EMRS Recruitment: ಏಕಲವ್ಯ ವಸತಿ ಶಾಲೆಗಳಲ್ಲಿ ಉದ್ಯೋಗ, 6329 ಬೋಧಕ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ, 44900- 142400 ರೂವರೆಗೆ ವೇತನ
Eklavya Model Residential Schools Jobs: ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಟಿಜಿಟಿ ಮತ್ತು ಹಾಸ್ಟೆಲ್ ವಾರ್ಡನ್ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ, ವಯೋಮಿತಿ ಇತ್ಯಾದಿ ಹಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರು: ಕರ್ನಾಟಕ ಸೇರಿದಂತೆ ಭಾರತದ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇರುವ ಏಕಲವ್ಯ ಮಾಡೆಲ್ ರೆಸಿಡೆನ್ಶಿಯಲ್ ಸ್ಕೂಲ್ಸ್ ಅಥವಾ ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಭರ್ಜರಿ ಉದ್ಯೋಗಾವಕಾಶವಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ದೇಶಾದ್ಯಂತ 6329 ಟ್ರೇನ್ಡ್ ಗ್ರಾಜುಯೇಟ್ ಟೀಚರ್ ಮತ್ತು ಹಾಸ್ಟೆಲ್ ವಾರ್ಡನ್ ಹುದ್ದೆಗಳಿವೆ. ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ
ಒಟ್ಟು 6329 ಹುದ್ದೆಗಳಲ್ಲಿ 5660 ಹುದ್ದೆಗಳು ಟಿಜಿಟಿ ಹುದ್ದೆಗಳಾಗಿವೆ. ಉಳಿದ ಹಾಸ್ಟೆಲ್ ವಾರ್ಡನ್ ಹುದ್ದೆಗಳಲ್ಲಿ 335 ಹುದ್ದೆಗಳನ್ನು ಪುರುಷ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ. 334 ಹುದ್ದೆಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ. ನ್ಯಾಷನಲ್ ಎಕ್ಸಾಮಿನೇಷನ್ ಫಾರ್ ಸೆಲೆಕ್ಷನ್ ಟೆಸ್ಟ್ (ಎನ್‌ಇಎಸ್‌ಟಿಎಸ್) ಈ ನೇಮಕಾತಿ ಪರೀಕ್ಷೆ ನಡೆಸುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು emrs.tribal.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಆಗಸ್ಟ್ 18ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್‌ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧಾನಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಕನ್ನಡ ಸೇರಿದಂತೆ ವಿವಿಧ ಬೋಧಕ ಹುದ್ದೆಗಳು
ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ವಿವಿಧ ವಿಷಯಗಳಿಗೆ ಬೋಧಕ ಹುದ್ದೆಗಳು ಈ ಮುಂದಿನಂತೆ ಇವೆ.
ಹಿಂದಿ- 606
ಇಂಗ್ಲಿಷ್- 671
ಗಣಿತ- 686
ಸೋಷಿಯಲ್ ಸ್ಟಡೀಸ್- 670
ವಿಜ್ಞಾನ- 678
ಉಳಿದಂತೆ ಕನ್ನಡ, ಬಂಗಾಳಿ, ಗುಜರಾತಿ, ಮಲಯಾಳಂ, ಮಣಿಪುರಿ, ಮರಾಠಿ, ಒರಿಯಾ, ತೆಲುಗು ಮತ್ತು ಉರ್ದು ಭಾಷಾ ಶಿಕ್ಷಕ ಹುದ್ದೆಗಳಿವೆ. ಪಿಇಟಿ ಮಹಿಳೆ, ಲೈಬ್ರೆರಿಯನ್, ಕಲೆ, ಮ್ಯೂಸಿಕ್, ಪಿಇಟಿ ಪುರುಷ ಇತ್ಯಾದಿ ಹುದ್ದೆಗಳೂ ಇವೆ. ಕನ್ನಡ ಟಿಜಿಟಿ ಹುದ್ದೆಗಳ ಸಂಖ್ಯೆ 24.
ಅರ್ಜಿ ಶುಲ್ಕ ಎಷ್ಟು?
ಟಿಜಿಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 1500 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ವಾರ್ಡನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 1000 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು.
ವಿದ್ಯಾರ್ಹತೆ ಏನು?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಪದವಿ ವಿದ್ಯಾರ್ಥತೆ ಪಡೆದಿರಬೇಕು. ಟಿಜಿಟಿ ಹುದ್ದೆಗಳಿಗೆ ವ್ಯಾಲಿಡ್ ಆದ ಟೀಚಿಂಗ್ ಸರ್ಟಿಫಿಕೇಟ್ ಹೊಂದಿರಬೇಕು. ಪ್ರತಿಯೊಂದು ವಿಷಯಕ್ಕೂ ಸಂಬಂಧಪಟ್ಟಂತೆ ಹೊಂದಿರಬೇಕಾದ ವಿದ್ಯಾರ್ಹತೆಯನ್ನು ಅಧಿಸೂಚನೆಯಿಂದ ಪಡೆದುಕೊಳ್ಳಿ. ಅಧಿಸೂಚನೆಯನ್ನು ಈ ಲೇಖನದ ಕೊನೆಯಲ್ಲಿ ಲಗ್ಗತ್ತಿಸಲಾಗಿದೆ.
ವೇತನ ಎಷ್ಟು?
ಟ್ರೈನ್ಡ್ ಗ್ರಾಜುಯೇಟ್ ಟೀಚರ್ಸ್ ಹುದ್ದೆಗಳಲ್ಲಿ ಇಂಗ್ಲಿಷ್, ಹಿಂದಿ, ಗಣಿತ, ವಿಜಾನ, ಸೋಷಿಯಲ್ ಸೈನ್ಸ್, 3ನೇ ಭಾಷೆ, ಲೈಬ್ರೆರಿಯೆನ್ ಹುದ್ದೆಗಳಿಗೆ ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ .44900 – 142400 ರೂಪಾಯಿ ವೇತನ ಶ್ರೇಣಿ ಇರುತ್ತದೆ. ಇತರೆ ಟಿಜಿಟಿ ಹುದ್ದೆಗಳಿಗೆ ಅಂದರೆ ಮ್ಯೂಸಿಕ್, ಆರ್ಟ್ಸ್, ಪಿಇಟಿ ಹುದ್ದೆಗಳಿಗೆ ಲೆವೆಲ್ 6 ವೇತನ ಶ್ರೇಣಿ 35400 ರೂನಿಂದ 112400 ರೂ.ವರೆಗೆ ಇರುತ್ತದೆ. ಇದೇ ರೀತಿ ಹಾಸ್ಟೆಲ್ ವಾರ್ಡನ್ ಹುದ್ದೆಗಳಿಗೆ ಲೆವೆಲ್ 5 ವೇತನ ಶ್ರೇಣಿ 29200 – 92300 ರೂಪಾಯಿ ಇರುತ್ತದೆ.
ವಯೋಮಿತಿ ಎಷ್ಟು?
ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷ ನಿಗದಿಪಡಿಸಲಾಗಿದೆ. ವಯೋಮಿತಿಯಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಸರಕಾರದ ನಿಯಮಗಳಿಗೆ ತಕ್ಕಂತೆ ಸಡಿಲಿಕೆ ನೀಡಲಾಗುತ್ತದೆ. ಇಎಂಆರ್‌ಎಸ್ ಉದ್ಯೋಗಿಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 55 ವರ್ಷ. ಇನ್ನಷ್ಟು ವಿವರವಾಗಿ ತಿಳಿಸಬೇಕಿದ್ದರೆ, ಎಸ್‌ಸಿ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಕೇಂದ್ರ ಸರಕಾರದ ಸೇವೆಯಲ್ಲಿರುವವರಿಗೆ 5 ವರ್ಷ ಸಡಿಲಿಕೆ ನೀಡಲಾಗುತ್ತದೆ.
ಏಕಲವ್ಯ ಮಾದರಿ ವಸತಿ ಶಾಲೆ ಉದ್ಯೋಗಾವಕಾಶ- ಪಿಡಿಎಫ್