಿಸಲು ಯೋಜಿಸುತ್ತಿದೆ" ಎಂದು ಪೋಸ್ಟ್ ಮಾಡಲಾಗಿತ್ತು.
ಇದಕ್ಕೆ ಎಲಾನ್ ಮಸ್ಕ್‌ಗಿಂತ ಮುನ್ನ ಟ್ವಿಟ್ಟರ್‌ನಲ್ಲಿ ಶಿಬೆಟೋಶಿ ನಕಾಮೊಟೊ ಎಂಬ ಹೆಸರಿನ ಖಾತೆಯಲ್ಲಿ ಡಾಗ್‌ಕಾಯಿನ್ ಸಹ-ಸಂಸ್ಥಾಪಕ ಬಿಲ್ಲಿ ಮಾರ್ಕಸ್ ಅವರು ಪ್ರತಿಕ್ರಿಯೆ ನೀಡಿದ್ದರು. "ಎಲ್ಲರೂ ಎಲಾನ್ ಮಸ್ಕ್ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಜನರು ನನ್ನನ್ನು ಪ್ರೀತಿಸುತ್ತಾರೆ ಎಂದು ಝುಕರ್‌ಬರ್ಗ್ ಭಾವಿಸುತ್ತಾರೆ" ಎಂದು ಅವರು ಪೋಸ್ಟ್ ಮಾಡಿದ್ದರು.
ಡೈಲಿಲೌಡ್ ಪೋಸ್ಟ್‌ಗೆ ಎಲಾನ್ ಮಸ್ಕ್ ಕೇವಲ ಒಂದು ಪದ ಮತ್ತು ಒಂದು ಇಮೋಜಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕಾಪಿ ಎಂಬ ಬರೆದು ಅದರ ಮುಂದೆ ಬೆಕ್ಕಿನ ಚಿತ್ರ ಹಾಕಿದ್ದಾರೆ. ಈ ಮೂಲಕ ಝುಕರ್‌ಬರ್ಗ್‌ಗೆ "ಕಾಪಿಕ್ಯಾಟ್" ಎಂದು ಕಿಚಾಯಿಸಿದ್ದಾರೆ.
ಫೇಸ್‌ಬುಕ್‌ನ ಹೊಸ ಸಾಮಾಜಿಕ ನೆಟ್‌ವರ್ಕ್, "P92" ಎಂಬ ಸಂಕೇತನಾಮವನ್ನು ಹೊಂದಿದೆ. ಕ್ರಿಯೆಟರ್‌ಗಳು ಮತ್ತು ಸಾರ್ವಜನಿಕರು ತಮ್ಮ ಆಸಕ್ತಿಯ ವಿಷಯಗಳನ್ನು ಹಂಚಲು ಇದು ಅನುಮತಿಸಲಿದೆ. ಜನರು ತಮ್ಮ ಆಸಕ್ತಿಗಳು, ಆಯಾ ಸಂದರ್ಭದ ಮಾಹಿತಿಗಳನ್ನು ಹಂಚಿಕೊಳ್ಳಲು ಇದು ಅನುಮತಿಸಲಿದೆ ಎಂದು ಮೆಟಾ ವಕ್ತಾರರು ದೃಢಪಡಿಸಿದ್ದಾರೆ. ಇದು ಟ್ವಿಟ್ಟರ್‌ನಂತೆಯೇ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.
ಪ್ರಸ್ತಾವಿತ ಸೋಷಿಯಲ್ ಮೀಡಿಯಾ ನೆಟ್‌ವರ್ಕ್ ಮಸ್ಟೊಡನ್ ಫ್ರೇಮ್‌ವರ್ಕ್‌ನಿಂದ ಕಾರ್ಯನಿರ್ವಹಿಸಲಿದೆ. ಇದು ಮುಕ್ತ ವಿಕೇಂದ್ರಿಕೃತ ಸೋಷಿಯಲ್ ನೆಟ್‌ವರ್ಕ್ ಆಗಿದ್ದು, 2016ರಲ್ಲಿ ಆರಂಭವಾಗಿತ್ತು. ಕಳೆದ ವರ್ಷ ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಸ್ವಾಧೀನ ಆರಂಭಿಸಿದ ಸಮಯದಲ್ಲಿ ಮಾಸ್ಟೊಡನ್ ಜನಪ್ರಿಯತೆ ಹೆಚ್ಚಾಗಿತ್ತು.
ಭಾರತದಲ್ಲಿ ಟ್ವಿಟ್ಟರ್‌ಗೆ ಪ್ರತಿಸ್ಪರ್ಧಿಯಾಗಿ ಬೆಂಗಳೂರು ಮೂಲದ ಕೂ ಎಂಬ ಸೋಷಿಯಲ್ ನೆಟ್‌ವರ್ಕ್ ತಾಣ ಕಾರ್ಯನಿರ್ವಹಿಸುತ್ತಿದೆ. ಟ್ವಿಟ್ಟರ್ ರೀತಿಯಲ್ಲೇ ಕಾರ್ಯನಿರ್ವಹಿಸುವ ದೇಶೀಯ ಕೂ ಅಪ್ಲಿಕೇಶನ್ ತಕ್ಕಮಟ್ಟಿಗೆ ದೇಶದಲ್ಲಿ ಜನಪ್ರಿಯತೆ ಪಡೆದಿದೆ.
ಒಂದೆಡೆ ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಪ್ಲಾಟ್‌ಫಾರ್ಮ್ಸ್ ಹೊಸ ಸೋಷಿಯಲ್ ನೆಟ್‌ವರ್ಕ್ ತಾಣ ಆರಂಭಿಸುವ ಪ್ರಕ್ರಿಯೆಯಲ್ಲಿದೆ. ಇನ್ನೊಂದೆಡೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡುತ್ತಿದೆ. ಮೆಟಾ ಪ್ಲಾಟ್‌ಫಾರ್ಮ್ಸ್ ಮುಂಬರುವ ತಿಂಗಳುಗಳಲ್ಲಿ ಎರಡನೇ ಹಂತದ ಉದ್ಯೋಗ ಕಡಿತಕ್ಕೆ ಯೋಜಿಸಿದೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಮುಂದಿನ ದಿನಗಳಲ್ಲಿ ಬಹುಹಂತಗಳಲ್ಲಿ ಹೆಚ್ಚುವರಿಯಾಗಿ ಉದ್ಯೋಗ ಕಡಿತ ಮಾಡಲಾಗುತ್ತದೆ. ಕಳೆದ ವರ್ಷ ಕಂಪನಿಯು ತನ್ನ ಒಟ್ಟು ಉದ್ಯೋಗಿಗಳಲ್ಲಿ ಶೇಕಡ 13 ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು. ಈ ಬಾರಿಯೂ ಇಷ್ಟೇ ಉದ್ಯೋಗ ಕಡಿತವಾಗುವ ಸೂಚನೆಯಿದೆ.