ಭಾರತ ಸೇರಿ ವಿಶ್ವಾದ್ಯಂತ ಎಲಾನ್ ಮಸ್ಕ್ ಒಡೆತನದ ‘ಎಕ್ಸ್’ ಮತ್ತೆ ಸರ್ವರ್ ಡೌನ್; ಬಳಕೆದಾರರ ಪರದಾಟ
ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್ (ಟ್ವಿಟರ್) ಇಂದು ಕೂಡ ಮತ್ತೆ (ಮೇ 24 ಶನಿವಾರ) ಸರ್ವರ್ ಡೌನ್ ಆಗಿದ್ದು, ಬಳಕೆದಾರರಿಗೆ ಸಮಸ್ಯೆ ಎದುರಿಸಿದ್ದಾರೆ.

ಎಲಾನ್ ಮಸ್ಕ್ ಒಡೆತನದ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್ (ಟ್ವಿಟರ್) ಇಂದು ಕೂಡ (ಮೇ 24 ಶನಿವಾರ) ಸರ್ವರ್ ಡೌನ್ ಆಗಿದ್ದು, ಬಳಕೆದಾರರು ಸಮಸ್ಯೆ ಎದುರಿಸಿದ್ದಾರೆ. ಮೇ 23ರ ಶುಕ್ರವಾರವೂ ಸರ್ವರ್ ಡೌನ್ ಆಗಿತ್ತು. ಬಳಕೆದಾರರು ತಮ್ಮ ಪ್ಲಾಟ್‌ಫಾರ್ಮ್ ಪ್ರವೇಶಿಸಲು ಅಥವಾ ಅದರಲ್ಲಿ ಪೋಸ್ಟ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ. ಅಪ್ಲಿಕೇಶನ್-ವೆಬ್‌ಸೈಟ್ ಸಾವಿರಾರು ಭಾರತೀಯ ಬಳಕೆದಾರರಿಗೆ ಮತ್ತು ಪ್ರಪಂಚದ ಇತರ ಭಾಗಗಳಲ್ಲಿಯೂ ಕಾರ್ಯನಿರ್ವಹಿಸುತ್ತಿಲ್ಲ ಎಂದು ವರದಿಯಾಗಿದೆ. ‘ಎಕ್ಸ್’ ಸೇವೆ ಸ್ಥಗಿತವಾಗಿದ್ದು, ಇದೇ ಮೊದಲಲ್ಲ. ಅಲ್ಲದೆ, ಈ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಅದೂ ಅಲ್ಲದೆ, ಅದರ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಇಂದು ಸಂಜೆ (ಮೇ 24 ರಂದು), ಅನೇಕ ಜನರು ತಮ್ಮ ಅಧಿಕೃತ ಎಕ್ಸ್ ಖಾತೆಗೆ ಲಾಗಿನ್ ಆಗುವಾಗ ತೊಂದರೆ ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ಅವರು ಫೀಡ್‌ಗಳನ್ನು ರಿಫ್ರೆಶ್ ಮಾಡಲು ಅಥವಾ ಯಾವುದೇ ವಿಷಯವನ್ನು ಪೋಸ್ಟ್ ಮಾಡಲು ಸಾಧ್ಯವಾಗುತ್ತಿಲ್ಲ. ನೈಜ-ಸಮಯದ ಸ್ಥಗಿತಗಳನ್ನು ಪತ್ತೆಹಚ್ಚುವ ಜನಪ್ರಿಯ ವೆಬ್‌ಸೈಟ್ Downdetector.com ವಿಶ್ವಾದ್ಯಂತ 5,000ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಿದೆ. ಇದು ವ್ಯಾಪಕವಾದ ತಾಂತ್ರಿಕ ಸಮಸ್ಯೆ ದೃಢಪಡಿಸಿದೆ.
ಈ ಸರ್ವರ್ಡೌನ್ ವಿಶೇಷವಾಗಿ ಆಂಡ್ರಾಯ್ಡ್ ಮತ್ತು ಐಫೋನ್‌ಗಳಲ್ಲಿ ಮೊಬೈಲ್ ಬಳಕೆದಾರರ ಮೇಲೆ ಪರಿಣಾಮ ಬೀರಿದೆ. ಡೌನ್‌ಡೆಕ್ಟರ್‌ನಲ್ಲಿ ಸಲ್ಲಿಸಲಾದ ವರದಿಯ ಪ್ರಕಾರ, ಭಾರತದಲ್ಲಿ ನಿರಾಶೆಗೊಂಡ ಬಳಕೆದಾರರು ಎಕ್ಸ್ ತಮಗೆ ಲೋಡ್ ಆಗುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಇತರ ಪ್ಲಾಟ್‌ಫಾರ್ಮ್‌ಗಳ ಮೊರೆ ಹೋಗಿದ್ದಾರೆ.
ಇನ್ನೂ ಅಧಿಕೃತ ಹೇಳಿಕೆ ಇಲ್ಲ
ಈ ಲೇಖನ ಬರೆಯುವ ಹೊತ್ತಿಗೆ, ಎಂದಿನಂತೆ ಎಲಾನ್ ಮಸ್ಕ್ ಅಥವಾ ಎಕ್ಸ್ ಕಾರ್ಪ್ ಡೌನ್‌ಟೈಮ್‌ಗೆ ಕಾರಣದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಡೌನ್‌ಟೈಮ್ ಸರ್ವರ್ ವೈಫಲ್ಯ, ತಾಂತ್ರಿಕ ನಿರ್ವಹಣೆ ಅಥವಾ ಸಂಭಾವ್ಯ ಸೈಬರ್ ದಾಳಿಯಿಂದ ಉಂಟಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.